ರಾಮನಗರ: ಚನ್ನಪಟ್ಟಣದಲ್ಲಿ ನಡೆಯುವ ಉಪಚುನಾವಣೆಯಲ್ಲಿ (Channaptna By Election) ನಾನೇ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿದ್ದು, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಕೂಡ ಇದನ್ನು ಅನುಮೋದಿಸಿದ್ದಾರೆ. ಅವರೇ ಅದನ್ನು ಘೋಷಿಸಬೇಕು ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwar) ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕಳೆದ ವಾರ ನಾನು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದೆ. ಈಗಾಗಲೇ ಕಾಂಗ್ರೆಸ್ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಆದಷ್ಟು ಬೇಗ ಮೈತ್ರಿ ಅಭ್ಯರ್ಥಿ ಆಯ್ಕೆ ಮಾಡಿ ಹೆಸರು ಸೂಚಿಸಿ. ಹೆಚ್‌ಡಿಕೆ ಅವರು ನನ್ನನ್ನೇ ನಿಲ್ಲುವಂತೆ ಹೇಳಿದ್ದಾರೆ. ಅದಕ್ಕೆ ಅಧಿಕೃತ ಅನುಮೋದನೆ ಅವರೇ ಕೊಡಬೇಕು. ಮೈತ್ರಿ ಪಕ್ಷದ ವರಿಷ್ಠರು ಅಧಿಕೃತ ಘೋಷಣೆ ಮಾಡಬೇಕು. ಹಾಗಾಗಿ ನೀವೇ ಬಂದು ಹೆಸರು ಘೋಷಣೆ ಮಾಡಿ ಎಂದು ಅವರನ್ನೇ ಕೇಳಿದ್ದೇನೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿಪಿವೈ ಹೇಳಿದರು.
ಕುಮಾರಸ್ವಾಮಿ ಎನ್‌ಡಿಎ ಮೈತ್ರಿಯಿಂದ ಗೆದ್ದು ಕೇಂದ್ರ ಮಂತ್ರಿಯಾಗಿದ್ದಾರೆ. ಬಹಳ ಎತ್ತರದ ಸ್ಥಾನಕ್ಕೆ ಹೋಗಿದ್ದಾರೆ. ಕುಮಾರಸ್ವಾಮಿ ಅವರು ಚನ್ನಪಟ್ಟಣಕ್ಕೆ ಬಾರದೇ ಇದ್ದರೆ ನಾನು ಸೋಲನ್ನೇ ಕಾಣುತ್ತಿರಲಿಲ್ಲ. ಚನ್ನಪಟ್ಟಣದ ಜನ ನನ್ನನ್ನು ಕೈ ಬಿಡ್ತಿರಲಿಲ್ಲ. ನೀವು ಬಂದ ಮೇಲೆ ನಮ್ಮ ಸಮುದಾಯ ನಿಮ್ಮ ಕೈ ಹಿಡಿದು ಎರಡು ಬಾರಿ ಗೆಲ್ಲಿಸಿದೆ. ಹಾಗಾಗಿ ಕುಮಾರಸ್ವಾಮಿ ಅವರೇ ಬಂದು ನಮ್ಮ ಚುನಾವಣೆ ಮಾಡಬೇಕು. ನಾನು ಈ ಬಗ್ಗೆ ಕುಮಾರಸ್ವಾಮಿ ಅವರಲ್ಲಿ ಮನವಿ ಕೂಡಾ ಮಾಡಿದ್ದೇನೆ. ಅದಕ್ಕೆ ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ತಾಲೂಕಿನ ಜನರ ಆತಂಕ, ಒತ್ತಡ ಹೆಚ್ಚಾಗ್ತಿದೆ. ಹಾಗಾಗಿ ಗೊಂದಲಕ್ಕೆ ಅವಕಾಶ ಕೊಡದೇ ಶೀಘ್ರದಲ್ಲೇ ಅಭ್ಯರ್ಥಿ ಘೋಷಣೆ ಆಗಬೇಕು. ಎಚ್‌ಡಿಕೆ ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತಾರೆ ಎಂದರು ಯೋಗೇಶ್ವರ್.
ಮೈತ್ರಿ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಯೋಗೇಶ್ವರ್, ʼಮೈತ್ರಿ ಧರ್ಮ ಪಾಲಿಸಬೇಕು ಅಂತ ಅಂದುಕೊಂಡರೆ ಯಾರೇ ಸ್ಪರ್ಧೆ ಮಾಡಿದರೂ ಸಪೋರ್ಟ್ ಮಾಡಬೇಕು. ಅದರೆ ಪ್ರಬಲ ಅಭ್ಯರ್ಥಿ ಹಾಕುವ ಅನಿವಾರ್ಯತೆ ಇದೆ. ನಾವು ಸೋಲು ಒಪ್ಪಿಕೊಳ್ಳಬಾರದು. ನನ್ನ ರಾಜಕೀಯ ಜೀವನದ ಗ್ರಾಫ್ ಯಾವತ್ತೂ ಕಡಿಮೆ ಆಗಿಲ್ಲ. ಪ್ರತಿ ಚುನಾವಣೆಯಲ್ಲೂ ಐದು ಸಾವಿರ ಮತಗಳು ಹೆಚ್ಚಾಗ್ತಿವೆ. ಜೊತೆಗೆ ಈಗ ನಾವು ಡಬಲ್ ಬ್ಯಾರೆಲ್ ಗನ್. ನಮ್ಮ ಗುರಿ ಫೇಲ್ ಆಗಲ್ಲʼ ಎಂದರು.
ಕಳೆದ ವಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಮೂರು ದಿನ ಜನಸ್ಪಂದನಾ ಕಾರ್ಯಕ್ರಮ ಮಾಡಿದ್ದಾರೆ. ಇದು ಉಪಚುನಾವಣೆ ದೃಷ್ಠಿಯಲ್ಲಿ ಮಾಡಿರೋ ಸರ್ಕಾರಿ ಸಂತೆ. ಯಾವುದೇ ಗುರಿ ಇಲ್ಲದೇ, ಯೋಜನೆ ಇಲ್ಲದೇ ಮಾಡಿರೋ ಕಾರ್ಯಕ್ರಮ. ಅಧಿಕಾರಿಗಳನ್ನು ಚನ್ನಪಟ್ಟಣಕ್ಕೆ ಕರೆತಂದು ಹೆದರಿಸಿ ಜನರಿಗೆ ಆಸೆ ತೋರಿಸುವ ಕೆಲಸ. ಕಳೆದ ಒಂದು ಕಾಲು ವರ್ಷದ ಅವಧಿಯಲ್ಲಿ ಸರ್ಕಾರ ಸಾರ್ವಜನಿಕರಿಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಸರ್ಕಾರ ಬಂದಾಗಿನಿಂದಲೂ ಚನ್ನಪಟ್ಟಣಕ್ಕೆ ಬಂದಿರಲಿಲ್ಲ. ಈಗ ಚನ್ನಪಟ್ಟಣ ಖಾಲಿ ಇದೆ, ಬಂದಿದ್ದೇನೆ ಅಂತ ಸುಳ್ಳು ಹೇಳ್ತಿದ್ದಾರೆ. ಜನರಿಗೆ ಮನೆ ಕೊಡ್ತೀನಿ, ಸೈಟ್ ಕೊಡ್ತೀನಿ ಅಂತ ಸುಳ್ಳು ಆಸ್ವಾಸನೆ ಕೊಡ್ತಿದ್ದಾರೆ ಎಂದರು ಯೋಗೇಶ್ವರ್.
ಟೌನ್ ವ್ಯಾಪ್ತಿ ಬಿಟ್ಟರೆ ಬಹುತೇಕ ತಾಲೂಕಿನ ಜನತೆಗೆ ಮನೆ ಸಮಸ್ಯೆ ಇಲ್ಲ. ಚುನಾವಣೆ ಸಮಯದಲ್ಲಿ ಮನೆ ಕೊಡುತ್ತೇವೆ ಅನ್ನೋದು ಸುಳ್ಳು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಒನ್ ಮ್ಯಾನ್ ಶೋ ಮಾಡಿದ್ದಾರೆ. ಎಂಪಿಗೆ ಆಹ್ವಾನ ನೀಡಿಲ್ಲ, ನನಗೆ ಆಹ್ವಾನ ನೀಡಿಲ್ಲ. ಸರ್ಕಾರದ ಪ್ರೋಟೋಕಾಲ್ ಸರಿಯಾಗಿ ಫಾಲೋ ಮಾಡದೇ ಕಾರ್ಯಕ್ರಮ ಮಾಡಿದ್ದಾರೆ. ಕೇವಲ ಚುನಾವಣಾ ತಂತ್ರಕ್ಕೆ ಜನ ಸೇರಿಸಿ ಜಾತ್ರೆ ಮಾಡಿದ್ದಾರೆ ಎಂದರು ಅವರು.
ಕ್ಷೇತ್ರದಲ್ಲಿ ಡಿಕೆಶಿ ಅವರ ಕೊಡುಗೆ ಏನೂ ಇಲ್ಲ. ಚನ್ನಪಟ್ಟಣದಿಂದಲೇ ರಾಜಕೀಯ ಜೀವನ ಆರಂಭಿಸಿದ್ರೂ ಅವರ 40 ವರ್ಷದ ಅವಧಿಯಲ್ಲಿ ಅವರ ಕೊಡುಗೆ ಶೂನ್ಯ. ಕೇವಲ ಚುನಾವಣೆ ಸಂದರ್ಭದಲ್ಲಿ ಬಂದು ಜಾತ್ರೆ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮುಂದುವರೆದ್ರೆ ಆ ಕಾರ್ಯಕ್ರಮಕ್ಕೆ ಹೋಗಿ ಖಂಡಿಸುತ್ತೇವೆ. ಪ್ರೋಟೋಕಾಲ್ ಫಾಲೋ ಮಾಡದಿದ್ದರೆ ಮೈತ್ರಿ ಪಕ್ಷದ ನಾಯಕರು ತಡೆ ಮಾಡುತ್ತೇವೆ. ಮುಂದಿನ ಕಾರ್ಯಕ್ರಮಗಳಿಗೆ ಪ್ರತಿಭಟನೆ ಮಾಡ್ತೇವೆ ಎಂದರು.
ಅವರ ಸರ್ಕಾರ ಕುಸಿಯುವ ಹಂತ ತಲುಪಿದೆ. ಅವರಲ್ಲೇ ಸಾಕಷ್ಟು ಗೊಂದಲ ಇದೆ. ನೂರೆಂಟು ಹಗರಣಗಳು ಬೆಳಕಿಗೆ ಬರ್ತಿದೆ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ನೋಡಿದ್ದೇವೆ. ಉಪಚುನಾವಣೆ ಹೊತ್ತಿಗೆ ಅವರ ಸರ್ಕಾರ ಇರುತ್ತೋ, ಇರಲ್ವೋ ಗೊತ್ತಿಲ್ಲ ಎಂದು ಡಿಕೆಶಿಗೆ ಸಿ.ಪಿ.ಯೋಗೇಶ್ವರ್ ಟಾಂಗ್ ನೀಡಿದರು.
ಸರ್ಕಾರದ ಹಣದಲ್ಲಿ ಉಪಚುನಾವಣೆ ಮಾಡ್ತಿದ್ದಾರೆ. ಡಿಕೆಶಿ ಕನಕಪುರದಿಂದ ಗೆದ್ದು ರಾಮನಗರ ಉಸ್ತುವಾರಿ ತೆಗೆದುಕೊಂಡಿಲ್ಲ. ಹೋಗಿ ಬೆಂಗಳೂರು ಉಸ್ತುವಾರಿ ತೆಗೆದುಕೊಂಡಿರೋದು ಯಾಕೆ? ಈಗ ಚುನಾವಣೆ ಸಮಯದಲ್ಲಿ ಮಾತ್ರ ಚನ್ನಪಟ್ಟಣ ನೆನಪಾಗಿರೋದಾ? ಚನ್ನಪಟ್ಟಣ ಜನ ಬುದ್ಧಿವಂತರಿದ್ದಾರೆ. ಇಂತಹ ನಾಟಕಗಳಿಗೆ ನಮ್ಮ ಜನ ಉತ್ತರ ಕೊಡ್ತಾರೆ ಎಂದು ಹೇಳಿದರು.
ಇದನ್ನೂ ಓದಿ: HD Kumaraswamy: ಸಿಎಂ ಕುರ್ಚಿ ಮೇಲೆ ಟವಲ್ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಎಚ್‌ಡಿಕೆ