Site icon Vistara News

CM Siddaramaiah: ಸಿಎಂ ವಿರುದ್ಧದ ಪ್ರಾಸಿಕ್ಯೂಷನ್;​ ವಾದ-ವಿವಾದ ಆಲಿಸಿ ಸೆ.12ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

CM Siddaramaiah

ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವಾದ-ವಿವಾದ ಆಲಿಸಿದ ಹೈಕೋರ್ಟ್‌ ಸೆ.12ಕ್ಕೆ ಮುಂದೂಡಿದ್ದಾರೆ.

ಸೆ.9ರಂದು ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. 17A ಅಡಿ ಪ್ರಾಸಿಕ್ಯೂಷನ್‌ಗೆ ಪೊಲೀಸರು ಅನುಮತಿ ಕೇಳಬಹುದು. ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು ಎಂದು ಲಲಿತಾ ಕುಮಾರಿ ಪ್ರಕರಣವನ್ನು ಉಲ್ಲೇಖಿಸಿದ್ದರು. ಎಫ್‌ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ಅಗತ್ಯವೆಂದಿದೆ. ಆದರೆ 17ಎ ಅಡಿ ಅನುಮತಿಗೆ ಪ್ರಾಥಮಿಕ ತನಿಖೆ ಆಗಿರಬೇಕಿಂದಿಲ್ಲ. ವಿಚಾರಣೆ, ತನಿಖೆಗೂ ಮುನ್ನ 17 ಎ ಅನುಮತಿ ಬೇಕಲ್ಲವೇ ? ಎಂದು ಅಡ್ವೊಕೆಟ್ ಜನರಲ್‌ಗೆ ನ್ಯಾ.ಎಂ.ನಾಗಪ್ರಸನ್ನ ಪ್ರಶ್ನೆ ಮಾಡಿದರು. ಯಾವ ಕೇಸ್‌ನಲ್ಲಿ ಪ್ರಾಥಮಿಕ ತನಿಖೆ ಬೇಕೆಂಬುದನ್ನು ಸುಪ್ರೀಂಕೋರ್ಟ್ ಹೇಳಿದೆ. ಇದು 22 ವರ್ಷಕ್ಕಿಂತ ಹಳೆಯ ಕೇಸ್ ಆಗಿರುವುದರಿಂದ ಪ್ರಾಥಮಿಕ ತನಿಖೆ ಬೇಕು ಎಂದು ಎಜಿ ವಾದಿಸಿದರು.

ಪೊಲೀಸರಿಗೆ ದೂರು ನೀಡಿದ ನಂತರ 15 ದಿನಗಳಿಂದ 6 ವಾರ ಕಾಲಾವಕಾಶ ಇದೆ. ಆದರೆ ಅದಕ್ಕೆ ಕಾಯದೇ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಎಲ್ಲ ನಾಗರಿಕರು ಎಲ್ಲರ ವಿರುದ್ಧ ದೂರು ನೀಡಿದರೆ ಸಮಸ್ಯೆ ಆಗಲಿದೆ ಎಂದಾಗ, ಮಧ್ಯಪ್ರವೇಶಿಸಿ ನ್ಯಾಯಾಧೀಶರು, ಹೀಗಾಗಿಯೇ ಡಾ.ಅಶೋಕ್ ಕೇಸ್‌ನಲ್ಲಿ ಮಾರ್ಗಸೂಚಿ ರೂಪಿಸಲಾಗಿದೆ ಎಂದರು. ರಾಜ್ಯಪಾಲರು ತನಿಖಾಧಿಕಾರಿಯಿಂದ ವರದಿ ಪಡೆಯಬೇಕಿತ್ತು. ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡುವ ಬದಲು ವರದಿ ಪಡೆಯಬೇಕಿತ್ತು. ವರದಿಯ ಬಲವಿಲ್ಲದೇ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ 17ಎ ಮಾರ್ಗಸೂಚಿ ಆಧರಿಸಿ ಎಜಿ ವಾದ ಮಂಡಿಸಿದ್ದರು. ಸಿಎಂ ಕರ್ತವ್ಯದ ಭಾಗವಾಗಿ ಈ ಕೃತ್ಯ ನಡೆದಿಲ್ಲ. ಇದಕ್ಕೆ ಅವಕಾಶ ಕೊಟ್ಟರೆ ದಿನನಿತ್ಯ ಹಲವು ಖಾಸಗಿ ದೂರು ದಾಖಲಾಗಬಹುದು. ಸಕ್ಷಮ ಪ್ರಾಧಿಕಾರಿಯೇ ಇದನ್ನೆಲ್ಲಾ ವಿಚಾರಣೆ ನಡೆಸಿದರೆ ಸಮಸ್ಯೆ ಆಗಲಿದೆ. ಪೊಲೀಸ್ ಅಧಿಕಾರಿಯ ಮೂಲಕವೇ 17ಎ ಅಡಿ ಅನುಮತಿ ಪಡೆಯಬೇಕು ಎಂದರು.

ರಾಜ್ಯಪಾಲರು ಅನುಸರಿಸಿದ ಪ್ರಕ್ರಿಯೆಗೆ ಕಾನೂನಿನಡಿ ಅವಕಾಶವಿಲ್ಲ-ಎಜಿ

3 ವಾಲ್ಯೂಮ್‌ಗಳ ದಾಖಲೆಗಳನ್ನು ರಾಜ್ಯಪಾಲರ ಪರ ವಕೀಲರು ನೀಡಿದ್ದಾರೆ. ಆದರೆ ಶೋಕಾಸ್ ನೋಟಿಸ್ ನೀಡುವ ಮುನ್ನ ಪ್ರಾಥಮಿಕ ವರದಿ ಇಲ್ಲ. 17ಎ ಅಡಿ ರಾಜ್ಯಪಾಲರೇ ಪ್ರಾಥಮಿಕ ತನಿಖೆ ನಡೆಸುವಂತಿಲ್ಲ. ತನಿಖಾಧಿಕಾರಿಯಂತೆ ರಾಜ್ಯಪಾಲರು ವರ್ತಿಸುವಂತಿಲ್ಲ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಾಧೀಶರು ಎಫ್‌ಐಆರ್ ದಾಖಲಿಸುವ ಮುನ್ನ 17ಎ ಅನುಮತಿ ಪಡೆಯಬೇಕು. ಕೋರ್ಟ್ ಸೂಚಿಸಿದ್ದರೆ ಎಫ್‌ಐಆರ್ ದಾಖಲಾಗುತ್ತಿತ್ತು. ಇದನ್ನು ತಡೆಯಲು ಖಾಸಗಿ ದೂರುದಾರರಿಗೆ ಅನುಮತಿ ಪಡೆಯುವ ಅವಕಾಶ ನೀಡಲಾಗಿದೆ ಎಂದರು.

ಈ ವೇಳೆ ವಾದ ಮುಂದುವರಿಸಿದ ಎಜಿ ಶಶಿಕಿರಣ್‌, ತನಿಖಾಧಿಕಾರಿಯು ಪ್ರಾಥಮಿಕ ತನಿಖೆ ನಡೆಸಬೇಕು, ರಾಜ್ಯಪಾಲರಲ್ಲ. ರಾಜ್ಯಪಾಲರು ಅನುಸರಿಸಿದ ಪ್ರಕ್ರಿಯೆಗೆ ಕಾನೂನಿನಡಿ ಅವಕಾಶವಿಲ್ಲ. ರಾಜ್ಯಪಾಲರು ಖಾಸಗಿ ದೂರುದಾರರಿಗೆ ಅವಕಾಶವನ್ನೇ ನೀಡಬಾರದಿತ್ತು. ದೂರುದಾರ ಪ್ರದೀಪ್ ಕುಮಾರ್ ಪೊಲೀಸರಿಗೆ ದೂರನ್ನೇ ನೀಡಿರಲಿಲ್ಲ. ಖಾಸಗಿ ದೂರುದಾರರ ಮನವಿಯನ್ನು ರಾಜ್ಯಪಾಲರು ಹಿಂತಿರುಗಿಸಬೇಕಿತ್ತು. ಸಚಿವ ಸಂಪುಟದ ನಿರ್ಧಾರವನ್ನು ತಿರಸ್ಕರಿಸುವ ಅನಿಯಂತ್ರಿತ ಅಧಿಕಾರವಿಲ್ಲ. ರಾಜ್ಯಪಾಲರ ಆದೇಶದಲ್ಲಿ ಇದಕ್ಕೆ ಕಾರಣಗಳಿರಬೇಕು. ರಾಜ್ಯಪಾಲರು ಪರಿಶೀಲಿಸಿದ ಕಡತದಲ್ಲಲ್ಲ ಎಂದು ವಾದ ಅಂತ್ಯಗೊಳಿಸಿದರು.

ಪತ್ನಿ ಆಸ್ತಿಯನ್ನು ಪತಿಯ ಆಸ್ತಿ ಎಂದು ಪರಿಗಣಿಸಿ- ಸ್ನೇಹಮಯಿ ಕೃಷ್ಣ ಪರ ವಕೀಲೆ ವಾದ

ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ಶುರು ಮಾಡಿದರು. 1996 – 1999 ಅವಧಿಯಲ್ಲಿ ಡಿಸಿಎಂ ಆಗಿದ್ದಾಗ ಡಿನೋಟಿಫಿಕೇಷನ್ ಮಾಡಲಾಗಿದೆ. 2004-2007 ರಲ್ಲಿ ಡಿಸಿಎಂ ಆಗಿದ್ದಾಗ ಭೂಪರಿವರ್ತನೆ ಮಾಡಲಾಗಿದೆ. 2013 – 2018 ವರೆಗೆ ಸಿಎಂ ಆಗಿದ್ದಾಗ ಪರಿಹಾರದ ಸೈಟ್‌ಗೆ ಅರ್ಜಿ ಸಲ್ಲಿಸಲಾಗಿದೆ. 2018-2022 ವರೆಗೆ ಸಿದ್ದರಾಮಯ್ಯ ಶಾಸಕರಾಗಿದ್ದರು. ಸರ್ಕಾರಿ ಗೆಸ್ಟ್ ಹೌಸ್‌ನಲ್ಲಿ ಮುಡಾದಿಂದ ಸೇಲ್ ಡೀಡ್ ಮಾಡಿಕೊಡಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗದೇ ಸೇಲ್ ಡೀಡ್ ಮಾಡಲಾಗಿದೆ.

ಅಧಿಕಾರ ದುರುಪಯೋಗ ಪಡಿಸಿಕೊಂಡು ಹೀಗೆ ಮಾಡಲಾಗಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಈ ಎಲ್ಲಾ ಚಟುವಟಿಕೆ ನಡೆದಿವೆ. ಪತ್ನಿಗೆ ಬೇರೆ ಆದಾಯದ ಮೂಲಗಳಿರಲಿಲ್ಲ. ಆದಾಯ ತೆರಿಗೆ ರಿಟರ್ನ್ ಅನ್ನು ಸಿದ್ದರಾಮಯ್ಯ ಪತ್ನಿ ಫೈಲ್ ಮಾಡಿಲ್ಲ. ಹೀಗಾಗಿ ಪತ್ನಿಯ ಆಸ್ತಿಯನ್ನು ಪತಿಯ ಆಸ್ತಿ ಎಂದೇ ಪರಿಗಣಿಸಬೇಕು. ಸಿದ್ದರಾಮಯ್ಯ ಮೇಲಿನ ಆರೋಪಗಳಿಗೆ ಪುರಾವೆಗಳಿವೆ ಎಂದು ಸ್ನೇಹಮಯಿ ಕೃಷ್ಣ ಪರ ಲಕ್ಷ್ಮಿ ಅಯ್ಯಂಗಾರ್ ವಾದಮಂಡನೆ ಪೂರ್ಣಗೊಳಿಸಿದರು. ಇದಾದ ಬಳಿಕ ಸೆಪ್ಟೆಂಬರ್ 12ಕ್ಕೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version