Site icon Vistara News

Twitter: ನೀವಿನ್ನು ಟ್ವಿಟರ್‌ನಲ್ಲಿ 2 ಗಂಟೆ ವಿಡಿಯೋ ಅಪ್ಲೋಡ್ ಮಾಡಬಹುದು, ಆದರೆ ಷರತ್ತುಗಳು ಅನ್ವಯಿಸುತ್ತವೆ!

X CEO Elon Musk

Elon Musk Has An Offer For Journalists Who Want To Earn More, Here is the details

ವಾಷಿಂಗ್ಟನ್, ಅಮೆರಿಕ: ಮೈಕ್ರೋಬ್ಲಾಗಿಂಗ್ ವೇದಿಕೆಯಾಗಿರುವ ಟ್ವಿಟರ್ (Twitter) ಖರೀದಿಸಿದ ಬಳಿಕ ಎಲಾನ್ ಮಸ್ಕ್ (Elon Musk) ಸಾಕಷ್ಟು ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಟ್ವಿಟರ್‌ನ ಒಟ್ಟಾರೆ ಕಾರ್ಯ ವೈಖರಿಯನ್ನು ಬದಲಿಸಿದ್ದಾರೆ. ಇದೀಗ ಎಲಾನ್ ಮಸ್ಕ್ ಅವರು, ಟ್ವಿಟರ್‌ನಲ್ಲಿ 2 ಗಂಟೆಗಳಷ್ಟು ಸುದೀರ್ಘ ವಿಡಿಯೋ (Video) ಅಪ್‌ಲೋಡ್ ಮಾಡಲು ಅವಕಾಶವನ್ನು ನೀಡುತ್ತಿದ್ದಾರೆ. ಆದರೆ, ಈ ಸೌಲಭ್ಯ ಎಲ್ಲರಿಗೂ ಅಲ್ಲ. ದೃಢೀಕೃತ ಖಾತೆಗಳಿಗೆ ಮಾತ್ರವೇ ಅನ್ವಯವಾಗಲಿದೆ. ಈ ಬಗ್ಗೆ ಟ್ವಿಟರ್‌ನಲ್ಲೇ ಮಾಹಿತಿ ನೀಡಿರುವ ಎಲಾನ್ ಮಸ್ಕ್, ಟ್ವಿಟರ್‌ ಬ್ಲೂ ಟಿಕ್ ಚಂದಾದಾರು (Twitter Blue Verified subscribers) 2 ಗಂಟೆಗಳಷ್ಟು ಸುದೀರ್ಘ ವಿಡಿಯೋ(8ಜಿಬಿ) ಅಪ್‌ಲೋಡ್ ಮಾಡಬಹುದು ಎಂದು ಹೇಳಿದ್ದಾರೆ.

ಅಮೆರಿಕ ಮೂಲದ ಪೋರ್ಟಲ್ ಟೆಕ್ ‌ಕ್ರಂಚ್ ಪ್ರಕಾರ, ಟ್ವಿಟರ್ ತನ್ನ ಪಾವತಿಸಿದ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಿದೆ ಮತ್ತು ಹಿಂದಿನ 60 ನಿಮಿಷಗಳ ವಿಡಿಯೋ ಅಫ್‌ಲೋಡ್‌ ಮಿತಿಯನ್ನು ಎರಡು ಗಂಟೆಗಳವರೆಗೆ ವಿಸ್ತರಿಸಿದೆ.

ಎಲಾನ್ ಮಸ್ಕ್ ಟ್ವೀಟ್

ಕಂಪನಿಯು ತನ್ನ ಟ್ವಿಟರ್ ಬ್ಲೂ ಪುಟವನ್ನು ಮಾರ್ಪಡಿಸಿದ್ದು, ಪಾವತಿಸಿದ ಬಳಕೆದಾರರಿಗೆ ವೀಡಿಯೊ ಫೈಲ್ ಗಾತ್ರದ ಮಿತಿಯನ್ನು ಈಗ 2GB ಯಿಂದ 8GB ವರೆಗೆ ಹೆಚ್ಚಿಸಲಾಗಿದೆ. ಈ ಹಿಂದೆ ದೀರ್ಘಾವಧಿಯ ವೀಡಿಯೊ ಅಪ್‌ಲೋಡ್ ವೆಬ್‌ನಿಂದ ಮಾತ್ರ ಸಾಧ್ಯವಾದರೆ, ಈಗ ಇದು ಐಒಎಸ್ ಅಪ್ಲಿಕೇಶನ್‌ನ ಮೂಲಕವೂ ಸಾಧ್ಯ. ಈ ಬದಲಾವಣೆಗಳ ಹೊರತಾಗಿಯೂ, ಅಪ್‌ಲೋಡ್‌ಗೆ ಗರಿಷ್ಠ ಗುಣಮಟ್ಟವು ಇನ್ನೂ 1080p ಉಳಿದಿದೆ ಎಂದು ಟೆಕ್ ಕ್ರಂಚ್ ವರದಿ ಮಾಡಿದೆ.

ಈ ಪ್ರಮುಖ ನಿರ್ಧಾರದ ಬಗ್ಗೆ ಎಲಾನ್ ಮಸ್ಕ್ ಅವರು ಘೋಷಣೆ ಮಾಡುತ್ತಿದ್ದಂತೆ ಸಾಕಷ್ಟು ಪ್ರತಿಕ್ರಿಯೆಗಳು ಹರಿದು ಬಂದಿವೆ. ಒಬ್ಬ ಬಳಕೆದಾರರು, ಟ್ವಿಟರ್ ಈಗ ಹೊಸ ನೆಟ್‌ಫ್ಲಿಕ್ಸ್ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ಸೋ ಕೂಲ್, ಇದನ್ನು ಸಾಧ್ಯವಾಗಿಸಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇನ್ನೊಬ್ಬರು ವೆಲ್‌ಕಮ್ ಟು ಟ್ವೀಟ್‌ಟ್ಯೂಬ್(Tweetube) ಎಂದು ಬರೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಅವರ ಟ್ವೀಟ್‌ಗೆ ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳು ವ್ಯವಕ್ತವಾಗಿವೆ.

Twitter ಸಿಇಒ ಸ್ಥಾನಕ್ಕೆ ಲಿಂಡಾ ಯಾಕರಿನೊ

ಟ್ವಿಟರ್‌ ಮಾಲಿಕ ಎಲಾನ್‌ ಮಸ್ಕ್‌ (Elon Musk) ಅವರು ಸಂಸ್ಥೆಯ ಸಿಇಒ (Twitter CEO) ಸ್ಥಾನದಿಂದ ಹಿಂದೆ ಸರಿಯುತ್ತಿದ್ದು, ಆ ಸ್ಥಾನಕ್ಕೆ ಒಬ್ಬರು ಮಹಿಳೆಯನ್ನು ನೇಮಿಸುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ವೈರಲ್‌ ಆಗುವುದರೊಂದಿಗೆ, ಯಾರು ಈ ಹೊಸ ಸಿಇಒ ಎಂಬ ಕುತೂಹಲ ಗರಿಗೆದರಿದೆ. ಕಳೆದ ವರ್ಷ ತಾವು ಖರೀದಿಸಿದ ದೈತ್ಯ ಸೋಶಿಯಲ್‌ ಮೀಡಿಯಾ ಸಂಸ್ಥೆಯನ್ನು ಮುನ್ನಡೆಸಲು ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇಮಕಕ್ಕೆ ಮುಂದಾಗಿದ್ದಾರೆ. ಎನ್‌ಬಿಸಿ ಯೂನಿವರ್ಸಲ್‌ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ (Linda Yaccarino) ಅವರು ಮುಂದಿನ ಟ್ವಿಟರ್ ಸಿಇಒ ಆಗುವ ರೇಸ್‌ನಲ್ಲಿ ಮುಂದಿದ್ದಾರೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

“ನಾನು Twitterಗೆ ಹೊಸ CEO ಅನ್ನು ನೇಮಿಸಿಕೊಂಡಿದ್ದೇನೆ ಎಂದು ಘೋಷಿಸಲು ಉತ್ಸುಕನಾಗಿದ್ದೇನೆ. ಆಕೆ 6 ವಾರಗಳಲ್ಲಿ ಕೆಲಸ ಆರಂಭಿಸಲಿದ್ದಾರೆ. ನನ್ನ ಪಾತ್ರವು ಎಕ್ಸಿಕ್ಯೂಟಿವ್‌ ಚೇರ್ ಮತ್ತು ಸಿಟಿಒ ಆಗಿ ಮುಂದುವರಿಯಲಿದೆ. ಉತ್ಪನ್ನ, ಸಾಫ್ಟ್‌ವೇರ್‌ಗಳನ್ನು ನೋಡಿಕೊಳ್ಳುತ್ತದೆ” ಎಂದು ಮಸ್ಕ್ ಟ್ವೀಟ್‌ ಮಾಡಿದ್ದಾರೆ.

ಈ ಲಿಂಡಾ ಯಾಕರಿನೊ ಯಾರು?

ಲಿಂಡಾ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಯಾಕರಿನೊ 2011ರಿಂದ NBC ಯುನಿವರ್ಸಲ್‌ ಸಂಸ್ಥೆಯಲ್ಲಿದ್ದಾರೆ. ಆ ಸಂಸ್ಥೆಯ ಅಧ್ಯಕ್ಷೆ, ಜಾಗತಿಕ ಜಾಹೀರಾತು ಮತ್ತು ಪಾಲುದಾರಿಕೆ ಮುಖ್ಯಸ್ಥೆ. ಆ ಮುನ್ನ ಅವರು ಕಂಪನಿಯ ಕೇಬಲ್ ಮನರಂಜನೆ ಮತ್ತು ಡಿಜಿಟಲ್ ಜಾಹೀರಾತು ಮಾರಾಟ ವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ಯಾಕರಿನೊ ಅವರು ಟರ್ನರ್‌ನಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದರು. ಅಲ್ಲಿ ಅವರು ಜಾಹೀರಾತು ಮಾರಾಟ, ಮಾರ್ಕೆಟಿಂಗ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷೆ/ಸಿಒಒ ಆಗಿದ್ದರು.

ಇದನ್ನೂ ಓದಿ: Twitter: ಆ್ಯಕ್ಟಿವ್ ಆಗಿರದ ಖಾತೆಗಳನ್ನು ತೆಗೆದುಹಾಕುತ್ತಿದೆ ಟ್ವಿಟರ್

ಲಿಂಡಾ ಅವರು ಪೆನ್ ಸ್ಟೇಟ್ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿ. ಲಿಬರಲ್‌ ಆರ್ಟ್ಸ್‌ ಮತ್ತು ದೂರಸಂವಹನ ಅಧ್ಯಯನ ಮಾಡಿದ್ದಾರೆ. ಜಾಹೀರಾತಿನ ಪರಿಣಾಮಕಾರಿತ್ವವನ್ನು ಶೋಧಿಸಲು ಉತ್ತಮ ಮಾರ್ಗಗಳನ್ನು ಹುಡುಕುವುದು ಅವರ ತಜ್ಞತೆ. ಯಾಕರಿನೊ ಅವರು ಟ್ವಿಟರ್‌ನ ಸಿಇಒ ಆಗಲು ಬಯಸಿದ್ದೇನೆ ಎಂದು ಈ ಹಿಂದೆ ತಮ್ಮ ಸ್ನೇಹಿತರಿಗೆ ತಿಳಿಸಿದ್ದರು ಎಂದು ಬ್ಯುಸಿನೆಸ್ ಇನ್ಸೈಡರ್ ವರದಿ ಮಾಡಿತ್ತು. ಟ್ವಿಟರ್‌ನಲ್ಲಿ ಸುಧಾರಣೆ ಆಗಬೇಕು, ಅದಕ್ಕೆ ಮಸ್ಕ್‌ ಸಮಯ ನೀಡಬೇಕು ಎಂದು ಅವರು ಈ ಹಿಂದೆ ಮಸ್ಕ್‌ನನ್ನು ಬೆಂಬಲಿಸಿದ್ದರು. ಟ್ವಿಟರ್‌ ಸಿಇಒ ಸ್ಥಾನಕ್ಕೆ ಎಲಾ ಇರ್ವಿನ್ ಅವರ ಹೆಸರೂ ಕೇಳಿಬರುತ್ತಿದೆ. ಇರ್ವಿನ್ ಪ್ರಸ್ತುತ Twitterನ ಭದ್ರತೆ ಮತ್ತು ಸುರಕ್ಷತಾ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರೂ ಎಲಾನ್‌ ಮಸ್ಕ್‌ ಜತೆಗೆ ಉತ್ತಮ ಸಂಬಂಧವನ್ನೇ ಹೊಂದಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version