Site icon Vistara News

Olympus AI: ಚಾಟ್‌ಜಿಪಿಟಿಗೆ ಠಕ್ಕರ್ ನೀಡಲು ರೆಡಿಯಾಗುತ್ತಿದೆ ಅಮೆಜಾನ್‌ನ ‘ಒಲಿಂಪಸ್’!

No promotion for who don't want to come office Says amazon company

ನವದೆಹಲಿ: ಈಗೇನಿದ್ದರೂ ಕೃತಕ ಬುದ್ಧಿಮತ್ತೆ ಜಮಾನಾ(Artificial intelligence). ಮೈಕ್ರೋಸಾಫ್ಟ್ ಬೆಂಬಲಿತ ಓಪನ್ಎಐನ‌ ಚಾಟ್‌ಜಿಪಿಟಿ ಸೃಷ್ಟಿಸಿರುವ ಸಾಧ್ಯತೆಗಳು ಎಣಿಕೆಗೆ ನಿಲುಕುವುದಿಲ್ಲ. ಪರಿಣಾಮ, ಪ್ರತಿಯೊಂದು ಕಂಪನಿಯು ಅಂಥದ್ದೇ ಎಐ ವ್ಯವಸ್ಥೆಯನ್ನು ರೂಪಿಸುವತ್ತ ಗಮನ ಹರಿಸಿವೆ. ಈ ವಿಷಯದಲ್ಲಿ ಅಮೆಜಾನ್ ಕೂಡ ಹಿಂದೆ ಬಿದ್ದಿಲ್ಲ. ಬೃಹತ್ ಭಾಷಾ ಮಾದರಿ (large language model – LLM) ‘ಒಲಿಂಪಸ್’ (Olympus) ಅಭಿವೃದ್ಧಿಗೆ ಸಾಕಷ್ಟು ಹಣವನ್ನು ಹೂಡಿಕೆ ಮಾಡುತ್ತಿದೆ. ಅಮೆಜಾನ್ ಅಭಿವೃದ್ಧಿಪಡಿಸುತ್ತಿರುವ ಈ ಎಐ ಮಾಡೆಲ್ ನೇರವಾಗಿ, ಓಪನ್ಐಎನ ಚಾಟ್‌ಜಿಪಿಟಿ ಹಾಗೂ ಗೂಗಲ್‌ನ ಬಾರ್ಡ್‌ಎಐಗೆ ಠಕ್ಕರ್ ನೀಡಲಿದೆ. ಒಲಿಂಪಸ್ ಎಐ ಮಾದರಿಯು ಎರಡು ಲಕ್ಷ ಕೋಟಿ ಪ್ಯಾರಾಮೀಟರ್‌ಗಳನ್ನು ಹೊಂದಿದ್ದು, ಇದು ತರಬೇತಿ ಪಡೆಯುತ್ತಿರುವ ಅತಿದೊಡ್ಡ ಮಾದರಿಗಳಲ್ಲಿ ಒಂದಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಓಪನ್ಎಐನ ಜಿಪಿಟಿ-4 ಮಾದರಿಗಳು, ಲಭ್ಯವಿರುವ ಅತ್ಯುತ್ತಮ ಮಾದರಿಗಳಲ್ಲಿ ಒಂದಾಗಿದೆ. ಒಂದು ಟ್ರಿಲಿಯನ್ ನಿಯತಾಂಕಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಅಲೆಕ್ಸಾದ ಮಾಜಿ ಮುಖ್ಯಸ್ಥ ರೋಹಿತ್ ಪ್ರಸಾದ್ ಅವರು ಅಮೆಜಾನ್‌ನ ತಂಡವನ್ನು ಮುನ್ನಡೆಸುತ್ತಿದ್ದಾರೆ, ಅವರು ಈಗ ನೇರವಾಗಿ ಸಿಇಒ ಆಂಡಿ ಜಾಸ್ಸಿಗೆ ವರದಿ ಮಾಡಿಕೊಳ್ಳುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಅಮೆಜಾನ್‌ನಲ್ಲಿ ಸಾಮಾನ್ಯ ಕೃತಕ ಬುದ್ಧಿಮತ್ತೆಯ ಮುಖ್ಯ ವಿಜ್ಞಾನಿಯಾಗಿ, ಪ್ರಸಾದ್ ಅಲೆಕ್ಸಾ ಎಐ ಮತ್ತು ಅಮೆಜಾನ್ ವಿಜ್ಞಾನ ತಂಡದಲ್ಲಿ ಕೆಲಸ ಮಾಡುತ್ತಿದ್ದ ಸಂಶೋಧಕರನ್ನು ತರಬೇತಿ ಮಾದರಿಗಳಲ್ಲಿ ಕೆಲಸ ಮಾಡಲು ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ.

ಅಮೆಜಾನ್ ಈಗಾಗಲೇ ಟೈಟಾನ್‌ನಂತಹ ಸಣ್ಣ ಮಾದರಿಗಳಿಗೆ ತರಬೇತಿ ನೀಡಿದೆ. ಇದು ಆಂಥ್ರೊಪಿಕ್ ಮತ್ತು AI21 ಲ್ಯಾಬ್‌ಗಳಂತಹ ಎಐ ಮಾದರಿಯ ಸ್ಟಾರ್ಟ್‌ಅಪ್‌ಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ, ಅವುಗಳನ್ನು ಅಮೆದಾನ್ ವೆಬ್ ಸೇವೆಗಳ ಬಳಕೆದಾರರಿಗೆ ನೀಡುತ್ತಿದೆ ಎಂದು ವರದಿ ಹೇಳಿದೆ.

ಅಮೆಜಾನ್ ತನ್ನ ಕ್ಲೌಡ್ ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್ ಎಡಬ್ಲ್ಯೂಎಸ್ ಅನ್ನು ಎಂಟರ್‌ಪ್ರೈಸ್ ಗ್ರಾಹಕರಿಗೆ ಹೆಚ್ಚು ಆಕರ್ಷಕವಾಗಿಸಲು ದೊಡ್ಡ ಭಾಷಾ ಮಾದರಿಗಳಲ್ಲಿ (ಎಲ್‌ಎಲ್‌ಎಂ) ಹೂಡಿಕೆ ಮಾಡುತ್ತಿದೆ. ಎಲ್ಎಲ್‌ಎಂಗಳು ಎಐ ಪರಿಕರಗಳ ಹಿಂದಿನ ತಂತ್ರಜ್ಞಾನವಾಗಿದ್ದು, ಬೃಹತ್ ಪ್ರಮಾಣದ ಡೇಟಾದ ಮೇಲೆ ತರಬೇತಿ ಪಡೆದ ನಂತರ ಮಾನವ ತರಹದ ಪ್ರತಿಕ್ರಿಯೆಗಳನ್ನು ರಚಿಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: OpenAI ChatGPT: ಚಾಟ್‌ಜಿಪಿಟಿ VS ಇಲಾನ್ ಮಸ್ಕ್‌ನ ಗ್ರೋಕ್‌: ಏನು ವ್ಯತ್ಯಾಸ?

Exit mobile version