ನವದೆಹಲಿ: ಐಫೋನ್ (iPhone) ತಯಾರಕಾ ಕಂಪನಿ ಆ್ಯಪಲ್‌ಗೆ (Apple Inc) 2024 ಆರಂಭವು ಅಷ್ಟೊಂದು ಶುಭದಾಯಕವಾಗುತ್ತಿಲ್ಲ. ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯ (World’s Most Valuable Company) ರೇಸ್‌ನಲ್ಲಿ ಆ್ಯಪಲ್ ಕಂಪನಿಯನ್ನು ಮೈಕ್ರೋಸಾಫ್ಟ್ (Microsoft) ಹಿಂದಿಕ್ಕಿದೆ! ವಾಷಿಂಗ್ಟನ್ ಮೂಲದ ಮೈಕ್ರೋಸಾಫ್ಟ್ ಷೇರುಗಳು ಗುರುವಾರ ಶೇ.1.5ರಷ್ಟು ಏರಿಕೆಯನ್ನು ದಾಖಲಿಸಿದ ಪರಿಣಾಮ, ಕಂಪನಿಯ ಮೌಲ್ಯವು 2.888 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಯಿತು. ಉತ್ಪಾದಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಹಣವನ್ನು ಗಳಿಸುವ ಕಂಪನಿಗಳ ರೇಸ್‌ನಲ್ಲಿ ಮೈಕ್ರೋಸಾಫ್ಟ್ ಮುಂದಿದ್ದು, ಹೂಡಿಕೆದಾರರನ್ನು ಸೆಳೆಯುತ್ತಿದೆ.
2.887 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ ಆ್ಯಪಲ್ ಕಂಪನಿ ಷೇರುಗಳು ಶೇ.0.3 ಕುಸಿತ ದಾಖಲಿಸಿದವು. ಪರಿಣಾಮ 2021ರ ಬಳಿಕ ಇದೇ ಮೊದಲ ಬಾರಿಗೆ ಆ್ಯಪಲ್ ಕಂಪನಿಯ ಒಟ್ಟು ಮೌಲ್ಯವು ಮೈಕ್ರೋಸಾಫ್ಟ್‌ಗಿಂತ ಕಡಿಮೆಯಾಗಿದೆ. ಕ್ಯಾಲಿಫೋರ್ನಿಯ ಮೂಲದ ಆ್ಯಪಲ್ ಕಂಪನಿಯ ಷೇರುಗಳು ಕಳೆದ ಮುಕ್ತಾಯದ ಪ್ರಕಾರ ಜನವರಿಯಲ್ಲಿ ಇದುವರೆಗೆ 3.3 ಪ್ರತಿಶತದಷ್ಟು ಕುಸಿದಿದೆ. ಇದೇ ವೇಳೆ, ಮೈಕ್ರೋಸಾಫ್ಟ್ ಷೇರುಗಳ ಮೌಲ್ಯ ಶೇ.1.8 ಏರಿಕೆಯಾಗಿದೆ.
ಆ್ಯಪಲ್ ಹಿನ್ನಡೆಗೆ ಅದರ ರೇಟಿಂಗ್‌ನಲ್ಲಿ ಕುಸಿಯುತ್ತಿರುವುದು ಕಾರಣವಾಗಿದೆ. ವಿಶೇಷವಾಗಿ ಕಂಪನಿಗೆ ವರಲಕ್ಷ್ಮೀಯಾಗಿರುವ ಐಫೋನ್ ಮಾರಾಟವು ಚೀನಾ ಮಾರುಕಟ್ಟೆಯಲ್ಲಿ ಕುಸಿತ ಕಾಣುತ್ತಿರುವುದು ಕಂಪನಿಯ ಒಟ್ಟು ಮೌಲ್ಯ ಕೆಳಗಿಳಿಯಲು ಕಾರಣ ಎಂದು ಹೇಳಲಾಗುತ್ತಿದೆ. ಜತೆಗೆ, ಹುವಾವೇ ಬ್ರ್ಯಾಂಡ್ ಮತ್ತೆ ಪುಟದೇಳುತ್ತಿರುವುದು ಹಾಗೂ ಅಮೆರಿಕ-ಚೀನಾ ನಡುವಿನ ಸಂಘರ್ಷವು ಆ್ಯಪಲ್ ಕಂಪನಿಯ ಆತಂಕಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ತ್ರೈಮಾಸಿಕಗಳಲ್ಲಿ ಆ್ಯಪಲ್‌ನ ಸೇವೆಗಳ ವ್ಯವಹಾರವು ಹೆಚ್ಚು ಪ್ರಕಾಶಮಾನವಾಗಿತ್ತು. ಅಂದರೆ, ಹೆಚ್ಚು ಲಾಭ ತಂದುಕೊಟ್ಟಿದ್ದನ್ನು ಗಮನಿಸಬಹುದು. ಆದರೆ, ಈ ಸೇವೆಗಳ ವ್ಯವಹಾರಕ್ಕೂ ಅಮೆರಿಕದ ಐಒಎಸ್ ಸಾಧನಗಳಲ್ಲಿ ಗೂಗಲ್ ಅನ್ನು ಡಿಫಾಲ್ಟ್ ಸರ್ಚ್ ಎಂಜಿನ್ ಆಗಿ ಮಾಡುವ ಒಪ್ಪಂದವು ಬೆದರಿಕೆಯನ್ನು ಒಡ್ಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಶೇ. 48ರಷ್ಟು ಲಾಭದೊಂದಿಗೆ ಆ್ಯಪಲ್ ಕಂಪನಿಯ ಷೇರುಗಳ ಡಿಸೆಂಬರ್ 14ರಂದು ಭಾರೀ ಏರಿಕೆಯನ್ನು ದಾಖಲಿಸಿದ್ದವು. ಆಗ ಆ್ಯಪಲ್ ಕಂಪನಿ ಮಾರುಕಟ್ಟೆಯ ಮೌಲ್ಯವು 3.081 ಲಕ್ಷ ಕೋಟಿ ಡಾಲರ್‌ಗಳಿಷ್ಟಿತ್ತು.
ಈ ಸುದ್ದಿಯನ್ನೂ ಓದಿ: WordPad: ವರ್ಡ್‌ಪ್ಯಾಡ್ ಇನ್ನಿಲ್ಲ! 30 ವರ್ಷಗಳ ಉಚಿತ ಸೌಲಭ್ಯವನ್ನು ಕೊನೆಗೊಳಿಸಲಿರುವ ಮೈಕ್ರೋಸಾಫ್ಟ್