ನವದೆಹಲಿ: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿರುವ ಟ್ವಿಟರ್ (Twitter) ಖರೀದಿಸಿದ ಮೇಲೆ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಈಗ ಅವರು, ಟ್ವಿಟರ್ ಖಾತೆದಾರರಿಗೆ ತಮ್ಮ ಅಕೌಂಟ್‌ಗಳ ಮೂಲಕ ಹಣ ಸಂಗ್ರಹಕ್ಕೂ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ಟ್ವಿಟರ್ ಬಳಕೆದಾರರಿಗೆ ಶುಲ್ಕ ವಿಧಿಸಲು ಅನುವು ಮಾಡಿಕೊಡಲಾಗುತ್ತದೆ ಎಂದು ಎಲಾನ್ ಮಸ್ಕ್ ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಮೊದಲ 12 ತಿಂಗಳುಗಳವರೆಗೆ ಬಳಕೆದಾರರು ಚಂದಾದಾರಿಕೆಯಿಂದ ಗಳಿಸುವ ಯಾವುದೇ ಹಣವನ್ನು ಟ್ವಿಟರ್. ಇದರರ್ಥ, ಅಪ್ಲಿಕೇಶನ್ ಸ್ಟೋರ್ ಶುಲ್ಕವನ್ನು ಲೆಕ್ಕಹಾಕಿದ ನಂತರ, ಬಳಕೆದಾರರು ತಮ್ಮ ಚಂದಾದಾರಿಕೆಯ ಆದಾಯದ ಕನಿಷ್ಠ ಶೇ.70ರಷ್ಟು ಇಟ್ಟುಕೊಳ್ಳುತ್ತಾರೆ. ಹೀಗಿದ್ದೂ ತಾಂತ್ರಿಕ ಅಂಶಗಳ ಬಗ್ಗೆ ಮಸ್ಕ್ ಅವರು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.
ಜನರು ತಮ್ಮ ಟ್ವಿಟ್ಟರ್ ಖಾತೆಗಳಿಂದ ಹಣವನ್ನು ಗಳಿಸಲು ಸಾಧ್ಯವಾಗುವಂತೆ ಮಾಡುವ ಪ್ರಯತ್ನದಲ್ಲಿ ಸಬ್‌ಸ್ಟಾಕ್‌ನೊಂದಿಗೆ (Substack) ಸ್ಪರ್ಧೆಗೆ ಇಳಿಯಲಿದ್ದಾರೆ. ಸಬ್‌ಸ್ಟಾಕ್ ಒಂದು ನ್ಯೂಸ್‌ಲೆಟರ್ ಕಂಪನಿಯಾಗಿದ್ದು, ಇತ್ತೀಚೆಗಷ್ಟೇ ಅದು ಹಣ ಗಳಿಸುವ ಈ ವಿಶಿಷ್ಟ ಅವಕಾಶವನ್ನು ತನ್ನ ಬಳಕೆದಾರರಿಗೆ ನೀಡಿದೆ. ಇದು ಸಾರ್ವಜನಿಕ ಫೀಡ್‌ನಲ್ಲಿ ಪೋಸ್ಟ್ ಮಾಡಲು ಬಳಕೆದಾರರನ್ನು ಅನುಮತಿಸುತ್ತದೆ. ಈ ವಾರದ ಆರಂಭದಲ್ಲಿ ಟ್ವಿಟ್ಟರ್ ಲೈಕ್‌ಗಳು, ಪ್ರತ್ಯುತ್ತರಗಳು ಮತ್ತು ರೀಟ್ವೀಟ್‌ಗಳಲ್ಲಿ ಸಬ್‌ಸ್ಟಾಕ್ ಲಿಂಕ್‌ಗಳಿದ್ದರೆ ಅಂತಹ ಖಾತೆಗಳನ್ನು ಟ್ವೀಟ್‌ಗಳನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿದೆ.
ಇದನ್ನೂ ಓದಿ: Elon Musk: ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ, ಟ್ವಿಟರ್ ನೌಕರರನ್ನು ಜೈಲಿಗೆ ಕಳುಹಿಸಲು ಇಷ್ಟವಿಲ್ಲ: ಎಲಾನ್ ಮಸ್ಕ್
ಮಸ್ಕ್ ಅವರ ಈ ಹಣ ಗಳಿಸುವ ಐಡಿಯಾದಿಂದ ಟ್ವಿಟರ್‌ಗೆ ಕಂಟೆಂಟ್ ಕ್ರಿಯೇಟರ್ ಹೆಚ್ಚು ಜನರು ಬರಲು ಕಾರಣವಾಗಿಲಿದೆ. ಇಲ್ಲವೇ ಅವರು ವೇದಿಕೆಯನ್ನು ಬಿಟ್ಟು ಹೋಗದಂತೆ ತಡೆಯಲು ಸಾಧ್ಯವಾಗಲಿದೆ. ಟ್ವಿಟರ್ ಮೊದಲ 12 ತಿಂಗಳವರೆಗೆ ಬಳಕೆದಾರರ ಚಂದಾದಾರಿಕೆ ಆದಾಯದ ಕಡಿತವನ್ನು ತೆಗೆದುಕೊಳ್ಳುವುದಿಲ್ಲವಾದರೂ, ಭವಿಷ್ಯದಲ್ಲಿ ಹೆಚ್ಚಿನ ಹಣವನ್ನು ಗಳಿಸುವ ಕ್ರಮವಾಗಿರಬಹುದು.
ಸೂಪರ್ ಆ್ಯಪ್ ಆಗಲಿದೆಯೇ ಟ್ವಿಟರ್?
ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್ ಹೊಸ ಕಾರ್ಪೊರೇಟ್ ಕಂಪನಿ X ಕಾರ್ಪ್ ಜತೆಗೆ ವಿಲೀನವಾಗಿ ಸ್ವತಂತ್ರ ಕಂಪನಿಯಾಗಲಿದೆಯೇ? ಚೀನಾದ ವಿ ಚಾಟ್ ಮಾದರಿಯಲ್ಲಿ ಸೂಪರ್ ಆ್ಯಪ್ ಆಗಲಿದೆಯೇ ಎಂಬ ವದಂತಿಗಳು ಹರಡಿವೆ. ಇದಕ್ಕೆ ಕಾರಣ ಏನೆಂದರೆ ಟ್ವಿಟರ್‌ನ ಸಿಇಒ ಎಲಾನ್ ಮಸ್ಕ್ ಅವರು ಮಂಗಳವಾರ ಮಾಡಿರುವ X ಎಂಬ ನಿಗೂಢ ಟ್ವೀಟ್! ಇದರ ಹಿಂದಿನ ಸಂದೇಶ ಏನು? ಎಂಬ ಚರ್ಚೆ ಈಗ ಜೋರಾಗಿ ಜಾಲತಾಣದಲ್ಲಿ ನಡೆಯುತ್ತಿದೆ.
ಚೀನಾದ ಟೆನ್ಸೆಂಟ್ ಹೋಲ್ಡಿಂಗ್ಸ್‌ನ ವಿಚಾಟ್ (WeChat) ಸೂಪರ್ ಆ್ಯಪ್‌ನಲ್ಲಿ ಎಲ್ಲ ಬಗೆಯ ಟಿಕೆಟ್ ಬುಕಿಂಗ್, ಬಿಲ್ ಪಾವತಿ, ಪೇಮೆಂಟ್‌ಗಳನ್ನು ಮಾಡಬಹುದು. ಟ್ವಿಟರ್ ಕೂಡ ಅಂಥ ಸೂಪರ್ ಆ್ಯಪ್ ಆಗಿ ಪರಿವರ್ತನೆಯಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
ಮೊಕದ್ದಮೆಯೊಂದರಲ್ಲಿ ಕ್ಯಾಲಿಫೋರ್ನಿಯಾದ ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ, X ಕಾರ್ಪ್ ಜತೆ ವಿಲೀನವಾದ ಬಳಿಕ ಟ್ವಿಟರ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಹೀಗಿದ್ದರೂ, ವಿಲೀನದ ಸ್ವರೂಪ ಇನ್ನೂ ಸ್ಪಷ್ಟತೆ ಪಡೆದಿಲ್ಲ. ಎಲಾನ್ ಮಸ್ಕ್ ಅವರು ಕಳೆದ ವರ್ಷ 44 ಶತಕೋಟಿ ಡಾಲರ್‌ಗಳ ಮೆಗಾ ಡೀಲ್‌ನಲ್ಲಿ ಟ್ವಿಟರ್ ಅನ್ನು ಖರೀದಿಸಿದ್ದರು. (ಅಂದಾಜು 3.36 ಲಕ್ಷ ಕೋಟಿ ರೂ.)
ಟ್ವಿಟರ್ ಅನ್ನು ಖರೀದಿಸಿದ ಬಳಿಕ X ಕಂಪನಿಯನ್ನು ಸೃಷ್ಟಿಸಲಾಗುವುದು. ಟ್ವಿಟರ್ ಖರೀದಿಯ ಉದ್ದೇಶವೂ ಅದುವೇ ಆಗಿದೆ ಎಂದು ಎಲಾನ್ ಮಸ್ಕ್ ಈ ಹಿಂದೆ ಹೇಳಿದ್ದರು. X ಎಂದರೆ everything app ಆಗಿರಬಹುದು ಎಂದು ವರದಿಯಾಗಿದೆ. ಎಲಾನ್ ಮಸ್ಕ್ ಅವರು ಎಲೆಕ್ಟ್ರಿಕ್ ಕಾರಿನಿಂದ ಬಾಹ್ಯಾಕಾಶ ಉದ್ದಿಮೆ ತನಕ ಹಲವು ವಲಯಗಳಲ್ಲಿ ಬಿಸಿನೆಸ್ ನಡೆಸುತ್ತಿದ್ದಾರೆ. ಹೀಗಾಗಿ ಸೂಪರ್ ಆ್ಯಪ್ ಅವರ ಉದ್ದಿಮೆ ಸಾಮ್ರಾಜ್ಯಕ್ಕೂ ಅನುಕೂಲಕಾರಿ ಎನ್ನಲಾಗುತ್ತಿದೆ.