Site icon Vistara News

Nothing Phone: ಐಫೋನ್ ಬೆನ್ನಲ್ಲೇ ಭಾರತದಲ್ಲಿ ಮತ್ತೊಂದು ಕಂಪನಿಯಿಂದ ಸ್ಮಾರ್ಟ್‌ಫೋನ್ ತಯಾರಿಕಾ ಘಟಕ

Nothing phone to produce in India and company confirms it

ನವದೆಹಲಿ: ಚೀನಾ ಬಿಟ್ಟು ಭಾರತದಲ್ಲೇ ಐಫೋನ್‌ಗಳನ್ನು ಉತ್ಪಾದಿಸಲು ಆ್ಯಪಲ್ ಕಂಪನಿ (Apple Inc) ಮುಂದಾದ ಬೆನ್ನಲ್ಲೇ, ಮತ್ತೊಂದು ಸ್ಮಾರ್ಟ್‌ಫೋನ್ (Smartphone) ತಯಾರಿಕಾ ಕಂಪನಿಯು ಇದೇ ಹಾದಿಯನ್ನು ತುಳಿದಿದೆ. ನಥಿಂಗ್ ಫೋನ್ (2) Nothing Phone (2) ಸ್ಮಾರ್ಟ್‌ಫೋನ್‌ವನ್ನು ಭಾರತದಲ್ಲಿ (India) ತಯಾರಿಸಲಾಗುವುದು ಎಂದು ನಥಿಂಗ್ ಟೆಕ್ನಾಲಜಿ (Nothing Technology Company) ಕಂಪನಿ ಹೇಳಿದೆ. ಈ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ತನ್ನ ಮುಂಬರುವ 5ಜಿ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ನಥಿಂಗ್ ಫೋನ್ ಕಂಪನಿಯು ಮಾಧ್ಯಮಗಳಿಗೆ ಖಚಿತಪಡಿಸಿದೆ. ಹೊಸ ಫೋನ್ ಬಿಡುಗಡೆಗೆ ಮುಂಚೆಯೇ ಕೆಲವು ಫೀಚರ್‌ಗಳನ್ನು ಕಂಪನಿಯು ಬಹಿರಂಗಪಡಿಸಿದೆ. ಆದರೆ, ಯಾವ ದಿನದಂದು ಈ ಫೋನ್ ಲಾಂಚ್ ಆಗಲಿದೆ ಎಂಬ ಖಚಿತ ಮಾಹಿತಯನ್ನು ಕಂಪನಿ ಬಿಟ್ಟು ಕೊಟ್ಟಿಲ್ಲ. ಮುಂದಿನ ತಿಂಗಳು ಅಂದರೆ ಜುಲೈನಲ್ಲಿ ನಥಿಂಗ್ ಫೋನ್ (2) ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಘೋಷಿಸಿದೆ.

ನಥಿಂಗ್ ಫೋನ್ (1) ಅನ್ನು ಭಾರತದಲ್ಲಿ ತಯಾರಿಸಲಾಗಿಲ್ಲ. ಈ ಸ್ಮಾರ್ಟ್‌ಫೋನ್ ಉತ್ತರಾಧಿಕಾರಿ ಅರ್ಥಾತ್ ಹೊಸ ಫೋನ್ ಭಾರತದಲ್ಲಿ ತಯಾರಾಗಲಿದೆ. ಭಾರತದಲ್ಲಿ ಉತ್ಪಾದನೆಯಾಗಲಿದೆ ಎಂದು ಫೋನ್ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಗ್ಗದ ಬೆಲೆಗೆ ಫೋನ್ ಸಿಗುತ್ತದೆ ಎಂದು ಭಾವಿಸಬೇಕಿಲ್ಲ. ಯಾಕೆಂದರೆ ಭಾರತದಲ್ಲಿ ಸಾಧನವನ್ನು ಜೋಡಿಸಲಾಗುತ್ತಿಲ್ಲ. ನಥಿಂಗ್ ಫೋನ್ (2) ಜುಲೈನಲ್ಲಿ ಬಿಡುಗಡೆಯಾದಾಗ ಭಾರತದಲ್ಲಿ 40,000 ರೂ.ಕ್ಕಿಂತ ಕಡಿಮೆ ಬೆಲೆಯನ್ನು ನಿರೀಕ್ಷಿಸಲಾಗಿದೆ.

ನಥಿಂಗ್ ಸ್ಮಾರ್ಟ್‌ಫೋನ್‌ಗಳು ತಮ್ಮ ಸಾಂಪ್ರದಾಯಿಕ ಪಾರದರ್ಶಕ ವಿನ್ಯಾಸಕ್ಕೆ ಹೆಸರುವಾಸಿಯಾಗಿವೆ. ಈ ವಿನ್ಯಾಸಗಳಿಗೆ ಹೈಟೆಕ್ ಉತ್ಪಾದನಾ ಪ್ರಕ್ರಿಯೆಗಳು ಮತ್ತು ನಿಖರವಾದ ಎಂಜಿನಿಯರಿಂಗ್ ಅಗತ್ಯವಿರುತ್ತದೆ. ಹಾಗಾಗಿ, ಭಾರತದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಕಾರಣವಾಗಿದೆ. ಭಾರತದಲ್ಲಿ ಉತ್ಪಾದನೆಗೆ ನಮ್ಮ ಚಾಲನೆಯು ಸ್ಥಳೀಯ ಗ್ರಾಹಕರು ಮತ್ತು ಅವರ ಬೇಡಿಕೆಗಳ ಕಡೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಫೋನ್ (2) ಅನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ ಎಂದು ನಥಿಂಗ್ ಇಂಡಿಯಾದ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಮನು ಶರ್ಮಾ ಅವರು ಹೇಳಿದ್ದಾರೆ.

ಹೊಸ ಬ್ರ್ಯಾಂಡ್ ಆಗಿರುವ ನಥಿಂಗ್ ಫೋನ್ ಹೊಸ ಹೊಸ ಆವಿಷ್ಕಾರಗಳಲ್ಲಿ ನಂಬಿಕೆಯನ್ನು ಇಟ್ಟಿದೆ. ಫೋನ್ (2) ಅನ್ನು ಮಾರುಕಟ್ಟೆಯಲ್ಲಿ ಅತ್ಯಂತ ಸಮರ್ಥನೀಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಮನು ಶರ್ಮಾ ಅವರು ಹೇಳಿದರು.

ಇದನ್ನೂ ಓದಿ: Apple India:‌ ಭಾರತದಲ್ಲಿ ಆ್ಯಪಲ್‌ ಕಂಪನಿಗೆ ಕೇವಲ 2 ಸ್ಟೋರ್‌ಗಳಲ್ಲಿ ತಿಂಗಳಿಗೆ ಸೇಲ್ಸ್‌ ಎಷ್ಟು ಕೋಟಿ?

2020ರಲ್ಲಿ ಆರಂಭವಾದ ನಥಿಂಗ್ ಕಂಪನಿಯು ಇಂಗ್ಲೆಂಡ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಮಾರುಕಟ್ಟೆಗೆ ಪ್ರವೇಶಿಸಿದ ಎರಡೇ ವರ್ಷಗಳಲ್ಲಿ ತನ್ನದೇ ಬ್ರ್ಯಾಂಡ್ ಬಿಲ್ಡ್ ಮಾಡಿಕೊಂಡಿದೆ. ಹೊಸ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತವು ಸೇರಿದಂತೆ ಜಗತ್ತಿನಾದ್ಯಂತ ತನ್ನದೇ ಪಾಲು ಪಡೆದುಕೊಂಡಿದೆ. ಆಪಲ್, ಸ್ಯಾಮ್ಸಂಗ್‌ ಕಂಪನಿಯ ಫೋನುಗಳಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದೆ.

ತಂತ್ರಜ್ಞಾನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version