ನವ ದೆಹಲಿ: ಭಾರತದಲ್ಲಿ ಮುಂದಿನ ವಾರದಿಂದ ಹಬ್ಬದ ಸೀಸನ್ ಶುರುವಾಗಲಿದೆ. ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರು ಹೆಚ್ಚಿನ ಖರೀದಿಯನ್ನು ಮಾಡುತ್ತಾರೆ. ಆ ಕಾರಣಕ್ಕಾಗಿ ಎಲ್ಲ ಕಂಪನಿಗಳು ರಿಯಾಯ್ತಿ ದರದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ; ವಿಶೇಷ ಆಫರ್ಸ್ ಘೋಷಣೆ ಮಾಡುತ್ತವೆ. ಈ ಅವಕಾಶವನ್ನು ಬಳಸಿಕೊಳ್ಳಲು ರಿಯಲ್‌ಮಿ (Realme) ಕಂಪನಿ ಕೂಡ ಮುಂದಾಗಿದೆ. ಸೆಪ್ಟೆಂಬರ್ 23ರಿಂದ 30ರವರೆಗೆ ಮೊಬೈಲ್ ಮತ್ತು ಲ್ಯಾಪ್‌ಟ್ಯಾಪ್ ಖರೀದಿ ಮೇಲೆ 16 ಸಾವಿರ ರೂ.ವರೆಗೂ ಡಿಸ್ಕೌಂಟ್ ನೀಡಲಿದೆ. ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಖರೀದಿಗೆ ಈ ರಿಯಾಯ್ತಿ ದೊರೆಯಲಿದೆ. ವಿಶೇಷ ಎಂದರೆ, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮತ್ತುಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಕೂಡ ಸೆಪ್ಟೆಂಬರ್ 23ರಿಂದಲೇ ಆರಂಭವಾಗುತ್ತಿವೆ!
ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ Realme GT Neo 3T ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ ಮತ್ತು realme.com ಮೂಲಕ ಖರೀದಿಸಿದರೆ, ಸುಮಾರು 7 ಸಾವಿರ ರೂಪಾಯಿವರೆಗೂ ರಿಯಾಯ್ತಿ ದೊರೆಯಲಿದೆ. ಅಂದ ಹಾಗೆ, ಇದೇ ಮೊದಲ ಬಾರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಮಾರಾಟ ನಡೆಯಲಿದೆ. 80 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವ ಮತ್ತು Qualcomm Snapdragon 870 ಪ್ರೊಸೆಸರ್ ಇರುವ ಸ್ಮಾರ್ಟ್‌ಫೋನ್‌ಗಳು ಈ ರಿಯಾಯ್ತಿಯಿಂದಾಗಿ, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ದೊರೆಯಲಿವೆ ಎಂದು ಕಂಪನಿ ಹೇಳಿಕೊಂಡಿದೆ.
ಇದೇ ವೇಳೆ, Realme GT 2 Pro ಸ್ಮಾರ್ಟ್‌ಫೋನ್ ಖರೀದಿ ಮೇಲೆ ಗ್ರಾಹಕರಿಗೆ 15,000 ರೂ.ವರೆಗೂ ಉಳಿತಾಯವಾಗಲಿದೆ. ಡಿಸ್ಕೌಂಟ್‌ನಿಂದಾಗಿ Realme Narzo 50 5G ಫೋನ್ ಸುಮಾರು 11,999 ರೂ.ವರೆಗೂ ದೊರೆಯಲಿದೆ. ಆದರೆ, ಸ್ಮಾರ್ಟ್‌ಫೋನ್‌ನ ಯಾವೆಲ್ಲ ವೆರಿಯೆಂಟ್‌ಗಳ ಡಿಸ್ಕೌಂಟ್ ರೇಟಿಗೆ ಸಿಗಲಿವೆ ಎಂಬ ಮಾಹಿತಿಯನ್ನು ಕಂಪನಿಯು ಬಿಟ್ಟುಕೊಟ್ಟಿಲ್ಲ.
ಇದೇ ವೇಳೆ ಲ್ಯಾಪ್‌ಟ್ಯಾಪ್ ಕೂಡ ರಿಯಾಯ್ತಿ ದರದಲ್ಲಿ ಮಾರಾಟಕ್ಕೆ ಸಿಗಲಿವೆ ಎಂದು ರಿಯಲ್‌ಮಿ ಕಂಪನಿ ಹೇಳಿಕೊಂಡಿದೆ. ಲ್ಯಾಪ್‌ಟ್ಯಾಪ್ ಖರೀದಿ ಮೇಲೆ ಗ್ರಾಹಕರಿಗೆ ಸುಮಾರು 16 ಸಾವಿರ ರೂ.ವರೆಗೂ ಉಳಿತಾಯವಾಗಲಿದೆ.
ಬೃಹತ್ ಇ-ಕಾಮರ್ಸ್ ಜಾಲತಾಣಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಕೂಡ ಹಬ್ಬದ ಸಂದರ್ಭದಲ್ಲಿ ರಿಯಾಯ್ತಿ ದರದ ಸೇಲ್ ಆರಂಭಿಸುತ್ತವೆ. ಈಗಾಗಲೇ ಹೇಳಿದಂತೆ ಈ ಎರಡೂ ಕಂಪನಿಗಳು ಸೆಪ್ಟೆಂಬರ್ 23ರಿಂದಲೇ ಈ ಡಿಸ್ಕೌಂಟ್ ಮಾರಾಟವನ್ನು ಶುರು ಮಾಡಲಿವೆ. ಪ್ರತಿ ವರ್ಷವೂ ಈ ರೀತಿಯ ವ್ಯಾಪಾರವನ್ನು, ವಹಿವಾಟವನ್ನು ಮಾಡಿಕೊಂಡು ಬರುತ್ತವೆ. ಹಾಗೆಯೇ, ಜನರು ಈ ಸೇಲ್‌ಗೆ ಅದ್ಭುತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಂದು ವಾರದ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಖರೀದಿ ನಡೆಯುತ್ತದೆ.
ಇದನ್ನೂ ಓದಿ | e-commerce | ಅಮೆಜಾನ್-ಫ್ಲಿಪ್‌ಕಾರ್ಟ್ ನಡುವೆ ಪೈಪೋಟಿ, ಗ್ರಾಹಕರಿಗೆ ಲಾಭ ನಿರೀಕ್ಷೆ