Site icon Vistara News

BJP-JDS Padayatra: ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ‌ ; ಬ್ಯಾನರ್‌ಗಳಲ್ಲೂ ಕಾಣಿಸಿಕೊಳ್ಳದ ಸುಮಲತಾ ಅಂಬರೀಷ್‌!

bjp-jds padayatra Sumalatha ambareesh

ಮಂಡ್ಯ: ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ರಾಜೀನಾಮೆಗೆ ಆಗ್ರಹಿಸಿ ನಡೆಸಲಾಗುತ್ತಿರುವ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ (BJP-JDS Padayatra) ಐದನೇ ದಿನ ಮಂಡ್ಯ ತಲುಪಿದ್ದು, ಉಭಯ ಪಕ್ಷಗಳ ನಾಯಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಷ್‌ (Sumalatha Ambareesh) ಮಾತ್ರ ಎಲ್ಲೂ ಕಾಣಿಸಿಕೊಂಡಿಲ್ಲ.

ಕಳೆದ ಲೋಕಸಭೆ ಚುನಾವಣೆಗೂ (Loksabha Election 2024) ಮುನ್ನ ಬಿಜೆಪಿ ಸೇರ್ಪಡೆಯಾಗಿದ್ದ ಸುಮಲತಾ, ಬಿಜೆಪಿ ಸೇರಿದ್ದು ನನ್ನ ಜೀವನದಲ್ಲೇ ಸುದಿನ ಎಂದಿದ್ದರು. ಆದರೆ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಮಂಡ್ಯ ಜೆಡಿಎಸ್‌ ಪಾಲಾಗಿ, ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಟಿಕೆಟ್‌ ಒಲಿದಿತ್ತು. ಮಂಡ್ಯದಲ್ಲಿ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಸುಮಲತಾ, ಕುಮಾರಣ್ಣ ಪರ ಪ್ರಚಾರ ಕಣದಲ್ಲೆಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಪಾದಯಾತ್ರೆಯಲ್ಲಿಯೂ ಅವರು ಕಾಣಿಸಿಕೊಂಡಿಲ್ಲ. ಹೀಗಾಗಿ, ಮಂಡ್ಯದ ರಾಜಕಾರಣದಲ್ಲಿ ಮತ್ತೆ ಸುಮಲತಾ ಅಂಬರೀಷ್‌ ಸೈಡ್‌ಲೈನ್ ಆದ್ರಾ ಎಂಬ ಪ್ರಶ್ನೆ ಮೂಡಿದೆ.

ಬುಧವಾರ ಮಂಡ್ಯ ಜಿಲ್ಲೆಯಲ್ಲಿ ಪಾದಯಾತ್ರೆ ಸಂಚರಿಸಲಿದ್ದರೂ, ಮಂಡ್ಯದಲ್ಲಿ ಹಾಕಿರುವ ಫ್ಲೆಕ್ಸ್‌- ಬ್ಯಾನರ್‌ಗಳಿಂದಲೂ ಸುಮಲತಾ ಕಣ್ಮರೆಯಾಗಿದ್ದಾರೆ. ಯಾವ ನಾಯಕರೂ ತಮ್ಮ ಬ್ಯಾನರ್‌ಗಳಲ್ಲಿ ಸುಮಲತಾ ಅವರನ್ನು ಸ್ಮರಿಸಿಕೊಂಡಿಲ್ಲ. ರಾಜ್ಯ ಬಿಜೆಪಿ, ಜೆಡಿಎಸ್ ವತಿಯಿಂದ ಹಾಕಿರುವ ಫ್ಲೆಕ್ಸ್‌ಗಳಲ್ಲಿ ಸುಮಲತಾ ಅವರಿಗೆ ಯಾವುದೇ ಸ್ಥಾನ ನೀಡಿಲ್ಲ. ಪಾದಯಾತ್ರೆ ಪ್ರಚಾರ ಮತ್ತು ಪಾದಯಾತ್ರಿಗಳ ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಅವರು ಕಾಣಿಸಿಕೊಂಡಿಲ್ಲ.

ಬೆಂಗಳೂರಿನಿಂದ ಮೈಸೂರಿನವರೆಗೂ ಹಾಕಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಪುಡಿ ನಾಯಕರು, ಕಾರ್ಯಕರ್ತರ ಫೋಟೋಗಳಿದ್ದರೂ ಸುಮಲತಾ ಮುಖ ಎಲ್ಲೂ ಕಾಣಿಸಿಕೊಂಡಿಲ್ಲ. ಬಿಜೆಪಿ ಇರಲಿ, ಸುಮಲತಾ ಅವರ ಆಪ್ತರು, ಬೆಂಬಲಿಗರಿಗೂ ಸುಮಲತಾ ಬೇಡವಾದರೇ ಎಂಬ ಪ್ರಶ್ನೆ ಎದ್ದಿದೆ. ಅಧಿಕಾರ ಇದ್ದಾಗ ಅವರನ್ನು ಮೆರೆಸುತ್ತಿದ್ದ ಆಪ್ತರು, ಬೆಂಬಲಿಗರು ಕೂಡ ಸುಮಲತಾರ ಫ್ಲೆಕ್ಸ್ ಹಾಕದೆ ನಿರ್ಲಕ್ಷ್ಯ ತೋರಿದಂತಿದೆ. ಪಾದಯಾತ್ರೆ ಕುರಿತು ನಡೆಸಲಾಗಿದ್ದ ಪೂರ್ವಭಾವಿ ಸಭೆಯಲ್ಲೂ ಸುಮಲತಾ ಪಾಲ್ಗೊಂಡಿರಲಿಲ್ಲ.

ಮುಡಾ ಹಗರಣದ ಇನ್ನಷ್ಟು ದಾಖಲೆ ಕೇಳಿದ ರಾಜ್ಯಪಾಲರು; ತನಿಖೆಗೆ ಅನುಮತಿ ಖಚಿತ

ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ಧ ಪ್ರಾಸಿಕ್ಯೂಶನ್‌ಗೆ (Prosecution) ರಾಜ್ಯಪಾಲರು (Governor) ಅನುಮತಿ ನೀಡುವುದು ಬಹುತೇಕ ಖಚಿತವಾಗಿದ್ದು, ಮುಡಾ ಹಗರಣದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡುವಂತೆ ಅರ್ಜಿದಾರ ಟಿಜೆ ಅಬ್ರಹಾಂ (TJ Abraham) ಅವರಿಗೆ ಸೂಚಿಸಿದ್ದಾರೆ.

ನಿನ್ನೆ ಈ ಕುರಿತು ಅಬ್ರಹಾಂ ಅವರನ್ನು ಕರೆದು ಮಾಹಿತಿ ಪಡೆದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot), ಕ್ಯಾಬಿನೆಟ್ ನಿರ್ಣಯದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ (Supreme Court) ತೀರ್ಪುಗಳ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದಾರೆ. ಆ ಮೂಲಕ ಪ್ರಕರಣವನ್ನು ಗಟ್ಟಿಗೊಳಿಸಲು ಅಗತ್ಯವಾದ ಮಾಹಿತಿಗಳನ್ನು ಪಡೆಯಲು ಮುಂದಾಗಿದ್ದಾರೆ.

ಕ್ಯಾಬಿನೆಟ್‌ ರಾಜ್ಯಪಾಲರಿಗೆ ತನ್ನ ನಿರ್ಣಯವನ್ನು ಕಳಿಸುವುದರ ಜೊತೆಗೆ, ದೂರುದಾರರ ಚಾರಿತ್ರ್ಯವನ್ನೂ ಪ್ರಶ್ನೆ ಮಾಡಿತ್ತು. ಸರ್ಕಾರಿ ಅಧಿಕಾರಿಯನ್ನು ಒಂದು ಕೋಟಿ ರೂಪಾಯಿಗೆ ಬ್ಲಾಕ್‌ಮೇಲ್‌ ಮಾಡಿದ ಆರೋಪ ಅಬ್ರಹಾಂ ಮೇಲಿದೆ ಎಂದಿತ್ತು. ಈ ಕುರಿತು ಸಿಡಿಯನ್ನು ಕೂಡ ರಾಜ್ಯಪಾಲರಿಗೆ ರವಾನೆ ಮಾಡಿತ್ತು. ಈ ಆರೋಪದ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ನೀಡಿ ಎಂದು ಕೂಡ ರಾಜ್ಯಪಾಲರು ಅಬ್ರಹಾಂಗೆ ಸೂಚಿಸಿದ್ದಾರೆ.

ಹೀಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡಿ ದಾಖಲೆ ಕೊಡಲಿದ್ದೇನೆ ಎಂದು ದೂರುದಾರ ಅಬ್ರಹಾಂ ತಿಳಿಸಿದ್ದಾರೆ. ಸರ್ಕಾರದ ಆರೋಪಕ್ಕೆ ಪ್ರತಿಯಾಗಿ ದಾಖಲೆ ರೆಡಿ ಮಾಡಿಕೊಳ್ಳುತ್ತಿದ್ದು, ಮುಡಾ ಹಗರಣಕ್ಕೆ ಸಂಬಂಧಿಸಿದ ಇನ್ನಷ್ಟು ದಾಖಲೆ ಪತ್ರಗಳನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: CM Siddaramaiah: ಸಿಎಂ ಸಿದ್ದರಾಮಯ್ಯಗೆ ರಾಜಭವನದಿಂದ ಮೂರನೇ ನೋಟೀಸ್ ಜಾರಿ! ಯಾಕೆ ಪದೇ ಪದೆ ನೋಟೀಸ್‌?

Exit mobile version