Site icon Vistara News

Covishield Vaccine: ಭಾರತದಲ್ಲೂ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Covishield vaccine supreme court

ಹೊಸದಿಲ್ಲಿ: ಬ್ರಿಟನ್‌ನಲ್ಲಿ (UK) ಕೋವಿಶೀಲ್ಡ್‌ ಲಸಿಕೆಯ (Covishield vaccine) ಅಡ್ಡ ಪರಿಣಾಮಗಳ (Side effects) ಬಗ್ಗೆ ಕೋಲಾಹಲ ಹೆಚ್ಚುತ್ತಿರುವಂತೆ, ಭಾರತದಲ್ಲಿಯೂ ಕೋವಿಶೀಲ್ಡ್‌ ಲಸಿಕೆ ಸೈಡ್‌ ಎಫೆಕ್ಟ್‌ಗಳ ಬಗೆಗೆ ಅಧ್ಯಯನ ನಡೆಸಲು ಆದೇಶಿಸುವಂತೆ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ (Supreme court) ಮನವಿ ಸಲ್ಲಿಸಿದ್ದಾರೆ.

ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (ಏಮ್ಸ್-‌ AIIMS) ವೈದ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸುವ ಮೂಲಕ ಅಸ್ಟ್ರಾಜೆನೆಕಾದ (AstraZeneca) ಕೋವಿಶೀಲ್ಡ್ ಲಸಿಕೆ, ಅದರ ಅಡ್ಡಪರಿಣಾಮಗಳು ಮತ್ತು ಅಪಾಯಕಾರಿ ಅಂಶಗಳನ್ನು ಪರೀಕ್ಷಿಸುವಂತೆ ಕೋರಿ ವಕೀಲ ವಿಶಾಲ್ ತಿವಾರಿ ಅವರು ಅರ್ಜಿ ಸಲ್ಲಿಸಿದ್ದಾರೆ. ಸಮಿತಿಯು ಏಮ್ಸ್‌ ನಿರ್ದೇಶಕರ ನೇತೃತ್ವವನ್ನು ಹೊಂದಿರಬೇಕು; ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯವರು ಮೇಲ್ವಿಚಾರಣೆ ಮಾಡಬೇಕು; ಕೋವಿಶೀಲ್ಡ್ ಲಸಿಕೆ, ಅದರ ಅಡ್ಡಪರಿಣಾಮಗಳು ಮತ್ತು ಅಪಾಯಕಾರಿ ಅಂಶಗಳನ್ನು ಪರೀಕ್ಷಿಸಬೇಕು ಎಂದವರು ಕೋರಿದ್ದಾರೆ.

COVID-19 ಸಮಯದಲ್ಲಿ ವ್ಯಾಕ್ಸಿನೇಷನ್ ಅಭಿಯಾನದ ಅಡ್ಡ ಪರಿಣಾಮಗಳಿಂದ ಮರಣ ಹೊಂದಿದ, ತೀವ್ರವಾಗಿ ಅಸ್ವಸ್ಥರಾದ, ಅಂಗವಿಕಲರಾದ ನಾಗರಿಕರಿಗೆ ಲಸಿಕೆ ಹಾನಿ ಪಾವತಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸ್ಥಾಪಿಸಬೇಕು. ಜನರಿಗೆ ಪರಿಹಾರ ನೀಡಲು ಸುಪ್ರೀಂ ಕೋರ್ಟ್‌ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಬೇಕು ಎಂದು ತಿವಾರಿ ಮನವಿಯಲ್ಲಿ ತಿಳಿಸಿದ್ದಾರೆ.

ಕೋವಿಶೀಲ್ಡ್ ಲಸಿಕೆ ಅಪರೂಪದ ಸಂದರ್ಭಗಳಲ್ಲಿ ಅಡ್ಡ ಪರಿಣಾಮಗಳನ್ನು ಕಾರಣವಾಗಬಹುದು ಎಂದು ಇತ್ತೀಚೆಗೆ ಕಂಪನಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ತಿವಾರಿ ಅರ್ಜಿ ಸಲ್ಲಿಸಿದ್ದಾರೆ. ಫಾರ್ಮಾಸ್ಯುಟಿಕಲ್ ಕಂಪನಿ ಮತ್ತು ಲಸಿಕೆ ಡೆವಲಪರ್ ಆಸ್ಟ್ರಾಜೆನೆಕಾ ಬ್ರಿಟನ್‌ನ ನ್ಯಾಯಾಲಯದಲ್ಲಿ ಇದನ್ನು ತಿಳಿಸಿದೆ. ಇದು ರಕ್ತದಲ್ಲಿ ಪ್ಲೇಟ್‌ಲೆಟ್ ಕಡಿಮೆಯಾಗುವಿಕೆ ಮತ್ತು ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು ಎಂದು ಹೇಳಿದೆ.

“ಅಸ್ಟ್ರಾಜೆನೆಕಾ ಕೋವಿಶೀಲ್ಡ್‌ ಲಸಿಕೆ ಮತ್ತು ಥ್ರಂಬೋಸಿಸ್ (ಟಿಟಿಎಸ್) ನಡುವಿನ ಸಂಬಂಧವನ್ನು ಒಪ್ಪಿಕೊಂಡಿದೆ. ಅಸ್ಟ್ರಾಜೆನೆಕಾ ಲಸಿಕೆ ಸೂತ್ರವನ್ನು ಪುಣೆ ಮೂಲದ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ನೀಡಲಾಗಿದೆ. ಕೋವಿಶೀಲ್ಡ್ ತಯಾರಿಕೆಗಾಗಿ ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ 175 ಕೋಟಿಗೂ ಹೆಚ್ಚು ಜನ ಕೋವಿಶೀಲ್ಡ್ ಅನ್ನು ಪಡೆದರು” ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕೋವಿಶೀಲ್ಡ್‌ ಜೊತೆಗೆ ಭಾರತೀಯ ತಯಾರಿಕೆಯಾದ Covaxin ಅನ್ನು ಕೂಡ ಭಾರತದಲ್ಲಿ ನೀಡಲಾಗಿತ್ತು.

ಕಳೆದ ವರ್ಷ ಲಂಡನ್‌ನಲ್ಲಿ ಜೇಮೀ ಸ್ಕಾಟ್ ಎಂಬವರು ಕಂಪನಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಅವರಲ್ಲಿ ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮೆದುಳಿನಲ್ಲಿ ರಕ್ತಸ್ರಾವವ ಉಂಟಾಗಿತ್ತು. ಶಾಶ್ವತ ಮಿದುಳಿನ ಗಾಯ ಉಂಟಾಗಿತ್ತು. ಇವರೂ ಸೇರಿ UKಯಲ್ಲಿ ಐವತ್ತೊಂದು ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂತ್ರಸ್ತರು ಮತ್ತು ಸಂಬಂಧಿಕರು ಸುಮಾರು 100 ಮಿಲಿಯನ್ ಪೌಂಡ್‌ ಪರಿಹಾರವನ್ನು ಬಯಸಿದ್ದಾರೆ.

ಭಾರತದಲ್ಲಿ, ಕೋವಿಡ್ -19 ರ ನಂತರ ಹೃದಯಾಘಾತ ಮತ್ತು ವ್ಯಕ್ತಿಗಳ ಹಠಾತ್ ಕುಸಿತದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವಜನರಲ್ಲಿಯೂ ಹೃದಯಾಘಾತದ ಪ್ರಕರಣಗಳು ಸಂಭವಿಸಿವೆ. ಕೋವಿಶೀಲ್ಡ್‌ ಮಾಲಿಕ ಕಂಪನಿಯ ಮಾಹಿತಿ ದಾಖಲಾತಿಯು ನಮ್ಮಲ್ಲಿಯೂ ನಾಗರಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೀಡಲಾದ ಕೋವಿಶೀಲ್ಡ್ ಲಸಿಕೆಯ ಅಪಾಯಗಳ ಬಗ್ಗೆ ಯೋಚಿಸಲು ಒತ್ತಾಯಿಸಿದೆ ಎಂದು ಮನವಿಯಲ್ಲಿ ಹೇಳಿದೆ.

ಈ ಮೂಲಕ ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ತಿವಾರಿ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಲಸಿಕೆಯ ದುಷ್ಪರಿಣಾಮಗಳಿಗೆ ನಷ್ಟಪರಿಹಾರವನ್ನು ಕೋರಿದ್ದು, ಯುಕೆಯಂತಹ ಕೆಲವು ದೇಶಗಳಲ್ಲಿಯೂ ವ್ಯಾಕ್ಸಿನೇಷನ್‌ನಿಂದ ತೀವ್ರವಾಗಿ ಅಂಗವಿಕಲರಾದ ಜನರಿಗೆ ನಷ್ಟ ಪಾವತಿ ವ್ಯವಸ್ಥೆ ಇದೆ ಎಂದಿದ್ದಾರೆ.

ಇದನ್ನೂ ಓದಿ: Covishield Vaccine: ಭಾರತದಲ್ಲಿ ಕೋವಿಶೀಲ್ಡ್‌ ಅಡ್ಡ ಪರಿಣಾಮದ ಅಪಾಯವಿಲ್ಲ: ಯಾಕೆ ಗೊತ್ತೆ?

Exit mobile version