ನವ ದೆಹಲಿ: ಕೇಂದ್ರ ಸರ್ಕಾರ 2027ರ ಬಳಿಕ ಡೀಸೆಲ್ ಕಾರುಗಳನ್ನು ನಿಷೇಧಿಸಲು ಚಿಂತನೆ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಡೀಸೆಲ್ ಕಾರುಗಳ ಮಾರಾಟ ಇಳಿಮುಖವಾಗಿದೆ. ಕಾರು ಖರೀದಿಸುವವರು ಡೀಸೆಲ್ ಕಾರು ಖರೀದಿಸುವ ಮುನ್ನ ಎರಡೆರಡು ಬಾರಿ ಆಲೋಚಿಸುತ್ತಿದ್ದಾರೆ. 2027ರ ಬಳಿಕ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಡೀಸೆಲ್ ಕಾರುಗಳನ್ನು ನಿಷೇಧಿಸಲು ಸರ್ಕಾರಕ್ಕೆ ಸಲಹೆ ನೀಡಲಾಗಿದೆ.
ಈ ಚಿಂತನೆಯಿಂದ ಡೀಸೆಲ್ ಕಾರುಗಳ ಮಾರಾಟ ಕಡಿಮೆಯಾಗುತ್ತಿದೆ. ಎರಡು-ಮೂರು ವರ್ಷಗಳಿಗೆ ಯಾರೂ ಹೊಸ ಕಾರು ಖರೀದಿಸುವುದಿಲ್ಲ ಎಂದು ಇಂಡಿಯನ್ ಆಟೊ ಎಲ್ಪಿಜಿ ಕಾಲಿಶನ್‌ನ ಪ್ರಧಾನ ನಿರ್ದೇಶಕ ಸಯೂಶ್ ಗುಪ್ತಾ ತಿಳಿಸಿದ್ದಾರೆ.
ವಾಹನಗಳ ಒಟ್ಟು ಮಾರಾಟದಲ್ಲಿ ಹತ್ತು ವರ್ಷಗಳ ಹಿಂದೆ ಡೀಸೆಲ್ ಕಾರುಗಳ ಪ್ರಮಾಣ 58.4% ಇತ್ತು. 2023ರ ಏಪ್ರಿಲ್ ವೇಳೆಗೆ ಕೇವಲ 17.4%ಕ್ಕೆ ಕುಸಿದಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯಕಾರಿ ಅಧಿಕಾರಿ ಶ್ರೀವಾಸ್ತವ ತಿಳಿಸಿದ್ದಾರೆ. ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಡೀಸೆಲ್ ಕಾರುಗಳನ್ನು ನಿಷೇಧಿಸುವುದು ಸೂಕ್ತ ಎಂದು ತಜ್ಞರ ಸಮಿತಿ ಸಲಹೆ ನೀಡಿತ್ತು.
ಎಸ್‌ಯುವಿ/ಎಂಪಿವಿ ವಲಯದಲ್ಲಿ (SUV/MPV) ಡೀಸೆಲ್ ಕಾರುಗಳು ಮಹತ್ವದ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಡೀಸೆಲ್ ಕಾರುಗಳ ಬದಲಿಗೆ ಪೆಟ್ರೋಲ್ ಕಾರು ಅಥವಾ ಎಲೆಕ್ಟ್ರಿಕ್ ಕಾರುಗಳತ್ತ ಜನ ಆಕರ್ಷಿತರಾಗುತ್ತಿದ್ದಾರೆ. ಸಿಎನ್‌ಜಿ ಕಾರುಗಳಿಗೂ ಬೇಡಿಕೆ ವೃದ್ಧಿಸಿದೆ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: 2027ರ ಹೊತ್ತಿಗೆ ಡೀಸೆಲ್ ಚಾಲಿತ 4 ಚಕ್ರ ವಾಹನಗಳು ಬ್ಯಾನ್?; ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾದ ವರದಿ ಏನು?
ಆಟೊಮೊಬೈಲ್ ಉತ್ಪಾದಕರು ಈಗಾಗಲೇ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿವೆ. ಎಲೆಕ್ಟ್ರಿಕ್ ಕಾರುಗಳ ಮಾರಾಟ ಹೆಚ್ಚುತ್ತಿದೆ. ಹೀಗಿದ್ದರೂ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸ್ಟೇಶನ್ ಸೌಲಭ್ಯ ವೃದ್ಧಿಸಬೇಕಿದೆ. ಕಳೆದ ವರ್ಷ 52,000 ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿತ್ತು.