ನವದೆಹಲಿ: ಭಾರೀ ಪ್ರಸಿದ್ಧಿಯಾಗಿರುವ ಚಾಟ್‌ಬಾಟ್ ಚಾಟ್‌ಜಿಪಿಟಿಯ ಹೊಸ ವರ್ಷನ್ ಆಗಿರುವ ಜಿಪಿಟಿ-4 (GPT-4) ಅನ್ನು ಓಪನ್ಎಐ(OpenAI) ಲಾಂಚ್ ಮಾಡಿದೆ. ಈ ಹೊಸ ಲ್ಯಾಂಗ್ವೆಜ್ ಮಾಡೆಲ್, ಬಳಕೆದಾರರ ಇಮೇಜ್‌ಗಳಿಗೆ ಪ್ರತಿಕ್ರಿಯಿಸಲಿದೆ. ಪದಾರ್ಥಗಳ ಫೋಟೋಗಳಿಂದ ಪಾಕವಿಧಾನ ಸಲಹೆಗಳನ್ನು ಒದಗಿಸುವುದು ಸೇರಿದಂತೆ ಶೀರ್ಷಿಕೆಗಳು ಮತ್ತು ವಿವರಣೆಗಳನ್ನು ಬರೆಯುವುದು ಮಾಡುತ್ತದೆ. ಓಪನ್‌ಎಐನಲ್ಲಿ ಟೆಕ್ ದೈತ್ಯ ಮೈಕ್ರೋಸಾಫ್ಟ್(Microsoft) ಹೂಡಿಕೆ ಮಾಡಿದೆ.
ಈ ವರ್ಷನ್ ಸುಮಾರು 25 ಸಾವಿರವರೆಗೂ ಪದಗಳನ್ನು ಸಂಸ್ಕರಿಸಬಲ್ಲದು. ಇದು ಹಳೆಯ ಚಾಟ್‌ಜಿಪಿಟಿಗಿಂತಲೂ 8 ಪಟ್ಟು ಹೆಚ್ಚಳವಾಗಿದೆ. ಚಾಟ್‌ಜಿಪಿಟಿಯನ್ನು ಕಳೆದ ನವೆಂಬರ್‌ನಲ್ಲಿ ಲಾಂಚ್ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯತನಕ ಲಕ್ಷಾಂತರ ಜನರು ಈ ಚಾಟ್‌ಬಾಟ್ ಅನ್ನು ಬಳಕೆ ಮಾಡುತ್ತಿದ್ದಾರೆ. ಕವಿತೆ ಬರೆಯುವುದು, ಹಾಡು ಬರೆಯುವುದು, ಮಾರ್ಕೆಟಿಂಗ್ ಕಾಪಿ, ಕಂಪ್ಯೂಟರ್ ಕೋಡ್, ಹೋಮ್‌ವರ್ಕ್‌ಗೆ ಹೆಲ್ಪ್ ಮಾಡುವುದು ಸೇರಿದಂತೆ ಅನೇಕ ಟಾಸ್ಕ್‌ಗಳನ್ನು ಈ ಜಿಪಿಟಿ ಮೂಲಕ ಮಾಡಲಾಗುತ್ತಿದೆ. ಆದಾಗ್ಯೂ, ವಿದ್ಯಾರ್ಥಿಗಳು ಚಾಟ್‌ಜಿಪಿಟಿ ನೆರವು ಪಡೆದುಕೊಳ್ಳಬಾರದು ಎಂದು ಸೂಚಿಸುತ್ತಿದ್ದಾರೆ.
ಚಾಟ್‌ಜಿಪಿಟಿ ನೈಸರ್ಗಿಕ ಮಾನವ-ರೀತಿಯ ಭಾಷೆಯನ್ನು ಬಳಸಿಕೊಂಡು ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಇದು ಗೀತರಚನೆಕಾರರು ಮತ್ತು ಲೇಖಕರಂತಹ ಇತರ ಬರವಣಿಗೆಯ ಶೈಲಿಗಳನ್ನು ಸಹ ಅನುಕರಿಸುತ್ತದೆ. 2021ರವರೆಗಿನ ಇಂಟರ್ನೆಟ್ ಅನ್ನು ಅದು ತನ್ನ ಜ್ಞಾನದ ಡೇಟಾಬೇಸ್ ಆಗಿ ಬಳಸುತ್ತದೆ. ಜತೆಗೆ, ಚಾಟ್‌ಜಿಪಿಟಿ ಬಳಕೆ ಹೆಚ್ಚಾದಂತೆ ಮಾನವರ ಉದ್ಯೋಗಗಳಿಗೆ ಹೊಡೆತ ಬೀಳುತ್ತದೆ ಎಂಬ ಆತಂಕವೂ ಇದೆ.
ಇದನ್ನೂ ಓದಿ: ChatGPT v/s Humans: ಚಾಟ್‌ಜಿಪಿಟಿ ಮಾನವರ ಸ್ಥಾನ ಪಡೆಯಲಿದೆಯಾ? ಇನ್ಫಿ ನಾರಾಯಣಮೂರ್ತಿ ಹೇಳುವುದೇನು?
ಜಿಪಿಟಿ-4ರ ಸುರಕ್ಷತಾ ವೈಶಿಷ್ಟ್ಯಗಳಿಗಾಗಿ ಆರು ತಿಂಗಳುಗಳನ್ನು ವಿನಿಯೋಗಿಸಲಾಗಿದೆ. ಮಾನವ ಪ್ರತಿಕ್ರಿಯೆಯ ಕುರಿತು ತರಬೇತಿ ನೀಡಲಾಗಿದೆ ಎಂದು ಓಪನ್‌ಎಐ ಹೇಳಿದೆ. ಆದಾಗ್ಯೂ, ಇದು ಇನ್ನೂ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ ಎಂದು ಅದು ಎಚ್ಚರಿಸಿದೆ. ಆರಂಭದಲ್ಲಿ ಜಿಪಿಟಿ-4, ಚಾಟ್‌ಜಿಪಿಟಿ ಪ್ಲಸ್ ಚಂದಾದಾರಿಗೆ ಮಾತ್ರ ಸಿಗಲಿದೆ. ಅಂದರೆ, ತಿಂಗಳಿಗೆ 20 ಡಾಲರ್ ಪಾವತಿಸುವ ಬಳಕೆದಾರರಿಗೆ ಈ ಹೊಸ ವರ್ಷನ್ ಸಿಗಲಿದೆ. ಈಗಾಗಲೇ ಚಾಟ್‌ಜಿಪಿಟಿಯನ್ನು ಮೈಕ್ರೋಸಾಫ್ಟ್‌ನ ಬಿಂಗ್ ಸರ್ಚ್ ಎಂಜಿನ್‌ಗೆ ಸಂಯೋಜಿಸಲಾಗುತ್ತಿದೆ. ಇದಕ್ಕಾಗಿ ಮೈಕ್ರೋಸಾಫ್ಟ್ ಓಪನ್‌ಎಐನಲ್ಲಿ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ.