ಹೊಸದಿಲ್ಲಿ: ಜಗತ್ತಿನಾದ್ಯಂತ ಸೈಬರ್ ಅಪರಾಧ (Cyber Crime) ತಜ್ಞರನ್ನು ಮಾತನಾಡಿಸಿ ನಡೆಸಿರುವ ಸಮೀಕ್ಷೆಯೊಂದರ (Survey) ಪ್ರಕಾರ, ಭಾರತವು (India) ಸೈಬರ್ ಅಪರಾಧದಲ್ಲಿ 10ನೇ ಸ್ಥಾನದಲ್ಲಿದೆ. ಅಂತಾರಾಷ್ಟ್ರೀಯ ಸಂಶೋಧಕರ ತಂಡವು ʼವಿಶ್ವ ಸೈಬರ್ ಅಪರಾಧ ಸೂಚ್ಯಂಕ’ವನ್ನು (World Cybercrime Index) ಸಂಕಲಿಸಿದ್ದು, ಪಟ್ಟಿಯಲ್ಲಿ ರಷ್ಯಾ (Russia) ಅಗ್ರಸ್ಥಾನದಲ್ಲಿದೆ.
ಸರಿಸುಮಾರು 100 ದೇಶಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಮುಂಗಡ ಪಾವತಿ, ರ್ಯಾನ್ಸಮ್‌ವೇರ್, ಕ್ರೆಡಿಟ್ ಕಾರ್ಡ್ ಕಳ್ಳತನ, ಯುಪಿಐ ಪಾವತಿಗಳು ಸೇರಿದಂತೆ ಸೈಬರ್ ಅಪರಾಧದ ವಿವಿಧ ವರ್ಗಗಳ ಪ್ರಮುಖ ಹಾಟ್‌ಸ್ಪಾಟ್‌ಗಳನ್ನು ಈ ಸಮೀಕ್ಷೆ ಗುರುತಿಸಿದೆ. ರಷ್ಯಾ ಅಪರಾಧಗಳ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದೆ. ಉಕ್ರೇನ್, ಚೀನಾ, ಯುಎಸ್, ನೈಜೀರಿಯಾ ಮತ್ತು ರೊಮೇನಿಯಾ ನಂತರದ ಸ್ಥಾನಗಳಲ್ಲಿವೆ. PLoS ONE ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಉತ್ತರ ಕೊರಿಯಾ ಏಳನೇ ಸ್ಥಾನದಲ್ಲಿದ್ದರೆ, ಯುಕೆ ಮತ್ತು ಬ್ರೆಜಿಲ್ ಕ್ರಮವಾಗಿ ಎಂಟು ಮತ್ತು ಒಂಬತ್ತನೇ ಸ್ಥಾನಗಳಲ್ಲಿವೆ.
ಸಮೀಕ್ಷೆಯ ಮೂಲಕ, ಸಂಶೋಧಕರು ವರ್ಚುವಲ್ ಜಗತ್ತಿನ ಪ್ರಮುಖ ರೀತಿಯ ಅಪರಾಧಗಳನ್ನು ಪರಿಗಣಿಸಲು ತಜ್ಞರನ್ನು ಕೇಳಿದರು. ಇವುಗಳಲ್ಲಿ ಪ್ರತಿಯೊಂದಕ್ಕೂ ಗಮನಾರ್ಹವಾಗಿ ಕೊಡುಗೆ ನೀಡಿರುವ ದೇಶಗಳನ್ನು ನಾಮನಿರ್ದೇಶನ ಮಾಡಿದರು. ಸಂಶೋಧಕರು ಗುರುತಿಸಿದ ಪ್ರಮುಖ ವರ್ಗಗಳೆಂದರೆ- ಮಾಲ್‌ವೇರ್‌ಗಳು, ತಾಂತ್ರಿಕ ಉತ್ಪನ್ನಗಳು ಮತ್ತು ಸೇವೆಗಳು, ransomware ಸೇರಿದಂತೆ ದಾಳಿಗಳು ಮತ್ತು ಸುಲಿಗೆ; ಹ್ಯಾಕಿಂಗ್, ಕ್ರೆಡಿಟ್ ಕಾರ್ಡ್‌ಗಳ ವಂಚನೆ, ಡೇಟಾ ಮತ್ತು ಐಡೆಂಟಿಟಿ ಕಳ್ಳತನ; ಮುಂಗಡ ಶುಲ್ಕ ವಂಚನೆ ಹಗರಣಗಳು, ಕಾನೂನುಬಾಹಿರ ವರ್ಚುವಲ್ ಕರೆನ್ಸಿಯನ್ನು ಒಳಗೊಂಡಿರುವ ಹಣದ ವರ್ಗಾವಣೆ ಅಥವಾ ಮನಿ ಲಾಂಡರಿಂಗ್.
ಪ್ರತಿ ಸೈಬರ್ ಕ್ರೈಮ್ ವಿಭಾಗದಲ್ಲಿಯೂ ಅಗ್ರ ಹತ್ತು ದೇಶಗಳಲ್ಲಿ ಅಗ್ರ ಆರು ದೇಶಗಳು ಕಾಣಿಸಿಕೊಂಡವು. ಅಂದರೆ ಈ ಆರು ದೇಶಗಳು ಎಲ್ಲ ಬಗೆಯ ಕ್ರೈಮ್‌ಗಳಲ್ಲಿ ಪಳಗಿವೆ. ರಷ್ಯಾ ಮತ್ತು ಉಕ್ರೇನ್ ಹೆಚ್ಚು ತಾಂತ್ರಿಕ ಸೈಬರ್ ಅಪರಾಧ ಕೇಂದ್ರಗಳಾಗಿವೆ. ನೈಜೀರಿಯನ್ ಸೈಬರ್ ಅಪರಾಧಿಗಳು ಸೈಬರ್ ಅಪರಾಧದ ಕಡಿಮೆ ತಾಂತ್ರಿಕ ರೂಪಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಭಾರತವು ಹಗರಣಗಳಲ್ಲಿ ವಿಶೇಷ ಪರಿಣತಿ ಹೊಂದಿದೆ. ರೊಮೇನಿಯಾ ಮತ್ತು ಅಮೆರಿಕ ಹೈಟೆಕ್ ಮತ್ತು ಕಡಿಮೆ-ಟೆಕ್ ಅಪರಾಧಗಳಲ್ಲಿ ಪರಿಣತಿ ಹೊಂದಿವೆ. ಭಾರತವು ಮಿಡ್-ಟೆಕ್ ಅಪರಾಧಗಳಲ್ಲಿ ವಿಶೇಷವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರತಿ ದೇಶವೂ ವಿಶಿಷ್ಟವಾದ ಪ್ರೊಫೈಲ್ ಅನ್ನು ಹೊಂದಿವೆ. ಇದು ವಿಶಿಷ್ಟವಾದ ಸ್ಥಳೀಯ ಆಯಾಮವನ್ನು ಸೂಚಿಸುತ್ತದೆ.
“ನಾವು ಈಗ ಸೈಬರ್‌ಕ್ರೈಮ್‌ನ ಭೌಗೋಳಿಕತೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದೇವೆ. ವಿವಿಧ ದೇಶಗಳು ವಿವಿಧ ರೀತಿಯ ಸೈಬರ್‌ಕ್ರೈಮ್‌ಗಳಲ್ಲಿ ಹೇಗೆ ಪರಿಣತಿ ಹೊಂದಿವೆ ಎಂದು ಗೊತ್ತಾಗಿದೆ” ಎಂದು ಯುಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನ ಸಹಲೇಖಕಿ ಮಿರಾಂಡಾ ಬ್ರೂಸ್ ಹೇಳಿದ್ದಾರೆ. “ಮೂರು ವರ್ಷಗಳ ಅವಧಿಯ ಸಂಶೋಧನೆಯು ಸೈಬರ್ ಕ್ರಿಮಿನಲ್ ಅಪರಾಧಿಗಳ ಸುತ್ತಲಿನ ಅನಾಮಧೇಯತೆಯ ಮುಸುಕನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಸೈಬರ್ ಅಪರಾಧದ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಬ್ರೂಸ್ ಹೇಳಿದರು.
ಇತ್ತೀಚೆಗೆ ಸೈಬರ್ ಕ್ರೈಮ್‌ಗಳು ನಾನಾ ರೂಪವನ್ನು ತಾಳುತ್ತಿವೆ. ಬೆಂಗಳೂರಿನಲ್ಲಿ (Bengaluru) ವಕೀಲೆಯೊಬ್ಬರು ಇಂಥ ಸೈಬರ್ ವಂಚನೆಗೆ ತುತ್ತಾಗಿ ಬರೋಬ್ಬರಿ 15 ಲಕ್ಷ ರೂ. ಕಳೆದುಕೊಂಡಿದ್ದಾರೆ. ಕೊರಿಯರ್ ಸೇವೆಗಳಿಗೆ ಹೆಸರಾಗಿರುವ ಫೆಡ್‌ಎಕ್ಸ್ (FedEx) ಸಂಸ್ಥೆ ಹಾಗೂ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಈ ವಂಚನೆ ನಡೆದಿದೆ. ತಾನು ಮುಂಬೈ ಪೊಲೀಸ್ ಇಲಾಖೆ ಅಧಿಕಾರಿ ಎಂದು, ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ನಿಂದ ಫೆಡ್‌ಎಕ್ಸ್ ಮೂಲಕ 140 ಗ್ರಾಂ ಡ್ರಗ್ಸ್ (ಮಾದಕವಸ್ತು) ಕೊರಿಯರ್ ಮಾಡಲಾಗಿದೆ ಎಂದು ವಕೀಲೆಗೆ ಕರೆ ಮಾಡಿ ಬೆದರಿಸಿ, ನಿಮ್ಮ ವಿರುದ್ಧ ಮಾನವ ಕಳ್ಳಸಾಗಣೆ, ಹವಾಲಾ ದಂಧೆ ಹಾಗೂ ಡ್ರಗ್ಸ್ ದಂಧೆಯ ಪ್ರಕರಣಗಳು ದಾಖಲಾಗಿವೆ ಎಂದು ಆತಂಕ ಮೂಡಿಸಲಾಗಿದೆ. ನಂತರ ಈ ಕೇಸ್‌ನಿಂದ ಪಾರುಮಾಡಲು ಡ್ರಗ್ಸ್ ಟೆಸ್ಟ್ ಎಂಬ ಹೆಸರಿನಲ್ಲಿ ಮಹಿಳೆಯು ಬೆತ್ತಲೆಯಾಗಿ ವೆಬ್ ಕ್ಯಾಮ್ ಎದುರು ನಿಲ್ಲುವಂತೆ ಮಾಡಿ, ಅದನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ಹಣವನ್ನು ಸುಲಿಗೆ ಮಾಡಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸೈಬರ್ ಸುರಕ್ಷತೆಗೆ ಆದ್ಯತೆಯಿರಲಿ