ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ವೈರಸ್ (Corona Virus) ಎದುರಿಸಲು ಕೋವಿಶೀಲ್ಡ್ ಲಸಿಕೆ (Covishield vaccine) ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ (blood clotting) ಅಡ್ಡ ಪರಿಣಾಮದ (Side effects) ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಹೇಳಿದ್ದಾರೆ.
ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳು ಮಾತ್ರ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮವನ್ನು ಅನುಭವಿಸುತ್ತಾರೆ. ಭಾರತದಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಎಂದವರು ತಿಳಿಸಿದ್ದಾರೆ. ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಡ್ಡ ಪರಿಣಾಮ ಕಾಣಿಸಿಕೊಳ್ಳಬಹುದು ಎಂದು ಮೊನ್ನೆ ಅದರ ತಯಾರಿಕಾ ಕಂಪನಿ ಅಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ಬಳಿಕ ಈ ಬಗ್ಗೆ ಆತಂಕ ಮೂಡಿತ್ತು.
“ಮೊದಲ ಡೋಸ್ ಅನ್ನು ಪಡೆದಾಗ ಅಡ್ಡ ಪರಿಣಾಮದ ರಿಸ್ಕ್ ಅತ್ಯಧಿಕವಾಗಿರುತ್ತದೆ. ಆದರೆ ಎರಡನೇ ಡೋಸ್‌ನೊಂದಿಗೆ ಕಡಿಮೆಯಾಗುತ್ತದೆ; ಮೂರನೆಯದರೊಂದಿಗೆ ಮತ್ತೂ ಕಡಿಮೆಯಾಗುತ್ತದೆ. ಅಡ್ಡ ಪರಿಣಾಮ ಸಂಭವಿಸುವುದಾದಲ್ಲಿ, ಲಸಿಕೆ ಪಡೆದ ಎರಡು ಮೂರು ತಿಂಗಳೊಳಗೆ ಕಾಣಿಸಿಕೊಳ್ಳುತ್ತದೆ” ಎಂದು ಗಂಗಾಖೇಡ್ಕರ್ ತಿಳಿಸಿದ್ದಾರೆ. ಆದರೆ, ಭಾರತದಲ್ಲಿ ಮೂರು ಹಂತಗಳ ಲಸಿಕೆ ಅಭಿಯಾನ ವರ್ಷಗಳ ಹಿಂದೆಯೇ ಮುಗಿದಿದ್ದು, ಅಡ್ಡ ಪರಿಣಾಮಗಳ ಪ್ರಕರಣಗಳು ಅತ್ಯಂತ ವಿರಳವಾಗಿ ವರದಿಯಾಗಿವೆ.
ಬ್ರಿಟನ್‌ನ ಮಾಧ್ಯಮ ವರದಿಗಳು ಉಲ್ಲೇಖಿಸಿರುವ ನ್ಯಾಯಾಲಯದ ದಾಖಲೆಗಳ ಪ್ರಕಾರ, ತನ್ನ ಕೋವಿಡ್ ಲಸಿಕೆ ಅಪರೂಪವಾಗಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಒಳಗೊಂಡ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿದೆ. ಈ ಲಸಿಕೆಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಹ ಉತ್ಪಾದಿಸಿದೆ. ಇದನ್ನು ಕೋವಿಶೀಲ್ಡ್ ಎಂದು ಕರೆಯಲಾಗುತ್ತದೆ. ಭಾರತೀಯ ಜನಸಂಖ್ಯೆಯ ಕನಿಷ್ಠ 90 ಪ್ರತಿಶತದಷ್ಟು ಜನರು ಈ ಲಸಿಕೆಯನ್ನು ಪಡೆದಿದ್ದಾರೆ. ಭಾರತದಲ್ಲಿ ಸುಮಾರು 175 ಕೋಟಿ ಕೋವಿಶೀಲ್ಡ್ ಲಸಿಕೆ ಡೋಸ್ ನೀಡಲಾಗಿದೆ.
ಕಂಪನಿಯು ನ್ಯಾಯಾಲಯದಲ್ಲಿ ಒಪ್ಪಿಕೊಂಡಂತೆ, ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂಬ ಅಪರೂಪದ ಅಡ್ಡ ಪರಿಣಾಮದ ಸಾಧ್ಯತೆ ಲಸಿಕೆಗೆ ಇದೆ. ಯುರೋಪ್‌ನಲ್ಲಿ ವ್ಯಾಕ್ಸಿನೇಷನ್ ಅಭಿಯಾನ ಪ್ರಾರಂಭವಾದ ತಿಂಗಳೊಳಗೆ ಕೆಲವು ಇಂಥ ಪ್ರಕರಣಗಳು ಬೆಳಕಿಗೆ ಬಂದವು. ಕೆಲವು ದೇಶಗಳು ಅಸ್ಟ್ರಾಜೆನೆಕಾ ಲಸಿಕೆಯ ಬಳಕೆಯನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿದವು.
ʼವ್ಯಾಕ್ಸಿನೇಶನ್ ಬಳಿಕದ ಪ್ರತಿಕೂಲ ಘಟನೆಗಳ ಕುರಿತು ಸರ್ಕಾರಿ ಸಮಿತಿʼಯು (AEFI) ದೇಶದಲ್ಲಿ TTSನ ಕನಿಷ್ಠ 36 ಪ್ರಕರಣಗಳನ್ನು ಪರಿಶೀಲಿಸಿದೆ. 2021ರಲ್ಲಿ ದೇಶದಲ್ಲಿ ಕೋವಿಡ್-19 ಲಸಿಕೆ ಹಾಕಿದ ಮೊದಲ ವರ್ಷ 18 ಸಾವುಗಳನ್ನು ದೃಢಪಡಿಸಿದೆ. ಆದರೆ ಇದು ಭಾರತೀಯ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತಿದ್ದು, ಬ್ರಿಟನ್‌ನ ನ್ಯಾಯಾಲಯದಲ್ಲಿ ಆಗಿರುವ ವಾದವನ್ನು ಮಂಡಿಸಿ ನ್ಯಾಯ ಪಡೆಯಲು ಸಾಧ್ಯವಿಲ್ಲ.
ಐರೋಪ್ಯ ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕೆ ಹಾಕಲು ಆರಂಭಿಸಿದ ಅವಧಿಯಲ್ಲಿ TTS ವರದಿಯಾಗಿದೆ. ಆದರೆ ಭಾರತದಲ್ಲಿ ಇದು ಬಹಳ ಅಪರೂಪ ಎಂದು ತಜ್ಞರು ಹೇಳುತ್ತಾರೆ. “ಟಿಟಿಎಸ್ ಬಹಳ ಅಪರೂಪದ ಅಡ್ಡ ಪರಿಣಾಮ. ಯುರೋಪಿಯನ್ನರಿಗೆ ಹೋಲಿಸಿದರೆ ಭಾರತೀಯರು ಮತ್ತು ದಕ್ಷಿಣ ಏಷ್ಯಾದವರಲ್ಲಿ ಇನ್ನೂ ಅಪರೂಪ. ವ್ಯಾಕ್ಸಿನೇಷನ್ ಜೀವಗಳನ್ನು ಉಳಿಸಿದೆ. ಅದರ ಪ್ರಯೋಜನಕ್ಕೆ ಹೋಲಿಸಿದರೆ ಅಪಾಯಗಳನ್ನು ಕ್ಷುಲ್ಲಕ” ಎಂದು ತಜ್ಞರು ವಿವರಿಸಿದ್ದಾರೆ.
ಅಡ್ಡ ಪರಿಣಾಮದ ರಿಸ್ಕ್ ಮೊದಲ ವ್ಯಾಕ್ಸಿನೇಷನ್ ನಂತರದ ಮೊದಲ ಕೆಲವು ವಾರಗಳಲ್ಲಿ ಮಾತ್ರ ಹೆಚ್ಚು. ಹೆಚ್ಚಿನ ಭಾರತೀಯರು ಈಗಾಗಲೇ ಮೂರು ಡೋಸ್ ಪಡೆದಿದ್ದಾರೆ. ಇದಾಗಿ ಬಹಳ ಸಮಯ ಸಂದಿದೆ. “ನಾವೆಲ್ಲರೂ ಲಸಿಕೆಯನ್ನು ಬಹಳ ಹಿಂದೆಯೇ ಯಶಸ್ವಿಯಾಗಿ ಪಡೆದಿದ್ದೇವೆ” ಎಂದು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಗ್ಲೋಬಲ್ ಹೆಲ್ತ್‌ನ ನಿರ್ದೇಶಕ ಡಾ ಗಗನ್‌ದೀಪ್ ಕಾಂಗ್ ಹೇಳಿದ್ದಾರೆ.
“ಜನರು ಈಗ ಪ್ರತಿಕ್ರಿಯಿಸುತ್ತಿರುವುದು ಆಶ್ಚರ್ಯಕರವಾಗಿದೆ. ವ್ಯಾಕ್ಸಿನೇಷನ್ ಅಭಿಯಾನ ನಡೆಯುತ್ತಿದ್ದಾಗಲೂ ಸೈಡ್ ಎಫೆಕ್ಟ್‌ಗಳನ್ನು ಉತ್ತಮವಾಗಿ ದಾಖಲಿಸಲಾಗಿದೆ ಮತ್ತು ವೈಜ್ಞಾನಿಕವಾಗಿ ಸ್ವೀಕರಿಸಲಾಗಿದೆ. ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿದ್ದಾಗ ಲಸಿಕೆಯ ಪ್ರಯೋಜನವು ಅಪಾಯವನ್ನು ಮೀರಿಸಿತ್ತು” ಎಂದು ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್‌ನ ಬಯೋಸೈನ್ಸ್ ಮತ್ತು ಆರೋಗ್ಯ ಸಂಶೋಧನೆಯ ಡೀನ್ ಡಾ. ಅನುರಾಗ್ ಅಗರ್ವಾಲ್ ಹೇಳುತ್ತಾರೆ.
ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್‌ನಲ್ಲಿನ 2022ರ ಅಧ್ಯಯನದ ಪ್ರಕಾರ ಅಸ್ಟ್ರಾಜೆನೆಕಾ ಮೊದಲ ಡೋಸ್ ಸ್ವೀಕರಿಸಿದ ಪ್ರತಿ ಹತ್ತು ಲಕ್ಷ ಜನರಲ್ಲಿ 8.1 ಟಿಟಿಎಸ್ ಪ್ರಕರಣಗಳು ಕಂಡುಬಂದಿವೆ. ಎರಡನೇ ಡೋಸ್ ಸ್ವೀಕರಿಸಿದ ಪ್ರತಿ ಹತ್ತು ಲಕ್ಷ ಮಂದಿಯಲ್ಲಿ 2.3 ಟಿಟಿಎಸ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಭೌಗೋಳಿಕ ವ್ಯತ್ಯಾಸವಿದೆ. ಹೆಚ್ಚಿನ ಪ್ರಕರಣಗಳು ನಾರ್ಡಿಕ್ ದೇಶಗಳಿಂದ (ನಾರ್ವೆ ಇತ್ಯಾದಿ- ಹತ್ತು ಲಕ್ಷಕ್ಕೆ 17.6) ವರದಿಯಾಗಿವೆ. ಏಷ್ಯಾದ ದೇಶಗಳಲ್ಲಿ ಅತಿ ಕಡಿಮೆ (ಪ್ರತಿ ಹತ್ತು ಲಕ್ಷಕ್ಕೆ 0.2).
ಈಗ ಲಸಿಕೆ ತೆಗೆದುಕೊಳ್ಳಬೇಕೇ?
ಈಗ ಹೆಚ್ಚಿನ ಜನರಲ್ಲಿ ಕೊರೊನಾ ರೋಗನಿರೋಧಕ ಶಕ್ತಿಯಿದ್ದು, ಲಸಿಕೆಯ ಅಗತ್ಯವಿಲ್ಲ ಎಂದು ಡಾ. ಅಗರ್ವಾಲ್ ಹೇಳುತ್ತಾರೆ. “ವೈರಸ್ ಸಂಚರಿಸುತ್ತಿದ್ದರೂ ಈಗ ಭಾರತೀಯರಲ್ಲಿ ಪ್ರತಿಕಾಯ ಮಟ್ಟ ತುಂಬಾ ಹೆಚ್ಚಿವೆ. ಒಮಿಕ್ರಾನ್‌ನಂತಹ ರೂಪಾಂತರಿಗಳಿಂದ ರಕ್ಷಿಸಬಹುದಾದ ಹೊಸ ಲಸಿಕೆಗಳನ್ನು ತೆಗೆದುಕೊಳ್ಳಬೇಕು” ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: Covishield Vaccine: ಕೋವಿಡ್ ಲಸಿಕೆಯಿಂದ ಬರುತ್ತೆ ರಕ್ತ ಹೆಪ್ಪುಗಟ್ಟೋ ಕಾಯಿಲೆ! ವಿವರ ನಿಮಗೆ ತಿಳಿದಿರಲಿ