ಪ್ರವಾಹದ ಭೀಕರತೆಗಳ ಬಗ್ಗೆ ಕಂಡು-ಕೇಳಿದ್ದೇವೆ. ಅದರಿಂದಾಗುವ ಜೀವ ಹಾನಿ, ಆಸ್ತಿ ಹಾನಿಗಳ ಬಗ್ಗೆಯೂ ಅರಿತಿದ್ದೇವೆ. ಆದರೆ ಅದನ್ನು ತಪ್ಪಿಸಲು ಏನು ಮಾಡಬೇಕೆಂಬುದು ತಿಳಿಯದೆ ಕೈಕಟ್ಟುವಂತಾಗುತ್ತದೆ. ಇಂಥ ಕಡೆ ತೇಲುವ ಮನೆಗಳಿದ್ದರೆ ಎಷ್ಟು ಚೆನ್ನ ಅಲ್ಲವೆ?
ತಗ್ಗು ಪ್ರದೇಶಗಳಲ್ಲಿ ಬದುಕುವವರಿಗೆ ಪ್ರವಾಹವೆಂಬುದು ವಾರ್ಷಿಕ ವಿಪತ್ತಾದರೆ, ನದೀ ಪಾತ್ರದ ಜನಗಳಿಗೆ ತೂಗುಕತ್ತಿ. ಪ್ರವಾಹ ಉಂಟಾಗುವುದನ್ನು ಭೌಗೋಳಿಕ ಕಾರಣಗಳಿಂದಾಗಿ ತಡೆಯುವುದು ಸಾಧ್ಯವಿಲ್ಲ ಎಂದಾದರೆ, ಪ್ರವಾಹಕ್ಕೆ ತುತ್ತಾಗುವವರನ್ನು, ಅವರ ಆಸ್ತಿಗಳನ್ನು ರಕ್ಷಿಸಿಕೊಳ್ಳುವುದು ಸಾಧ್ಯವಿಲ್ಲವೇ? ಪ್ರವಾಹದ ಮುನ್ಸೂಚನೆ ಇದ್ದಲ್ಲಿ ಜನರನ್ನು ಸ್ಥಳಾಂತರಿಸುವುದು ಒಂದು ಸುರಕ್ಷಿತ ಕ್ರಮ. ಮುನ್ಸೂಚನೆ ಇಲ್ಲದಿದ್ದರೆ? ಇದಕ್ಕಾಗಿಯೇ ಜಪಾನ್ ದೇಶದ ಗೃಹ ನಿರ್ಮಾಣ ಸಂಸ್ಥೆಯೊಂದು ತೇಲುವ ಮನೆಗಳನ್ನು ಸೃಷ್ಟಿಸಿದೆ.
ಇಚಿಜೊ ಕೊಮುಟೆನ್ ಎನ್ನುವ ಈ ಗೃಹ ನಿರ್ಮಾಣ ಸಂಸ್ಥೆ ಈ ತೇಲುವ ಮನೆಗಳನ್ನು ಸೃಷ್ಟಿಸಿರುವುದಾಗಿ ಹೇಳಿದ್ದು, ಪ್ರವಾಹದ ಸಂದರ್ಭದಲ್ಲಿ ಈ ಮನೆಗಳು ನೆಲದಿಂದ ಮೇಲೆದ್ದು ತೇಲುತ್ತವೆಯಂತೆ. ಒಂದು ಹನಿ ನೀರೂ ಮನೆಯೊಳಗೆ ನುಸುಳದಂತೆ ಮನೆಯನ್ನು ವಿನ್ಯಾಸಗೊಳಿಸಲಾಗಿದ್ದು, ಜನ ಮತ್ತು ಆಸ್ತಿ-ಪಾಸ್ತಿಗಳು ಪ್ರವಾಹದಲ್ಲೂ ಸುರಕ್ಷಿತವಾಗಿ ಈ ಮನೆಯೊಳಗಿರಬಹುದು ಎಂಬುದು ಕಂಪೆನಿಯ ಅಂಬೋಣ. ʻನೋಡುವುದಕ್ಕೆ ಸಾಮಾನ್ಯ ಮನೆಗಳಂತೆಯೇ ಈ ಮನೆಯೂ ಇರುತ್ತದೆ. ಆದರೆ ಸುತ್ತೆಲ್ಲಾ ನೀರು ಆವರಿಸಲು ತೊಡಗಿದರೆ ಈ ಮನೆ ನೆಲದಿಂದ ಮೇಲೆದ್ದು ತೇಲಲಾರಂಭಿಸುತ್ತದೆʼ ಎಂದಿರುವ ಸಂಸ್ಥೆ, ಈ ಕುರಿತಾದ ವೀಡಿಯೋ ಪ್ರಾತ್ಯಕ್ಷಿಕೆಯನ್ನೂ ಬಿಡುಗಡೆ ಮಾಡಿದೆ.
ʻಇಡೀ ಮನೆಯನ್ನು ಸದೃಢವಾದ ಕಬ್ಬಿಣದ ಕಂಬಿಗಳಿಗೆ ಬಿಗಿಯಲಾಗುತ್ತದೆ. ನೆಲದೊಂದಿಗೂ ನಂಟಿರುವ ಹಾಗೆ ಕೇಬಲ್‌ಗಳನ್ನು ಅಳವಡಿಸಲಾಗುತ್ತದೆ. ಪ್ರವಾಹ ಬಂದಾಗ ಈ ಕೇಬಲ್‌ಗಳು ಸಡಿಲಗೊಂಡು, ಮನೆ ಮೇಲೆದ್ದು ತೇಲತೊಡಗುತ್ತದೆ. ಪ್ರವಾಹದ ನೀರು ಇಳಿಯತೊಡಗಿದಂತೆ ಮನೆಯೂ ನೆಲದ ಮೇಲೆ ಇಳಿಯುತ್ತದೆ. ೫ ಮೀ. ಎತ್ತರದವರೆಗೂ ಈ ಮನೆ ತೇಲಬಲ್ಲದು. ವಿದ್ಯುತ್ ಸಾಧನಗಳನ್ನೆಲ್ಲಾ ಎತ್ತರದಲ್ಲೇ ಅಳವಡಿಸಿರುವುದರಿಂದ ಆಘಾತವೇನೂ ಸಂಭವಿಸುವುದಿಲ್ಲʼ ಎನ್ನುತ್ತಾರೆ ಈ ಸಂಸ್ಥೆಯ ತಜ್ಞರು.
ಇದನ್ನೂ ಓದಿ: ಬೆಂಗಳೂರು ಏರ್ ಪೋರ್ಟ್‌ನಲ್ಲೀಗ ಪುರುಷರೂ ಮಗುವಿನ ಡೈಪರ್ ಬದಲಿಸಬಹುದು!