Site icon Vistara News

Explainer: ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಖರೀದಿಸಿದ್ದೇಕೆ?

ವಾಣಿಜ್ಯ ಪ್ರಭಾವ

ತಮ್ಮ ಒಂದೇ ಒಂದು ಟ್ವೀಟ್‌ನಿಂದ ಎಲಾನ್‌ ಮಸ್ಕ್‌ ಕ್ರಿಪ್ಟೋಕರೆನ್ಸಿಯ ಬೆಲೆಗಳಲ್ಲಿ ಭಾರಿ ಏರಿಳಿತ ಉಂಟಾಗುವಂತೆ ಮಾಡಬಲ್ಲರು ಎಂಬುದು ರುಜುವಾತಾಗಿದೆ. ಈ ಹಿಂದೆ ಅವರು ʼಕ್ರಿಪ್ಟೋಕರೆನ್ಸಿ ಜಾಗತಿಕ ಎಕಾನಮಿಗೆ ಒಳ್ಳೆಯದಲ್ಲʼ ಎಂದು ಹೇಳಿದಾಗ ಬಿಟ್‌ಕಾಯಿನ್‌ ಮುಂತಾದವುಗಳ ಮೌಲ್ಯಗಳು ಕುಸಿದಿದ್ದವು. ಅವರು ʼʼನಾನೂ ಬಿಟ್‌ಕಾಯಿನ್‌, ಈಥರ್‌, ಡೋಜ್‌ಕಾಯಿನ್‌ಗಳನ್ನು ಹೊಂದಿದ್ದೇನೆʼʼ ಎಂದು ಹೇಳಿದಾಗ ಅವುಗಳ ಮೌಲ್ಯ ಗಗನಮುಖಿಯಾಗಿದ್ದವು. ಹೀಗೆ ಎಲಾನ್‌ ಮಸ್ಕ್‌ ತಮ್ಮ ಒಂದು ಹೇಳಿಕೆಯಿಂದಲೇ ಮಾರುಕಟ್ಟೆಯನ್ನು ಪ್ರಭಾವಿಸಬಲ್ಲರು. ಈ ಪ್ರಭಾವವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬೆಳೆಸಿಕೊಳ್ಳಲು ಮಸ್ಕ್‌ ಬಯಸುತ್ತಿದ್ದಾರೆ. ಜಾಗತಿಕ ಮಾರುಕಟ್ಟೆ, ಮಾಹಿತಿ ತಂತ್ರಜ್ಞಾನ ಪ್ರಪಂಚ ತಾನು ಹೇಳಿದಂತೆ ಕುಣಿಯಬೇಕು ಎಂಬುದು ಅವರ ಬಯಕೆ. ಇದಕ್ಕೆ ಟ್ವಿಟ್ಟರ್‌ ಸಮರ್ಥ ಮಾಧ್ಯಮ.

ರಾಜಕೀಯ ಪ್ರಭಾವ

ಟ್ವಿಟ್ಟರ್‌ನಲ್ಲಿ ಸಾಕಷ್ಟು ರಾಜಕೀಯ ಪ್ರಭಾವವೂ ಇದೆ. ಜೆಫ್‌ ಬೆಜೋಸ್‌, ವಾರನ್‌ ಬಫೆಟ್‌ ಸೇರಿದಂತೆ ಪ್ರಭಾವಿ ಉದ್ಯಮಿಗಳು, ನರೇಂದ್ರ ಮೋದಿ ಅವರಂಥ ದೊಡ್ಡ ರಾಜಕೀಯ ನಾಯಕರು, ಈ ವೇದಿಕೆಯಲ್ಲಿರುವುದು ಮಾತ್ರವಲ್ಲ, ಕೋಟ್ಯಂತರ ಬಳಕೆದಾರರ ನಿಲುವುಗಳನ್ನು ಪ್ರಭಾವಿಸುತ್ತಾರೆ. ಇವರ ಒಂದು ಟ್ವೀಟ್‌ ಪ್ರಪಂಚದಲ್ಲಿ ಅನೇಕ ಬದಲಾವಣೆಗಳನ್ನು ತರಬಲ್ಲುದು ಎಂಬುದು ಸಾಬೀತಾಗಿದೆ. ಟ್ವಿಟ್ಟರ್‌ ಮೊತ್ತಮೊದಲ ಮೈಕ್ರೋಬ್ಲಾಗಿಂಗ್‌ ಸೈಟ್‌, ಅದು ಈಗಲೂ ಹಾಗೆಯೇ ಉಳಿದಿದೆ. ಫೇಸ್‌ಬುಕ್‌, ಯೂಟ್ಯೂಬ್‌ಗಳ ನಡುವೆಯೂ ತನ್ನ ಪ್ರಭಾವ ಕಾಪಾಡಿಕೊಂಡಿದೆ. ಮಸ್ಕ್‌ಗೆ ತಮ್ಮ ರಾಜಕೀಯ ಲಾಬಿ ವಿಸ್ತರಿಸಿಕೊಳ್ಳಲು ಈ ವೇದಿಕೆ ನೆರವಾಗಲಿದೆ.

ಮಸ್ಕ್‌ ಯೋಜನೆಯೇನು?

ಟ್ವಿಟ್ಟರ್‌ಗಾಗಿ ಮಸ್ಕ್‌ ತಲೆಯಲ್ಲಿರುವ ಐಡಿಯಾ ಏನು ಎಂಬುದನ್ನು ಬಿಟ್ಟುಕೊಟ್ಟಿಲ್ಲ. ಸಾರ್ವಜನಿಕ ಕಂಪನಿಯನ್ನು ಮಸ್ಕ್‌ ಖಾಸಗಿಯಾಗಿ ಪರಿವರ್ತಿಸುತ್ತಾರೆಯೇ, ಆಡಳಿತ ಮಂಡಳಿಯನ್ನು ಬದಲಾಯಿಸಲಿದ್ದಾರೆಯೇ ಎಂಬುದೆಲ್ಲ ಇನ್ನೂ ನಿಗೂಢ. ಆದರೆ ಟ್ವಿಟ್ಟರ್‌ ಸಿಇಒ ಪರಾಗ್‌ ಅಗರ್‌ವಾಲ್‌ ಅವರು ತಮ್ಮ ಸಿಬ್ಬಂದಿಗೆ ಮುಂದಿನ ಆರು ತಿಂಗಳುಗಳ ಭರವಸೆ ನೀಡಿದ್ದಾರೆ. ʼʼಈ ಹಂತದಲ್ಲಿ ಯಾವುದೇ ಸಿಬ್ಬಂದಿ ಕಡಿತದ ಚಿಂತನೆಯಿಲ್ಲ. ನಾವು ಹೊಂದಿರುವ ತತ್ವದ ಆಧಾರದಲ್ಲಿ ಸದ್ಯಕ್ಕೆ ಮುಂದುವರಿಯಲಿದ್ದೇವೆ. ಇದರರ್ಥ ಏನೂ ಬದಲಾಗುವುದಿಲ್ಲ ಎಂದಲ್ಲ. ಒಮ್ಮೆ ಒಪ್ಪಂದ ಅಂತಿಮಗೊಂಡ ಬಳಿಕ ಬದಲಾವಣೆ ನಡೆಯಲಿದೆ. ಆದರೆ ಅದು ನಮ್ಮನ್ನು ಇನ್ನಷ್ಟು ಗಟ್ಟಿಗರನ್ನಾಗಿಸಲಿದೆʼʼ ಎಂದಿದ್ದಾರೆ ಪರಾಗ್.‌

ಕ್ರಿಪ್ಟೋಗಳ ಬೆಲೆ ಏರಿಕೆ

ಟ್ವಿಟ್ಟರ್‌ ಅನ್ನು ಖರೀದಿಸುವ ಮಸ್ಕ್‌ ಡೀಲ್‌ ಅಂತಿಮವಾಗಿರುವ ಬೆನ್ನಲ್ಲೇ, ಕ್ರಿಪ್ಟೋಕರೆನ್ಸಿಗಳ ಮೌಲ್ಯ ದಿಡೀರ್‌ ಎಂದು ಏರಿತು. ಮಸ್ಕ್‌ ಹೊಂದಿರುವ ಡೋಜ್‌ಕಾಯಿನ್‌ಗಳ ಮೌಲ್ಯ 21.8%ದಷ್ಟು ಏರಿಕೆಯಾಯಿತು. ಬಿಟ್‌ಕಾಯಿನ್‌ಗಳ ಬೆಲೆ 1% ಹಾಗೂ ಈಥರ್‌ ಬೆಲೆ 2% ಹೆಚ್ಚಿತು. ಇದೇ ಸಮಯದಲ್ಲಿ ʼಎಲಾನ್‌ ಬೈಸ್‌ ಟ್ವಿಟ್ಟರ್‌ʼ (ಇಬಿಟಿ) ಎಂಬ ಹೆಸರಿನ ಕ್ರಿಪ್ಟೋಕರೆನ್ಸಿಯನ್ನು ಯಾರೋ ಹುಟ್ಟುಹಾಕಿದ್ದು, ಇದರ ಬೆಲೆಯೂ ಅಚ್ಚರಿ ಎಂಬಂತೆ ಏರುತ್ತಿದೆ.

ಟೆಸ್ಲಾ ಶೇರುಗಳ ಬೆಲೆ ಇಳಿಕೆ

ಟ್ವಿಟ್ಟರ್‌ ಖರೀದಿ ಪ್ರಕಟಿಸಿದ ಒಂದೇ ದಿನದಲ್ಲಿ ಮಸ್ಕ್‌ ಮಾಲಿಕತ್ವದ ಟೆಸ್ಲಾ ಕಂಪನಿಯ ಒಟ್ಟಾರೆ ಮೌಲ್ಯ ಶೇರು ಮಾರುಕಟ್ಟೆಯಲ್ಲಿ 126 ಶತಕೋಟಿ ಡಾಲರ್‌ಗಳಷ್ಟು ಕುಸಿದಿದೆ. ಟೆಸ್ಲಾಗೂ ಟ್ವಿಟ್ಟರ್‌ ಖರೀದಿಗೂ ಏನೂ ಸಂಬಂಧ ಇಲ್ಲವಾದರೂ, ಟ್ವಿಟ್ಟರ್‌ ಖರೀದಿಸಲು ಅಗತ್ಯವಾದ 44 ಶತಕೋಟಿ ಡಾಲರ್‌ ಹಣವನ್ನು ಮಸ್ಕ್‌ ಟೆಸ್ಲಾದಿಂದ ಹೊಂದಿಸಲು ಮುಂದಾಗಬಹುದು ಎಂಬ ಊಹೆಯೇ ಈ ಮೌಲ್ಯ ಇಳಿಕೆಗೆ ಕಾರಣವಾಗಿದೆ.

ಹೆಚ್ಚಿನ ಓದಿಗೆ: Explainer: ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಕೊಳ್ಳೋದು ಅಂತಿಮ, ಮುಂದೇನಾಗುತ್ತೆ?

ಎಲಾನ್‌ ಮಸ್ಕ್‌ ಒಡೆತನದ ಕಂಪನಿಗಳು

ಟೆಸ್ಲಾ: 2003ರಲ್ಲಿ ಸ್ಥಾಪನೆ. ಪ್ರತಿಷ್ಠಿತ ಆಟೋಮೋಟಿವ್‌ ಕಂಪನಿಗಳಲ್ಲಿ ಒಂದು. ಟೆಕ್ಸಾಸ್‌ನಲ್ಲಿ ಕೇಂದ್ರ ಹೊಂದಿರುವ ಇದು ಎಲೆಕ್ಟ್ರಿಕ್‌ ವಾಹನಗಳು, ಸೌರ ಪ್ಯಾನೆಲ್‌ಗಳು ಮತ್ತಿತರ ಸ್ವಚ್ಛ ಇಂಧನ ಉತ್ಪನ್ನಗಳನ್ನು ತಯಾರಿಸುತ್ತದೆ.
ಸ್ಪೇಸ್‌ಎಕ್ಸ್:‌ ಜಗತ್ತಿನ ಅತ್ಯಾಧುನಿಕ ರಾಕೆಟ್‌ಗಳು, ಗಗನನೌಕೆಗಳನ್ನು ಉತ್ಪಾದಿಸುತ್ತದೆ. 2002ರಲ್ಲಿ ಸ್ಥಾಪನೆ.
ನ್ಯೂರಾಲಿಂಕ್‌: ಮನುಷ್ಯನ ಮೆದುಳಿನಲ್ಲಿ ಸ್ಥಾಪಿಸಬಹುದಾದ ನರತಂತ್ರಜ್ಞಾನ ಸಾಧನಗಳ ಹಾಗೂ ತಂತ್ರಜ್ಞಾನದ ಬೆಳವಣಿಗೆಗಾಗಿ 2016ರಲ್ಲಿ ಸ್ಥಾಪನೆ.
ದಿ ಬೋರಿಂಗ್‌ ಕಂಪನಿ: ಸುರಂಗ ಕೊರೆಯುವ ಸಂಸ್ಥೆ. ನಗರಗಳ ಭವಿಷ್ಯದಲ್ಲಿ ಭೂಗತ ಸುರಂಗ ನಿರ್ಮಾಣ ಪ್ರಾಮುಖ್ಯ ವಹಿಸಲಿದೆ ಎಂಬ ಒಳನೋಟ.
ಓಪನ್‌ಐ: ಇದೊಂದು ಲಾಭರಹಿತ, ಕೃತಕ ಬುದ್ಧಿಮತ್ತೆ ಕುರಿತು ಅಧ್ಯಯನ ನಡೆಸುವ ಸಂಸ್ಥೆ. 2018ರಲ್ಲಿ ಸ್ಥಾಪಿತ.

Exit mobile version