Site icon Vistara News

Actor Darshan: ʼದರ್ಶನ್‌ ನನ್ನ ಸ್ವಂತ ಮಗʼ ಎಂದಿದ್ದ ಸುಮಲತಾ ಅಂಬರೀಶ್‌ ಏಕೀ ಗಾಢ ಮೌನ?

actor Darshan and Sumalatha Ambareesh

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್‌ (Actor Darshan) ಕುರಿತು ರಮ್ಯ, ರಚಿತಾ, ಸುದೀಪ್‌, ಉಪೇಂದ್ರ ಸೇರಿದಂತೆ ಚಿತ್ರರಂಗದ ಹಲವಾರು ಸ್ಟಾರ್‌ಗಳು ಹಾಗೂ ರಾಜಕಾರಣಿಗಳು ಹೇಳಿಕೆ ನೀಡಿದ್ದಾರೆ. ಆದರೆ ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್‌ (Sumalatha Ambareesh) ಮಾತ್ರ ತುಟಿ ಪಿಟಕ್‌ ಎಂದಿಲ್ಲ. ಒಂದು ಕಾಲದಲ್ಲಿ ʼದರ್ಶನ್‌ ನನ್ನ ಸ್ವಂತ ಮಗʼ ಎಂದಿದ್ದ ಸುಮಲತಾ, ಈ ಪ್ರಕರಣದಲ್ಲಿ ಮೌನ ಕಾಪಾಡಿಕೊಂಡಿರುವುದು ಕುತೂಹಲ ಮೂಡಿಸಿದೆ.

ನಟ ಅಂಬರೀಶ್ ಇದ್ದ ಕಾಲದಿಂದಲೂ, ʼದರ್ಶನ್‌ ನಮ್ಮ ದೊಡ್ಡ ಮಗʼ ಅನ್ನುತ್ತಿದ್ದ ಸುಮಲತಾ, 2019ರಲ್ಲಿ ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ನಿಂತಾಗ ಪ್ರಚಾರಕ್ಕೆ ದರ್ಶನ್‌ ಬೆಂಬಲ ಪಡೆದಿದ್ದರು. ಇಪ್ಪತ್ತು ದಿನಗಳ ಕಾಲ ಸುಮಲತಾ ಜತೆ ಪ್ರಚಾರ ಮಾಡಿ ಅವರನ್ನು ಗೆಲ್ಲಿಸುವಲ್ಲಿ ದರ್ಶನ್ ಪ್ರಮುಖ ಪಾತ್ರ ವಹಿಸಿದ್ದ.

ಬಳಿಕ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿಯ ಕಾರಣದಿಂದಾಗಿ ಸುಮಲತಾ ಹಿಂದೆ ಸರಿದಾಗಲೂ ತಾಯಿಯ ಜತೆ ಇರ್ತೀನಿ ಎಂದು ದರ್ಶನ್ ಹೇಳಿದ್ದ. ಮಂಡ್ಯದಲ್ಲಿ ಸಭೆ ನಡೆಸಿ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧ ಎಂದಿದ್ದ ದರ್ಶನ್‌. ಅಮ್ಮನ ನಿರ್ಧಾರವೇ ನನ್ನ ನಿರ್ಧಾರ ಎಂದಿದ್ದ.

ʼಇವನು ನಮ್ಮ ದತ್ತು ಮಗ ಅಲ್ಲ ಸ್ವಂತ ಮಗ. ಮಗನ ಜತೆ ಸದಾ ಇರ್ತೀನಿʼ ಎಂದಿದ್ದ ಸುಮಲತಾ, ಇದೀಗ ಕೊಲೆ ಪ್ರಕರಣದಲ್ಲಿ ಆತ ಜೈಲುಪಾಲಾದ ಮೇಲೆ ಫುಲ್ ಸೈಲೆಂಟ್ ಆಗಿದ್ದಾರೆ. ಅವರು ಅತ್ತ ಮಾಧ್ಯಮಗಳಿಗೂ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ಇತ್ತ ಸೋಷಿಯಲ್ ಮೀಡಿಯಾದಲ್ಲೂ ಗಾಢ ಮೌನಕ್ಕೆ ಜಾರಿದ್ದಾರೆ. ಅಭಿಷೇಕ್ ಅಂಬರೀಶ್ ಕೂಡ ದರ್ಶನ್‌ ವಿಚಾರದಲ್ಲಿ ಅಂತರ ಕಾಪಾಡಿಕೊಂಡಿದ್ದಾರೆ. ಯಾವುದಕ್ಕೂ ಅಭಿಷೇಕ್‌ ಪ್ರತಿಕ್ರಿಯೆ ನೀಡಿಲ್ಲ.

ಸುಮಲತಾ ಮೌನದ ಹಿಂದೆ ಹಲವು ಕಾರಣಗಳನ್ನು ಊಹಿಸಲಾಗಿದೆ. ದರ್ಶನ್‌ ಅಪರಾಧಿ ಅಥವಾ ನಿರಪರಾಧಿ ಎಂದು ಸಾಬೀತಾಗುವವರೆಗೆ ಏನೇ ಆಡಿದರೂ ಆಮೇಲೆ ನಾಲಿಗೆ ಕಚ್ಚಿಕೊಳ್ಳಬೇಕಾಗಬಹುದು ಎಂಬ ಎಚ್ಚರಿಕೆ ಇದರ ಹಿಂದಿದೆ. ಈ ಸಮಯದಲ್ಲಿ ಆರೋಪಿಯನ್ನು ಬೆಂಬಲಿಸಿದರೆ ಅದು ತಮ್ಮ ತಲೆಗೂ ಬರಬಹುದು ಎಂದು ಆತಂಕವೂ ಇದೆ. ಮಂಡ್ಯದಲ್ಲೂ ಕೂಡ ದರ್ಶನ್‌ ರೌಡಿಸಂ ಚಾಳಿಯ ಬಗ್ಗೆ ಜನರಲ್ಲಿ ಸಿಟ್ಟೂ ಇದೆ.

ದರ್ಶನ್‌ ಈ ಪ್ರಕರಣದಿಂದ ತನ್ನನ್ನು ಪಾರು ಮಾಡುವಂತೆ ಹಲವು ಪ್ರಭಾವಿ ರಾಜಕಾರಣಿಗಳ ಬೆನ್ನಿಗೆ ಬಿದ್ದಿದ್ದರು ಎನ್ನಲಾಗಿದೆ. ಆದರೆ ಪ್ರಕರಣದ ಗಂಭೀರತೆ ಅರಿತ ಅವರ್ಯಾರೂ ದರ್ಶನ್‌ ಸಪೋರ್ಟ್‌ಗೆ ಬಂದಿಲ್ಲ. ಸಿಎಂ ಕೂಡ ಈ ಪ್ರಕರಣದಲ್ಲಿ ಎಷ್ಟೇ ಪ್ರಭಾವ ಬಳಸಿದರೂ ಅದಕ್ಕೆ ಒಳಗಾಗಬೇಡಿ, ಯಾರನ್ನೂ ಬಿಡಬೇಡಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಈಗ ದರ್ಶನ್‌ ಕುರಿತ ಆಪ್ತತೆ ಪ್ರದರ್ಶನ ಮಾಡುವುದು ಸರಿಯಲ್ಲ. ಇದು ರಾಜಕೀಯವಾಗಿಯೂ ತಮಗೆ ಮುಳುವಾಗಬಹುದು ಎಂದು ಸುಮಲತಾಗೆ ಅನಿಸಿದ್ದು, ಇದೇ ಅಮ್ಮ- ಮಗನ ಬಾಂಧವ್ಯದಲ್ಲಿ ಬಿರುಕು ಮೂಡಲು ಕಾರಣವಾಗಿದೆ ಎನ್ನಲಾಗಿದೆ.

`ನಾನೇ 30 ಲಕ್ಷ ರೂ. ಕೊಟ್ಟೆ….’ ಕೊಲೆ ಬಗ್ಗೆ ಸ್ವ ಇಚ್ಛೆ ಹೇಳಿಕೆ ನೀಡಿದ ದರ್ಶನ್‌

ರೇಣುಕಾ ಸ್ವಾಮಿ ಹತ್ಯೆ (Renuka Swamy murder case) ಕೇಸ್‌ನ ಆರೋಪಿ, ನಟ ದರ್ಶನ್‌ (Actor Darshan) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ವ ಇಚ್ಛೆ ಹೇಳಿಕೆ ನೀಡಿದ್ದಾನೆ. ಪ್ರಕರಣ ಮುಚ್ಚಿಹಾಕಲು 30 ಲಕ್ಷ ರೂ. ನೀಡಿರುವುದಾಗಿ ತಿಳಿಸಿದ್ದಾನೆ.

ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಅಲಿಯಾಸ್‌ ಡಿ ಬಾಸ್ ಸ್ವ- ಇಚ್ಛೆಯ ಹೇಳಿಕೆ ನೀಡಿದ್ದು, ಅದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ವ್ಯಕ್ತಿಯ ಶವವನ್ನು ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಬೇಕು. ಪೊಲೀಸರು, ಲಾಯರ್ ಮತ್ತು ಶವ ಸಾಗಿಸುವ ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನು ಬರಿಸಲು ಪ್ರದೂಶ್‌ಗೆ 30 ಲಕ್ಷ ಹಣ ನೀಡಿರುವುದಾಗಿ ದರ್ಶನ್‌ ಸ್ವ ಇಚ್ಛೆ ಹೇಳಿಕೆ ನೀಡಿದ್ದಾನೆ.

ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ನಡೆದ ಹಲ್ಲೆಯಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ದರ್ಶನ್‌ ಒಪ್ಪಿಕೊಂಡಿಲ್ಲ. ಶೆಡ್‌ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳು, ಜೂನ್‌ 8ರಂದು ರಾತ್ರಿ ದರ್ಶನ್‌ ತನ್ನ ಜೀಪಿನಲ್ಲಿ ಶೆಡ್‌ ಕಡೆಗೆ ಆಗಮಿಸಿದ್ದನ್ನು ತೋರಿಸಿವೆ. ಹತ್ಯೆಯ ನಂತರ ದರ್ಶನ್‌ ಆರೋಪಿಗಳ ಜೊತೆಗೆ ಪಾರ್ಟಿ ಮಾಡಿದ್ದು ಕೂಡ ಪ್ರತ್ಯಕ್ಷದರ್ಶಿಗಳ ಸಾಕ್ಷಿಯಿಂದ ಗೊತ್ತಾಗಿದೆ. ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ಯಾವುದೇ ಸಿಸಿಟಿವಿ ಸಾಕ್ಷಿಗಳನ್ನು ಆರೋಪಿಗಳು ಉಳಿಸಿಲ್ಲ.

ಇದನ್ನೂ ಓದಿ: Actor Darshan: ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು ಎಂದು ದರ್ಶನ್‌ಗೆ ತಿರುಗೇಟು ಕೊಟ್ಟ ಉಮಾಪತಿ!

Exit mobile version