ಸ್ಯಾನ್‌ಫ್ರಾನ್ಸಿಸ್ಕೋ: ಟ್ವಿಟರ್ (Twitter) ಅನ್ನು ಅಧಿಕೃತವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಎಲಾನ್ ಮಸ್ಕ್ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ವೈವಿಧ್ಯಮಯ ಅಭಿಪ್ರಾಯಗಳಿಗೆ ವೇದಿಕೆಯನ್ನು ಒದಗಿಸುವುದಕ್ಕಾಗಿ ಎಲಾನ್ ಮಸ್ಕ್ ಅವರು ಕಂಟೆಂಟ್ ಮಾಡರೇಷನ್ ಕೌನ್ಸಿಲ್ ನೀತಿಯನ್ನು ಜಾರಿಗೆ ತರಲು ಹೊರಟಿದ್ದಾರೆ.
ಕಂಟೆಂಟ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರಗಳನ್ನು ಅಥವಾ ಯಾವುದೇ ಖಾತೆಗಳನ್ನು ಮರುಸ್ಥಾಪಿಸುವ ನಿರ್ಧಾರವನ್ನು ಕೌನ್ಸಿಲ್‌ಗೆ ಮನವರಿಕೆಯಾಗದೇ ಹೊರತು ಕೈಗೊಳ್ಳಲಾಗುವುದಿಲ್ಲ ಎಂದು ಎಲಾನ್ ಮಸ್ಕ್ ಅವರು ತಿಳಿಸಿದ್ದಾರೆ.
ಮೊದಲಿನಿಂದಲೂ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತ ಬಂದಿರುವ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಂತೆ ದಿ ಬರ್ಡ್ ಈಸ್ ಫ್ರೀ ಎಂದು ಟ್ವೀಟ್ ಮಾಡಿದ್ದರು. ಆ ಮೂಲಕ ತಮ್ಮ ಮುಂದಿನ ನೀತಿಯನ್ನು ಅವರು ಸೂಚ್ಯವಾಗಿ ತಿಳಿಸಿದ್ದರು. ಈಗ ಅದರಂತೆ ಕಂಟೆಂಟ್ ಮಾಡರೇಷನ್ ಕೌನ್ಸಿಲ್ ರೂಪಿಸಲು ಹೊರಟಿದ್ದಾರೆ.
ಸುಮಾರು 44 ಶತಕೋಟಿ ಡಾಲರ್ ಒಪ್ಪಂದದ ಮೂಲಕ ಟ್ವಿಟರ್ ಖರೀದಿಸಿರುವ ಎಲಾನ್ ಮಸ್ಕ್ ತಮ್ಮದೇ ಆದ ಯೋಜನೆಗಳನ್ನು ಹೊಂದಿದ್ದಾರೆ. ಮುಕ್ತ ಅಭಿವ್ಯಕ್ತಿ ಸ್ವಾತ್ಯಂತ್ರದ ಬಗ್ಗೆ ಮಾತನಾಡುತ್ತಲೇ, ಟ್ವಿಟರ್ ಅನ್ನು ಜಗತ್ತಿನ ಅತ್ಯಂತ ಗೌರವಾನ್ವಿತ ಜಾಹೀರಾತು ವೇದಿಕೆಯನ್ನಾಗಿ ರೂಪಿಸುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Twitter | ಎಲಾನ್ ಮಸ್ಕ್ ಟ್ವಿಟರ್ ಸಿಇಒ ಪರಾಗ್ ಅಗ್ರವಾಲ್ ಅವರನ್ನು ಕೆಲಸದಿಂದ ಕಿತ್ತು ಹಾಕಿದ್ದೇಕೆ?