ಹೊಸದಿಲ್ಲಿ: ಉದ್ಯೋಗಿಗಳಿಗೆ 300 ಪ್ರತಿಶತ ಸಂಬಳ ಹೆಚ್ಚಳ (Salary Hike)? ಕಲ್ಪಿಸಿಕೊಳ್ಳಲು ಸಾಧ್ಯವೇ? ಖಂಡಿತಾ ಇಲ್ಲ. ಆದರೆ ಗೂಗಲ್ ಕಂಪನಿಯಲ್ಲಿ (Google) ಇದು ಸಾಧ್ಯವಾಗಿದೆಯಂತೆ. ಇದು ಗೂಗಲ್ ಆ ಉದ್ಯೋಗಿಗಳನ್ನು ಎಷ್ಟು ಮಹತ್ವದವರು ಎಂದು ಪರಿಗಣಿಸಿದೆ ಎಂಬುದನ್ನು ಬಹಿರಂಗಪಡಿಸುತ್ತದೆ.
ಅಲೆಕ್ಸ್ ಕಾಂಟ್ರೋವಿಟ್ಜ್ ನಡೆಸಿದ ಬಿಗ್ ಟೆಕ್ನಾಲಜಿ ಪಾಡ್‌ಕ್ಯಾಸ್ಟ್ ಶೋನಲ್ಲಿ ಯುಎಸ್ ಮೂಲದ ಪರ್ಪ್ಲೆಕ್ಸಿಟಿ ಎಐ ಸ್ಟಾರ್ಟ್‌ಅಪ್‌ನ ಸಿಇಒ ಅರವಿಂದ್ ಶ್ರೀನಿವಾಸ್ ಈ ನೇಮಕಾತಿಯ ಬಗ್ಗೆ ಬಹಿರಂಗಪಡಿಸಿದ್ದಾರೆ. ಸಂಪೂರ್ಣ ಕಥೆ ಇಲ್ಲಿದೆ.
ಐಐಟಿ ಮದ್ರಾಸ್‌ನ ಶ್ರೀನಿವಾಸ್ ಅವರು ಇತ್ತೀಚೆಗೆ ತಮ್ಮ ಪರ್ಪ್ಲೆಕ್ಸಿಟಿ ಎಐ ಸ್ಟಾರ್ಟ್‌ಅಪ್‌ಗಾಗಿ ಗೂಗಲ್‌ನ ಉದ್ಯೋಗಿಯನ್ನು ನೇಮಿಸಿಕೊಳ್ಳಲು ಪ್ರಯತ್ನಿಸಿದ್ದರು. ಹೊಸ ಕಂಪನಿಯೊಂದಿಗೆ ಮಾತನಾಡಿದ ನಂತರ ಸಹಜವಾಗಿಯೇ ಆ ಉದ್ಯೋಗಿ ತನ್ನ ಉದ್ಯೋಗದಾತರೊಂದಿಗೆ ಹೊಸ ಉದ್ಯೋಗ ಪ್ರಸ್ತಾಪದ ವಿಷಯ ಹೇಳಿದ್ದಾರೆ.
ಆದರೆ ಅವರು ಆಶ್ಚರ್ಯಚಕಿತರಾಗುವಂತೆ, ಕಂಪನಿಯಲ್ಲೇ ಉಳಿದುಕೊಂಡರೆ ಆ ಉದ್ಯೋಗಿಯ ಸಂಬಳವನ್ನು ನಾಲ್ಕು ಪಟ್ಟು ಹೆಚ್ಚು ಮಾಡುವ (300 ಪ್ರತಿಶತ) ಆಫರ್ ಅನ್ನು ಗೂಗಲ್ ನೀಡಿತು. ಅದನ್ನು ಆ ಉದ್ಯೋಗಿ ಪಡೆದುಕೊಂಡಿದ್ದಾರೆ ಎಂದು ಶ್ರೀನಿವಾಸ್ ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಒಳ್ಳೆಯ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕಂಪನಿಗಳು ಕೆಲವು ಶೇಕಡಾ ಸಂಬಳ ಏರಿಸುವುದು ಸಹಜ. ಇದನ್ನು ಕೌಂಟರ್‌ಆಫರ್ ಎನ್ನುತ್ತಾರೆ. ಆದರೆ ಗೂಗಲ್ ನಿರೀಕ್ಷೆಗೂ ಮೀರಿ ವರ್ತಿಸಿದೆ. ಆ ಉದ್ಯೋಗಿ ಇನ್ನೂ ಅಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಶ್ರೀನಿವಾಸ್ ಬಹಿರಂಗಪಡಿಸಿದ್ದಾರೆ. ಅಂದರೆ ವ್ಯಕ್ತಿಯು ಗೂಗಲ್‌ನ ಶೇಕಡಾ 300ರಷ್ಟು ಸಂಬಳ ಹೆಚ್ಚಳವನ್ನು ಒಪ್ಪಿಕೊಂಡಿದ್ದಾರೆ. Google ಉದ್ಯೋಗಿಗಳಿಗೆ AI ಸ್ಟಾರ್ಟ್‌ಅಪ್‌ನ ಕೊಡುಗೆ ಏನಿತ್ತು ಎಂಬುದು ಬಹಿರಂಗವಾಗಿಲ್ಲ. ಆದರೆ Googleನ ಪ್ರತಿಕ್ರಿಯೆಯು, ಉನ್ನತ ಮಟ್ಟದ ಪ್ರತಿಭೆಗಳನ್ನು ಉಳಿಸಿಕೊಳ್ಳುವ ಅದರ ಗಂಭೀರತೆಯನ್ನು ಪ್ರದರ್ಶಿಸಿದೆ.
ಈ ಕೌಂಟರ್‌ಆಫರ್‌ನ ಸಮಯವು ವಿಶೇಷವಾಗಿ ಗಮನಾರ್ಹವಾಗಿದೆ. Googleನಲ್ಲಿ ಇತ್ತೀಚೆಗೆ ಹಲವು ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ. ಕಳೆದ ವರ್ಷದಿಂದ ಗೂಗಲ್ ಅನೇಕ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಕಳೆದ 1.5 ತಿಂಗಳುಗಳಲ್ಲಿ, ಕಂಪನಿಯು ಗೂಗಲ್ ಅಸಿಸ್ಟೆಂಟ್, ಹಾರ್ಡ್‌ವೇರ್ ಮತ್ತು ಸೆಂಟ್ರಲ್ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳಾದ್ಯಂತ ವಜಾಗೊಳಿಸುವಿಕೆಯನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: Job Cuts: ಏಐ ಏಟು; ಗೂಗಲ್, ಅಮೆಜಾನ್ ಮುಂತಾದ ಟೆಕ್ ಕಂಪನಿಗಳಲ್ಲಿ 7,500 ಉದ್ಯೋಗ ಕಡಿತ