Site icon Vistara News

Explainer: ಚಾರ್‌ಧಾಮ್‌ ಯಾತ್ರೆ: ಸಾವುಗಳಿಗೆ ಕಾರಣವೇನು, ತಡೆಯುವುದು ಹೇಗೆ?

char dham yatra

ಕೇದಾರನಾಥ ದೇವಾಲಯ

ಈ ವರ್ಷದ ಚಾರ್‌ಧಾಮ್‌ ಯಾತ್ರೆ ಆರಂಭವಾಗಿದೆ. ಆದರೆ ಈ ಯಾತ್ರೆಯಲ್ಲಿ ಇದುವರೆಗೆ ಮೂವತ್ತೊಂಬತ್ತು ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಈ ವರ್ಷದ ಚತುರ್ಧಾಮ ತೀರ್ಥಯಾತ್ರೆಗೆ ಜನಸಾಗರವೇ ಹರಿದು ಬಂದಿದೆ.

ಚಾರ್‌ಧಾಮ್-‌ ಈ ಹೆಸರು ಕೇಳಿದರೆ ಭಾರತೀಯರ ಮನದಲ್ಲಿ ಪುಳಕ, ಕಣ್ಣುಗಳಲ್ಲಿ ಮಿಂಚು. ಜೀವನದಲ್ಲಿ ಒಂದು ಸಲವಾದರೂ ಈ ನಾಲ್ಕು ತಾಣಗಳನ್ನು ಏರಿಳಿದು, ದೇವಾಲಯ ದರ್ಶನ ಮಾಡಿ ಬರಬೇಕು ಅಂದುಕೊಂಡಿರುತ್ತಾರೆ ಬಹಳ ಮಂದಿ. ಆದರೆ ಈ ಚತುರ್ಧಾಮಗಳ ಯಾತ್ರೆಯಲ್ಲಿ ರಿಸ್ಕು ಕೂಡ ಇದೆ. ಅನೇಕ ಮಂದಿ ಆರೋಗ್ಯ ಬಿಗಡಾಯಿಸಿ ಮೃತಪಡುತ್ತಾರೆ. 2019ರಲ್ಲಿ ಸುಮಾರು 38 ಲಕ್ಷ ಯಾತ್ರಾರ್ಥಿಗಳು ಭಾಗವಹಿಸಿದ್ದರು. ಸುಮಾರು 90 ಯಾತ್ರಿಕರು ಸಾವನ್ನಪ್ಪಿದ್ದರು. 2017ರಲ್ಲಿ 112 ಯಾತ್ರಿಕರು ಮತ್ತು 2018ರಲ್ಲಿ 102 ಯಾತ್ರಿಕರು ಸತ್ತಿದ್ದರು.

ಕೇದಾರನಾಥ, ಬದರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ- ಈ ನಾಲ್ಕು ತಾಣಗಳು ಕೂಡ ಹಿಮಾಲಯದ ಎತ್ತರದ ಪ್ರದೇಶದಲ್ಲಿವೆ. ಯಮುನೋತ್ರಿ ಮತ್ತು ಗಂಗೋತ್ರಿಗಳು ಉತ್ತರಕಾಶಿಯಲ್ಲಿ ತೀರ್ಥಕ್ಷೇತ್ರಗಳಾಗಿವೆ, ಕೇದಾರನಾಥವು ರುದ್ರಪ್ರಯಾಗದಲ್ಲಿದೆ ಮತ್ತು ಬದರಿನಾಥವು ಚಮೋಲಿಯಲ್ಲಿದೆ. ಸಮುದ್ರ ಮಟ್ಟದಿಂದ ಗಂಗೋತ್ರಿ 3415 ಮೀಟರ್‌, ಯಮುನೋತ್ರಿ 3293 ಮೀಟರ್‌, ಕೇದಾರನಾಥ 3553 ಮೀಟರ್, 3100‌ ಮೀಟರ್‌ ಎತ್ತರದಲ್ಲಿ ಇವೆ. ಯಾತ್ರಿಕರ ಸಾವಿಗೆ ಕಾರಣವಾಗುವುದು ಈ ಹೈ ಅಲ್ಟಿಟ್ಯೂಡ್‌ ಮತ್ತು ದುರ್ಬಲ ಆರೋಗ್ಯ.

ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಪರ್ವತ ಕಾಯಿಲೆಗಳು ಈ ಸಾವುಗಳಿಗೆ ಕಾರಣ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ವೈದ್ಯಕೀಯವಾಗಿ ಅನರ್ಹವಾಗಿರುವ ಯಾತ್ರಾರ್ಥಿಗಳು ಪ್ರಯಾಣಿಸದಂತೆ ಸಲಹೆ ನೀಡಲಾಗುತ್ತಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಶುಕ್ರವಾರ ಚಾರ್‌ಧಾಮ್ ಯಾತ್ರೆಯ ಪ್ರವೇಶ ಮತ್ತು ನೋಂದಣಿ ಸೈಟ್‌ಗಳಲ್ಲಿ ಆರೋಗ್ಯ ತಪಾಸಣೆ ಪ್ರಾರಂಭಿಸಿದೆ.

ಬದರಿನಾಥ ದೇವಾಲಯ

ಹೆಚ್ಚಿನ ಎತ್ತರದ ಅಪಾಯಗಳು
ಚಾರ್‌ಧಾಮ್ ಯಾತ್ರೆಯು ಮೇ 3ರಂದು ಅಕ್ಷಯ ತೃತೀಯ ಸಂದರ್ಭದಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿ ಪೋರ್ಟಲ್‌ಗಳನ್ನು ತೆರೆಯುವುದರೊಂದಿಗೆ ಪ್ರಾರಂಭವಾಯಿತು. ಮೇ 6ರಂದು ಕೇದಾರನಾಥ ಬಾಗಿಲು ತೆರೆದರೆ, ಬದರಿನಾಥ ಮೇ 8ರಂದು ತೆರೆಯಿತು.

ಈ ನಾಲ್ಕು ಪವಿತ್ರ ಯಾತ್ರಾ ಕೇಂದ್ರಗಳು ಹಿಮಾಲಯ ಪ್ರದೇಶದಲ್ಲಿ ಎತ್ತರದಲ್ಲಿವೆ. ಯಾವುದೇ ಪರ್ವತ ಟ್ರೆಕ್ಕಿಂಗ್‌ನಲ್ಲಿ ಇರುವ ಅಪಾಯಗಳು ಇದರಲ್ಲಿಯೂ ಇರುತ್ತವೆ. ಹಿಮಾಲಯ ಪರ್ವತಗಳ ವಾತಾವರಣದಲ್ಲಿ ಕಡಿಮೆ ಆರ್ದ್ರತೆ, ಹೆಚ್ಚಿನ UV ವಿಕಿರಣ, ಕಡಿಮೆ ಗಾಳಿಯ ಒತ್ತಡ ಮತ್ತು ಕಡಿಮೆ ಆಮ್ಲಜನಕದ ಮಟ್ಟ- ಇದು ಮೈಯ ತಾಪಮಾನದಲ್ಲಿ ವೇಗದ ಕುಸಿತಕ್ಕೆ ಕಾರಣವಾಗುತ್ತದೆ. ಉತ್ತರಾಖಂಡದ ಆರೋಗ್ಯ ಇಲಾಖೆಯ ಪ್ರಕಾರ, ಇದುವರೆಗಿನ ಸಾವುಗಳಿಗೆ ಕಾರಣ ಎತ್ತರದ ಕಾಯಿಲೆ. ಸರಿಯಾದ ಮುನ್ನೆಚ್ಚರಿಕೆಗಳಿಲ್ಲದ ಯಾರಾದರೂ ಅಪಾಯಕ್ಕೆ ಒಳಗಾಗಬಹುದು. ಆದರೆ ಹೃದಯದ ಸಮಸ್ಯೆಗಳನ್ನು ಹೊಂದಿರುವವರು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

ಏನಿದು Mountain Sickness?
ಎತ್ತರದ ಕಾಯಿಲೆ (Mountain sickness), ಇದನ್ನು ಪರ್ವತದ ಕಾಯಿಲೆ ಎಂದೂ ಕರೆಯಲಾಗುತ್ತದೆ. ಇದು ಲಭ್ಯವಿರುವ ಆಕ್ಸಿಜನ್‌ ಮಟ್ಟಕ್ಕೆ ನಿಮ್ಮ ದೇಹ ಹೊಂದಿಕೊಳ್ಳದೆ ಹೋದಾಗ ಸಂಭವಿಸುವ ರೋಗಲಕ್ಷಣಗಳ ಒಂದು ಗುಂಪು. ನೀವು ಪರ್ವತದ ಎತ್ತರದ ಮಟ್ಟ ಹಾಗೂ ಆಕ್ಸಿಜನ್‌ ಮಟ್ಟಕ್ಕೆ ಹೊಂದಿಕೊಳ್ಳಲು ಅಗತ್ಯವಾದ ಸಾಕಷ್ಟು ಕಾಲದ ವಿಶ್ರಾಂತಿ ಪಡೆಯದೆ ಬೇಗಬೇಗನೆ ಪರ್ವತದ ಹೆಚ್ಚಿನ ಎತ್ತರದತ್ತ ಧಾವಿಸಿದರೆ ಹೀಗಾಗುತ್ತದೆ.

ಪರ್ವತದಲ್ಲಿ ಎತ್ತರಕ್ಕೆ ಹೋದಂತೆ ಆಕ್ಸಿಜನ್‌ ಮಟ್ಟ ಕಡಿಮೆಯಾಗುತ್ತ ಹೋಗುತ್ತದೆ. ಹೀಗಾಗಿ ಸ್ವಲ್ಪ ಎತ್ತರಕ್ಕೆ ಏರಿದ ಬಳಿಕ ಅಲ್ಲಿಗೆ ನಿಮ್ಮ ಏಹ ಒಗ್ಗಿಕೊಳ್ಳಬೇಕು. ಅಲ್ಲಿನ ಗಾಳಿಯ ಒತ್ತಡಕ್ಕೆ ನಿಮ್ಮ ದೇಹ ಒಗ್ಗಿಕೊಂಡ ಬಳಿಕ ಮುಂದೆ ಚಲಿಸಬೇಕು. ನಿಮ್ಮ ದೇಹದ ತ್ರಾಣಕ್ಕಿಂತ ಹೆಚ್ಚಿನ ಎತ್ತರಕ್ಕೆ ಪ್ರಯಾಣಿಸಿದರೆ ದೇಹ ಕುಸಿಯುತ್ತದೆ. 2500 ಮೀಟರ್‌ ಎತ್ತರ ಮೀರಿ ಪ್ರಯಾಣಿಸುವ ಯಾರಿಗಾದರೂ ಇದು ಸಂಭವಿಸಬಹುದು.

ಆದರೆ ರೋಗಲಕ್ಷಣಗಳು ಹೆಚ್ಚು ತೀವ್ರವಾಗಿದ್ದರೆ, ಸಮಯ ಕಳೆದಂತೆ ಸ್ಥಿತಿ ಬಿಗಡಾಯಿಸುತ್ತದೆ. ಉಸಿರಾಟದ ತೊಂದರೆ ಮತ್ತು ಸುಸ್ತು ಹೆಚ್ಚಾಗುತ್ತದೆ. ದೇಹದ ಬ್ಯಾಲೆನ್ಸ್‌ ತಪ್ಪುವುದು, ವಾಕಿಂಗ್ ತೊಂದರೆಗಳು ಉಂಟಾಗಬಹುದು. ಚಿಕಿತ್ಸೆಯ ಹೊರತಾಗಿಯೂ ವಾಸಿಯಾಗಲು ನಿರಾಕರಿಸುವ ಭಯಾನಕ ತಲೆನೋವು, ಎದೆಯಲ್ಲಿ ಹಿಸುಕಿದಂತಾಗುವುದು- ಉಂಟಾಗಬಹುದು.

ಇಂತಹ ಪರಿಸ್ಥಿತಿಯಲ್ಲಿ, ವೈದ್ಯಕೀಯ ಸಹಾಯವನ್ನು ಪಡೆಯುವುದು ಅವಶ್ಯಕ. ಇಲ್ಲಿ ಕೆಟ್ಟ ಅಂಶವೆಂದರೆ, ಪರ್ವತ ಪ್ರಾಂತ್ಯಗಳಲ್ಲಿ ಸರಿಯಾದ ವೈದ್ಯಕೀಯ ನೆರವು ಸಿಗುವುದಿಲ್ಲ. ತೀರಾ ಎತ್ತರದಲ್ಲಿ, ಕಾಡುಗಳ ನಡುವೆ ಟ್ರೆಕ್ಕಿಂಗ್‌ ಮಾಡುವಾಗ ಇದು ಸಾಮಾನ್ಯ. ವರದಿಗಳ ಪ್ರಕಾರ, ಈ ಬಾರಿ ಸಾವನ್ನಪ್ಪಿದ 23 ಜನರಲ್ಲಿ ಯಾರನ್ನೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿಲ್ಲ ಎಂದು ಸರ್ಕಾರ ಹೇಳಿದೆ.

ಮುನ್ನೆಚ್ಚರಿಕೆಗಳು
ಹೃದ್ರೋಗ ಹೊಂದಿರುವ ರೋಗಿಗಳು ಮತ್ತು ಕೋವಿಡ್‌ನಿಂದ ಇತ್ತೀಚೆಗೆ ಚೇತರಿಸಿಕೊಂಡವರು ಈ ಯಾತ್ರೆಯನ್ನು ತ್ಯಜಿಸಬೇಕು ಅಥವಾ ಮುಂದೂಡಬೇಕು. ಅಂಥವರು ತೀರ್ಥಯಾತ್ರೆಗೆ ಹೋಗುತ್ತಿದ್ದರೆ, ಯಾವುದೇ ಆರೋಗ್ಯದ ಅಪಾಯಗಳನ್ನು ಗುರುತಿಸಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಿಮ್ಮೊಂದಿಗೆ ವೈದ್ಯಕೀಯ ಸಹಾಯವಾಣಿ ಸಂಖ್ಯೆಯನ್ನು ಇಟ್ಟುಕೊಳ್ಳಬೇಕು. ಉಸಿರಾಟದ ತೊಂದರೆ ಇದ್ದಲ್ಲಿ ಸಣ್ಣ ಆಮ್ಲಜನಕ ಸಿಲಿಂಡರ್ ಅನ್ನು ಸಹ ಇಟ್ಟುಕೊಳ್ಳಬಹುದು.

ಯಾತ್ರೆಯನ್ನು ಮಾಡುವವರು ದಾರಿಯುದ್ದಕ್ಕೂ ಒಂದು ದಿನದ ವಿಶ್ರಾಂತಿಗೆ ಅವಕಾಶ ನೀಡಬೇಕು. ಕಡಿಮೆಯಾದ ಆಮ್ಲಜನಕದ ಮಟ್ಟಕ್ಕೆ ದೇಹವು ಒಗ್ಗಿಕೊಳ್ಳಲು, ಪ್ರತಿದಿನ 800-1000 ಮೀಟರ್‌ಗಳಿಗಿಂತ ಹೆಚ್ಚಿನ ಎತ್ತರವನ್ನು ನಡೆಯಬಾರದು. ಹೃದಯದ ತೊಂದರೆಗಳು, ಉಸಿರಾಟದ ಕಾಯಿಲೆಗಳು, ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಇದನ್ನೂ ಓದಿ: Explainer: ವಿವಾದದ ಕೇಂದ್ರದಲ್ಲಿ ಈಗ ಕಾಶಿ ಶೃಂಗಾರ ಗೌರಿ ದೇವಿ

Exit mobile version