ತಂತ್ರಜ್ಞಾನ
ಸುನಾಮಿ ಬಂದರೂ ಜಗ್ಗದ ತೇಲುವ ಮನೆ ನೋಡಿದಿರಾ?
ಸುನಾಮಿ ಬಂದಾಗ, ಪ್ರವಾಹ ಬಂದಾಗ ನುಗ್ಗಿ ಬರುವ ನೀರು ಮನೆಗಳನ್ನು ನಾಶ ಮಾಡುತ್ತದೆ. ಮನೆಗಳನ್ನು ರಕ್ಷಿಸಿಕೊಳ್ಳುವಂತಿದ್ದರೆ? ಇಂಥದೊಂದು ತಂತ್ರಜ್ಞಾನ ಜಪಾನ್‌ನಲ್ಲಿ ತಯಾರಾಗಿದೆ.
ಪ್ರವಾಹದ ಭೀಕರತೆಗಳ ಬಗ್ಗೆ ಕಂಡು-ಕೇಳಿದ್ದೇವೆ. ಅದರಿಂದಾಗುವ ಜೀವ ಹಾನಿ, ಆಸ್ತಿ ಹಾನಿಗಳ ಬಗ್ಗೆಯೂ ಅರಿತಿದ್ದೇವೆ. ಆದರೆ ಅದನ್ನು ತಪ್ಪಿಸಲು ಏನು ಮಾಡಬೇಕೆಂಬುದು ತಿಳಿಯದೆ ಕೈಕಟ್ಟುವಂತಾಗುತ್ತದೆ. ಇಂಥ ಕಡೆ ತೇಲುವ ಮನೆಗಳಿದ್ದರೆ ಎಷ್ಟು ಚೆನ್ನ ಅಲ್ಲವೆ?
ತಗ್ಗು ಪ್ರದೇಶಗಳಲ್ಲಿ ಬದುಕುವವರಿಗೆ ಪ್ರವಾಹವೆಂಬುದು ವಾರ್ಷಿಕ ವಿಪತ್ತಾದರೆ, ನದೀ ಪಾತ್ರದ ಜನಗಳಿಗೆ ತೂಗುಕತ್ತಿ. ಪ್ರವಾಹ ಉಂಟಾಗುವುದನ್ನು ಭೌಗೋಳಿಕ ಕಾರಣಗಳಿಂದಾಗಿ ತಡೆಯುವುದು ಸಾಧ್ಯವಿಲ್ಲ ಎಂದಾದರೆ, ಪ್ರವಾಹಕ್ಕೆ ತುತ್ತಾಗುವವರನ್ನು, ಅವರ ಆಸ್ತಿಗಳನ್ನು ರಕ್ಷಿಸಿಕೊಳ್ಳುವುದು ಸಾಧ್ಯವಿಲ್ಲವೇ? ಪ್ರವಾಹದ ಮುನ್ಸೂಚನೆ ಇದ್ದಲ್ಲಿ ಜನರನ್ನು ಸ್ಥಳಾಂತರಿಸುವುದು ಒಂದು ಸುರಕ್ಷಿತ ಕ್ರಮ. ಮುನ್ಸೂಚನೆ ಇಲ್ಲದಿದ್ದರೆ? ಇದಕ್ಕಾಗಿಯೇ ಜಪಾನ್ ದೇಶದ ಗೃಹ ನಿರ್ಮಾಣ ಸಂಸ್ಥೆಯೊಂದು ತೇಲುವ ಮನೆಗಳನ್ನು ಸೃಷ್ಟಿಸಿದೆ.
ಇಚಿಜೊ ಕೊಮುಟೆನ್ ಎನ್ನುವ ಈ ಗೃಹ ನಿರ್ಮಾಣ ಸಂಸ್ಥೆ ಈ ತೇಲುವ ಮನೆಗಳನ್ನು ಸೃಷ್ಟಿಸಿರುವುದಾಗಿ ಹೇಳಿದ್ದು, ಪ್ರವಾಹದ ಸಂದರ್ಭದಲ್ಲಿ ಈ ಮನೆಗಳು ನೆಲದಿಂದ ಮೇಲೆದ್ದು ತೇಲುತ್ತವೆಯಂತೆ. ಒಂದು ಹನಿ ನೀರೂ ಮನೆಯೊಳಗೆ ನುಸುಳದಂತೆ ಮನೆಯನ್ನು ವಿನ್ಯಾಸಗೊಳಿಸಲಾಗಿದ್ದು, ಜನ ಮತ್ತು ಆಸ್ತಿ-ಪಾಸ್ತಿಗಳು ಪ್ರವಾಹದಲ್ಲೂ ಸುರಕ್ಷಿತವಾಗಿ ಈ ಮನೆಯೊಳಗಿರಬಹುದು ಎಂಬುದು ಕಂಪೆನಿಯ ಅಂಬೋಣ. ʻನೋಡುವುದಕ್ಕೆ ಸಾಮಾನ್ಯ ಮನೆಗಳಂತೆಯೇ ಈ ಮನೆಯೂ ಇರುತ್ತದೆ. ಆದರೆ ಸುತ್ತೆಲ್ಲಾ ನೀರು ಆವರಿಸಲು ತೊಡಗಿದರೆ ಈ ಮನೆ ನೆಲದಿಂದ ಮೇಲೆದ್ದು ತೇಲಲಾರಂಭಿಸುತ್ತದೆʼ ಎಂದಿರುವ ಸಂಸ್ಥೆ, ಈ ಕುರಿತಾದ ವೀಡಿಯೋ ಪ್ರಾತ್ಯಕ್ಷಿಕೆಯನ್ನೂ ಬಿಡುಗಡೆ ಮಾಡಿದೆ.
ʻಇಡೀ ಮನೆಯನ್ನು ಸದೃಢವಾದ ಕಬ್ಬಿಣದ ಕಂಬಿಗಳಿಗೆ ಬಿಗಿಯಲಾಗುತ್ತದೆ. ನೆಲದೊಂದಿಗೂ ನಂಟಿರುವ ಹಾಗೆ ಕೇಬಲ್‌ಗಳನ್ನು ಅಳವಡಿಸಲಾಗುತ್ತದೆ. ಪ್ರವಾಹ ಬಂದಾಗ ಈ ಕೇಬಲ್‌ಗಳು ಸಡಿಲಗೊಂಡು, ಮನೆ ಮೇಲೆದ್ದು ತೇಲತೊಡಗುತ್ತದೆ. ಪ್ರವಾಹದ ನೀರು ಇಳಿಯತೊಡಗಿದಂತೆ ಮನೆಯೂ ನೆಲದ ಮೇಲೆ ಇಳಿಯುತ್ತದೆ. ೫ ಮೀ. ಎತ್ತರದವರೆಗೂ ಈ ಮನೆ ತೇಲಬಲ್ಲದು. ವಿದ್ಯುತ್ ಸಾಧನಗಳನ್ನೆಲ್ಲಾ ಎತ್ತರದಲ್ಲೇ ಅಳವಡಿಸಿರುವುದರಿಂದ ಆಘಾತವೇನೂ ಸಂಭವಿಸುವುದಿಲ್ಲʼ ಎನ್ನುತ್ತಾರೆ ಈ ಸಂಸ್ಥೆಯ ತಜ್ಞರು.
ಇದನ್ನೂ ಓದಿ: ಬೆಂಗಳೂರು ಏರ್ ಪೋರ್ಟ್‌ನಲ್ಲೀಗ ಪುರುಷರೂ ಮಗುವಿನ ಡೈಪರ್ ಬದಲಿಸಬಹುದು!
ತಂತ್ರಜ್ಞಾನ
IT Raid: ಚೀನಾ ಮೂಲದ ಲೆನೋವೋ ಕಂಪನಿಯ ಬೆಂಗಳೂರು ಕಚೇರಿ ಮೇಲೆ ಐಟಿ ದಾಳಿ, ಟ್ಯಾಕ್ಸ್ ವಂಚನೆ?
IT Raid: ಬೆಂಗಳೂರಿನಲ್ಲಿರುವ ಲೆನೋವೋ ಕಂಪನಿ ಸೇರಿದಂತೆ ಹಲವು ಐಟಿ ಕಂಪನಿಗಳ ಕಚೇರಿಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು, ಕರ್ನಾಟಕ: ಚೀನಾ (China) ಮೂಲದ ಕಂಪ್ಯೂಟರ್ ತಯಾರಿಕಾ ಕಂಪನಿ ಲೆನೋವೋ (Lenovo) ಕಚೇರಿಗಳ ಮೇಲೆ ಬುಧವಾರ ಭಾರತೀಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿರುವ (Puducherry) ಲೆನೋವೋ ಕಾರ್ಖಾನೆ ಮತ್ತು ಬೆಂಗಳೂರಿನಲ್ಲಿರುವ (Bengaluru) ಅದರ ಕಚೇರಿಯೊಂದಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ. ಬುಧವಾರ ಬೆಳಗ್ಗೆ ತೆರಿಗೆ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಲೆನೋವೋ ಮಾತ್ರವಲ್ಲದೇ, ಬೆಂಗಳೂರಿನ 10ಕ್ಕೂ ಹೆಚ್ಚು ಖಾಸಗಿ ಕಂಪನಿಗಳ (Private Companies) ಮೇಲೆ ಐಟಿ ಅಧಿಕಾರಿಗಳು (IT officials) ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ತಪ್ಪು ಮಾಹಿತಿ, ಸುಳ್ಳು ಮಾಹಿತಿ (Income tax evasion) ನೀಡಿದ ಹಿನ್ನೆಲೆಯಲ್ಲಿ ಈ ದಾಳಿ (IT Raid) ನಡೆದಿದೆ ಎಂದು ಹೇಳಲಾಗುತ್ತಿದೆ.
ಅಧಿಕಾರಿಗಳು ಭೇಟಿಯ ಸಮಯದಲ್ಲಿ ಲೆನೋವೋ ಉದ್ಯೋಗಿಗಳ ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದರು. ವಿಚಾರಣೆಯ ಭಾಗವಾಗಿ ಭೇಟಿಯ ಸಮಯದಲ್ಲಿ ಮತ್ತು ನಂತರ ಅಧಿಕಾರಿಗಳು ಲೆನೋವೋ ಕಂಪನಿಯ ಹಿರಿಯ ನಿರ್ವಹಣಾ ವ್ಯಕ್ತಿಗಳನ್ನು ಸಂಪರ್ಕಿಸಲು ಪ್ರಯತ್ನಿಸದರು. ಆದರೆ, ಸಾಧ್ಯವಾಗಿಲ್ಲ ಎಂದು ಮೂಲಗಳು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ತಮ್ಮ ಕಚೇರಿಯ ಮೇಲೆ ಐಟಿ ರೇಡ್ ಖಚಿತಪಡಿಸಿರುವ ಲೆನೋವೋ, ಅಧಿಕಾರಗಳಿಗೆ ಸಹಕಾರ ನೀಡುತ್ತಿದ್ದೇವೆ ಮತ್ತು ಅಗತ್ಯವಿರುವ ಎಲ್ಲ ಬೆಂಬಲವನ್ನು ನಾವು ಅವರಿಗೆ ನೀಡುತ್ತೇವೆ. ನಾವು ವ್ಯಾಪಾರ ಮಾಡುವ ಪ್ರತಿಯೊಂದು ನ್ಯಾಯವ್ಯಾಪ್ತಿಯಲ್ಲಿ ಅನ್ವಯವಾಗುವ ಎಲ್ಲಾ ಕಾನೂನುಗಳು, ನಿಯಮಗಳು ಮತ್ತು ವರದಿ ಮಾಡುವ ಅವಶ್ಯಕತೆಗಳಿಗೆ ನಾವು ಕಟ್ಟುನಿಟ್ಟಾಗಿ ಬದ್ಧರಾಗಿದ್ದೇವೆ ಎಂದು ಲೆನೋವೋ ಹೇಳಿದೆ.
ಐಟಿ ಕಂಪನಿಗಳಿಗೆ ಬಿಸಿ ಮುಟ್ಟಿಸಿದ ತೆರಿಗೆ ಇಲಾಖೆ
ಬೆಂಗಳೂರು ನಗರದ ಸರ್ ಸಿ.ವಿ. ರಾಮನ್ ನಗರ, ಬಾಗಮನೆ ಟೆಕ್ ಪಾರ್ಕ್, ಹುಳಿಮಾವು ಮೊದಲಾದ ಕಡೆಗಳಲ್ಲಿ ದಾಳಿ ನಡೆದಿದೆ. ಸುಮಾರು 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ನಾನಾ ಕಡೆ ದಾಳಿ ಮಾಡಿದೆ. ಹುಳಿಮಾವು ಸಮೀಪದ ಆಪಸ್ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿರುವ ಐಟಿ ಟೀಂ ಅಲ್ಲಿ ತಪಾಸಣೆಯನ್ನು ನಡೆಸುತ್ತಿದೆ. ಅಲ್ಲದೆ ಹಲವು ಕಡೆಗಳಲ್ಲಿ ದಾಳಿ ನಡೆದಿರುವ ಮಾಹಿತಿ ಇದೆ.
ಈ ಸುದ್ದಿಯನ್ನೂ ಓದಿ: IT raid: ಶೋಭಾ ಡೆವಲಪರ್ಸ್ ಮೇಲೆ ಐಟಿ ದಾಳಿ; ಬೆಂಗಳೂರು- ಚೆನ್ನೈ ಅಧಿಕಾರಿಗಳ ಜಂಟಿ ಕಾರ್ಯಾಚರಣೆ
ಆದಾಯ ತೆರಿಗೆ ಪಾವತಿಯಲ್ಲಿ ಕೆಲವು ಕಂಪನಿಗಳು ವಂಚನೆ ಮಾಡುತ್ತಿವೆ ಎಂಬುದನ್ನು ಕಂಡುಕೊಂಡಿರುವ ಅಧಿಕಾರಿಗಳು ಕಂಪನಿಯ ದಾಖಲೆ, ಕಡತಗಳ ಪರಿಶೀಲನೆಗಾಗಿ ಈ ದಾಳಿ ನಡೆಸಿವೆ. ತಂಡಗಳು ಕಂಪನಿಗಳ ಕಚೇರಿಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿವುದಾಗಿ ತಿಳಿದು ಬಂದಿದೆ. ಹಲವಾರು ಖಾಸಗಿ ಕಂಪನಿಗಳು ಆದಾಯ ತೆರಿಗೆ ವಂಚನೆ ಮಾಡುವುದಕ್ಕಾಗಿ ಎರಡು ರೀತಿಯ ದಾಖಲೆ ನಿರ್ವಹಣೆ ಮಾಡುತ್ತಿರುವುದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಂಡುಕೊಂಡಿದ್ದರು. ಇದು ವಂಚನೆಯ ಪರಿಧಿಗೆ ಬರುತ್ತಿದ್ದು, ತೆರಿಗೆ ತಪ್ಪಿಸುವ ಹುನ್ನಾರವನ್ನು ಬಯಲು ಮಾಡಲು ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ದೊಡ್ಡ ದೊಡ್ಡ ಕಂಪನಿಗಳು ಕೂಡಾ ಈ ವಂಚನೆಯಲ್ಲಿ ಭಾಗಿಯಾಗಿವೆ ಎನ್ನಲಾಗಿದೆ.
ಗ್ಯಾಜೆಟ್ಸ್
LinkedIn Top Startups 2023: ಲಿಂಕ್ಡ್‌ಇನ್ ಭಾರತದ ಟಾಪ್ 20 ಸ್ಟಾರ್ಟಪ್ ಲಿಸ್ಟ್, ಅಗ್ರ 2 ಸ್ಥಾನದಲ್ಲಿ ಝೆಪ್ಟೋ, ಬ್ಲೂಸ್ಮಾರ್ಟ್
LinkedIN Top Startsups 2023: ಲಿಂಕ್ಡ್ಇನ್ ಟಾಪ್ 20 ಸ್ಟಾರ್ಟಪ್ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಝೆಪ್ಟೋ ಅಗ್ರಸ್ಥಾನದಲ್ಲಿದೆ.
ಬೆಂಗಳೂರು, ಕರ್ನಾಟಕ: ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾಗಿರುವ ಲಿಂಕ್ಡ್ ಇನ್ ಇಂದು 2023 ನೇ ಸಾಲಿನ ಟಾಪ್ 20 ಭಾರತೀಯ ಸ್ಟಾರ್ಟ್ ಅಪ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ(LinkedIn Top Startups 2023). ಈ ಪಟ್ಟಿಯ ಮೊದಲ ಮೂರು ಸ್ಥಾನವನ್ನು ಝೆಪ್ಟೋ(Zepto), ಬ್ಲೂಸ್ಮಾರ್ಟ್(Bluesmart) ಮತ್ತು ಡಿಟ್ಟೋ ಇನ್ಸೂರೆನ್ಸ್ (Ditto Insurance) ಅಲಂಕರಿಸಿವೆ. ಅನನ್ಯವಾದ ಲಿಂಕ್ಡ್ ಇನ್ ಡೇಟಾವನ್ನು ಆಧರಿಸಿ ಜಾಗತಿಕವಾಗಿ ವೃತ್ತಿಪರರು ಕೆಲಸ ಮಾಡಲು ಬಯಸುವ ಉದಯೋನ್ಮುಖ ಕಂಪನಿಗಳ ವಾರ್ಷಿಕ ಶ್ರೇಯಾಂಕ ಇದಾಗಿದೆ. ಈ ಟಾಪ್ ಸ್ಟಾರ್ಟಪ್ (Startup in India) ಗಳ ಪಟ್ಟಿಯು ವೃತ್ತಿಪರರಿಗೆ ವ್ಯಾಪಕ ಶ್ರೇಣಿಯ ಕೈಗಾರಿಕೆಗಳಲ್ಲಿ ಉದಯೋನ್ಮುಖ ಕಂಪನಿಗಳನ್ನು ಅನ್ವೇಷಣೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ, ಅವರ ಮುಂದಿನ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮೊದಲು ಅವರು ತಿಳಿದುಕೊಳ್ಳಬೇಕಾದ ಮಾಹಿತಿಗಳೊಂದಿಗೆ ಅವರನ್ನು ಸಜ್ಜುಗೊಳಿಸುತ್ತದೆ. ಈ ಟಾಪ್ 20 ಸ್ಟಾರ್ಟ್‌ಅಪ್‌ಗಳ ಪೈಕಿ 10 ಸ್ಟಾರ್ಟ್‌ಅಪ್‌ಗಳು ಬೆಂಗಳೂರಿನವಾಗಿವೆ.
ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಲಿಂಕ್ಡ್ ಇನ್ ನಲ್ಲಿ 950+ ಮಿಲಿಯನ್ ಸದಸ್ಯರು ತೆಗೆದುಕೊಂಡಿರುವ ಬಿಲಿಯನ್ ಕ್ರಮಗಳ ಆಧಾರದ ಮೇಲೆ ವಿಶಿಷ್ಟವಾದ ಲಿಂಕ್ಡ್ ಇನ್ ಡೇಟಾದಿಂದ ಈ ಟಾಪ್ ಸ್ಟಾರ್ಟಪ್ ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ: ಅಂದರೆ, ಉದ್ಯೋಗಿ ಬೆಳವಣಿಗೆ, ಉದ್ಯೋಗಾಕಾಂಕ್ಷಿ ಆಸಕ್ತಿ, ಕಂಪನಿ ಮತ್ತು ಅದರ ಉದ್ಯೋಗಿಗಳಲ್ಲಿನ ಸದಸ್ಯರ ಪಾಲ್ಗೊಳ್ಳುವಿಕೆಯನ್ನು ಗಮನಿಸಿ ಲಿಂಕ್ಡ್ ಇನ್ ಟಾಪ್ ಕಂಪನಿಗಳ ಪಟ್ಟಿಯಿಂದ ಪ್ರತಿಭಾನ್ವಿತ ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಈ ವರ್ಷದ ಟಾಪ್ ಸ್ಟಾರ್ಟಪ್ ಪಟ್ಟಿಯಲ್ಲಿ ಝೆಪ್ಟೋ(Zepto) ಮೊದಲ ಸ್ಥಾನದಲ್ಲಿದೆ. 2021 ರಲ್ಲಿ ಆರಂಭವಾದ ಗ್ರಾಹಕರ ಮನೆ ಬಾಗಿಲಿಗೆ ದಿನಸಿಯನ್ನು ತಲುಪಿಸುವ ಇ-ಕಾಮರ್ಸ್ ಆ್ಯಪ್ ಆಗಿರುವ ಈ ಕಂಪನಿ 2022 ರಲ್ಲಿ 4 ನೇ ಸ್ಥಾನದಲ್ಲಿತ್ತು. ಝೆಪ್ಟೋದ ಮೆರಿಟೋಕ್ರಾಟಿಕ್ ಬೆಳವಣಿಗೆಯ ಹಾದಿಯು ಅಸಾಧಾರಣವಾದ ರೀತಿಯಲ್ಲಿತ್ತು. ಆಗಸ್ಟ್ ನಲ್ಲಷ್ಟೇ ಕಂಪನಿಯು ಯೂನಿಕಾರ್ನ್ ಸ್ಥಾನಮಾನವನ್ನು ಪಡೆದಿದ್ದು, 2023 ರಲ್ಲಿ 200 ಮಿಲಿಯನ್ ಡಾಲರ್ ಧನಸಹಾಯವನ್ನು ಪಡೆದ ಮೊದಲ ಭಾರತೀಯ ಕಂಪನಿ ಎನಿಸಿದೆ. ಈ ಮೂಲಕ ಈ ಸಾಧನೆ ದೇಶದ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಲ್ಲಿ ಅಸಾಧಾರಣವಾದ ಸಾಮರ್ಥ್ಯ ಮತ್ತು ನಾವೀನ್ಯತೆಯ ಸಂಕೇತವಾಗಿದೆ. ಇದರೊಂದಿಗೆ ಝೆಪ್ಟೋ 2023 ರಲ್ಲಿ ಲಿಂಕ್ಡ್ ಇನ್ ಟಾಪ್ ಕಂಪನಿ ಎನಿಸಿದೆ.
ಭಾರತದ ಮೊದಲ ಎಲೆಕ್ಟ್ರಿಕ್ ರೈಡ್-ಶೇರಿಂಗ್ ಕಂಪನಿಯಾಗಿರುವ ಬ್ಲೂಸ್ಮಾರ್ಟ್ (BluSmart) ಈ ಪ್ರತಿಷ್ಠಿತ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಂಪನಿ ಆರಂಭವಾದ ಮೂರು ವರ್ಷಗಳಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆ ಪಡೆದುಕೊಂಡಿದೆ. ಮತ್ತೊಂದು ಇವಿ ಸ್ಟಾರ್ಟಪ್ ಎಕ್ಸ್ ಪೋನೆಂಟ್ ಎನರ್ಜಿ 15 ನೇ ಸ್ಥಾನ ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಸರ್ಕಾರದ `ಮೇಕ್ ಇನ್ ಇಂಡಿಯಾ’ದ ಉಪಕ್ರಮದ ಹಿನ್ನೆಲೆಯಲ್ಲಿ ಭಾರತದಲ್ಲಿ ಇವಿ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಸರ್ಕಾರದ ಬೆಂಬಲವನ್ನು ಪಡೆಯುವ ಮೂಲಕ ಅನೇಕ ಇವಿ ಸ್ಟಾರ್ಟಪ್ ಗಳು ಹುಟ್ಟಿಕೊಳ್ಳುತ್ತಿವೆ.
ಫಿನ್ಟೆಕ್ ಭಾರತದ ಟಾಪ್ ಸ್ಟಾರ್ಟಪ್ ಪಟ್ಟಿ 2023 ರಲ್ಲಿ ಮೇಲುಗೈ ಮುಂದುವರಿಸಿದೆ. ನಾಲ್ಕು ಸ್ಟಾರ್ಟಪ್ ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ. ಅವುಗಳೆಂದರೆ, ಡಿಟ್ಟೋ ಇನ್ಸೂರೆನ್ಸ್ 3 ನೇ ಸ್ಥಾನ, Fi – 7 ನೇ ಸ್ಥಾನ, ಜಾರ್- 11 ನೇ ಸ್ಥಾನ ಮತ್ತು ಸ್ಟಾಕ್ ಗ್ರೋ – 14 ನೇ ಸ್ಥಾನದಲ್ಲಿವೆ. ಇದು ಕ್ಷೇತ್ರದ ಸ್ಥಿತಿಸ್ಥಾಪಕತಯ್ವವನ್ನು ಪ್ರತಿಬಿಂಬಿಸುತ್ತದೆ ಮತ್ತು ಸವಾಲಿನ ಮಾರುಕಟ್ಟೆ ಇದ್ದಾಗ್ಯೂ ಹೂಡಿಕೆದಾರರ ಹೂಡಿಕೆಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.
ಈ ವರ್ಷದ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಪ್ರಮುಖ ಉದ್ಯಮವೆಂದರೆ ಎಜುಟೆಕ್. ಗ್ರೋಥ್ ಸ್ಕೂಲ್- 10 ನೇ ಸ್ಥಾನ, ಟೀಚ್ ನೂಕ್ -13 ನೇ ಸ್ಥಾನ ಮತ್ತು ಆಕ್ಸಿಯೋಜಾಬ್- 17 ನೇ ಸ್ಥಾನದಲ್ಲಿವೆ. ವೃತ್ತಿಪರರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಎಐ ಸೇರಿದಂತೆ ತಂತ್ರಜ್ಞಾನಗಳಲ್ಲಿ ಕ್ಷಿಪ್ರಗತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಸಂಬಂಧ ಉಂಟಾಗುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಈ ಎಜುಟೆಕ್ ಕಂಪನಿಗಳು ಸಕ್ರಿಯವಾಗಿವೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ Explainer: Google Birthday: ಗೂಗಲ್‌ನ 25 ವರ್ಷದ ಇತಿಹಾಸ ಹೇಗಿತ್ತು? ಒಂದು ನೋಟ ಇಲ್ಲಿದೆ
ಈ ಪಟ್ಟಿಯ ಬಗ್ಗೆ ಮಾತನಾಡಿದ ಲಿಂಕ್ಡ್ ಇನ್ ಇಂಡಿಯಾದ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದ ನಿರಾಜಿತ ಬ್ಯಾನರ್ಜಿ ಅವರು, “ಈ ವರ್ಷದ 20 ಸ್ಟಾರ್ಟಪ್ ಗಳಲ್ಲಿ 14 ಹೊಸ ಸ್ಟಾರ್ಟಪ್ ಗಳು ಸೇರ್ಪಡೆಯಾಗಿರುವುದು ವಿಶೇಷವಾಗಿದೆ. ಭಾರತದ ಸ್ಟಾರ್ಟಪ್ ಕ್ಷೇತ್ರದಲ್ಲಿ ನಾವೀನ್ಯತೆಯ ಅಗಾಧವಾದ ಸಾಮರ್ಥ್ಯ ಮತ್ತು ಬೆರಗುಗೊಳಿಸುವ ವೇಗವನ್ನು ಇದು ಒತ್ತಿ ಹೇಳುತ್ತದೆ. ಈ ಪಟ್ಟಿಯು ಉದ್ಯಮವನ್ನು ಮತ್ತಷ್ಟು ಪ್ರಕಾಶಮಾನವಾಗಿ ಬೆಳವಣಿಗೆ ಹೊಂದುತ್ತಿರುವ ಹೊಸ ಕಂಪನಿಗಳಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವ ವೃತ್ತಿಪರರಿಗೆ ಅನನ್ಯವಾದ ಮತ್ತು ಕಾರ್ಯಸಾಧ್ಯವಾದ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ, ಅಲ್ಲಿ ಅತ್ಯುತ್ಕೃಷ್ಠವಾದ ಹೊಸ ಕೌಶಲ್ಯಗಳನ್ನು ಪಡೆದುಕೊಳ್ಳಲು ಅವಕಾಶ ಲಭ್ಯವಾಗಲಿದೆ. ಈ ಸ್ಟಾರ್ಟಪ್ ಗಳು ಇದೀಗ ಪ್ರತಿಭಾನ್ವಿತರನ್ನು ನೇಮಕ ಮಾಡಿಕೊಳ್ಳಲು ಮುಂದೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ನವೋಲ್ಲಾಸದ ನವೋದ್ಯಮ ಅಂದರೆ ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ಬೆಳವಣಿಗೆಯ ಯಶೋಗಾಥೆಯ ಭಾಗವಾಗಲು ಇದೊಂದು ಉತ್ತಮ ಅವಕಾಶವಾಗಿದೆ’’ ಎಂದರು.
ಲಿಂಕ್ಡ್ಇನ್ ಟಾಪ್ 20 ಸ್ಟಾರ್ಟಪ್ಸ್
1.ಝೆಪ್ಟೋ 2. ಬ್ಲೂಸ್ಮಾರ್ಟ್ 3.ಡಿಟ್ಟೋ ಇನ್ಸೂರೆನ್ಸ್ 3. ಪಾಕೆಟ್ ಎಫ್ಎಂ 5.ಸ್ಕೈರೂಟ್ ಏರೋಸ್ಪೇಸ್ 6.ಗೋಕ್ವಿಕ್ 7.ಎಫ್ಐ 8.ಸ್ಪ್ರಿಂಟೋ 9.ಸೂಪರ್‌ಸೋರ್ಸಿಂಗ್ 10.ಗ್ರೋಥ್‌ಸ್ಕೂಲ್ 11.ಜಾರ್ 12.ಶಿಫ್ಟ್ 13.ಟೀಚ್‌ನಾಕ್ 14.ಸ್ಟಾಕ್‌ಗ್ರೋ 15.ಎಕ್ಸ್‌ಪೋನೆಂಟ್ ಎನರ್ಜಿ 16.ಹೌಸರ್ 17.ಅಕ್ಸಿಯೊಜಾಬ್ 18.ಟ್ರಾವ್‌ಕ್ಲಾನ್ 19.ಡಾಟ್‌ಪೆ 20.ಫಸಲ್
EXPLAINER
ವಿಸ್ತಾರ Explainer: Google Birthday: ಗೂಗಲ್‌ನ 25 ವರ್ಷದ ಇತಿಹಾಸ ಹೇಗಿತ್ತು? ಒಂದು ನೋಟ ಇಲ್ಲಿದೆ
ಟೆಕ್ ದೈತ್ಯ ಗೂಗಲ್ (Google search Engine) 25ನೇ ವರ್ಷದ ಜನ್ಮದಿನ (Google birthday) ಆಚರಿಸಿಕೊಂಡಿದೆ. ಈ ಕಂಪನಿ ಸಾಗಿ ಬಂದ ಇತಿಹಾಸದ (Google history) ಕೆಲವು ಮೈಲಿಗಲ್ಲುಗಳು ಇಲ್ಲಿವೆ.
ನ್ಯೂಯಾರ್ಕ್: ತಂತ್ರಜ್ಞಾನದ ದೈತ್ಯ ಗೂಗಲ್ ಕಂಪನಿ (Google search engine) ಇಂದು (ಸೆಪ್ಟೆಂಬರ್ 27) 25ನೇ ವರ್ಷದ ಜನ್ಮದಿನ (Google 25th Birthday) ವರ್ಷಗಳನ್ನು ಪೂರೈಸಿದೆ. ಈ ವಿಶೇಷ ಈವೆಂಟ್‌ನ (Google Birthday) ಸಂದರ್ಭದಲ್ಲಿ Google ಹೊಸ ಡೂಡಲ್ ಅನ್ನು ಪ್ರದರ್ಶಿಸಿತು. ಅದರಲ್ಲಿ ಕಳೆದ ವರ್ಷಗಳಲ್ಲಿ Google ಲೋಗೋ ನಡೆದುಬಂದ ಇತಿಹಾಸವನ್ನು ತೋರಿಸಿತು.
“ಇಪ್ಪತ್ತೈದು ವರ್ಷಗಳ ಹಿಂದೆ, ದೊಡ್ಡ ಮತ್ತು ಚಿಕ್ಕ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ನಿಮಗೆ ಸಹಾಯ ಮಾಡಲು ನಾವು Google search ಪ್ರಾರಂಭಿಸಿದೆವು. ಅಂದಿನಿಂದ, ಶತಕೋಟಿ ಜನರು ತಮ್ಮ ಕುತೂಹಲವನ್ನು ತಿಳಿಗೊಳಿಸಲು ನಮ್ಮತ್ತ ಮುಖ ಮಾಡಿದರು” ಎಂದು ಗೂಗಲ್ ಹೇಳಿದೆ.
ಆರಂಭದಲ್ಲಿ ʼಬ್ಯಾಕ್‌ರಬ್ʼ ಎಂದು ಕರೆಯಲ್ಪಟ್ಟಿದ್ದ ಈ ಸ್ಟಾರ್ಟ್‌ಅಪ್ ಈಗ ವಿಶ್ವದ ಅತ್ಯಂತ ಮೌಲ್ಯಯುತ ಮತ್ತು ಪ್ರಭಾವಶಾಲಿ ಕಂಪನಿಗಳಲ್ಲಿ ಒಂದಾಗಿದೆ. Gmail ಮತ್ತು Search ಸೇರಿದಂತೆ Googleನ ಅನೇಕ ಸೇವೆಗಳನ್ನು ಈಗ ನೂರು ಕೋಟಿ ಜನ ಬಳಸುತ್ತಿದ್ದಾರೆ. ಅದರ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ.
ಟೆಕ್ ದೈತ್ಯ ಗೂಗಲ್ ಸಾಗಿ ಬಂದ ಇತಿಹಾಸದ ಕೆಲವು ಮೈಲಿಗಲ್ಲುಗಳು ಇಲ್ಲಿವೆ.
- 1995-1996ರಲ್ಲಿ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಭೇಟಿಯಾದರು. ಬ್ಯಾಕ್‌ರಬ್ ಹೆಸರಿನಲ್ಲಿ ಸರ್ಚ್ ಎಂಜಿನ್ ಅನ್ನು ಹುಟ್ಟುಹಾಕಿದರು.
- 1998ರಲ್ಲಿ ಈ ಸ್ಟಾರ್ಟಪ್ ಗೂಗಲ್ ಎಂದು ಮರುನಾಮಕರಣಗೊಂಡಿತು. ಸನ್ ಮೈಕ್ರೋಸಿಸ್ಟಮ್ಸ್ ಸಹ-ಸಂಸ್ಥಾಪಕ ಆಂಡಿ ಬೆಚ್ಟೋಲ್‌ಶೀಮ್‌ನಿಂದ $100,000 ನಿಧಿಯನ್ನು ಪಡೆಯಿತು.
- 1999ರಲ್ಲಿ ಗೂಗಲ್ ತನ್ನ ಮೊದಲ ಪತ್ರಿಕಾ ಪ್ರಕಟಣೆ ನೀಡಿ, ಸಿಕ್ವೊಯಾ ಕ್ಯಾಪಿಟಲ್ ಮತ್ತು ಕ್ಲೀನರ್ ಪರ್ಕಿನ್ಸ್‌ನಿಂದ $25 ಮಿಲಿಯ ಹಣ ಪಡೆದುದನ್ನು ಘೋಷಿಸಿತು. ಅಧಿಕೃತವಾಗಿ “ಗೂಗ್ಲರ್ಸ್” ಪದವನ್ನು ಜಗತ್ತಿಗೆ ಘೋಷಿಸಿತು.
- ಜೂನ್ 2000ದಲ್ಲಿ, ಆ ಕಾಲದ ಅತ್ಯಂತ ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ಒಂದಾದ Yahooಗೆ Google ಡೀಫಾಲ್ಟ್ ಸರ್ಚ್ ಎಂಜಿನ್ ಪೂರೈಕೆದಾರನಾಯಿತು. 2000ದ ಅಕ್ಟೋಬರ್‌ನಲ್ಲಿ ಆನ್‌ಲೈನ್ ಜಾಹೀರಾತು ಪ್ಲಾಟ್‌ಫಾರ್ಮ್ ಆಡ್‌ವರ್ಡ್ಸ್ ಅನ್ನು ಪ್ರಾರಂಭಿಸಿತು. ಇದು Googleನ ವ್ಯವಹಾರಕ್ಕೆ ಪ್ರಮುಖವಾಗಿತ್ತು.
- 2001ರಲ್ಲಿ ಎರಿಕ್ ಸ್ಮಿತ್ ಅವರು Googleನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಹೆಸರಿಸಲ್ಪಟ್ಟರು.
- ಏಪ್ರಿಲ್ 2004ರಲ್ಲಿ 1 GB ವರೆಗಿನ ಸಂಗ್ರಹ ಸಾಮರ್ಥ್ಯದೊಂದಿಗೆ Gmail ಅನ್ನು ಬಿಡುಗಡೆ ಮಾಡಿತು.
- 2004ರ ಆಗಸ್ಟ್‌ನಲ್ಲಿ ಪ್ರತಿ ಷೇರಿಗೆ $85 ಆರಂಭಿಕ ಬೆಲೆಯಲ್ಲಿ ಸರಿಸುಮಾರು 19.6 ಮಿಲಿಯ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ನೀಡಿತು.
- 2004ರ ಫೆಬ್ರವರಿಯಲ್ಲಿ ಡೆಸ್ಕ್‌ಟಾಪ್‌ಗಾಗಿ ಗೂಗಲ್ ಮ್ಯಾಪ್ ಅನ್ನು ಪ್ರಾರಂಭಿಸಿತು.
- 2005ರ ಆಗಸ್ಟ್‌ನಲ್ಲಿ ಮೊಬೈಲ್ ಸ್ಟಾರ್ಟ್ಅಪ್ ಆಂಡ್ರಾಯ್ಡ್ ಅನ್ನು ಖರೀದಿಸಿತು. Google Talk ತ್ವರಿತ ಸಂದೇಶ ಸೇವೆಯನ್ನು ಪ್ರಾರಂಭಿಸಿತು.
- 2006ರಲ್ಲಿ ಆನ್‌ಲೈನ್ ವೀಡಿಯೊ ಸೇವೆ YouTube ಅನ್ನು $1.65 ಶತಕೋಟಿಗೆ ಖರೀದಿಸಿತು. 2007 ಏಪ್ರಿಲ್‌ನಲ್ಲಿ $3.1 ಶತಕೋಟಿಗೆ ವೆಬ್ ಜಾಹೀರಾತು ಪೂರೈಕೆದಾರ DoubleClick ಅನ್ನು ಸ್ವಾಧೀನಪಡಿಸಿಕೊಂಡಿತು.
- ಮೇ 2007 ಯುನಿವರ್ಸಲ್ ಸರ್ಚ್ ಅನ್ನು ಪರಿಚಯಿಸಿತು. ಇದು ಬಳಕೆದಾರರಿಗೆ ಚಿತ್ರಗಳು, ವೀಡಿಯೊಗಳು ಮತ್ತು ಸುದ್ದಿಗಳಂತಹ ಎಲ್ಲಾ ವಿಷಯ ಪ್ರಕಾರಗಳಲ್ಲಿ ಹುಡುಕಾಟ ಫಲಿತಾಂಶಗಳನ್ನು ಏಕಕಾಲದಲ್ಲಿ ಒದಗಿಸಿತು.
- ಸೆಪ್ಟೆಂಬರ್‌ನಲ್ಲಿ ಮೊದಲ Android ಫೋನ್, T-Mobile G1 ಅಥವಾ 2008 HTC ಡ್ರೀಮ್ ಅನ್ನು ಪ್ರಾರಂಭಿಸಿತು.
- Google Chrome ವೆಬ್ ಬ್ರೌಸರ್ ಅನ್ನು ಪ್ರಾರಂಭಿಸಿತು. ಜನವರಿ 2010ರಲ್ಲಿ HTCಯೊಂದಿಗೆ ಸಹ-ಅಭಿವೃದ್ಧಿಪಡಿಸಿದ Nexus One ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು.
- ಮಾರ್ಚ್ 2010ರಲ್ಲಿ ಚೀನಾದಲ್ಲಿ ಗೂಗಲ್ ಬ್ಯಾನ್ ಮಾಡಲಾಯಿತು.
- ಅಕ್ಟೋಬರ್‌ನಲ್ಲಿ ಗೂಗಲ್ ಕ್ಯಾಲಿಫೋರ್ನಿಯಾದಲ್ಲಿ ಟೊಯೋಟಾ ಪ್ರಿಯಸ್ ಕಾರುಗಳ ಸಣ್ಣ ಸಮೂಹದೊಂದಿಗೆ ತನ್ನ ಮೊದಲ ಸ್ವಯಂ-ಚಾಲನಾ 2010 ವಾಹನಗಳನ್ನು ಪರೀಕ್ಷಿಸಿತು.
- ಜೂನ್ 2011ರಲ್ಲಿ Google+ ಎಂಬ ಸಾಮಾಜಿಕ ನೆಟ್‌ವರ್ಕಿಂಗ್ ಸೇವೆಯನ್ನು ಪ್ರಾರಂಭಿಸಿತು. ಇದನ್ನು 2018ರಲ್ಲಿ ಮುಚ್ಚಲಾಯಿತು.
- ಮೊಟೊರೊಲಾ ಮೊಬಿಲಿಟಿಯನ್ನು ಸ್ವಾಧೀನಪಡಿಸಿಕೊಂಡಿತು. ಮೊಟೊರೊಲಾದ ಸೆಲ್‌ಫೋನ್, ಟಿವಿ ಸೆಟ್-ಟಾಪ್ ಬಾಕ್ಸ್ ವ್ಯವಹಾರಗಳನ್ನು $12.5 ಬಿಲಿಯನ್‌ಗೆ ಹೊಂದಿತು.
- 2012ರಲ್ಲಿ ಗೂಗಲ್ ಗ್ಲಾಸ್ ಅನ್ನು ಪ್ರಾರಂಭಿಸಿತು. 2013ರಲ್ಲಿ ಇಸ್ರೇಲಿ ಮ್ಯಾಪಿಂಗ್ ಸ್ಟಾರ್ಟ್ಅಪ್ Waze ಅನ್ನು ಸುಮಾರು $1 ಶತಕೋಟಿಗೆ ಸ್ವಾಧೀನಪಡಿಸಿಕೊಂಡಿತು. 2014ರ ಜನವರಿಯಲ್ಲಿ AI ಸಂಸ್ಥೆ DeepMind ಅನ್ನು ಸ್ವಾಧೀನಪಡಿಸಿಕೊಂಡಿತು.
- 2015ರಲ್ಲಿ ಹೊಸದಾಗಿ ಆಲ್ಫಾಬೆಟ್ ಕಂಪನಿಯಾಗಿ ಪಬ್ಲಿಕ್ ಆಯಿತು. ಇದು YouTube, Google ಮತ್ತು ಇತರ ಘಟಕಗಳನ್ನು ಹೊಂದಿದೆ. ಸುಂದರ್ ಪಿಚೈ ಗೂಗಲ್ ಸಿಇಒ ಆಗಿ ನೇಮಕಗೊಂಡರು.
- ಅಕ್ಟೋಬರ್‌ನಲ್ಲಿ ಮೊದಲ ಪಿಕ್ಸೆಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. 2016ರ ನವೆಂಬರ್‌ನಲ್ಲಿ ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್ ಅನ್ನು ಪ್ರಾರಂಭಿಸಿತು.
- ಜೂನ್ 2017ರಲ್ಲಿ ಯುರೋಪಿಯನ್ ಕಮಿಷನ್ ನಿಯಮ ಉಲ್ಲಂಘನೆಗಾಗಿ Googleಗೆ 2.42 ಶತಕೋಟಿ ಯುರೋ ದಂಡ ವಿಧಿಸಿತು. 2018ರಲ್ಲಿ ಮತ್ತೆ 4.34 ಶತಕೋಟಿ ಯುರೋ, 2019ರಲ್ಲಿ 1.49 ಬಿಲಿಯನ್ ಯುರೋ ದಂಡ ವಿಧಿಸಿತು.
- 2019ರ ಡಿಸೆಂಬರ್‌ನಲ್ಲಿ ಸಂಸ್ಥಾಪಕರಾದ ಪೇಜ್ ಮತ್ತು ಬ್ರಿನ್ ಅವರು CEO ಮತ್ತು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಪಿಚೈ ಆಲ್ಫಾಬೆಟ್‌ನ CEO ಆದರು.
- 2020ರಲ್ಲಿ ಆಲ್ಫಾಬೆಟ್ ಮಾರುಕಟ್ಟೆ ಬಂಡವಾಳೀಕರಣದಲ್ಲಿ $1 ಟ್ರಿಲಿಯನ್‌ಗೆ ತಲುಪಿತು. 2023ರ ಜನವರಿಯಲ್ಲಿ ಕಂಪನಿ 12,000 ಉದ್ಯೋಗಗಳನ್ನು ಕಡಿತಗೊಳಿಸಿತು. ಇದು ಉದ್ಯೋಗಿಗಳ ಪ್ರಮಾಣದ 6%.
- ಫೆಬ್ರವರಿಯಲ್ಲಿ ಗೂಗಲ್ ಬಾರ್ಡ್ ಅನ್ನು ಪ್ರಕಟಿಸಿತು. ಇದು AI-ಚಾಲಿತ ಚಾಟ್‌ಬಾಟ್. ಆದರೆ ಇದರಲ್ಲಿದ್ದ ದೋಷದಿಂದಾಗಿ ಕಂಪನಿಯ ಷೇರು ಮೌಲ್ಯದಲ್ಲಿ $100 ಶತಕೋಟಿ ನಷ್ಟವಾಯಿತು.
- Googleನ ಮೊದಲ ಉದ್ಯೋಗಿಗಳಲ್ಲಿ ಒಬ್ಬರಾದ ಸುಸಾನ್ ವೊಜ್ಸಿಕಿ, YouTube CEO ಹುದ್ದೆಯಿಂದ ಕೆಳಗಿಳಿದರು. ನೀಲ್ ಮೋಹನ್ ಆ ಸ್ಥಾನಕ್ಕೆ ಬಂದರು. 2023 ಮಾರ್ಚ್‌ನಲ್ಲಿ ಕೆಲವು ಬಳಕೆದಾರರಿಗೆ ಬಾರ್ಡ್ ಅನ್ನು ಬಳಕೆಗೆ ಬಿಟ್ಟಿತು.
ಇದನ್ನೂ ಓದಿ: Google birthday: ಗೂಗಲ್‌ಗೆ 25 ವರ್ಷ; ಚಂದದ ಡೂಡಲ್‌ನೊಂದಿಗೆ ಸ್ವಾಗತಿಸಿದ ಕಂಪನಿ
ತಂತ್ರಜ್ಞಾನ
Google birthday: ಗೂಗಲ್‌ಗೆ 25 ವರ್ಷ; ಚಂದದ ಡೂಡಲ್‌ನೊಂದಿಗೆ ಸ್ವಾಗತಿಸಿದ ಕಂಪನಿ
ಡೂಡಲ್‌ನ ಜತೆಗೆ “ವಾಕ್ ಡೌನ್ ಮೆಮೊರಿ ಲೇನ್” ಎಂದು ಹಿಂದಿನ 25 ವರ್ಷಗಳ ತನ್ನ ಜನ್ಮದಿನದ ವಿಭಿನ್ನ ಡೂಡಲ್‌ಗಳನ್ನು ಪ್ರದರ್ಶಿಸಿದೆ. ಲೇಟೆಸ್ಟ್ ಡೂಡಲ್ ʼGoogle’ ಬದಲಿಗೆ ʼG25gle’ ಆಗಿ ಬರೆಯಲಾಗಿದೆ. ಇದು GIF ಆಗಿದ್ದು, ಅದನ್ನು ನೀವು ಕ್ಲಿಕ್ಕಿಸಿದರೆ ಮೇಲಿನಿಂದ ಬಣ್ಣದ ಕಾಗದಗಳ ಮಳೆಯಾಗುತ್ತದೆ.
ಹೊಸದಿಲ್ಲಿ: ಎಲ್ಲರ ಮೆಚ್ಚಿನ ಸರ್ಚ್ ಇಂಜಿನ್ ಗೂಗಲ್‌ಗೆ (Google) ಬುಧವಾರ 25 ವರ್ಷ (Google birthday) ತುಂಬಿದೆ. ಗೂಗಲ್ ಚಂದದ ಡೂಡಲ್ (Google birthday doodle) ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ.
ಡೂಡಲ್‌ನ ಜತೆಗೆ “ವಾಕ್ ಡೌನ್ ಮೆಮೊರಿ ಲೇನ್” ಎಂದು ಹಿಂದಿನ 25 ವರ್ಷಗಳ ತನ್ನ ಜನ್ಮದಿನದ ವಿಭಿನ್ನ ಡೂಡಲ್‌ಗಳನ್ನು ಪ್ರದರ್ಶಿಸಿದೆ. ಲೇಟೆಸ್ಟ್ ಡೂಡಲ್ ʼGoogle’ ಬದಲಿಗೆ ʼG25gle’ ಆಗಿ ಬರೆಯಲಾಗಿದೆ. ಇದು GIF ಆಗಿದ್ದು, ಅದನ್ನು ನೀವು ಕ್ಲಿಕ್ಕಿಸಿದರೆ ಮೇಲಿನಿಂದ ಬಣ್ಣದ ಕಾಗದಗಳ ಮಳೆಯಾಗುತ್ತದೆ.
ಗೂಗಲ್ ಕಂಪನಿಯು ಮೊದಲ ಏಳು ವರ್ಷಗಳಲ್ಲಿ ತನ್ನ ಜನ್ಮದಿನವನ್ನು ಸೆಪ್ಟೆಂಬರ್ 4ರಂದು ಆಚರಿಸಿತು. ನಂತರ ಸರ್ಚ್ ಇಂಜಿನ್ ಇಂಡೆಕ್ಸಿಂಗ್ ಮಾಡುತ್ತಿರುವ ದಾಖಲೆ ಸಂಖ್ಯೆಯ ಪುಟಗಳ ಪ್ರಕಟಣೆಯೊಂದಿಗೆ ಹೊಂದಿಕೆಯಾಗುವಂತೆ ಆಚರಣೆಗಳನ್ನು ಸೆಪ್ಟೆಂಬರ್ 27ಕ್ಕೆ ಬದಲಾಯಿಸಲು ನಿರ್ಧರಿಸಿತು. 1998ರಲ್ಲಿ ಸ್ಥಾಪನೆಯಾದ ಗೂಗಲ್‌ನ ಮೊಟ್ಟಮೊದಲ ಡೂಡಲ್, ನೆವಾಡಾದ ಬ್ಲ್ಯಾಕ್ ರಾಕ್ ಸಿಟಿಯ ದೀರ್ಘಾವಧಿಯ “ಬರ್ನಿಂಗ್ ಮ್ಯಾನ್” ಕಾರ್ಯಕ್ರಮದ ಬಗ್ಗೆ ಆಗಿತ್ತು.
ಸರ್ಚ್ ಇಂಜಿನ್‌ನ ಪ್ರಸ್ತುತ ಸಿಇಒ ಸುಂದರ್ ಪಿಚೈ ಅವರು ಅಕ್ಟೋಬರ್ 24, 2015ರಂದು ಕಂಪನಿಯ ನಿರ್ವಹಣೆ ವಹಿಸಿಕೊಂಡರು. ಡಿಸೆಂಬರ್ 3, 2019ರಂದು ಪಿಚೈ ಆಲ್ಫಾಬೆಟ್‌ನ ಸಿಇಒ ಕೂಡಾ ಆದರು.
ಕಳೆದ ತಿಂಗಳು, ಗೂಗಲ್ ಸಿಇಒ ಸುಂದರ್ ಪಿಚೈ (Google CEO Sundar Pichai) ಕಂಪನಿಯು ತನ್ನ 25ನೇ ಹುಟ್ಟುಹಬ್ಬವನ್ನು ಆಚರಿಸುವ ಬಗ್ಗೆ ಬ್ಲಾಗ್ ಪೋಸ್ಟ್ ಬರೆದಿದ್ದರು. ಮೊದಲ ಕಾಲು ಶತಮಾನವನ್ನು ಪ್ರತಿಬಿಂಬಿಸುತ್ತಾ, ಇನ್ನೂ ದೊಡ್ಡ ಪ್ರಮಾಣದಲ್ಲಿ ಮುಖ್ಯವಾದ ಕೆಲಸಗಳನ್ನು ಮಾಡಲು AI ಜೊತೆಗಿನ ಅವಕಾಶಗಳ ಕುರಿತು ಕೆಲವು ಆಲೋಚನೆಗಳನ್ನು ಹಂಚಿಕೊಂಡಿದ್ದರು.
“ಈ ತಿಂಗಳು, ಗೂಗಲ್ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಈ ಮೈಲಿಗಲ್ಲನ್ನು ತಲುಪುವುದು ದೊಡ್ಡ ಸಾಧನೆ. ನಮ್ಮ ಉತ್ಪನ್ನವನ್ನು ಬಳಸುವ ಜನರು ನಾವೀನ್ಯತೆಯನ್ನು ಮುಂದುವರಿಸಲು ನಮಗೆ ಸವಾಲು ಒಡ್ಡುತ್ತಾರೆ. ಆ ಉತ್ಪನ್ನವನ್ನು ನಿರ್ಮಿಸಲು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ನೂರಾರು ಸಾವಿರ ಗೂಗ್ಲರ್‌ಗಳು ಮತ್ತು ನಮ್ಮ ಪಾಲುದಾರರಿಗೆ ಇದು ಕೃತಜ್ಞತೆ ಸಲ್ಲಿಸುವ ಸಮಯ. ನಾವೀನ್ಯತೆ ಅತ್ಯಗತ್ಯ ಸತ್ಯವೆಂದರೆ ತಂತ್ರಜ್ಞಾನದ ಗಡಿಯನ್ನು ಮೀರುವ ಕ್ಷಣ. ಗೂಗಲ್ ನಮ್ಮ ಯಶಸ್ಸನ್ನು ಎಂದಿಗೂ ಲಘುವಾಗಿ ತೆಗೆದುಕೊಂಡಿಲ್ಲ. ನಾವಿನ್ನೂ ಹುಡುಕಾಟದಲ್ಲಿದ್ದೇವೆ. ಇನ್ನೂ ಹೆಚ್ಚಿನದನ್ನು ಮಾಡಬೇಕಾದ ಅಗತ್ಯವಿದೆ. ಖಂಡಿತವಾಗಿಯೂ ಗೂಗಲ್ ಇಂದು ಸರ್ಚ್ ಇಂಜಿನ್‌ಗಿಂತ ಹೆಚ್ಚಿನದಾಗಿದೆ. ನಾವು 15 Google ಉತ್ಪನ್ನಗಳನ್ನು ಹೊಂದಿದ್ದೇವೆ. ಪ್ರತಿಯೊಂದೂ ಐವತ್ತು ಕೋಟಿಗಿಂತ ಹೆಚ್ಚು ಜನರಿಗೆ ಸೇವೆ ಸಲ್ಲಿಸುತ್ತಿದೆ” ಎಂದು ಪಿಚೈ ನುಡಿದಿದ್ದಾರೆ.
ಇದನ್ನೂ ಓದಿ: Sundar Pichai : ಐಐಟಿಯ ಸಾಮಾನ್ಯ ವಿದ್ಯಾರ್ಥಿ 10,000 ಕೋಟಿ ರೂ.ಗೆ ಒಡೆಯನಾಗಿದ್ದು ಹೇಗೆ?
-
ಪ್ರಮುಖ ಸುದ್ದಿ23 hours ago
Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!
-
ಪ್ರಮುಖ ಸುದ್ದಿ13 hours ago
German Shepherd: ಸೀಕ್ರೆಟ್ ಸರ್ವಿಸ್ ಏಜೆಂಟ್ನಿಗೆ ಕಚ್ಚಿದ ಅಮೆರಿಕ ಅಧ್ಯಕ್ಷ ಬೈಡನ್ ಅವರ ‘ಕಮಾಂಡರ್’!
-
ವಿದೇಶ14 hours ago
Most expensive wedding: ಜಗತ್ತಿನ ದುಬಾರಿ ವಿವಾಹ ಯಾವುದು ಗೊತ್ತೆ? ಖರ್ಚಾಗಿದ್ದು ಇಷ್ಟು ಕೋಟಿ ರೂ.
-
ಸುವಚನ2 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕ್ರೈಂ18 hours ago
ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!
-
ಕರ್ನಾಟಕ14 hours ago
Car Accident: ಮರಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವು
-
ದೇಶ15 hours ago
Venus Mission: ಇಸ್ರೋಗೆ ‘ಶುಕ್ರ’ದೆಸೆ; ಚಂದ್ರ, ಸೂರ್ಯನ ಬಳಿಕ ಶುಕ್ರನತ್ತ ಚಿತ್ತ; ಉಡಾವಣೆ ಯಾವಾಗ?
-
ಕರ್ನಾಟಕ9 hours ago
PSI Recruitment Scam: ಕೊನೆಗೂ ಅಮೃತ್ ಪಾಲ್ ಸೆಂಟ್ರಲ್ ಜೈಲಿನಿಂದ ಬಿಡುಗಡೆ