ಹೊಸದಿಲ್ಲಿ: ಮೊಬೈಲ್ ಬಳಕೆದಾರರು (smartphone users) ಇನ್ನು ಮುಂದೆ ಒಂದು ಪೈಸೆ ಡೇಟಾ ಪ್ಯಾಕೇಜೂ ಬಳಸದೆ, ಇಂಟರ್ನೆಟ್ (internet connection) ಸಂಪರ್ಕವಿಲ್ಲದೇ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು! ಹೌದು, ಡೈರೆಕ್ಟ್-ಟು-ಮೊಬೈಲ್ (direct to mobile – D2M technology) ಎಂಬ ಇಂಥದೊಂದು ಹೊಸ ತಂತ್ರಜ್ಞಾನವನ್ನು ಭಾರತ ಸರ್ಕಾರ ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿದೆ.
ದೂರಸಂಪರ್ಕ ಇಲಾಖೆ (DoT), ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಮತ್ತು ಐಐಟಿ ಕಾನ್ಪುರ್ (IIT) ಈ ಕಾರ್ಯದಲ್ಲಿ ನಿರತವಾಗಿವೆ. ಕಳೆದ ವರ್ಷ ಜೂನ್ 1ರಂದು, IIT ಕಾನ್ಪುರ್, ಪ್ರಸಾರ ಭಾರತಿ ಮತ್ತು ಟೆಲಿಕಮ್ಯುನಿಕೇಶನ್ಸ್ ಡೆವಲಪ್‌ಮೆಂಟ್ ಸೊಸೈಟಿ ಸಹಯೋಗದೊಂದಿಗೆ D2M ಬ್ರಾಡ್‌ಕಾಸ್ಟಿಂಗ್ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿತು. ಆ ಶ್ವೇತಪತ್ರದಲ್ಲಿ, D2M ಅನ್ನು ಮುಂದಿನ ತಲೆಮಾರಿನ ಪ್ರಸಾರದ (ನೆಕ್ಸ್ಟ್‌ಜೆನ್ ಬ್ರಾಡ್‌ಕಾಸ್ಟ್- NGB) ಒಂದು ಭಾಗವೆಂದು ಹೆಸರಿಸಲಾಗಿದೆ. ಈಗಾಗಲೇ ಇರುವ ಅನೇಕ ತಂತ್ರಜ್ಞಾನಗಳನ್ನು ಸಂಯೋಜಿಸಿ ಗರಿಷ್ಠ ಪ್ರಯೋಜನ ಪಡೆಯುವುದು ಇದರ ಉದ್ದೇಶ.
ಇಂದು ದೇಶದಲ್ಲಿ 80 ಕೋಟಿಗಿಂತಲೂ ಹೆಚ್ಚು ಮೊಬೈಲ್ ಬಳಕೆದಾರರಿದ್ದಾರೆ. ಇವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಇಂದು ಸುದ್ದಿ ತಿಳಿಯಲು ಟಿವಿ ಲೈವ್ (live tv programs) ಕಾರ್ಯಕ್ರಮಗಳನ್ನು ಮೊಬೈಲ್‌ನಲ್ಲೇ ವೀಕ್ಷಿಸುತ್ತಾರೆ. ಈ ಕಾರ್ಯಕ್ರಮಗಳು ಅಂತರ್ಜಾಲದ ಅಗತ್ಯವಿಲ್ಲದೇ ಲಭ್ಯವಾಗಬೇಕು, ಶೈಕ್ಷಣಿಕ (education) ಮತ್ತು ಜ್ಞಾನಾರ್ಜನೆಯ (knowledge) ಉದ್ದೇಶದ ಕಾರ್ಯಕ್ರಮಗಳೂ ಇದರಲ್ಲೇ ಜನತೆಗೆ ಸಿಗಬೇಕು, ತುರ್ತು ಎಚ್ಚರಿಕೆ ಸಂದೇಶಗಳೂ ಈ ತಂತ್ರಜ್ಞಾನದ ಮೂಲಕ ಪ್ರಸಾರವಾಗಬೇಕು ಎಂಬ ಗುರಿಯನ್ನು ಸರ್ಕಾರ ಹೊಂದಿದೆ.
ಆದರೆ ಈ ಉಪಕ್ರಮಕ್ಕೆ ಟೆಲಿಕಾಂ ಆಪರೇಟರ್‌ಗಳು, ಇಂಟರ್‌ನೆಟ್ ಕಂಪನಿಗಳ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿದುಬಂದಿಲ್ಲ. ಈ ಈ ಪ್ರಸ್ತಾಪವನ್ನು ಅವರು ವಿರೋಧಿಸುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಇದು ನೇರವಾಗಿ ಅವರ ಡೇಟಾ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಡೈರೆಕ್ಟ್-ಟು-ಮೊಬೈಲ್ (D2M) ತಂತ್ರಜ್ಞಾನ ಎಂದರೇನು?
D2M ಹಿಂದಿನ ತಂತ್ರಜ್ಞಾನ FM ರೇಡಿಯೊದಂತೆಯೇ ಇರುತ್ತದೆ. ಅಲ್ಲಿ ಸಾಧನದೊಳಗಿನ ರಿಸೀವರ್ ವಿಭಿನ್ನ ರೇಡಿಯೊ ಕಂಪನಾಂಕಗಳನ್ನು (radio frequency) ಹಿಡಿಯುತ್ತದೆ. ಈ ಹೊಸ ಯುಗದ ತಂತ್ರಜ್ಞಾನವು ಸ್ಥಳೀಯ ಡಿಜಿಟಲ್ ಟಿವಿ ಸಿಗ್ನಲ್‌ಗಳನ್ನು ಸೆರೆಹಿಡಿಯುತ್ತದೆ. D2M ಅನ್ನು ಬಳಸಿ ಲೈವ್ ಕ್ರೀಡಾ ಪಂದ್ಯಗಳು, ಮಲ್ಟಿಮೀಡಿಯಾ ಪ್ಯಾಕೇಜ್‌ಗಳನ್ನು ಇಂಟರ್ನೆಟ್ ಬಳಸದೆ ನೇರವಾಗಿ ಫೋನ್‌ಗಳಿಗೆ ಸ್ಟ್ರೀಮ್ ಮಾಡಬಹುದು.
ಇದು ಸ್ವದೇಶಿ ʼಮೇಡ್ ಇನ್ ಇಂಡಿಯಾ’ ತಂತ್ರಜ್ಞಾನ. ಮತ್ತು ವಿಶ್ವದಲ್ಲೇ ಮೊದಲನೆಯದು. D2M ಪ್ರಸಾರದಲ್ಲಿ, ವಿಶೇಷವಾಗಿ ವಿಡಿಯೋ ಪ್ರಸಾರದಲ್ಲಿ ಕ್ರಾಂತಿ ಮಾಡಲಿದೆ. ಗ್ರಾಹಕರು ಇಂದು ಹೆಚ್ಚಾಗಿ ತಮ್ಮ ಫೋನ್‌ಗಳಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಾರೆ. D2M ತಂತ್ರಜ್ಞಾನದಲ್ಲಿ ನೀವು ಡೇಟಾ ಪ್ಯಾಕ್‌ಗೆ ಹಣ ತೆರದೇ ವೀಡಿಯೊಗಳನ್ನು ನೋಡಲು ಸಾಧ್ಯ ಎಂದು ಸಾಂಖ್ಯ ಲ್ಯಾಬ್ಸ್‌ನ ಸಿಇಒ ಪರಾಗ್ ನಾಯಕ್ ತಿಳಿಸಿದ್ದಾರೆ.
ಬ್ಯಾಂಡ್ 526-582 MHz ಅನ್ನು ಮೊಬೈಲ್ ಬ್ರಾಡ್‌ಕಾಸ್ಟ್ ಸೇವೆಗಳೊಂದಿಗೆ ಸಮನ್ವಯ ಮಾಡಲು ಚಿಂತಿಸಲಾಗಿದೆ. ಐಐಟಿ ಕಾನ್ಪುರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಡಿಒಟಿ ಕಾರ್ಯದರ್ಶಿ ಕೆ. ರಾಜಾರಾಮನ್, ಈ ಬ್ಯಾಂಡ್ ಅನ್ನು ಅಧ್ಯಯನ ಮಾಡಲು ಡಿಒಟಿ ಸಮಿತಿಯನ್ನು ರಚಿಸಿದೆ ಎಂದಿದ್ದಾರೆ. ಈಗ ಈ ಬ್ಯಾಂಡ್ 526-582 MHz ಅನ್ನು ಪ್ರಸಾರ ಭಾರತಿ (DD) ಬಳಸುತ್ತಿದೆ. ಬ್ಯಾಂಡ್‌ನಲ್ಲಿ ಅನೇಕ ಅನಲಾಗ್, ಡಿಜಿಟಲ್ ರೆಡಿ ಮತ್ತು ಡಿಜಿಟಲ್ ಟೆರೆಸ್ಟ್ರಿಯಲ್ ಟಿವಿ ಟ್ರಾನ್ಸ್‌ಮಿಟರ್‌ಗಳು ಕಾರ್ಯನಿರ್ವಹಿಸುತ್ತಿವೆ.
ಈ ತಂತ್ರಜ್ಞಾನದ ಅವಶ್ಯಕತೆ ಏನು?
ವಿಡಿಯೋ ವೀಕ್ಷಣೆ, ಕಾರ್ಯಕ್ರಮಗಳ ವೀಕ್ಷಣೆ ಟಿವಿಗಳಿಂದ ಸ್ಮಾರ್ಟ್‌ಫೋನ್‌ಗಳಿಗೆ ವರ್ಗಾವಣೆಯಾಗುತ್ತಿದೆ. ಇಂದು ಭಾರತದಲ್ಲಿ ಮೊಬೈಲ್ ಡೇಟಾ ನಿರ್ವಹಣೆ ಅತೀ ಪ್ರಮುಖ ಸಂಗತಿ. ಮೊಬೈಲ್ ಫೋನ್‌ಗಳಿಗೆ ನೇರ ಪ್ರಸಾರದ ಸಾಮರ್ಥ್ಯ ಹೊಂದಿದವರು ಈ ವಲಯದಲ್ಲಿ ಕಿಂಗ್ ಆಗುತ್ತಾರೆ. IIT-ಕಾನ್ಪುರದ ಅಧ್ಯಯನದ ಪ್ರಕಾರ, ಈ ಪ್ರಸಾರ ಪಡೆಯಲು ಸಮರ್ಥವಾದ ಸ್ಮಾರ್ಟ್‌ಫೋನ್‌ಗಳು ಬಹು ಉತ್ತಮ ಗುಣಮಟ್ಟದ ವೀಡಿಯೊ/ಆಡಿಯೋ ಸೇವೆಗಳನ್ನು ಸ್ಟ್ರೀಮ್ ಮಾಡಿಕೊಳ್ಳಬಹುದು. ಮೌಲ್ಯಯುತವಾದ ತರಂಗಾಂತರವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬಹುದು. ಇದು ಸೆಲ್ಯುಲಾರ್ ನೆಟ್‌ವರ್ಕ್‌ಗಳ ಮೇಲಿನ ಹೊರೆ ಕಡಿಮೆ ಮಾಡಲಿದೆ.
ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ಗಳ ಬಳಕೆಯೊಂದಿಗೆ, ನಕಲಿ ಸುದ್ದಿ ಮತ್ತು ನಕಲಿ ವೈರಲ್ ಸಂಗತಿಗಳ ಪ್ರಸಾರವೂ ಸರ್ಕಾರಗಳಿಗೆ ವಿವಿಧ ರೀತಿಯ ಸವಾಲುಗಳನ್ನು ಒಡ್ಡಿದೆ. ಕೋವಿಡ್ ಲಾಕ್‌ಡೌನ್‌ನಂಥ ತುರ್ತುಸ್ಥಿತಿಯ ಸಮಯದಲ್ಲಿ, ರಾಷ್ಟ್ರೀಯ ಪ್ರಾಮುಖ್ಯತೆಯ ಬಿಕ್ಕಟ್ಟುಗಳು, ನೈಸರ್ಗಿಕ ವಿಕೋಪಗಳು ಮತ್ತಿತರ ಸಂದರ್ಭಗಳಲ್ಲಿ ಪ್ರಸಾರ ಮಾಧ್ಯಮದ ಪ್ರಾಮುಖ್ಯತೆ ಅರ್ಥವಾಗುತ್ತದೆ. ಆದರೆ ಸರ್ಕಾರದ ಕಡೆಯಿಂದ ಇದನ್ನು ಉನ್ನತ ವಿಶ್ವಾಸಾರ್ಹ ಮಾದರಿಯಲ್ಲಿ ರೂಪಿಸಬಹುದು.
D2M ಸಾಮೂಹಿಕ ಬಳಕೆ ಹೇಗೆ?
ಲಕ್ಷಾಂತರ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಸರ್ಕಾರದಿಂದ ಪ್ರಸಾರ ಮಾಡುವ ಸಾಮರ್ಥ್ಯವು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕ. IIT-ಕಾನ್ಪುರ್ ಬಿಡುಗಡೆ ಮಾಡಿದ ಶ್ವೇತಪತ್ರದ ಪ್ರಕಾರ, D2M ಅನ್ನು ಸಾಮೂಹಿಕ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿವಿಧ ಮಾರ್ಗಗಳನ್ನು ಸೂಚಿಸಲಾಗಿದೆ. ಅವು ಹೀಗಿವೆ:
- ತುರ್ತು ಎಚ್ಚರಿಕೆಗಳನ್ನು ನೇರವಾಗಿ, ವಿಶ್ವಾಸಾರ್ಹವಾಗಿ ಮತ್ತು ಇಂಟರ್ನೆಟ್ ನೆಟ್‌ವರ್ಕ್‌ಗಳ ಮೇಲೆ ಅವಲಂಬನೆ ಇಲ್ಲದೆ ಪ್ರಸಾರ ಮಾಡಬಹುದು.
- ವಿಪತ್ತು ನಿರ್ವಹಣೆಯ ಆಡಿಯೋ ವಿಷಯವನ್ನು ನೇರವಾಗಿ ಮತ್ತು ಅಧಿಕೃತವಾಗಿ ಉದ್ದೇಶಿತ ರೀತಿಯಲ್ಲಿ ವಿತರಿಸಲಾಗುತ್ತದೆ.
- ಉಪಗ್ರಹ ವೈಫಲ್ಯಗಳ ಸಂದರ್ಭದಲ್ಲಿ ಅಥವಾ ರಾಷ್ಟ್ರೀಯ ಪ್ರಾಮುಖ್ಯತೆಯ ಸಾರ್ವಜನಿಕ ವಿಷಯದ ಪ್ರಸಾರಕ್ಕಾಗಿ ಇದು ಲಭ್ಯವಿರುತ್ತದೆ.
- ರೇಡಿಯೋ ಸೇವೆಗಳನ್ನು ಸಾಮಾನ್ಯ ಹಂಚಿಕೆಯ ಪ್ರಸಾರ ಮೂಲಸೌಕರ್ಯಕ್ಕೆ ಪರಿವರ್ತಿಸುವ ಮೂಲಕ ಅಮೂಲ್ಯವಾದ ಸ್ಪೆಕ್ಟ್ರಮ್, ಭೂಮಿ, ಮಾನವಶಕ್ತಿ ಮತ್ತು ಇತರ ಸಾರ್ವಜನಿಕ ಸಂಪನ್ಮೂಲಗಳನ್ನು ಸಂರಕ್ಷಿಸಲಾಗಿದೆ, ಅಲ್ಲಿ ಆಡಿಯೋ ಮತ್ತು ವಿಡಿಯೋ ಪ್ರಸಾರಗಳನ್ನು ಸ್ಮಾರ್ಟ್‌ಫೋನ್‌ಗಳು ಅಥವಾ ಸ್ಮಾರ್ಟ್ ಸಾಧನಗಳಲ್ಲಿ ಒಂದೇ ಇಂಟರ್‌ಫೇಸ್ ಮೂಲಕ ಸ್ವೀಕರಿಸಬಹುದು.
ಇದನ್ನೂ ಓದಿ: Express Highway : ಹೆದ್ದಾರಿ ಪ್ರಯಾಣಿಕರ ಸುರಕ್ಷತೆಗೆ ಬಂದಿದೆ ಹೊಸ ಮೊಬೈಲ್ ಆ್ಯಪ್; ಏನೇನಿದೆ ಅದರಲ್ಲಿ?
ಟೆಲಿಕಾಂ ಆಪರೇಟರ್‌ಗಳ ಆತಂಕ
D2M ತಂತ್ರಜ್ಞಾನ ಬಂದರೆ ತಮಗೆ ನಷ್ಟವಾಗಬಹುದು ಎಂಬುದು ಟೆಲಿಕಾಂ ಆಪರೇಟ್‌ಗಳ ಆತಂಕ. ಯಾಕೆಂದರೆ ಇದು ಬಂದರೆ ಬಹಳಷ್ಟು ಗ್ರಾಹಕರಿಗೆ ಖಾಸಗಿ ಡೇಟಾವೇ ಬೇಕಾಗದು. ಹಾಗೆಯೇ ಲೈವ್ ಟಿವಿಯನ್ನು ಪ್ರವೇಶಿಸಬಹುದು. ಇದು ಕಂಟೆಂಟ್ ವಿತರಣೆದಾರರಿಗೆ ಅನುಕೂಲ. ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ತಲುಪಬಹುದು.
ಸವಾಲುಗಳು
DoT ಪ್ರಸ್ತುತ D2M ತಂತ್ರಜ್ಞಾನದ ಕಾರ್ಯಸಾಧ್ಯತೆಯ ಅಧ್ಯಯನ ನಡೆಸುತ್ತಿದೆ. ಇದು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. D2M ತಂತ್ರಜ್ಞಾನವನ್ನು ವ್ಯಾಪಕ ಪ್ರಮಾಣದಲ್ಲಿ ಪ್ರಾರಂಭಿಸುವಲ್ಲಿ ದೂರಸಂಪರ್ಕ ಸೇರಿದಂತೆ ವಿವಿಧ ಭಾಗೀದಾರರನ್ನು ಒಪ್ಪಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲು. ಸರ್ಕಾರವು ಅವರಿಗೆ ಆಕರ್ಷಕವಾದ ಯೋಜನೆಗಳನ್ನು, ತಂತ್ರಜ್ಞಾನದ ಅಭಿವೃದ್ಧಿಗಾಗಿ ನೀತಿಗಳನ್ನು ಅಭಿವೃದ್ಧಿಪಡಿಸಬೇಕಿದೆ. ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಹರಡಲು, ಮೂಲಸೌಕರ್ಯ ಸವಾಲುಗಳನ್ನು ಸಹ ನಿವಾರಿಸಬೇಕು. ದೇಶದ ಮೂಲೆ ಮೂಲೆಗೆ ಈ ತಂತ್ರಜ್ಞಾನ ಲಭ್ಯವಾಗುವಂತೆ ಮಾಡುವುದು ಸುಲಭದ ಮಾತಲ್ಲ.
ಇದನ್ನೂ ಓದಿ: Mobile Battery Tips : ನಿಮ್ಮ ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರಬೇಕೆ? ಹೀಗೆ ಮಾಡಿ