Site icon Vistara News

ಕರ್ನಾಟಕಕ್ಕೆ ತಪ್ಪಿದ ಟೆಸ್ಲಾ ಫ್ಯಾಕ್ಟರಿ ಮಹಾರಾಷ್ಟ್ರ, ತಮಿಳು ನಾಡು, ಗುಜರಾತ್‌ನಲ್ಲಿ ಸ್ಥಾಪನೆ?

Tesla May set up factory in Maharashtra, Tamil Nadu and Gujarat Says Report

ನವದೆಹಲಿ: ಅಮೆರಿಕ ನಿರ್ಮಿತ ಟೆಸ್ಲಾ ಕಾರುಗಳನ್ನು (Tesla Car) ಭಾರತೀಯ ಮಾರುಕಟ್ಟೆಗೆ (Indian Market) ತರುವ ಸಂಬಂಧ ಟೆಸ್ಲಾ ಕಂಪನಿ ಮತ್ತು ಭಾರತೀಯ ಸರ್ಕಾರವು (Indian Government) ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮುಂದಿನ ವರ್ಷ ಟೆಸ್ಲಾ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ ಬ್ಲೂಮ್‌ಬರ್ಗ್ ತಿಳಿಸಿದೆ. 2024ರಲ್ಲಿ ಟೆಸ್ಲಾ ಕಂಪನಿ ಭಾರತದಲ್ಲಿ ಫ್ಯಾಕ್ಟರಿ (Tesla Factory) ಕೂಡ ಆರಂಭಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಟೆಸ್ಲಾ ಕಂಪನಿ ಭಾರತಕ್ಕೆ ಎಂಟ್ರಿ ಕೊಡಲಿದೆ ಎನ್ನುವ ಸುದ್ದಿಗಳು ಮೊದಲಿಗೆ ಹೊರ ಬಂದಾಗಲೇ ಕರ್ನಾಟಕದಲ್ಲಿ ಫ್ಯಾಕ್ಟರಿ ತೆರೆಯಬಹುದು ಎಂದು ಹೇಳಲಾಗಿತ್ತು. ಆದರೆ, ಈಗ ಕಂಪನಿಯ ಯೋಜನೆಗಳು ಬದಲಾಗಿವೆ.

ಭಾರತ ಸರ್ಕಾರ ಮತ್ತು ಟೆಸ್ಲಾ ಕಂಪನಿ ಒಪ್ಪಂದವನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿವೆ. ಈ ಒಪ್ಪಂದ ಅನ್ವಯ ಟೆಸ್ಲಾ ಕಂಪನಿಯ ಅಮೆರಿಕದಲ್ಲಿ ನಿರ್ಮಿತ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. ಹಾಗೆಯೇ, ಮುಂದಿನ ವರ್ಷ ಭಾರತದಲ್ಲಿ ಫ್ಯಾಕ್ಟರಿ ಕೂಡ ಆರಂಭಿಸಲಿದೆ ಎನ್ನಲಾಗಿದೆ.

2024ರ ಜನವರಿಯಲ್ಲಿ ನಡೆಯಲಿರುವ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗದಲ್ಲಿ ಈ ಕುರಿತು ಅಂತಿಮ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಟೆಸ್ಲಾ ಕಂಪನಿಯು ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್‌ ರಾಜ್ಯಗಳಲ್ಲಿ ತನ್ನ ಫ್ಯಾಕ್ಟರಿಯನ್ನು ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡಿದೆ. ಟೆಸ್ಲಾ ಕಂಪನಿಯು ಆರಂಭದಲ್ಲಿ 2 ಶತಕೋಟಿ ಡಾಲರ್ ಹೂಡಿಕೆ ಮಾಡಲಾಗಿದೆ. ವಾಹನ ಬಿಡಿಭಾಗಗಳ ಖರೀದಿಗಾಗಿ 15 ಶತಕೋಟಿ ಡಾಲರ್‌ಗೆ ಹೆಚ್ಚಿಸಲು ನೋಡುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಯೋಜನೆಗಳು ಇನ್ನೂ ಅಂತಿಮಗೊಂಡಿಲ್ಲ ಮತ್ತು ಭವಿಷ್ಯದಲ್ಲಿ ಈಗಿರುವ ಯೋಜನೆಗಳಲ್ಲಿ ಬದಲಾಗಬಹುದು ಎಂದು ಮೂಲಗಳು ತಿಳಿಸಿವೆ. ಎಲಾನ್ ಮಸ್ಕ್ ಅವರ ಕಂಪನಿಯು ಮಹಾರಾಷ್ಟ್ರ ಮತ್ತು ತಮಿಳುನಾಡು ಈಗಾಗಲೇ ಎಲೆಕ್ಟ್ರಿಕ್ ವಾಹನಗಳು ಮತ್ತು ರಫ್ತಿಗಾಗಿ ಸುಸ್ಥಾಪಿತ ಪರಿಸರ ವ್ಯವಸ್ಥೆಯನ್ನು ಹೊಂದಿರುವುದರಿಂದ ಅವುಗಳ ಮೇಲೆ ಕಣ್ಣಿಟ್ಟಿದೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತ್ವರಿತ ಹೆಚ್ಚಳದಿಂದಾಗಿ ಗುಜರಾತ್ ಅನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಆಟೋ ಬಿಡಿ ಭಾಗಗಳು ಮತ್ತು ಇವಿಗಳ ಆಮದು ಹೊರತಾಗಿಯೂ ಟೆಸ್ಲಾ ಕಂಪನಿಯು ವೆಚ್ಚವನ್ನು ಕಡಿತ ಮಾಡುವುದಕ್ಕಾಗಿ ಬ್ಯಾಟರಿಗಳನ್ನು ದೇಶೀಯವಾಗಿ ತಯಾರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಸದ್ಯಕ್ಕೆ ಚೀನಾ, ಅಮೆರಿಕ, ಜರ್ಮನಿ ದೇಶಗಳಲ್ಲಿ ಟೆಸ್ಲಾ ಫ್ಯಾಕ್ಟರಿಗಳನ್ನು ಹೊಂದಿದೆ. ಈ ಹೊತ್ತಿನಲ್ಲಿ ಭಾರತದಲ್ಲಿ ಮೋದಿ ಸರ್ಕಾರವು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿರುವುದರಿಂದ ಅದರ ಲಾಭವನ್ನು ಟೆಸ್ಲಾ ಕಂಪನಿ ಬಾಚಿಕೊಳ್ಳಲು ಮುಂದಾಗಿದೆ.

ನಿರಂತರ ಪ್ರೋತ್ಸಾಹ, ಉತ್ತೇಜನದ ಹೊರತಾಗಿಯೂ ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್‌ಗಳ ಮಾರುಕಟ್ಟೆ ಇನ್ನೂ ಭಾರೀ ಏರಿಕೆಯನ್ನು ಕಂಡಿಲ್ಲ. ಕಳೆದ ವರ್ಷ ಭಾರತದಲ್ಲಿ ಮಾರಾಟದ ಒಟ್ಟು ಪ್ಯಾಸೆಂಜರ್‌ ವೆಹಿಕಲ್‌ಗಳಲ್ಲಿ ಶೇ. 1.3 ಅಷ್ಟೇ ವಿದ್ಯುತ್ ಚಾಲಿತ ವಾಹನಗಳಾಗಿವೆ.

ಈ ಸುದ್ದಿಯನ್ನೂ ಓದಿ: Tesla cars : ಭಾರತದಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಟೆಸ್ಲಾ ಮಾತುಕತೆ ಶುರು, 20 ಲಕ್ಷ ರೂ.ಗೆ ಕಾರು

Exit mobile version