Site icon Vistara News

Twitter | ಎಲಾನ್ ಮಸ್ಕ್ ಟ್ವಿಟರ್ ಸಿಇಒ ಪರಾಗ್ ಅಗ್ರವಾಲ್‌ ಅವರನ್ನು ಕೆಲಸದಿಂದ ಕಿತ್ತು ಹಾಕಿದ್ದೇಕೆ?

Twitter

ಬೆಂಗಳೂರು: ಜಗತ್ತಿನ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಅವರು ಅಧಿಕೃತವಾಗಿ ಟ್ವಿಟರ್ (Twitter) ತಮ್ಮ ಸ್ವಾಧೀನಕ್ಕೆ ಪಡೆದುಕೊಂಡ ನಂತರ, ಟ್ವಿಟರ್ ಸಿಇಒ ಪರಾಗ್ ಅಗ್ರವಾಲ್ ಅವರನ್ನು ಕೆಲಸದಿಂದ ಕಿತ್ತು ಹಾಕಿದರು. ಇದು ಅವರು ಮಾಡಿದ ಮೊದಲ ಕೆಲಸ. ಆದರೆ, ಸಿಇಒ ಅವರನ್ನು ಎಲಾನ್ ಮಸ್ಕ್ ಏಕೆ ಮನೆಗೆ ಕಳುಹಿಸಿದ್ದು? ಇದಕ್ಕೆ ಕಾರಣಗಳೇನು ಎಂಬ ಬಗ್ಗೆ ಯಾರ ಬಳಿಯೂ ಉತ್ತರವಿಲ್ಲ. ಆದಾಗ್ಯೂ ಈ ಹಿಂದೆ ಎಲಾನ್ ಮಸ್ಕ್ ಮತ್ತು ಪರಾಗ್ ಅಗ್ರವಾಲ್ ನಡುವೆ ನಡೆದ ಮಾತಿನ ಚಕಮಕಿ ಇದಕ್ಕೆ ಕಾರಣವಾಗಿರಬಹುದಾದ ಸಾಧ್ಯತೆಗಳಿವೆ.

ಟ್ವಿಟರ್ ವೇದಿಕೆಯನ್ನು ಇನ್ನೂ ಹೇಗೆ ಉತ್ತಮಗೊಳಿಸಬಹುದು ಎಂಬ ಚರ್ಚೆಯೇ ಇಬ್ಬರ ನಡುವಿನ ಮುನಿಸಿಗೆ ಕಾರಣವಾಗಿರುವ ಸಾಧ್ಯತೆಗಳಿವೆ. ಏಪ್ರಿಲ್ ತಿಂಗಳಲ್ಲಿ ಎಲಾನ್ ಮಸ್ಕ್ ಅವರು ಟ್ವೀಟ್‌ವೊಂದನ್ನು ಮಾಡಿ, Most of these “top” accounts tweet rarely and post very little content. Is Twitter dying? ಎಂದು ಪ್ರಶ್ನಿಸಿದ್ದರು. ಅಂದರೆ, ಈ ಟಾಪ್ 10 ಅಕೌಂಟ್‌ ಹೋಲ್ಡರ್ಸ್ ವಿರಳವಾಗಿ ಟ್ವೀಟ್ ಮಾಡುತ್ತಾರೆ ಇಲ್ಲವೇ ಕಂಟೆಂಟ್ ತುಂಬಾ ಕಡಿಮೆ ಇರುತ್ತದೆ. ಇದು ಟ್ವಿಟರ್ ಅವಸಾನವನ್ನು ಸೂಚಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದರು. ಈ ಒಂದು ಟ್ವೀಟ್ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.

ಎಲಾನ್ ಮಸ್ಕ್ ಅವರು ಮಾಡಿದ ಟ್ವೀಟ್‌ಗೆ ಸಿಇಒ ಆಗಿದ್ದ ಪರಾಗ್ ಅಗ್ರವಾಲ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಈ ಬಗ್ಗೆ ಮಸ್ಕ್ ಅವರಿಗೆ ಸಂದೇಶ ಕಳುಹಿಸಿ, ಟ್ವಿಟರ್‌ನ ಆಂತರಿಕ ಸಮಸ್ಯೆಯನ್ನು ಮತ್ತು ಅದು ಅವರ ಕೆಲಸದ ಸಾಮರ್ಥ್ಯವನ್ನು ಹೇಗೆ ಘಾಸಿಗೊಳಿಸುತ್ತಿದೆ ಎಂಬುದರ ಕುರಿತು ಒಂದು ದೃಷ್ಟಿಕೋನವನ್ನು ನೀಡಲು ಬಯಸುತ್ತೇನೆ ಎಂದು ತಿಳಿಸಿದ್ದರು.

ನೀವು ಟ್ವೀಟ್ ಮಾಡಲು ಮುಕ್ತರಾಗಿದ್ದೀರಿ. ಹಾಗಂತ ಅದು ಅವಸಾನವಾಗುತ್ತಿದೆ ಅಂತ ಅರ್ಥನಾ? ಅಥವಾ ಟ್ವಿಟರ್ ಬಗ್ಗೆ ಮತ್ತೆ ಏನಾದರೂ ಇದೆಯಾ? ಆದರೆ, ನಿಮ್ಮ ಟ್ವೀಟ್ ಸದ್ಯದ ಪರಿಸ್ಥಿತಿಯಲ್ಲಿ ಟ್ವಿಟರ್‌ ವೇದಿಕೆಯನ್ನು ಇನ್ನೂ ಉತ್ತಮಗೊಳಿಸುತ್ತಿಲ್ಲ ಎಂದು ತಿಳಿಸಿದ್ದರು. ಈ ಜಟಾಪಟಿ ಹಾಗೆಯೇ ಮುಂದುವರಿಯುತು. ಹೀಗೆ ಎಲಾನ್ ಮಸ್ಕ್ ಮತ್ತು ಸಿಇಒ ಪರಾಗ್ ಅಗ್ರವಾಲ್ ನಡುವಿನ ಮುಸುಕಿನ ಗುದ್ದಾಟ ಈವರೆಗೆ ಜಾರಿಯಲ್ಲಿತ್ತು. ಅಧಿಕಾರ ತನ್ನ ಕೈ ಬರುತ್ತಿದ್ದಂತೆ ಎಲಾನ್ ಮಸ್ಕ್, ಪರಾಗ್ ಅಗ್ರವಾಲ ಅವರನ್ನು ಮನೆಗೆ ಕಳುಹಿಸಿದರು.

ಇದನ್ನೂ ಓದಿ | Twitter | ವಿಶ್ವದ ಅತ್ಯಂತ ಗೌರವಾನ್ವಿತ ಜಾಹೀರಾತು ವೇದಿಕೆಯಾಗಲಿದೆ ಟ್ವಿಟರ್: ಎಲಾನ್ ಮಸ್ಕ್

Exit mobile version