Site icon Vistara News

Encounter: ಗುರುದ್ವಾರ ಮುಖ್ಯಸ್ಥರನ್ನು ಕೊಂದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ; ಉತ್ತರಾಖಂಡದಲ್ಲೂ ಯೋಗಿ ಮಾದರಿ!

Baba Tarsem Singh Murder Case

ಡೆಹ್ರಾಡೂನ್:‌ ಹರಿದ್ವಾರದ ಗುರುದ್ವಾರವೊಂದರ (Gurudwara) ಮುಖ್ಯಸ್ಥನನ್ನು ಕೊಂದ ಆರೋಪಿಯನ್ನು ಉತ್ತರಾಖಂಡ ಪೊಲೀಸರು ಎನ್‌ಕೌಂಟರ್‌ನಲ್ಲಿ (Encounter) ಕೊಂದುಹಾಕಿದ್ದಾರೆ. ನಾನಕಮಟ್ಟಾ ಗುರುದ್ವಾರದ ಕರಸೇವಾ ಮುಖ್ಯಸ್ಥ ಬಾಬಾ ತಾರ್ಸೆಮ್ ಸಿಂಗ್ (Baba Tarsem Singh) ಅವರನ್ನು ಕೊಂದಿದ್ದ (Murder Case) ಪ್ರಮುಖ ಆರೋಪಿ, ಶೂಟರ್‌ ಅಮರ್‌ಜಿತ್ ಸಿಂಗ್ ಅಲಿಯಾಸ್ ಬಿಟ್ಟುವನ್ನು ಮುಂಜಾನೆ ಹರಿದ್ವಾರದ ಭಗವಾನ್‌ಪುರ ಪ್ರದೇಶದಲ್ಲಿ ಉತ್ತರಾಖಂಡ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನಡೆಸಿದ ಎನ್‌ಕೌಂಟರ್‌ನಲ್ಲಿ ಸಾಯಿಸಲಾಯಿತು. ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದರು.

ಅಮರ್‌ಜಿತ್ ಸಿಂಗ್ ತಲೆಯ ಮೇಲೆ ₹1 ಲಕ್ಷ ತಲೆದಂಡ ವಿಧಿಸಲಾಗಿತ್ತು. ಆತನ ಸಹಚರ ಪರಾರಿಯಾಗಿದ್ದಾನೆ ಎಂದು ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಭಿನವ್ ಕುಮಾರ್ ತಿಳಿಸಿದ್ದಾರೆ. ಉತ್ತರಾಖಂಡ ವಿಶೇಷ ಕಾರ್ಯಪಡೆ ಮತ್ತು ಹರಿದ್ವಾರ ಪೊಲೀಸರು ತಲೆಮರೆಸಿಕೊಂಡಿರುವ ಇತರ ಆರೋಪಿಗಳನ್ನು ಪತ್ತೆ ಹಚ್ಚಲು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಮರ್‌ಜಿತ್ ಸಿಂಗ್ ವಿರುದ್ಧ 16ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಬಾ ತಾರ್ಸೆಮ್ ಸಿಂಗ್ ಹತ್ಯೆ

ನಾನಕಮಟ್ಟ ಗುರುದ್ವಾರದ ʼಕರಸೇವಾ’ ಮುಖ್ಯಸ್ಥ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಮಾರ್ಚ್ 28ರಂದು ಉಧಮ್ ಸಿಂಗ್ ನಗರದ ನಾನಕಮಟ್ಟಾ ಗುರುದ್ವಾರದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಕೊಲೆಯಾದ ಕೆಲವೇ ದಿನಗಳಲ್ಲಿ ಆರೋಪಿಗಳಾಗಿ ಮಾಜಿ ಐಎಎಸ್ ಅಧಿಕಾರಿ ಹರ್ಬನ್ಶ್ ಸಿಂಗ್ ಚುಗ್, ಇತರ ಇಬ್ಬರನ್ನು ಪ್ರೀತಮ್ ಸಿಂಗ್ ಮತ್ತು ಬಾಬಾ ಅನೂಪ್ ಸಿಂಗ್ ಎಂಬವರನ್ನು ಗುರುತಿಸಲಾಗಿತ್ತು.ನಾನಕಮಟ್ಟಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇತರ ಇಬ್ಬರೊಂದಿಗೆ ಚುಗ್, ತಾರ್ಸೆಮ್ ಸಿಂಗ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಕರಸೇವೆಯ ಸೇವಾದಾರ ಜಸ್ಬೀರ್ ಸಿಂಗ್ ಆರೋಪಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಇತರ ಆರೋಪಿಗಳ ಹುಡುಕಾಟ ನಡೆದಿದೆ. ಆರೋಪಿಗಳ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದ್ದೇವೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಅವರು ಅಪರಾಧಿಗಳನ್ನು ನೇಮಕ ಮಾಡುವ ಮೂಲಕ, ಸಂಪನ್ಮೂಲಗಳನ್ನು ಒದಗಿಸುವ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಅಪರಾಧವನ್ನು ರೂಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತರಾಖಂಡ ಪೊಲೀಸರು ಬಾಬಾ ಹತ್ಯೆಯನ್ನು ಸವಾಲಾಗಿ ತೆಗೆದುಕೊಂಡಿದ್ದು, ಎಸ್‌ಟಿಎಫ್ ಮತ್ತು ಪೊಲೀಸರು ಆರೋಪಿಗಳನ್ನು ಸಕ್ರಿಯವಾಗಿ ಬೆನ್ನಟ್ಟಿದ್ದಾರೆ ಎಂದು ಡಿಜಿಪಿ ಕುಮಾರ್ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಇಂತಹ ಕ್ರೂರ ಕೃತ್ಯಗಳನ್ನು ಎಸಗುವ ಅಪರಾಧಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಡಿಜಿಪಿ ಒತ್ತಿ ಹೇಳಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ತಾರ್ಸೆಮ್ ಸಿಂಗ್ ಹತ್ಯೆಯ ನಂತರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಶಂಕಿತರನ್ನು ತ್ವರಿತವಾಗಿ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Maoist Links Case: ಮಾವೋವಾದಿಗಳೊಂದಿಗೆ ನಂಟು ಪ್ರಕರಣ; ಸಾಯಿಬಾಬಾ, ಇತರ ಐವರನ್ನು ದೋಷಮುಕ್ತಗೊಳಿಸಿದ ಕೋರ್ಟ್‌

Exit mobile version