ಹೊಸದಿಲ್ಲಿ: ಬಲು ದೂರದ ಬಾಹ್ಯಾಕಾಶದಿಂದ 16 ಮಿಲಿಯ ಕಿಮೀ ದೂರದಿಂದ ಮೊದಲ ಲೇಸರ್ ಬೆಳಕಿನ ಸಂದೇಶವನ್ನು (Laser message) ಭೂಮಿ ಸ್ವೀಕರಿಸಿದೆ. ನಾಸಾದ ಪ್ರಕಾರ, ಇದು ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ 40 ಪಟ್ಟು ಹೆಚ್ಚು ದೂರ. ಇದು ನಮ್ಮಲ್ಲಿರುವ ಆಪ್ಟಿಕಲ್ ಸಂವಹನ ಸಾಧನಗಳ ಗರಿಷ್ಠ ಸಾಧನೆಯಾಗಿದೆ.
ನಾಸಾದ (NASA news) ಸೈಕ್ ಬಾಹ್ಯಾಕಾಶ ನೌಕೆಯಲ್ಲಿ (Psyche spacecraft) ಪ್ರಯಾಣಿಸುತ್ತಿರುವ ʼಡೀಪ್ ಸ್ಪೇಸ್ ಆಪ್ಟಿಕಲ್ ಕಮ್ಯುನಿಕೇಷನ್ಸ್ʼ (ಡಿಎಸ್ಒಸಿ) ಉಪಕರಣದಿಂದ ಈ ಪ್ರಯೋಗ ಸಾಧ್ಯವಾಗಿದೆ. ಇದು ಅಕ್ಟೋಬರ್ 13ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಹೊರಟಿತು ಮತ್ತು ನಂತರ ಲೇಸರ್ ಕಿರಣದ ಸಂದೇಶವನ್ನು ಭೂಮಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ. ನವೆಂಬರ್ 14ರಂದು, ಸೈಕ್ ಬಾಹ್ಯಾಕಾಶ ನೌಕೆಯು ಕ್ಯಾಲಿಫೋರ್ನಿಯಾದ ಪಾಲೋಮರ್ ವೀಕ್ಷಣಾಲಯದ ಹೇಲ್ ಟೆಲಿಸ್ಕೋಪ್‌ನೊಂದಿಗೆ ಸಂಪರ್ಕವನ್ನು ಸ್ಥಾಪಿಸಿತು. ಪರೀಕ್ಷೆಯ ಸಮಯದಲ್ಲಿ DSOCಯ ಸಮೀಪದ ಅತಿಗೆಂಪು ಫೋಟಾನ್‌ಗಳು ಸೈಕ್‌ನಿಂದ ಭೂಮಿಗೆ ಪ್ರಯಾಣಿಸಲು ಸುಮಾರು 50 ಸೆಕೆಂಡುಗಳನ್ನು ತೆಗೆದುಕೊಂಡವು.
ಈ ಮೊದಲ ಸಂವಹನವನ್ನು ʼಮೊದಲ ಬೆಳಕುʼ (First Light) ಎಂದು ಕರೆಯಲಾಗುತ್ತದೆ. “ಮೊದಲ ಬೆಳಕನ್ನು ಸಾಧಿಸಿದ್ದು ಅನೇಕ ನಿರ್ಣಾಯಕ DSOC ಮೈಲಿಗಲ್ಲುಗಳಲ್ಲಿ ಒಂದಾಗಿದೆ. ಇದು ಮಾನವಕುಲದ ಮುಂದಿನ ದೈತ್ಯ ಹೆಜ್ಜೆಯನ್ನು ಬೆಂಬಲಿಸಲು ವೈಜ್ಞಾನಿಕ ಮಾಹಿತಿ, ಹೈ-ಡೆಫಿನಿಷನ್ ಚಿತ್ರಣ ಮತ್ತು ಸ್ಟ್ರೀಮಿಂಗ್ ವೀಡಿಯೊವನ್ನು ಕಳುಹಿಸುವ ಸಾಮರ್ಥ್ಯವನ್ನು ಹೊಂದಿರುವ ಉನ್ನತ-ಡೇಟಾ-ರೇಟ್ ಸಂವಹನಗಳ ಕಡೆಗೆ ದಾರಿ ಮಾಡಿಕೊಡುತ್ತದೆʼʼ ಎಂದು NASA ಪ್ರಧಾನ ಕಚೇರಿಯಲ್ಲಿ ತಂತ್ರಜ್ಞಾನ ಪ್ರದರ್ಶನಗಳ ನಿರ್ದೇಶಕರಾಗಿರುವ ಟ್ರುಡಿ ಕೊರ್ಟೆಸ್ ಹೇಳಿದ್ದಾರೆ.
NASA ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ DSOCಗಾಗಿ ಪ್ರಾಜೆಕ್ಟ್ ತಂತ್ರಜ್ಞರಾದ ಅಬಿ ಬಿಸ್ವಾಸ್, “ಮೊದಲ ಬೆಳಕನ್ನು ಪಡೆದುದು ಅದ್ಭುತವಾದ ಸಾಧನೆಯಾಗಿದೆ. ಸೈಕ್‌ನಲ್ಲಿರುವ DSOCನ ಫ್ಲೈಟ್ ಟ್ರಾನ್ಸ್‌ಸಿವರ್‌ನಿಂದ ಆಳವಾದ ಬಾಹ್ಯಾಕಾಶ ಲೇಸರ್ ಫೋಟಾನ್‌ಗಳನ್ನು ನೆಲದ ಉಪಕರಣಗಳ ಮೂಲಕ ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ. ನಾವು ಡೇಟಾವನ್ನು ಪಡೆಯಬಹುದು ಮತ್ತು ʼಬೆಳಕಿನ ಬಿಟ್ʼಗಳನ್ನು ಆಳವಾದ ಬಾಹ್ಯಾಕಾಶಕ್ಕೆ ತಲುಪಿಸಬಹುದು.”
ಸೈಕ್ ಬಾಹ್ಯಾಕಾಶ ನೌಕೆಯ ಪ್ರಾಥಮಿಕ ಉದ್ದೇಶವೆಂದರೆ ವಿಶಿಷ್ಟವಾದ ಲೋಹವಿರುವ ಕ್ಷುದ್ರಗ್ರಹಗಳನ್ನು ಅನ್ವೇಷಿಸುವುದು ಮತ್ತು ಅಧ್ಯಯನ ಮಾಡುವುದು, ಗ್ರಹಗಳ ರಚನೆ ಮತ್ತು ಕೋರ್ ಡೈನಾಮಿಕ್ಸ್ ಇತಿಹಾಸದ ಒಳನೋಟಗಳನ್ನು ತಿಳಿಯುವುದು. ಈ ಪ್ರಯೋಗವನ್ನು ಎರಡು ವರ್ಷಗಳವರೆಗೆ ಯೋಜಿಸಲಾಗಿದೆ. ತನ್ನ ಅಂತಿಮ ಗಮ್ಯಸ್ಥಾನಕ್ಕೆ ಹೋಗುವ ದಾರಿಯಲ್ಲಿ ಸೈಕ್ ಇನ್ನಷ್ಟು ದೂರದ ಸ್ಥಳಗಳಿಂದ ಲೇಸರ್ ಸಂಕೇತಗಳನ್ನು ಕಳುಹಿಸುತ್ತದೆ ಮತ್ತು ಸ್ವೀಕರಿಸುತ್ತದೆ. ಬಾಹ್ಯಾಕಾಶ ನೌಕೆಯು 2029ರಲ್ಲಿ ಕ್ಷುದ್ರಗ್ರಹವನ್ನು ತಲುಪುವ ನಿರೀಕ್ಷೆಯಿದೆ ಮತ್ತು ನಂತರ ಕಕ್ಷೆಗೆ ಮುಂದುವರಿಯುತ್ತದೆ.
NASA ನಿರ್ವಾಹಕ ಬಿಲ್ ನೆಲ್ಸನ್ ಹೇಳುವಂತೆ, “ಭವಿಷ್ಯದ ನಾಸಾ ಕಾರ್ಯಾಚರಣೆಗಳಲ್ಲಿ ಬಳಸಬಹುದಾದ ತಂತ್ರಜ್ಞಾನವನ್ನು ಪರೀಕ್ಷಿಸುವಾಗ ಸೈಕ್ ಮಿಷನ್ ಮನುಕುಲಕ್ಕೆ ಗ್ರಹ ರಚನೆಯ ಬಗ್ಗೆ ಹೊಸ ಮಾಹಿತಿಯನ್ನು ಒದಗಿಸುತ್ತದೆʼʼ. ಸದ್ಯ ಆಳವಾದ ಬಾಹ್ಯಾಕಾಶದಲ್ಲಿ ಸಂವಹನವನ್ನು ರೇಡಿಯೊ ಸಿಗ್ನಲ್‌ಗಳ ಮೂಲಕ ಸಾಧಿಸಲಾಗುತ್ತದೆ. ಭೂಮಿಯ ಮೇಲಿನ ವಿಶಾಲವಾದ ಆಂಟೆನಾಗಳಿಂದ ಕಳುಹಿಸಲಾಗುತ್ತದೆ ಮತ್ತು ಸ್ವೀಕರಿಸಲಾಗುತ್ತದೆ. ಆದರೆ ಅವುಗಳ ಬ್ಯಾಂಡ್‌ವಿಡ್ತ್ ಸೀಮಿತವಾಗಿದೆ. ಈ ಪ್ರಯೋಗದೊಂದಿಗೆ, ರೇಡಿಯೊ ತರಂಗಗಳ ಬದಲಿಗೆ ಬೆಳಕನ್ನು ಬಳಸಿಕೊಂಡು ಭೂಮಿ ಮತ್ತು ಬಾಹ್ಯಾಕಾಶ ನೌಕೆಗಳ ನಡುವೆ ಮಾಹಿತಿಯನ್ನು ವಿನಿಮಯ ಮಾಡಲು ಲೇಸರ್‌ಗಳನ್ನು ಬಳಸಲು NASA ಆಶಿಸಿದೆ. ಈ ವ್ಯವಸ್ಥೆಯು ಪ್ರಸ್ತುತ ಬಾಹ್ಯಾಕಾಶ ಸಂವಹನ ಸಾಧನಗಳಿಗಿಂತ 10ರಿಂದ 100 ಪಟ್ಟು ವೇಗವಾಗಿ ಮಾಹಿತಿಯನ್ನು ಪ್ರಸಾರ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ವಿಸ್ತಾರ Explainer: ಬಾಹ್ಯಾಕಾಶದಲ್ಲಿ ಚೀನಾದ ಸೇನಾ ನೆಲೆ; ಇನ್ನು ಆಕಾಶದಿಂದಲೇ ಎರಗಲಿದೆ ಹೈಪರ್‌ಸಾನಿಕ್ ಕ್ಷಿಪಣಿ!