ಸ್ಯಾನ್ ಫ್ರಾನ್ಸಿಸ್ಕೋ, ಅಮೆರಿಕ: ಮೈಕ್ರೋಬ್ಲಾಗಿಂಗ್ ಟ್ವಿಟರ್ ಬ್ಯಾಡ್ಜ್ ಬಳಕೆದಾರರಿಗೆ ಶುಲ್ಕ ಪರಿಷ್ಕರಣೆ ಮಾಡಿದ ಬೆನ್ನಲ್ಲೇ, ಫೇಸ್‌ಬುಕ್ ಒಡೆತನದ ಮೆಟಾ (Meta) ಕೂಡ ಇಂಥದ್ದೇ ಪೇಯ್ಡ್ ಸೇವೆಗೆ ಮುಂದಾಗಿದೆ. ಮೆಟಾ ಕಂಪನಿಯು ತನ್ನ ಫೇಸ್‌ಬುಕ್ (Facebook) ಮತ್ತು ಇನ್‌ಸ್ಟಾಗ್ರಾಮ್(Instagram) ಸೋಷಿಯಲ್ ಮೀಡಿಯಾಗಳಿಗೆ ಪಾವತಿ ಚಂದಾದಾರಿಕೆ ಸೇವೆಗೆ (paid subscription service) ಭಾನುವಾರ ಚಾಲನೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳ ಜಾಹೀರಾತು ಆಧರಿತ ಬಿಸಿನೆಸ್ ಮಾಡೆಲ್ ಕುಸಿಯುತ್ತಿದೆ. ಈ ಕಾರಣಕ್ಕೆ ಸೋಷಿಯಲ್ ಮೀಡಿಯಾಗಳು ಆದಾಯಗಳ ಹೊಸ ಮೂಲವನ್ನು ಹುಡುಕುತ್ತಿವೆ. ಅದರ ಪರಿಣಾಮವಾಗಿ ಮೆಟಾ ಪ್ರಮುಖ ಹೆಜ್ಜೆಯನ್ನು ಇಟ್ಟಿದೆ(Meta Paid Service).
ಎಷ್ಟು ಹಣ ಪಾವತಿಸಬೇಕು?
ಫೇಸ್‌ಬುಕ್‌ನ ಮಾತೃ ಸಂಸ್ಥೆಯಾದ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಭಾನುವಾರದಂದು ಮೆಟಾ ವೆರಿಫೈಡ್ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಬಳಕೆದಾರರು ತಮ್ಮ ಖಾತೆಯನ್ನು ದೃಢೀಕರಣ ಮಾಡಿಕೊಳ್ಳಲು ಕನಿಷ್ಠ ತಿಂಗಳಿಗೆ 11.99 ಡಾಲರ್ ನೀಡಬೇಕಾಗುತ್ತದೆ. ಅಂದರೆ, ರೂಪಾಯಿ ಲೆಕ್ಕದಲ್ಲಿ ತಿಂಗಳಿಗೆ 990 ರೂಪಾಯಿ ಆಗುತ್ತದೆ.
ಮಾರ್ಕ್ ಜುಕರ್‌ಬರ್ಗ್ ಪೋಸ್ಟ್‌ನಲ್ಲಿ ಏನಿದೆ?
ಈ ಹೊಸ ವೈಶಿಷ್ಟ್ಯವು ನಮ್ಮ ಸೇವೆಗಳಾದ್ಯಂತ ದೃಢೀಕರಣ ಮತ್ತು ಸುರಕ್ಷತೆಯನ್ನು ಹೆಚ್ಚಿಸುವುದು ಎಂದು ಜುಕರ್‌ಬರ್ಗ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಪೇಯ್ಡ್ ಸರ್ವೀಸ್ ಮೊದಲಿಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳಲ್ಲಿ ಜಾರಿಗೆ ಬರಲಿದೆ. ಬಳಿಕ ಅಮೆರಿಕ ಹಾಗೂ ಇತರ ದೇಶಗಳಿಗೂ ವಿಸ್ತರಣೆಯಾಗಲಿದೆ ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Twitter Blue: ಭಾರತದಲ್ಲಿ ಟ್ವಿಟರ್ ಬ್ಲೂ ಸಬ್‌ಸ್ಕ್ರಿಪ್ಷನ್ ಶುರು, ತಿಂಗಳಿಗೆ 900 ರೂ.! ಏನೇನು ಲಾಭ?
ಪಾವತಿ ಚಂದಾದಾರಿಕೆ ಸೇವೆಯಿಂದ ಏನು ಲಾಭ?
ಚಂದಾದಾರರು ತಮ್ಮ ಖಾತೆಯನ್ನು ಸರ್ಕಾರಿ ಗುರುತುಪತ್ರಗಳೊಂದಿಗೆ ಪರಿಶೀಲಿಸಲಾಗಿದೆ ಎಂದು ಸೂಚಿಸುವ ಬ್ಯಾಡ್ಜ್ ಅನ್ನು ಪಡೆಯುತ್ತಾರೆ. ಮೋಸ ಮಾಡುವವ ವಿರುದ್ಧ ಹೆಚ್ಚುವರಿ ರಕ್ಷಣೆ, ಗ್ರಾಹಕರ ಬೆಂಬಲಕ್ಕೆ ನೇರ ಪ್ರವೇಶ ಮತ್ತು ಹೆಚ್ಚಿನ ಗೋಚರತೆ ಇನ್ನಿತರ ಲಾಭಗಳು ಬಳಕೆದಾರರಿಗೆ ಈ ಚಂದಾದಾರಿಕೆ ಸೇವೆಯಿಂದ ದೊರೆಯಲಿದೆ.