ಬಹು ನಿರೀಕ್ಷಿತ ೫ಜಿ ನೆಟ್‌ವರ್ಕ್ ಹೇಗೆ ಕಾರ್ಯನಿರ್ವಹಿಸುತ್ತದೆ (ವಿಸ್ತಾರ 5G Info) ಎಂಬ ಕುತೂಹಲ ನಿಮ್ಮಲ್ಲಿರಬಹುದು. 5ಜಿ ನೆಟ್‌ವರ್ಕ್‌ನಲ್ಲಿ ಒಂದು ಮೊಬೈಲ್ ನೆಟ್ ವರ್ಕ್ ಅನ್ನು ಸೆಲ್‌ಗಳಾಗಿ (cell) ವಿಭಜಿಸಲಾಗುವುದು. ಪ್ರತಿಯೊಂದು ಫೋನ್ ಕೂಡ ಒಂದು ಸೆಲ್ ಜತೆ ಸಂಪರ್ಕ ವನ್ನು ಹೊಂದಿರುತ್ತದೆ.
ಪ್ರತಿಯೊಂದು ಸೆಲ್ ಕೂಡ ಒಂದು ಸೆಲ್ ಟವರ್ ( cell tower) ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಸೆಲ್ ಟವರ್, ವೈರ್‌ಲೆಸ್ ಟ್ರಾನ್ಸಿವರ್ ಬೇಸ್ ಸ್ಟೇಷನ್ ಆಗಿರುತ್ತದೆ. ಈ ಬೇಸ್ ಸ್ಟೇಶನ್ ತನ್ನ ಸೆಲ್‌ನಲ್ಲಿರುವ ಎಲ್ಲ ಸಕ್ರಿಯ ಫೋನ್‌ಗಳಿಗೆ ವೈರ್‌ಲೆಸ್ ಸಂಪರ್ಕವನ್ನು ಒದಗಿಸುತ್ತದೆ. ವ್ಯಕ್ತಿಯೊಬ್ಬ ಕರೆ ಮಾಡುವಾಗ ರೇಡಿಯೊ ತರಂಗಳು ಸಮೀಪದ ಸೆಲ್ ಟವರ್ ಮೂಲಕ ಸಾಗಿ ವರ್ಗಾವಣೆಯಾಗುತ್ತದೆ.
೫ಜಿ ನೆಟ್‌ವರ್ಕ್ ತನ್ನ ವೈರ್‌ಲೆಸ್ ಡೇಟಾವನ್ನು ವರ್ಗಾಯಿಸಲು ಬಹುತೇಕ ೪ಜಿ ಮತ್ತು ೪ಜಿ ಎಲ್‌ಟಿಇ (long-term evolution network) ನೆಟ್‌ವರ್ಕ್ ಅನ್ನು ಅವಲಂಬಿಸಿದೆ. ಆದರೆ ೩ಜಿ-೪ಜಿಗೆ ಹೋಲಿಸಿದರೆ ಇದರ ವೇಗವು ಹೆಚ್ಚು. ಟೆಲಿಕಾಂ ಕಂಪನಿಗಳು ೫ಜಿಗೆ ಮಾತ್ರ ಮೀಸಲಾಗಿರುವ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಲು ಕಾರ್ಯಪ್ರವೃತ್ತವಾಗಿವೆ.
ಮಿಲ್ಲಿಮೀಟರ್ ವೇವ್ಸ್ (Millimeter waves) : ಮಿಲ್ಲಿಮೀಟರ್ ವೇವ್ಸ್ ಅಥವಾ ಹೈ-ಫ್ರೀಕ್ವೆನ್ಸಿ ರೇಡಿಯೋ ತರಂಗಗಳು ಮೊಬೈಲ್ ಫೋನ್‌ಗಳಿಗೆ ಗಿಗಾಬೈಟ್‌ಗೂ ಹೆಚ್ಚಿನ ಸ್ಪೀಡ್ ಅನ್ನು ಕಡಿಮೆ ಅವಧಿಯಲ್ಲಿ ನೀಡುತ್ತದೆ. ಬೀಮ್‌ಫೋರ್ಮಿಂಗ್ (Beamforming) ಟ್ರಾಫಿಕ್ ಸಿಗ್ನಲಿಂಗ್ ಸಿಸ್ಟಮ್, ಸೆಲ್ಯುಲಾರ್ ಬೇಸ್ ಸ್ಟೇಶನ್‌ಗಳಿಗೆ ವೈರ್‌ಲೆಸ್ ಸಿಗ್ನಲ್‌ಗಳನ್ನು ವೈಯಕ್ತಿಕ ಮೊಬೈಲ್ ಫೋನ್‌ಗಳಿಗೆ ವರ್ಗಾಯಿಸಲು ನೆರವಾಗುತ್ತದೆ. MIMO (multiple input, multiple output) ವ್ಯವಸ್ಥೆಯಲ್ಲಿ ವೈರ್‌ಲೆಸ್ ಡೇಟಾವನ್ನು ಹೆಚ್ಚಿನ ಕೆಪಾಸಿಟಿಯಲ್ಲಿ ವರ್ಗಾಯಿಸಲು ಸಾಧ್ಯವಾಗುತ್ತದೆ.
ಟೆಲಿಕಾಂ ಕಂಪನಿಗಳ ೫ಜಿ ಯೋಜನೆಯ ಪ್ಲಾನ್:
ವೊಡಾಫೋನ್ ಐಡಿಯಾ: ಅಮೆರಿಕ ಮೂಲದ ಸಿಯೇನಾ ಜತೆಗೆ ನೆಟ್ ವರ್ಕ್ ಸ್ಥಾಪನೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಎಲ್&ಟಿ ಸ್ಮಾರ್ಟ್ ವರ್ಲ್ಡ್& ಕಮ್ಯುನಿಕೇಶನ್ ಜತೆ ೫ಜಿ ಮೂಲಸೌಕರ್ಯ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಿದೆ. ನೋಕಿಯಾ ಜತೆ ತಂತ್ರಜ್ಞಾನ ಪರಿಣತಿಯ ಒಪ್ಪಂದ ಮಾಡಿಕೊಂಡಿದೆ.
ಭಾರ್ತಿ ಏರ್‌ಟೆಲ್: ಭಾರ್ತಿ ಏರ್‌ಟೆಲ್ ಕಂಪನಿಯು ಟೆಕ್ ಮಹೀಂದ್ರಾದ ಜತೆಗೆ ೫ಜಿ ನೆಟ್‌ವರ್ಕ್ ಸ್ಥಾಪನೆಗೆ ಸಂಬಂಧಿಸಿ ಒಪ್ಪಂದ ಮಾಡಿಕೊಂಡಿದೆ. ಕ್ಲೌಡ್ ತಂತ್ರಜ್ಞಾನದ ನೆರವೂ ಸಿಗಲಿದೆ.
ರಿಲಯನ್ಸ್ ಜಿಯೊ: ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಜತೆ ರಿಲಯನ್ಸ್ ಜಿಯೊ ೫ಜಿ ನೆಟ್ ವರ್ಕ್ ಜಾರಿ ಕುರಿತು ಮಾತುಕತೆ ನಡೆಸಿದೆ. ಗೂಗಲ್ ಕ್ಲೌಡ್ ನೆರವನ್ನೂ ಪಡೆಯುವ ನಿರೀಕ್ಷೆ ಇದೆ.
ಭಾರತದ ಮೊಬೈಲ್ ಚಂದಾದಾರರು
ರಿಲಯನ್ಸ್ ಜಿಯೊ | 40.5 ಕೋಟಿ |
ಭಾರ್ತಿ ಏರ್‌ಟೆಲ್ | 36.1 ಕೋಟಿ |
ವೊಡಾಫೋನ್ ಐಡಿಯಾ | 25.9 ಕೋಟಿ |
ಇತರ | 11.8 ಕೋಟಿ |
ಒಟ್ಟು | 114.3 ಕೋಟಿ |
೫ಜಿಗೆ ಯಾರಿಂದ ಎಷ್ಟು ಬಿಡ್? (ಕೋಟಿ ರೂ.ಗಳಲ್ಲಿ)
ರಿಲಯನ್ಸ್ ಜಿಯೊ | 88,078 |
ಭಾರ್ತಿ ಏರ್‌ಟೆಲ್ | 43,084 |
ವೊಡಾಫೋನ್ ಐಡಿಯಾ | 18,799 |
ಅದಾನಿ ಗ್ರೂಪ್ | 212 |
8 ಲಕ್ಷ ಮೊಬೈಲ್ ಗೋಪುರಗಳ ಅಗತ್ಯ: ೫ಜಿ ನೆಟ್ ವರ್ಕ್ ಅನ್ನು ದೇಶವ್ಯಾಪಿ ಸುಗಮವಾಗಿ ಜಾರಿಗೊಳಿಸಲು ಟೆಲಿಕಾಂ ಮೂಲ ಸೌಕರ್ಯ ಅಭಿವೃದ್ಧಿಯೂ ಅನಿವಾರ್ಯ. ಪ್ರಸ್ತುತ ಭಾರತದಲ್ಲಿ ೭ ಲಕ್ಷ ಟೆಲಿಕಾಂ ಟವರ್‌ಗಳಿವೆ. ಇದು ಜಗತ್ತಿನಲ್ಲಿಯೇ ಹೆಚ್ಚು. ಹೀಗಿದ್ದರೂ ಸಾಕಾಗುತ್ತಿಲ್ಲ. ತಜ್ಞರ ಪ್ರಕಾರ ೫ಜಿ ನೆಟ್ ವರ್ಕ್ ಎಲ್ಲ ಕಡೆ ಸುಗಮವಾಗಿ ಜಾರಿಯಾಗುವ ವೇಳೆಗೆ ಟೆಲಿಕಾಂ ಟವರ್‌ಗಳ ಸಂಖ್ಯೆ ಇಮ್ಮಡಿಯಾಗಲಿದೆ! ಅಂದರೆ ೨೦೨೩-೨೪ರ ವೇಳೆಗೆ ಟವರ್‌ಗಳ ಸಂಖ್ಯೆ ೧೫ ಲಕ್ಷ ಮೀರಲಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ ಮುಂದಿನ ೨ ವರ್ಷಗಳಲ್ಲಿ ಹೊಸತಾಗಿ ೮ ಲಕ್ಷ ಟೆಲಿಕಾಂ ಗೋಪುರಗಳ ಅಳವಡಿಕೆಗೆ ಅನುಮತಿ ನೀಡಿದೆ. ಪ್ರಧಾನಮಂತ್ರಿಯವರ ಕಚೇರಿ (ಪಿಎಂಒ) ಜತೆಗೆ ಈ ಸಂಬಂಧ ಚರ್ಚಿಸಲಾಗಿದೆ.
ಟೆಲಿಕಾಂ ಗೋಪುರಗಳ ಫೈಬರೀಕರಣ (fiberisation) ಕೂಡ ನಡೆಯಬೇಕಿದೆ. ಸದ್ಯಕ್ಕೆ ೩೦% ಮಾತ್ರ ಫೈಬರೀಕರಣವಾಗಿದೆ. ೫ಜಿಯ ಸುಗಮ ಜಾರಿಗೆ ಇದನ್ನು ೮೦% ತನಕ ಏರಿಸಬೇಕು. ಟೆಲಿಕಾಂ ಗೋಪುರಗಳನ್ನು ಆಪ್ಟಿಕಲ್ ಫೈಬರ್ ಮೂಲಕ ಪರಸ್ಪರ ಸಂಪರ್ಕಿಸುವ ಕೆಲಸಕ್ಕೆ ಫೈಬರೀಕರಣ ಎನ್ನುತ್ತಾರೆ.
೫ಜಿ ಸ್ಮಾರ್ಟ್‌ಫೋನ್ ಅಗತ್ಯ: ಭಾರತದಲ್ಲಿ ಈಗಲೂ ಪ್ರತಿ ವರ್ಷ ೧೦ ಕೋಟಿ ಫೀಚರ್ ಫೋನ್‌ಗಳು ಮಾರಾಟವಾಗುತ್ತವೆ. ಸ್ಮಾರ್ಟ್‌ಫೋನ್‌ಗಳು ೧೭-೧೮ ಕೋಟಿ ಲೆಕ್ಕದಲ್ಲಿ ಮಾರಾಟವಾಗುತ್ತವೆ. ೫ಜಿ ಸೌಕರ್ಯ ಇರುವ ಸ್ಮಾರ್ಟ್‌ಫೋನ್ ದರ ಸರಾಸರಿ ೧೫,೦೦೦ ರೂ. ಇರುತ್ತದೆ. ೫ಜಿಯ ವ್ಯಾಪಕ ಜಾರಿಗೆ ೫,೦೦೦-೭೦೦೦ ರೂ.ಗೆ ೫ಜಿ ಸ್ಮಾರ್ಟ್ ಫೋನ್‌ಗಳು ಸಿಗುವಂತಾಗಬೇಕು ಎನ್ನುತ್ತಾರೆ ತಜ್ಞರು.