Site icon Vistara News

Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು

Viral News

Viral News

ಮುಂಬೈ: 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮದುವೆ ಮುನ್ನವೇ ಎರಡು ಬಾರಿ ಗರ್ಭ ಧರಿಸಿರುವ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಸದ್ಯ ಈ ಘಟನೆ ಸಿನಿಮೀಯ ತಿರುವು ಪಡೆದುಕೊಂಡಿದೆ. ತನ್ನ ಒಂದು ಮಗುವನ್ನು ತನಗೆ ತಿಳಿಯದಂತೆಯೇ ಮಾರಾಟ ಮಾಡಲಾಗಿದೆ ಎಂದು ದೂರಿರುವ ಆಕೆ ಇದೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾಳೆ. ಪೋಷಕರು, ಶಿಕ್ಷಕರು, ವಕೀಲ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ(Viral News). ಮಹಾರಾಷ್ಟ್ರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 17 ವರ್ಷದ ಬಾಲಕಿ ಇಬ್ಬರು ವಿಭಿನ್ನ ಪುರುಷರ ಜತೆ ದೇಹ ಸಂಬಂಧ ಬೆಳೆಸಿದ್ದಳು. ಹೀಗಾಗಿ ಎರಡು ಬಾರಿ ಗರ್ಭ ಧರಿಸಿದ್ದಳು. ಈ ಪೈಕಿ ಒಂದು ನವಜಾತ ಶಿಶುವನ್ನು ತನ್ನ ಪೋಷಕರು, ಶಾಲಾ ಪ್ರಾಂಶುಪಾಲರು, ಇಬ್ಬರು ಮಹಿಳಾ ವೈದ್ಯರು, ಸಾಮಾಜಿಕ ಕಾರ್ಯಕರ್ತೆ, ವಕೀಲರು ಮತ್ತು ಇತರರು ಸೇರಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕಿಯ ಪೋಷಕರು ಸೇರಿದಂತೆ ಕನಿಷ್ಠ 16 ಮಂದಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆ (Juvenile Justice Act)ಯಡಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ವಿವರ

2021ರಲ್ಲಿ 23 ವರ್ಷದ ಅನ್ಯ ಕೋಮಿನ ಜತೆ ಅಕ್ರಮ ಸಂಬಂಧ ಹೊಂದಿದ್ದ ಬಾಲಕಿ ಮೊದಲ ಬಾರಿ ಗರ್ಭಿಣಿಯಾಗಿದ್ದಳು. ಆಕೆ ಗರ್ಭ ಧರಿಸಿರುವ ವಿಚಾರ ಪೋಷಕರ ಗಮನಕ್ಕೆ ಬಂದಿತ್ತು. ಬಳಿಕ ಪೋಷಕರು ಶಾಲೆಯ ಪ್ರಾಂಶುಪಾಲ ಮತ್ತು ಸಾಮಾಜಿಕ ಕಾರ್ಯಕರ್ತೆಗೆ ವಿಚಾರ ತಿಳಿಸಿ ಅವರ ಸಹಾಯ ಕೋರಿದರು.

7ನೇ ತರಗತಿಯ ಬಳಿಕ ಶಾಲೆಯಿಂದ ಹೊರಗುಳಿದ ಬಾಲಕಿಯ ನಿಯಮಿತ ತಪಾಸಣೆ ಮತ್ತು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ʼʼಇದಕ್ಕೂ ಮೊದಲು ಪೋಷಕರು ತನ್ನನ್ನು ಮುಂಬೈಯ ಯಾವುದೋ ಒಂದು ಸ್ಥಳಕ್ಕೆ ಕರೆದೊಯ್ದು ಅಲ್ಲಿ ವಕೀಲರ ಸಮ್ಮುಖದಲ್ಲಿ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿದ್ದರುʼʼ ಎಂದು ಬಾಲಕಿ ತಿಳಿಸಿದ್ದಾಳೆ ಎಂದು ಮೂಲಗಳು ವರದಿ ಮಾಡಿವೆ. 2021ರ ಸೆಪ್ಟೆಂಬರ್ 24ರಂದು ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮರುದಿನ ಆ ಮಗುವನ್ನು ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಹಸ್ತಾಂತರಿಸಲಾಯಿತು. ಹೆರಿಗೆಯ ಬಗ್ಗೆ ಯಾರಲ್ಲೂ ಮಾತನಾಡದಂತೆ ಆಕೆಗೆ ಪೋಷಕರು ಎಚ್ಚರಿಕೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಹೆರಿಗೆಯ ಆರು ತಿಂಗಳ ನಂತರ ಅಪ್ರಾಪ್ತೆ ಮಗುವಿನ ತಂದೆಯನ್ನು ಸಂಪರ್ಕಿಸಿದಳು. ಈ ವೇಳೆ ಆತ ಆಕೆಯನ್ನು ವರಿಸಲು ಸಿದ್ಧನಾಗಿರುವುದಾಗಿ ಹೇಳಿದ್ದ. ಆದರೆ ಪೋಷಕರು ಇದಕ್ಕೆ ಸಮ್ಮತಿ ನೀಡಲಿಲ್ಲ. ʼʼತನ್ನ ಪೋಷಕರು ಮಗುವನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಪೈಕಿ ಪೋಷಕರು ಮತ್ತು ಚಿಕ್ಕಪ್ಪ ತಲಾ 1.5 ಲಕ್ಷ ರೂ. ಪಡೆದರೆ, ಸಾಮಾಜಿಕ ಕಾರ್ಯಕರ್ತೆ ಮತ್ತು ಇತರ ಕೆಲವರು ಉಳಿದ 1 ಲಕ್ಷ ರೂ.ಗಳನ್ನು ಹಂಚಿಕೊಂಡಿದ್ದಾರೆʼʼ ಎಂದು ಅಪ್ರಾಪ್ತೆ ದೂರಿದ್ದಾಳೆ. ಈ ಬಗ್ಗೆ ಅವಳು ಪೋಷಕರನ್ನು ಪ್ರಶ್ನಿಸಿದಾಗ ಅಜ್ಜಿಯ ಮನೆಗೆ ಕಳುಹಿಸಿದ್ದರು. ಅಲ್ಲಿ ಅವಳ ಕುಟುಂಬವು 23 ವರ್ಷದ ವ್ಯಕ್ತಿಯೊಂದಿಗೆ ಮದುವೆಯನ್ನು ನಿಶ್ಚಯಿಸಿತ್ತು ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಅಪ್ರಾಪ್ತೆ ಮತ್ತೆ ತನ್ನ ವಿವಾಹ ನಿಶ್ಚಿತವಾದ ಯುವಕನೊಂದಿಗೆ ದೇಹ ಸಂಪರ್ಕ ಬೆಳೆಸಿದಳು. ಬಳಿಕ ಮತ್ತೊಮ್ಮೆ ಗರ್ಭ ಧರಿಸಿದಳು. ಈ ವೇಳೆ ಆತನಿಗೆ ಅಪ್ರಾಪ್ತೆಯ ಮೊದಲ ಮಗುವಿನ ಬಗ್ಗೆ ತಿಳಿದು ಬಂದಿತ್ತು. ಹೀಗಾಗಿ ವಿವಾಹವಾಗಲು ನಿರಾಕರಿಸಿದ. ನಂತರ ಬಾಲಕಿ ಅಜ್ಜಿ ಮನೆಯಿಂದ ತನ್ನ ಮನೆಗೆ ಮರಳಿದಳು. ಪರಿಚಯಸ್ಥರ ನೆರವಿನಿಂದ ಆಕೆ 2024ರ ಮಾರ್ಚ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಎರಡನೇ ಮಗುವನ್ನೂ ಮಾರಾಟ ಮಾಡುವಂತೆ ಪೋಷಕರು ಒತ್ತಡ ಹೇರುತ್ತಿರುವುದರಿಂದ ಆಕೆ ಇದೀಗ ಪೊಲೀಸ್‌ ಠಾಣೆಯ ಮೊರೆ ಹೋಗಿದ್ದಾಳೆ. ಮಾರಾಟವಾದ ಹೆಣ್ಣು ಮಗು ಎಲ್ಲಿದೆ ಎಂಬುದನ್ನು ಹುಡುಕಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Exit mobile version