ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ, ಭಾರೀ ಗಾತ್ರದ ಹಾವು (big snake) ಭಾರತದಲ್ಲಿ ಬದುಕಿತ್ತು ಎಂಬುದು ಇದೀಗ ಸಂಶೋಧನೆಯಿಂದ ಗೊತ್ತಾಗಿದೆ. ಗುಜರಾತ್‌ನಲ್ಲಿ ಪತ್ತೆಯಾದ ಪ್ರಾಚೀನ ಹಾವೊಂದರ (Ancient snake) ಪಳೆಯುಳಿಕೆಗಳು (follisls) ಅದರ ಭಾರೀ ಗಾತ್ರ ಹಾಗೂ ತೂಕವನ್ನು ತಿಳಿಯಪಡಿಸಿವೆ. ಅದು ಸುಮಾರು 50 ಅಡಿ ಉದ್ದ ಹಾಗೂ 1,000 ಕೆಜಿ ತೂಕವಿತ್ತಂತೆ!
2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ. ಇದು 4.7 ಕೋಟಿ ವರ್ಷಗಳ ಹಿಂದೆ ಕಚ್‌ನ ಜವುಗು ಪ್ರದೇಶಗಳಲ್ಲಿ ವಾಸಿಸಿತ್ತು. ನಿನ್ನೆ ವಿಜ್ಞಾನ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ. ಈ ಜಾತಿಯ ಹಾವು 36ರಿಂದ ಸುಮಾರು 50 ಅಡಿ ಉದ್ದದವರೆಗೂ ಬೆಳೆಯುತ್ತಿತ್ತು.
ಗಾತ್ರದಲ್ಲಿ ʼವಾಸುಕಿʼಯ ಗಾತ್ರ ಹಾಗೂ ತೂಕ ಈಗ ಅಳಿವಿನಂಚಿನಲ್ಲಿರುವ ʼಟೈಟಾನೊಬೊವಾʼವನ್ನು ಮೀರಿರಬಹುದು. ಇದು 42 ಅಡಿ ಅಳತೆಯ ಅತಿದೊಡ್ಡ ಹಾವು. ಇದು 1 ಟನ್ ಅಥವಾ 1,000 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿರಬಹುದು ಎಂದು ಸಂಶೋಧಕರು ಹೇಳುತ್ತಾರೆ. ಇಂದು ಜೀವಂತವಾಗಿರುವ ಅತಿದೊಡ್ಡ ಹಾವೆಂದರೆ ಏಷ್ಯಾದ 33 ಅಡಿ ಉದ್ದದ ರೆಟಿಕ್ಯುಲೇಟೆಡ್ ಹೆಬ್ಬಾವು.
“ಅದರ ದೊಡ್ಡ ಗಾತ್ರವನ್ನು ಪರಿಗಣಿಸಿದರೆ, ವಾಸುಕಿಯು ನಿಧಾನವಾಗಿ ಚಲಿಸುವ ಹೊಂಚುದಾಳಿ ಪರಭಕ್ಷಕವಾಗಿತ್ತು. ಅದು ಅನಕೊಂಡಗಳು ಮತ್ತು ಹೆಬ್ಬಾವುಗಳಂತೆ ಸುತ್ತುವರಿದು ಬಿಗಿಯುವಿಕೆಯ ಮೂಲಕ ತನ್ನ ಬೇಟೆಯನ್ನು ಪಡೆಯುತ್ತಿತ್ತು” ಎಂದು ಐಐಟಿ-ರೂರ್ಕಿಯಲ್ಲಿ ಪ್ಯಾಲಿಯಂಟಾಲಜಿಯ ಪೋಸ್ಟ್ ಡಾಕ್ಟರಲ್ ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕ ದೇಬಜಿತ್ ದತ್ತಾ ಹೇಳುತ್ತಾರೆ. “ಈ ಹಾವು ಕರಾವಳಿಯ ಸಮೀಪವಿರುವ ಜೌಗು ಪ್ರದೇಶದಲ್ಲಿ ಜಾಗತಿಕ ತಾಪಮಾನವು ಇಂದಿನಕ್ಕಿಂತ ಹೆಚ್ಚಿರುವ ಸಮಯದಲ್ಲಿ ವಾಸಿಸುತ್ತಿತ್ತು” ಎಂದಿದ್ದಾರೆ.
ಹಿಂದೂ ಪುರಾಣಗಳಲ್ಲಿ ʼವಾಸುಕಿʼ ಎಂಬ ಭಾರೀ ನಾಗರಾಜನ ಕತೆಗಳು ಇವೆ. ಇದನ್ನು ಸಾಮಾನ್ಯವಾಗಿ ಶಿವನ ಕುತ್ತಿಗೆಗೆ ಸುತ್ತುವಂತೆ ಚಿತ್ರಿಸಲಾಗುತ್ತದೆ. ಸಮುದ್ರ ಮಥನಕ್ಕೆ ಈ ಹಾವನ್ನು ಬಳಸಿಕೊಳ್ಳಲಾಗಿತ್ತು ಎಂದು ಕತೆಯಿದೆ. ಈ ಹಿನ್ನೆಲೆಯಲ್ಲಿ ಸಂಶೋಧಕರು ಇದಕ್ಕೆ ʼವಾಸುಕಿ ಇಂಡಿಕಸ್ʼ ಎಂಬ ಹೆಸರನ್ನು ನೀಡಿದ್ದಾರೆ.
“ಇದು ಬಹಳ ಸಾಂಕೇತಿಕವಾಗಿದೆ” ಎಂದು ನಾಮಕರಣದ ನಂತರ ದತ್ತ ಹೇಳಿದ್ದಾರೆ. “ವಾಸುಕಿ ನಮ್ಮ ಸರ್ಪರಾಜ. ಹೀಗಾಗಿ ಇಲ್ಲಿರುವ ಅಸಾಧಾರಣವಾದ ದೊಡ್ಡ ಗಾತ್ರದ ಹಾವೂ ಅದೇ” ಎಂದು ಅವರು ವಿವರಿಸಿದರು.
ವಾಸುಕಿ ಇಂಡಿಕಸ್‌ನ ಪಳೆಯುಳಿಕೆಯನ್ನು IIT-ರೂರ್ಕಿಯ ಪ್ರಾಗ್ಜೀವಶಾಸ್ತ್ರದ ಪ್ರಾಧ್ಯಾಪಕ ಸುನಿಲ್ ಬಾಜಪೇಯಿ ಅವರು 2005ರಲ್ಲಿ ಕಂಡುಹಿಡಿದರು. ಅವರು ಕಚ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಅವಶೇಷಗಳನ್ನು ಪತ್ತೆಹಚ್ಚಿದರು.
ಆ ಸಮಯದಲ್ಲಿ, ʼಸೈಂಟಿಫಿಕ್ ಅಮೇರಿಕನ್ʼ ಪ್ರಕಾರ, ಅವಶೇಷಗಳು ಈಗಾಗಲೇ ತಿಳಿದಿರುವ ಇತಿಹಾಸಪೂರ್ವ ಜಾತಿಯ ಮೊಸಳೆಗೆ ಸೇರಿವೆ ಎಂದು ಬಾಜಪೇಯಿ ನಂಬಿದ್ದರು. 2022ರವರೆಗೆ ಪಳೆಯುಳಿಕೆ ಅವರ ಪ್ರಯೋಗಾಲಯದಲ್ಲಿ ಇತ್ತು. ಅದೇ ವರ್ಷ ಪ್ರಯೋಗಾಲಯಕ್ಕೆ ಸೇರಿದ ದತ್ತಾ ಅವುಗಳನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಆ ಚೂರುಗಳು ಬೇರೆ ಜಾತಿಗೆ ಸೇರಿದವು ಎಂದು ಇಬ್ಬರಿಗೂ ಅರಿವಾಯಿತು.
“ಪಳೆಯುಳಿಕೆಯು 2005ರಲ್ಲಿ ಕಂಡುಬಂದಿದೆ, ಆದರೆ ನಾನು ಬೇರೆ ಬೇರೆ ಪಳೆಯುಳಿಕೆಗಳ ಮೇಲೆ ಕೆಲಸ ಮಾಡುತ್ತಿರುವುದರಿಂದ, ಅದು ಹಾಗೇ ಉಳಿಯಿತು. 2022ರಲ್ಲಿ ನಾವು ಪಳೆಯುಳಿಕೆಯನ್ನು ಮರು-ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಆರಂಭದಲ್ಲಿ ಅದರ ಗಾತ್ರದಿಂದಾಗಿ, ಇದು ಮೊಸಳೆ ಎಂದು ನಾನು ಭಾವಿಸಿದೆ. ಆದರೆ ನಂತರ ಅದು ಹಾವಿನದ್ದಾಗಿದೆ ಎಂದು ಅರಿತುಕೊಂಡೆವು” ಎಂದು ಬಾಜಪೇಯಿ ತಿಳಿಸಿದರು.
ಇದನ್ನೂ ಓದಿ: Hottest Year: 1.25 ಲಕ್ಷ ವರ್ಷಗಳಲ್ಲೇ 2023 ಅತಿ ಬಿಸಿಯಾದ ವರ್ಷ, ಕಾರಣ ಏನು?