Site icon Vistara News

iPhone 14 | ಭಾರತದಲ್ಲಿ ಐಫೋನ್ 14 ಉತ್ಪಾದನೆ, ಚೀನಾಗೆ ಭಾರೀ ಹಿನ್ನಡೆ!

iPhone

ನವ ದೆಹಲಿ: ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಆಪಲ್‌ (Apple) ಕಂಪನಿಯ ಐಫೋನ್ 14 (iPhone 14) ಮುಂದಿನ ತಿಂಗಳು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಈಗ ಮತ್ತೊಂದು ಸುದ್ದಿ ಏನಂದರೆ, ಆಪಲ್ ಕಂಪನಿಯು ಈ ಐಫೋನ್ 14 ಅನ್ನು ಭಾರತದಲ್ಲೇ ಉತ್ಪಾದಿಸಲಿದೆ! ಈ ಮೊದಲು ಐಫೋನ್ ಅನ್ನು ಕಂಪನಿಯು ಚೀನಾದಲ್ಲಿ ಉತ್ಪಾದಿಸಲು ಯೋಜಿಸಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಹೇರಲಾದ ನಿರ್ಬಂಧಗಳು ಮತ್ತು ರಾಜಕೀಯ ಕಾರಣದಿಂದಾಗಿ ಆಪಲ್ ಕಂಪನಿ ತನ್ನ ನಿರ್ಧಾರವನ್ನು ಬದಲಿಸಿದಂತಿದೆ ಎಂದು ಹೇಳಲಾಗುತ್ತಿದೆ. ಇನ್ನೂ ನಿಖರವಾಗಿ ಹೇಳಬೇಕೆಂದರೆ, ಭಾರತದಲ್ಲಿ ಐಫೋನ್ 14 ಮೊದಲ ಬ್ಯಾಚ್ ಉತ್ಪಾದನೆಯು ಈ ವರ್ಷದ ನವೆಂಬರ್ ಅಥವಾ ಅಕ್ಟೋಬರ್‌ಗೆ ಪೂರ್ಣಗೊಳ್ಳಲಿದೆ.

ಭಾರತದಲ್ಲಿ ಐಫೋನ್ 14 ಉತ್ಪಾದಿಸುವ ಬಗ್ಗೆ ಬ್ಲೂಮ್‌ಬರ್ಗ್ ವರದಿ ಮಾಡಿದ್ದು, ಚೀನಾದಲ್ಲಿ ಜಿನ್‌ಪಿಂಗ್ ಆಡಳಿತವು ಅಮೆರಿಕದ ಸರ್ಕಾರದೊಂದಿಗೆ ಸಂಘರ್ಷದಲ್ಲಿ ತೊಡಗಿರುವುದು, ಕೋವಿಡ್ 19 ನಿರ್ವಹಣೆಗಾಗಿ ದೇಶಾದ್ಯಂತ ಲಾಕ್‌ಡೌನ್‌ ನಿಯಮಗಳನ್ನು ಬಿಗಿಗೊಳಿಸಿದ್ದರಿಂದ ಆಪಲ್‌ನ ಉತ್ಪಾದನೆ ಹಿನ್ನಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು ಭಾರತದಲ್ಲಿ ತನ್ನ ಮುಂಬರುವ ಐಫೋನ್ ಉತ್ಪಾದಿಸುವ ಸಂಬಂಧ ಪೂರೈಕೆದಾರರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದಿನ ಐಫೋನ್‌ಗಳಿಗೆ ಹೋಲಿಸಿದರೆ, ಈ ಬಾರಿಯು ಫೋನ್ ಉತ್ಪಾದನೆಯಲ್ಲಿನ ವಿಳಂಬವನ್ನು ತಪ್ಪಿಸಲು ಆಪಲ್ ಮುಂದಾಗಿದೆ. ಇದೇ ವೇಳೆ, ಚೀನಾ ಮತ್ತು ಅಮೆರಿಕ ನಡುವಿನ ಭೌಗೋಳಿಕ ರಾಜಕಾರಣದ ಸಂಘರ್ಷದ ಪರಿಣಾಮ ಉಂಟಾಗದಂತೆ ಪರ್ಯಾಯ ದಾರಿಯನ್ನು ಹುಡುಕುತ್ತಿದೆ. ಆದರೆ, ಆಪಲ್‌ಗೆ ಈಗಲೂ ಐಫೋನ್ 14 ಉತ್ಪಾದನೆಗೆ ಸಂಬಂಧಿಸಿದಂತೆ ಚೀನಾ ಮಹತ್ವದ ರಾಷ್ಟ್ರವಾಗಿದೆ. ಯಾಕೆಂದರೆ, ಐಫೋನ್‌ಗೆ ಅಗತ್ಯವಾಗಿರುವ ಅನೇಕ ಬಿಡಿ ಭಾಗಗಳಿಗೆ ಚೀನಾವೇ ಈಗಲೂ ಮೂಲವಾಗಿದೆ. ಆಪಲ್ ಚೀನಾ ಕಾರ್ಯಾಚರಣೆಯನ್ನು ಹೆಚ್ಚಿಸಿ ಆ ಬಳಿಕ ಭಾರತದಲ್ಲಿ ತನ್ನ ಉತ್ಪಾದನೆಯ ಬಗ್ಗೆ ಯೋಜನೆ ರೂಪಿಸಿತ್ತು. ಚೀನಾ ಮತ್ತು ಭಾರತದಲ್ಲಿ ಏಕಕಾಲಕ್ಕೆ ಈ ವರ್ಷ ಫೋನ್ ಉತ್ಪಾದನೆ ಮಾಡುವುದಿತ್ತು. ಆದರೆ, ಇದಾವುದು ಕಂಪನಿಯ ಅಧಿಕೃತ ಪ್ಲ್ಯಾನ್‌ನಲ್ಲಿ ಇರಲಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಭಾರತವೇ ಏಕೆ?
ಐಫೋನ್ 14 ಉತ್ಪಾದನೆಗೆ ಭಾರತವನ್ನೇ ಆಯ್ಕೆ ಮಾಡಿಕೊಂಡಿರುವುದು ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆಪಲ್ ಮತ್ತು ಭಾರತಕ್ಕೆ ಇದೊಂದು ಮೈಲುಗಲ್ಲು ಆಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಭಾರತವು ಚೀನಾಗೆ ಪರ್ಯಾಯವಾಗಿ ಬೆಳೆಯುತ್ತಿರುವುದರಿಂದ, ಜಗತ್ತಿಗೆ ಚೀನಾ ಫ್ಯಾಕ್ಟರಿ ಎಂಬ ಖ್ಯಾತಿಯೂ ಕುಂದಲಿದೆ. ಆದರೆ, ಭಾರತದಲ್ಲೇನೂ ಸವಾಲುಗಳು ಇಲ್ಲ ಎದೇನಿಲ್ಲ. ಉತ್ಪನ್ನಗಳ ಬಗೆಗಿನ ರಹಸ್ಯ ಕಾಯ್ದುಕೊಳ್ಳುವುದು ಮತ್ತು ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ | iPhone 14 | ಸೆಪ್ಟೆಂಬರ್‌ 7ಕ್ಕೆ ಐಫೋನ್‌ 14, ಆ್ಯಪಲ್‌ ವಾಚ್‌ ಬಿಡುಗಡೆ

Exit mobile version