ಹೊಸದಿಲ್ಲಿ: ಸ್ಕೋಡಾ ಕಂಪನಿಯ (Skoda Company) ಹೊಸ ಕಾರಿಗೆ ಸಂಸ್ಕೃತದ (Sanskrit) ಹೆಸರೊಂದನ್ನು ಕಾಸರಗೋಡಿನ ಕುರಾನ್ ಶಿಕ್ಷಕರೊಬ್ಬರು (Quran teacher) ಸೂಚಿಸಿದ್ದು, ಅದನ್ನು ಕಂಪನಿ (Skoda Kylaq) ಆಯ್ಕೆ ಮಾಡಿದೆ. ಜೊತೆಗೆ, ಈ ಹೆಸರನ್ನು ಸೂಚಿಸಿದ ಶಿಕ್ಷಕರಿಗೆ ಒಂದು ಹೊಸ ಕಾರನ್ನೂ ಕೊಡುಗೆಯಾಗಿ ನೀಡಿದೆ.
ʼನೇಮ್ ಯುವರ್ ಸ್ಕೋಡಾ’ ಅಭಿಯಾನದ ಮೂಲಕ ಹೊಸ ಕಾರಿಗೆ ಹೆಸರು ನೀಡಲು ಕಂಪನಿ ಪ್ರಕಟಣೆ ನೀಡಿತ್ತು. ದೇಶಾದ್ಯಂತ ಸಾಕಷ್ಟು ಕಾರು ಪ್ರಿಯರು ಹೆಸರನ್ನು ಸೂಚಿಸಿ ಅಭಿಯಾನದಲ್ಲಿ ಭಾಗವಹಿಸಿದ್ದರು. ಕರ್ನಾಟಕ- ಕೇರಳ ಗಡಿಭಾಗದ ಕಾಸರಗೋಡಿನ ವ್ಯಕ್ತಿಯೊಬ್ಬರು ಸ್ಕೋಡಾ ಎಸ್‌ಯುವಿ (Skoda SUV) ಹೆಸರನ್ನು ಸೂಚಿಸುವ ಮೂಲಕ ಬಹುಮಾನವನ್ನು ಗೆದ್ದಿದ್ದಾರೆ.
ಸ್ಕೋಡಾ ಈ ವರ್ಷದ ಫೆಬ್ರವರಿಯಲ್ಲಿ ʼನೇಮ್ ಯುವರ್ ಸ್ಕೋಡಾ’ ಅಭಿಯಾನವನ್ನು ಪ್ರಾರಂಭಿಸಿತು. ಇಂಗ್ಲಿಷ್ ವರ್ಣಮಾಲೆಯಲ್ಲಿ Kಯಿಂದ ಪ್ರಾರಂಭವಾಗುವ ಮತ್ತು Q ನೊಂದಿಗೆ ಕೊನೆಗೊಳ್ಳುವ ಹೆಸರನ್ನು ಸೂಚಿಸಲು ಕಂಪನಿ ಕೇಳಿತ್ತು. ಐದು ಹೆಸರು ಸೂಚಿಸುವ ಆಯ್ಕೆಯನ್ನು ನೀಡಿತ್ತು. ಕಾಸರಗೋಡು ಮೂಲದ ಮೊಹಮ್ಮದ್ ಜಿಯಾದ್ ಎಂಬವರು ಎಸ್‌ಯುವಿಗೆ ʼಕೈಲಾಕ್’ ಎಂಬ ಹೆಸರನ್ನು ಸೂಚಿಸಿ ಗೆದ್ದರು.
24 ವರ್ಷ ವಯಸ್ಸಿನ ಜಿಯಾದ್ ಅವರು ಕಾಸರಗೋಡಿನ ನಜಾತ್ ಕುರಾನ್ ಅಕಾಡೆಮಿಯಲ್ಲಿ ಶಿಕ್ಷಕರಾಗಿದ್ದಾರೆ. ಹೆಸರನ್ನು ಸೂಚಿಸಿದ ನಂತರ, ಸ್ಪರ್ಧೆಯ ಅಪ್‌ಡೇಟ್‌ಗಳಿಗಾಗಿ ಸ್ಕೋಡಾದ Instagram ಖಾತೆಯನ್ನು ಜಿಯಾದ್ ಫಾಲೋ ಮಾಡಿದ್ದರು. ವಿವಿಧ ಹಂತಗಳಲ್ಲಿ ಸುಮಾರು ಎರಡು ಲಕ್ಷ ಹೆಸರುಗಳು ಬಂದಿದ್ದವಂತೆ. ಮೊದಲ 100 ಜನರ ಶಾರ್ಟ್‌ಲಿಸ್ಟ್‌ನಲ್ಲಿ ಜಿಯಾದ್ ಹೆಸರು ಬಂತು. ಆದರೆ ಬಹುಮಾನ ಬಂದಿರುವುದನ್ನು ನಂಬಲೇ ಸಾಧ್ಯವಿಲ್ಲ ಎಂಬುದು ಜಿಯಾದ್ ಅವರ ಅಚ್ಚರಿ.
ಫೆಬ್ರವರಿಯಲ್ಲಿ ನಾಮಕರಣ ಸ್ಪರ್ಧೆ ಆರಂಭವಾದಾಗಲೇ ಜಿಯಾದ್ ಹೊಸ ವಾಹನದ ಹೆಸರನ್ನು ಸೂಚಿಸಿದ್ದರು. ವಾಟ್ಸಾಪ್ ಗ್ರೂಪ್ ಮೂಲಕ ಬಂದ ಲಿಂಕ್ ಮೂಲಕ ಸಿಯಾದ್ ಈ ಸ್ಪರ್ಧೆಯ ಬಗ್ಗೆ ತಿಳಿದುಕೊಂಡಿದ್ದಾರೆ. ನಂತರ, ಹೆಸರನ್ನು ಸೂಚಿಸಿದ್ದರು. 10 ಜನರ ಶಾರ್ಟ್‌ಲಿಸ್ಟ್‌ನಲ್ಲಿ ಅವರ ಹೆಸರು ಕಾಣಿಸಿಕೊಂಡಾಗ ಅವರು ತುಂಬಾ ಸಂತೋಷಪಟ್ಟರು. ಆದರೆ ಅವರು ವಿಜೇತರು ಎಂದು ತಿಳಿದಾಗ ಅವರು ಆಘಾತಕ್ಕೇ ಒಳಗಾದರಂತೆ.
ಕಾರು ತಯಾರಕ ಕಂಪನಿ ಸ್ಕೋಡಾ ಪ್ರಕಾರ, ಕೈಲಾಕ್ ಎಂಬುದು ಸಂಸ್ಕೃತ ಪದ ಹಾಗೂ ʼಸ್ಫಟಿಕʼ ಎಂಬುದು ಅದರ ಅರ್ಥ. ಸ್ಕೋಡಾ ಕಂಪನಿಯು ಕ್ವಿಕ್, ಕಾಸ್ಮಿಕ್, ಕ್ಲಿಕ್ ಮತ್ತು ಕಯಾಕ್ ಹೆಸರುಗಳನ್ನು ಹೊಂದಿತ್ತು. ಅವುಗಳನ್ನು ಬದಲಿಸಿ ಹೊಸ ಮಾದರಿಗೆ ಕೈಲಾಕ್ ಎಂದು ಹೆಸರನ್ನು ನೀಡಿದೆ.
ಸ್ಕೋಡಾ ಭಾರತದಲ್ಲಿ ವಿಶೇಷ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಕಾರು ತಯಾರಕ ಕಂಪನಿ. ಈ ಸ್ಕೋಡಾ ಕಂಪನಿಯು ಕುಶಾಕ್ ಮತ್ತು ಸ್ಲಾವಿಯಾ ಕಾರುಗಳನ್ನು ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ಸ್ಕೋಡಾ ಆಟೋ ಭಾರತದಲ್ಲಿ ತನ್ನ ಮುಂಬರುವ ಹೊಸ ಎಸ್‍ಯುವಿಯ ಹೆಸರನ್ನು ಆಗಸ್ಟ್ 21ರಂದು ಘೋಷಿಸಿತು. ಸ್ಕೋಡಾ ಕೈಲಾಕ್ (Skoda Kylaq) ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಸಬ್ 4 ಮೀಟರ್ ಎಸ್‌ಯುವಿ ವಿಭಾಗವನ್ನು ಬದಲಾಯಿಸಲಿದೆ. ಕೈಲಾಕ್ ಜನಪ್ರಿಯ ಮಾದರಿಗಳಾದ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳೊಂದಿಗೆ ಸ್ಪರ್ಧಿಸಲಿದೆ.
ಸ್ಕೋಡಾದ ಇಂಡಿಯಾ 2.0 ಕಾರ್ಯಕ್ರಮದ ಭಾಗವಾಗಿರುವ ಮೂರನೇ ಕಾರು ಇದಾಗಿದೆ. ಹೊಸ ವಾಹನವನ್ನು ಅದೇ MQB-M00 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಅದು ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾಕ್ಕೆ ಆಧಾರವಾಗಿದೆ. ಸ್ಕೋಡಾದ ಹೊಸ ಸಬ್-4 ಮೀಟರ್ ಎಸ್‌ಯುವಿಯು ಕುಶಾಕ್ ಮತ್ತು ಸ್ಲಾವಿಯಾದೊಂದಿಗೆ ಬಳಸಿದ ಅದೇ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗುತ್ತದೆ. ಈ ಹೊಸ ಕಾಂಪ್ಯಾಕ್ಟ್ ಎಸ್‍ಯುವಿಗಾಗಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಶೇಕಡಾ 30 ರಷ್ಟು ಹೆಚ್ಚಿಸುವುದಾಗಿ ಕಂಪಬಿ ಹೇಳಿದೆ. ಸ್ಕೋಡಾ ಒಂದು ವರ್ಷದಲ್ಲಿ ಬ್ರೆಝಾ, ನೆಕ್ಸಾನ್ ಪ್ರತಿಸ್ಪರ್ಧಿಯ ಒಂದು ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ.
ಇದನ್ನೂ ಓದಿ: Auto Launches: ಸ್ಕೋಡಾ ಕುಶಾಕ್, ಬಿಎಂಡಬ್ಲ್ಯು ಆರ್ 1300 ಸೇರಿ ಇನ್ನೂ ಹಲವು ಹೊಸ ವಾಹನ ಮಾರುಕಟ್ಟೆಗೆ!