Site icon Vistara News

Google AI chatbot Bard: ತಪ್ಪು ಮಾಹಿತಿ ನೀಡಿದ ಬಾರ್ಡ್, ಗೂಗಲ್‌ ಮಾತೃ ಸಂಸ್ಥೆ ಅಲ್ಫಾಬೆಟ್‌ಗೆ 100 ಶತಕೋಟಿ ಡಾಲರ್ ನಷ್ಟ!

Google

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಆಧರಿತ ಚಾಟ್‌ಬಾಟ್ (Chatbot), ಬಾರ್ಡ್‌ನಿಂದಾಗಿ (Bard) ಗೂಗಲ್‌ನ (Google) ಮಾತೃ ಸಂಸ್ಥೆ ಅಲ್ಪಾಬೆಟ್ ಇಂಕ್ (Alphabet Inc), ಷೇರುಪೇಟೆಯಲ್ಲಿ 100 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ. ಸೋಮವಾರವಷ್ಟೇ ಗೂಗಲ್, ಈ ಚಾಟ್‌ಬಾಟ್ ಅನಾವರಣ ಮಾಡಿತ್ತು. ಈಗಾಗಲೇ ಮೈಕ್ರೋಸಾಫ್ಟ್ ಬೆಂಬಲಿತ ಓಪನ್ಎಐನ ಚಾಟ್‌ಜಿಪಿಟಿ (ChatGPT) ಸಾಕಷ್ಟು ಸದ್ದು ಮಾಡುತ್ತಿದೆ. ಇದಕ್ಕೆ ಠಕ್ಕರ್ ಕೊಡಲು ಗೂಗಲ್ ಬಾರ್ಡ್ ಲಾಂಚ್ ಮಾಡಿದೆ. ಆದರೆ, ಅದರ ಒಂದು ತಪ್ಪಿನಿಂದಾಗಿ ಕಂಪನಿಗೆ ಸಾಕಷ್ಟು ನಷ್ಟ ಅನುಭವಿಸಿದೆ(Google AI chatbot Bard).

ಬುಧವಾರದ ಷೇರುಪೇಟೆ ವಹಿವಾಟಿನ ಅವಧಿಯಲ್ಲಿ ಅಲ್ಫಾಬೆಟ್‌ನ ಷೇರುಗಳು ಶೇಕಡಾ 9 ರಷ್ಟು ಕುಸಿದವು. ಆದರೆ ಸ್ವಲ್ಪಮಟ್ಟಿಗೆ ಏರಿಕೆ ಕಂಡು ಶೇ.7.68ಕ್ಕೆ ಸೆಟಲ್ ಆದವು. ಕಳೆದ ವರ್ಷ ಶೇ.40ರಷ್ಟು ಮೌಲ್ಯವನ್ನು ಕಳೆದುಕೊಂಡಿದ್ದ ಕಂಪನಿಯ ಷೇರುಗಳ ಮೌಲ್ಯವು, 2023 ಆರಂಭದಿಂದ ಶೇ.15ರಷ್ಟು ಏರಿಕೆಯಾಗಿದೆ. ಆದರೆ, ಚಾಟ್‌ಬಾಟ್ ನೀಡಿದ ತಪ್ಪು ಉತ್ತರಿನಿಂದಾಗಿ ಈಗ ಮತ್ತೆ ನಷ್ಟ ಉಂಟಾಗಿದೆ.

ಬಾರ್ಡ್ ಮಾಡಿದ ತಪ್ಪೇನು?

ಗೂಗಲ್ ತನ್ನ ಹೊಸ ಎಐ ಚಾಟ್‌ಬಾಟ್ ಬಾರ್ಡ್ ಅನ್ನು ಸೋಮವಾರ ಪ್ರಸ್ತುತಪಡಿಸಿತು. ಈ ವೇಳೆ, ಅದ ಮಾಡಿದ ದೋಷವನ್ನು ಕಂಡು ಹಿಡಿಯಲಾಯಿತು. ಅಲ್ಪಾಬೆಟ್ ಟ್ವಿಟರ್‌ನಲ್ಲಿ ಬಾರ್ಡ್‌ನ ಸಣ್ಣ ಜಿಐಎಫ್ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದೆ. ಅದರಲ್ಲಿ, ಸಂಕೀರ್ಣ ವಿಷಯಗಳನ್ನು ಬಾರ್ಡ್ ಹೇಗೆ ಸರಳಗೊಳಿಸಿ ತಿಳಿಸುತ್ತದೆ ಎಂದು ಹೇಳಲಾಗಿದೆ.

ಗೂಗಲ್‌ ಪ್ರದರ್ಶಿಸಿದ ಜಾಹೀರಾತಿನಲ್ಲಿ ಬಾರ್ಡ್, “ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಿಂದ (JWST) ಯಾವ ಹೊಸ ಸಂಶೋಧನೆಗಳನ್ನು ಮಾಡಲಾಗಿದೆ ಎಂಬುದನ್ನು ನಾನು ನನ್ನ 9 ವರ್ಷದ ಮಗುವಿಗೆ ಹೇಳಬಲ್ಲೆ?” ಎಂದು ಹೇಳುತ್ತದೆ. ಅಲ್ಲದೇ, ಹಲವು ಪ್ರತಿಕ್ರಿಯೆಗಳ ಮೂಲಕ ಉತ್ತರ ನೀಡಲಾಗುತ್ತದೆ. ಈ ಪೈಕಿ ಒಂದರಲ್ಲಿ ಜೇಮ್ಸ್ ವೆಬ್ ‌ದೂರದರ್ಶಕದಿಂದ ಭೂಮಿಯ ಸೌರವ್ಯೂಹದ ಹೊರಗಿನ ಗ್ರಹದ ಮೊದಲ ಚಿತ್ರಗಳನ್ನು ಅಥವಾ ಎಕ್ಸೋಪ್ಲಾನೆಟ್‌ಗಳನ್ನು ತೆಗೆದುಕೊಳ್ಳಲು ಬಳಸಲಾಗಿದೆ ಎಂದು ಹೇಳುತ್ತದೆ. ಆದರೆ, ವಾಸ್ತವದಲ್ಲಿ ಈ ಮಾಹಿತಿ ತಪ್ಪು. ಯಾಕೆಂದರೆ, ನಾಸಾ ಈ ಬಗ್ಗೆ ಸ್ಪಷ್ಟಿಕರಣ ನೀಡಿದೆ. ಏನೆಂದರೆ, 2004ರಲ್ಲಿ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಯ ವೆರಿ ಲಾರ್ಜ್ ಟೆಲಿಸ್ಕೋಪ್ (ವಿಎಲ್‌ಟಿ) ಮೂಲಕ ಎಕ್ಸೋಪ್ಲಾನೆಟ್‌ಗಳ ಮೊದಲ ಚಿತ್ರಗಳನ್ನು ತೆಗೆಯಲಾಗಿದೆ ಎಂದು ನಾಸಾ ಹೇಳಿದೆ.

ಗೂಗಲ್‌ನ ಈ ಬಾರ್ಡ್ ನೀಡಿದ ತಪ್ಪು ಉತ್ತರವು ಷೇರು ಪೇಟೆಯಲ್ಲಿ ಅಲ್ಪಾಬೆಟ್‌ ಷೇರುಗಳ ಮೇಲೆ ಪ್ರಭಾವ ಬೀರಿತು. ಈ ವಿಷಯ ಗೊತ್ತಾಗುತ್ತಿದ್ದಂತೆ ಕಂಪನಿಯ ಷೇರುಗಳ ಮೌಲ್ಯವು ಕುಸಿಯಲಾರಂಭಿಸಿತು. ದಿನದ ಮುಕ್ತಾಯದ ಹೊತ್ತಿಗೆ ಕಂಪನಿಗೆ 100 ಶತ ಕೋಟಿ ಡಾಲರ್ ನಷ್ಟ ಉಂಟಾಯಿತು.

Exit mobile version