Site icon Vistara News

ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ

king dasharatha

ಮಹಾಕಾವ್ಯದ ಮರೆಯಲ್ಲಿರುವ ಬಹುರೂಪಿ

ತಸ್ಯಾಂ ಪುರ್ಯಾಮಯೋಧ್ಯಾಯಾಂ ವೇದವಿತ್ಸರ್ವಸಙ್ಗ್ರಹಃ
ದೀರ್ಘದರ್ಶೀ ಮಹಾತೇಜಾಃ ಪೌರಜಾನಪದಪ್ರಿಯಃ ৷৷ಬಾ.ಕಾಂ.1৷৷

ಸಮಸ್ತ ವೇದವನ್ನು ಸಾಂಗವಾಗಿ ತಿಳಿದ ಧಶರಥನು (King Dasharatha) ಆ ಅಯೋಧ್ಯಾಪುರವನ್ನು (Ayodhya) ಆಳುತ್ತಿದ್ದನು. ಆತನು ಸರ್ವಜ್ಞನು. ಮುಂದೇನಾಗಬಹುದೆನ್ನುವುದನ್ನು ಇಂದೇ ಗ್ರಹಿಸಬಲ್ಲ ದೀರ್ಘದರ್ಶಿಯಾಗಿದ್ದನು. ಮಹಾತೇಜಸ್ವಿಯೂ ಪ್ರತಾಪಿಯೂ ಆಗಿದ್ದನು. ನಗರ ಮತ್ತು ಗ್ರಾಮಗಳ ಜನಪದರಿಗೆ ಅತಿಪ್ರಿಯನಾದ ರಾಜನಾಗಿದ್ದನು.

ಅಯೋಧ್ಯೆಯನ್ನು ಅರವತ್ತು ಸಾವಿರ ವರ್ಷಗಳ ಕಾಲ ಆಳಿದ ದಶರಥ ಮಹಾರಾಜನ ಕುರಿತು “ಓರ್ವ ತಿಕ್ಕಲು ದೊರೆಯಾಗಿದ್ದ, ತನ್ನ ಹೆಂಡತಿಯರಿಗೆ ಹೆದರಿದ್ದ, ಶತ್ರುಗಳಿಗೆ ಹೆದರುವ ಪುಕ್ಕಲನಾಗಿದ್ದ, ವಿಪರೀತ ಪುತ್ರಮೋಹಕ್ಕೊಳಗಾಗಿದ್ದ” ಎನ್ನುವ ಭಾವವೇ ಜನಜನಿತವಾಗಿವೆ. ರಾಮಾಯಣವೆಂದರೆ ಕೇವಲ ರಾಮನ ಕಥೆಯೆಂದು ಗ್ರಹಿಸಿದಾಗ ಇಂತಹ ವಿಪರೀತ ಅಭಿಪ್ರಾಯಕ್ಕೆ ಬರುವುದು ಸಹಜವೂ ಹೌದು. ಸ್ವಂತ ಅಸ್ತಿತ್ವವೇ ಇಲ್ಲದವನಂತೆ ಮತ್ತು ದುಃಖದಿಂದ ಕೊರಗಿ ಅಸುನೀಗುವ ದಶರಥನ ಮೇಲೆ ಅನುಕಂಪಕ್ಕಿಂತ ಇಂಥವನ ಕಾರಣದಿಂದಲೇ ರಾಮ ವನವಾಸಕ್ಕೆ ಹೋಗುವಂತಾಯಿತು ಎಂದು ತಿರಸ್ಕಾರಗೊಳ್ಳುವ ರೀತಿಯಲ್ಲಿ ಆತನ ಪಾತ್ರ ಚಿತ್ರಿತವಾಗಿದೆ. ಆತನ ಪಾತ್ರವೂ ಸಹ ಬಾಲಕಾಂಡ ಮತ್ತು ಅಯೋಧ್ಯಾ ಕಾಂಡಗಳಲ್ಲಿ ಮುಗಿದು ಹೋಗಿಬಿಡುತ್ತದೆ.

ಮುಂದೆ ಯುದ್ಧಕಾಂಡದಲ್ಲಿ ದೇವತೆಗಳ ಮತ್ತು ಬ್ರಹ್ಮನ ಸಂಗಡ ಆತ ಸಶರೀರನಾಗಿ ಬರುವಾಗ ಆತ ಇಂದ್ರನಿಗೆ ಸಮನಾದ ಪದವಿ ಮತ್ತು ಗೌರವದೊಂದಿಗೆ ದೇವರಥದಲ್ಲಿ ಗಮನಿಸಬಹುದು. ಅದು ಆತ ಕೇವಲ ರಾಮನ ತಂದೆಯಾಗಿರುವುದಕ್ಕೆ ಮಾತ್ರವೋ ಹೇಗೆ ಎನ್ನುವ ಸಂಶಯವೂ ಕಾಡಿದರೆ ಅದು ಸಹಜ. ಸುಮಾರು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳ ಏಳು ಕಾಂಡಗಳ ಮಹಾಕಾವ್ಯವು ಇಡಿಯಾಗಿ ಜನಸಾಮಾನ್ಯರಿಗೆ ಸಿಗುವುದು ಅಷ್ಟು ಸುಲಭವಲ್ಲ. ಹೆಚ್ಚಿನವರಿಗೆ ಅದನ್ನು ಕೇಳುವ ವ್ಯವಧಾನ ಮತ್ತು ಸಮಯವೂ ಇಲ್ಲ. ಮಹಾಕಾವ್ಯದ ವಸ್ತುಗಳನ್ನು ನಾಟಕವನ್ನಾಗಿಸಿ ಅದರಲ್ಲಿ ಬರುವ ವಿಷಯವನ್ನು ಖಂಡ ಖಂಡವನ್ನಾಗಿಸಿ (ವಿಭಾಗಿಸಿ) ಮೊದಲು ಕೊಟ್ಟಿರುವುದು ಪ್ರಾಚೀನ ಸಂಸ್ಕೃತ ನಾಟಕಗಳು ಹಾಗೂ ಯಕ್ಷಗಾನ, ಕೂಚಿಪುಡಿ ಮತ್ತು ಚಾರಣರು ಆಡಿ ತೋರಿಸಿದ ಪ್ರದರ್ಶನಕಲೆಗಳು. ಯಕ್ಷಗಾನದಲ್ಲಿ ಒಂದೊಂದು ಸನ್ನಿವೇಶವನಾಗಿ ಕೊಟ್ಟಿರುವ ಕಥಾಭಾಗವನ್ನು ಪ್ರಸಂಗವೆಂದು ನಿರೂಪಿಸಲ್ಪಟ್ಟಿದೆ.

ಮಹಾಕಾವ್ಯವೊಂದು ರೂಪುಗೊಳ್ಳಬೇಕಾದರೆ ಅದರಲ್ಲಿ ಅನೇಕ ಲಕ್ಷಣಗಳಿರಬೇಕಾಗುತ್ತದೆ. ಕಾವ್ಯಗಳೆಲ್ಲವೂ ರೂಪುಗೊಂಡಿರುವುದರ ಹಿಂದೆ ಶಾಸ್ತ್ರ ಅಂದರೆ ವಿಧಿ, ನಿಷೇಧದ ರಿವಾಜಿದೆ. ಶಾಸ್ತ್ರವೆಂದರೆ ಧರ್ಮ, ಅರ್ಥ ಕಾಮ ಮೋಕ್ಷಗಳೆನ್ನುವ ಪುರುಷಾರ್ಥವನ್ನು ಮುಖ್ಯವಾಗಿ ಬೋಧಿಸುವ ಗ್ರಂಥ. ಇದು ಉಪದೇಶ ರೂಪದಲ್ಲಿ ಇರುತ್ತದೆ. ʼವಿಷ್ಣು ಧರ್ಮೋತ್ತರ ಪುರಾಣʼ ಶಾಸ್ತ್ರ ಮತ್ತು ಕಾವ್ಯದ ಕುರಿತು ವಿವರಿಸುವುದು ಹೀಗೆ –

ಮೋಕ್ಷಸ್ಯ ಯತ್ರೋಪನ್ಯಾಸಃ ಇತಿಹಾಸ ಸ ಉಚ್ಯತೇ
ತದೇವ ಕಾವ್ಯಮಿತ್ಯುಕ್ತಂ ಚೋಪದೇಶಂ ವಿನಾ ಕೃತಂ

ಮೋಕ್ಷವೆಂಬ ಪುರುಷಾರ್ಥವನ್ನೇ ಮುಖ್ಯವಾಗಿ ಬೋಧಿಸುವ ಗ್ರಂಥಕ್ಕೆ ಇತಿಹಾಸವೆಂದು ಹೆಸರು. ಅಂತಹ ಗ್ರಂಥವೇ ಉಪದೇಶರೂಪದಲ್ಲಿರದೇ ಒಬ್ಬಾನೊಬ್ಬ ಮಹಾಪುರುಷನ ಚರಿತ್ರೆಯಾಗಿದ್ದಲ್ಲಿ ಅದು ಕಾವ್ಯವೆಂದು ಹೇಳಲ್ಪಡುತ್ತಾರೆ.

ಮಹಾಕಾವ್ಯವಾಗಬೇಕಾದರೆ ಅಲ್ಲಿ ನಾಯಕ ಮತ್ತು ಪ್ರತಿನಾಯಕನ ಗುಣಗಳ ವಿಸ್ತ್ರತ ವಿವರಗಳಿರಬೇಕು. ಪ್ರಯಾಣ ಸನ್ನದ್ಧನಾದ ಪುರುಷನ ಮತ್ತು ದೂತಪ್ರೇಷಣಾದಿಗಳ ಹಾಗೂ ಯುದ್ಧವೃತ್ತಾಂತದ ವರ್ಣನೆಗಳೆಲ್ಲವನ್ನು ಒಳಗೊಂಡಿರಬೇಕು. ನಾಯಕನ ಅಭ್ಯುದಯದಿಂದ ಕೂಡಿರಬೇಕು. ನಾಯಕ ಸನ್ಮಾರ್ಗಗಾಮಿಯಾಗಿಯೂ ಧರ್ಮವಿಜಯಿಯಾಗಿಯೂ ಇರಬೇಕು. ಹಾಗೇ ಪ್ರತಿನಾಯಕನೂ ಸಹ ಜಗದ್ವಿಜಯಿಯೇ ಆಗಿರಬೇಕು. ದೇಶ, ಪಟ್ಟಣ, ರಾಜರು, ಋತುಗಳು, ಅಗ್ನಿ, ನದಿಗಳು, ಸ್ತ್ರೀಯರು ಇವೆಲ್ಲವೂ ವಿವರಿಸಲ್ಪಟ್ಟಿರಬೇಕು. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭೀಭತ್ಸ, ಅದ್ಭುತ ಮತ್ತು ಶಾಂತವೆನ್ನುವ ನವರಸಗಳಿಂದ ಶೋಭಿಸಬೇಕು. ಭರತನ ನಾಟ್ಯ ಶಾಸ್ತ್ರಕ್ಕಿಂತಲೂ ಮೊದಲೇ ರಚಿತವಾಗಿದೆಯೆಂದು ನಂಬಲಾಗಿರುವ “ವಿಷ್ಣು ಧರ್ಮೋತ್ತರ ಪುರಾಣದಲ್ಲಿ” ಶಾಸ್ತ್ರ, ಮಹಾಕಾವ್ಯ ಮತ್ತು ನಾಟಕಗಳ ಲಕ್ಷಣಗಳನ್ನು ಹೀಗೆ ಸ್ಪಷ್ಟವಾಗಿ ವಿಭಾಗಿಸಿ ಹೇಳಿದೆ.

ಮಹಾಕಾವ್ಯ ಲಕ್ಷಣಕ್ಕೆ ಅನುಗುಣವಾಗಿ ವಾಲ್ಮೀಕಿ ರಾಮಾಯಣವನ್ನು ರಚಿಸಿರುವುದನ್ನು ಗಮನಿಸಿದರೆ ಆತನ ಕಾಲದಲ್ಲಿಯೇ ಕಾವ್ಯಲಕ್ಷಣಗಳು ಪ್ರಚಲಿತದಲ್ಲಿ ಇತ್ತು ಎನ್ನಬಹುದಾಗಿದೆ. ಅಥವಾ ಅದನ್ನು ಆಧಾರವನ್ನಾಗಿರಿಸಿಕೊಂಡು ನಾಟ್ಯಶಾಸ್ತ್ರವನ್ನು ರಚಿಸಿದ್ದಾರೆನ್ನುವ ದುರ್ಬಲವಾದ ವಾದವನ್ನೂ ಕೆಲ ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಅದೇನೆ ಇರಲಿ, ನಾಯಕನ ಚರಿತ್ರೆಯನ್ನು ಹೇಳುವ ಮಹಾಕಾವ್ಯದಲ್ಲಿ ಎಲ್ಲಾ ಪಾತ್ರಗಳೂ ನಾಯಕನ ಗುಣಗಳ ನೆರಳಿನಲ್ಲಿ ಬೆಳೆಯುತ್ತವೆ. ಪೋಷಕ ಪಾತ್ರಗಳ ಗುಣಗಳು ನಾಯಕನನ್ನು ಮೀರಿ ಹೋಗದಂತೆ ಎಚ್ಚರದಿಂದ ಪಾತ್ರವನ್ನು ಹೆಣೆಯಲಾಗುತ್ತದೆ. ಇದಕ್ಕೆ ರಾಜಾ ದಶರಥನ ಪಾತ್ರವೂ ಹೊರತಲ್ಲ. ಮಹಾವಿಷ್ಣು ಸಹಿತವಾಗಿ ದೇವತೆಗಳು ತಮ್ಮ ಅವತಾರಕ್ಕೆ ಕೇಂದ್ರವನ್ನಾಗಿ ಅಯೋಧ್ಯೆಯನ್ನು ಆರಿಸಿಕೊಂಡಾಗ ಅಲ್ಲಿನ ಚಕ್ರವರ್ತಿಯೂ ಘನತೆಯಿಂದಲೇ ಕೂಡಿರಬೇಕಾಗುತ್ತದೆ. ಕೇವಲ ಅಶ್ವಮೇಧ ಯಾಗ ಮತ್ತು ಪುತ್ರಕಾಮೇಷ್ಟಿ ಯಾಗದ ಮೂಲಕ ಅವತಾರಿ ಪುರುಷನಿಗೆ ಕ್ಷೇತ್ರವಾಗಲು ಸಾಧ್ಯವಿಲ್ಲ.

ರಾಮಾಯಣದ ಮೂಲತಃ ಮಾನವ ಸಂಬಂಧಗಳ ಗುಣಗಳನ್ನು ಮೈಗೂಡಿಸಿಕೊಂಡ ಕಾವ್ಯ. ಪ್ರತೀ ಪಾತ್ರದಲ್ಲಿಯೂ ಗುಣ, ದೋಷ ಎರಡೂ ಇವೆ. ರಾಮ ಆದರ್ಶ ಪುರುಷ ಹೇಗೋ ಅದೇ ರೀತಿ ತನ್ನ ನಿಷ್ಠುರ ನಡವಳಿಕೆಯ ಮೂಲಕ ತನ್ನನ್ನು ನೆಚ್ಚಿಕೊಂಡ ಪಾತ್ರಗಳಿಗೆ ನೋವನ್ನು ಅದೇ ಪ್ರಮಾಣದಲ್ಲಿ ಕೊಟ್ಟಂತವನೂ ಹೌದು. ಇದನ್ನು ದಶರಥನಿಂದ ಪ್ರಾರಂಭಿಸಿ ಕೊನೆಗೆ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವವವರೆಗೆ ನಿರಂತರವಾಗಿ ಗಮನಿಸಬಹುದಾಗಿದೆ. ಅದಕ್ಕೆ ಕಾರಣಗಳನ್ನು ಹುಡುಕಿ ರಾಮನ ಆದರ್ಶವನ್ನು ಲೋಕಕ್ಕೆ ವಿಮರ್ಶಕರು ಕೊಟ್ಟಿದ್ದಾರೆ ಎನ್ನುವುದೂ ಸಹ ಅಷ್ಟೇ ಗಮನಾರ್ಹ. ಮನುಷ್ಯರಲ್ಲಿ ಪರಿಪೂರ್ಣನಾದ ವ್ಯಕ್ತಿಗಳು ಇದ್ದಾರೆಯೋ ಎನ್ನುವ ವಾಲ್ಮೀಕಿಯ ಸಂಶಯಕ್ಕೆ (ಕೋ ನ್ವಸ್ಮಿನ್ಸಾಂಪ್ರತಂ ಲೋಕೇ ಗುಣವಾನ್ಕಶ್ಚ ವೀರ್ಯವಾನ್) ನಾರದರು ಆತನ ಹದಿನಾರು ಗುಣಗಳನ್ನು ವರ್ಣಿಸಿ ರಾಮಾಯಣ ಕಥೆಯನ್ನು ಹೇಳಿರುವ ವಿಷಯವನ್ನು ಈ ಹಿಂದೆಯೇ ಪ್ರಸ್ತಾಪಿಸಿಯಾಗಿದೆ. ಇಂತಹ ಮಹಾಪುರುಷನಿಗೆ ಜನ್ಮವನ್ನು ಕೊಟ್ಟ ದಶರಥನೂ ಸಹ ಸಾಮಾನ್ಯರ ತಿಳುವಳಿಕೆಯಂತೆ ಅಳುಮುಂಜಿಯಾಗಿರದೇ, ಸಾಕಷ್ಟು ಘನವೆತ್ತ ವ್ಯಕ್ತಿತ್ವದವನೇ ಆಗಿದ್ದ ಎನ್ನುವುದನ್ನು ರಾಮಾಯಣದ ಪ್ರಾರಂಭದಲ್ಲಿಯೇ ವಾಲ್ಮೀಕಿ ವಿವರಿಸುತ್ತಾರೆ.

ದಶರಥನಲ್ಲಿರುವ ಮೊದಲ ಗುಣವೇ ಆತ ವೇದವಿತ್ ಎನ್ನುವುದರ ಮೂಲಕವಾಗಿ. ವೇದ್ ಎನ್ನುವುದು ಜ್ಞಾನಿ ಎನ್ನುವ ಅರ್ಥದಲ್ಲಿಯೂ ಬಳಸಲಾಗುತ್ತಿದೆ. 2. ಸರ್ವಜ್ಞನಾಗಿದ್ದನು, 3. ಮುಂದೆ ಬರಬಹುದಾದ ವಿಪ್ಪತ್ತನ್ನು ಗ್ರಹಿಸಿ ಅದಕ್ಕೆ ತಕ್ಕ ಪರಿಹಾರವನ್ನು ಮೊದಲೇ ಕೈಗೊಳ್ಳುತ್ತಿದ್ದನು. (Pro Active), 4, ಮಹಾತೇಜಸ್ವಿಯು, 5, ಪೌರಜಾನಪದಪ್ರಿಯ – ಆತ ನಗರವಾಸಿ ಮತ್ತು ಗ್ರಾಮವಾಸಿಗಳಿಗೂ ಪ್ರೀತಿಪಾತ್ರ ದೊರೆಯಾಗಿದ್ದನು. ಆತನ ಮಿತ್ರರಲ್ಲಿ ಕೇವಲ ಕ್ಷತ್ರಿಯರು ಮಾತ್ರ ಇರದೇ ಗುಹನಂತಹ ಬೇಡರು, ಜಟಾಯು, ಸಂಪಾತಿಯಂತಹ ಪಕ್ಷಿಗಳೂ ಸಹ ಸೇರಿದ್ದರು. ಎಲ್ಲರನ್ನೂ ಸಮಭಾವ ಸಮಚಿತ್ತದಿಂದ ಆದರಿಸುವ ದೊರೆ ಆತ ಆಗಿದ್ದನು. 6. ಇಕ್ಷ್ವಾಕುವಂಶವೆಂದರೆ ಆ ಕಾಲದ ಶ್ರೇಷ್ಠ ವಂಶವಾಗಿತ್ತು. ಮನುವಿನಿಂದ ದಶರಥನ ವರೆಗೆ ಸುಮಾರು ಎಪ್ಪತ್ತು ರಾಜರುಗಳು ಈ ವಂಶವನ್ನು ಆಳಿಹೋಗಿದ್ದರು. ಈ ಸಂಖ್ಯೆ ನಿಖರವಲ್ಲ, ವಿವಿಧ ರಾಮಾಯಣದಲ್ಲಿ ಅನೇಕ ವಿಧಗಳಲ್ಲಿ ವಿವರಿಸಲಾಗಿದೆ. ಆದರೂ ಬಲು ದೀರ್ಘವಾದ ಶೂರರ ಪರಂಪರೆಯನ್ನು ಈ ವಂಶ ಹೊಂದಿತ್ತು. ಅಂತಹ ಇಕ್ಷಾಕುಗಳಲ್ಲಿಯೇ ಅತಿರಥನೆನ್ನುವ ಖ್ಯಾತಿಯನ್ನು ಧಶರಥ ಹೊಂದಿದ್ದನು. ಹತ್ತುಸಾವಿರ ಮಹಾರಥಿಗಳನ್ನು ಏಕಾಂಗಿಯಾಗಿ ಎದುರಿಸುವ ಸಾಮರ್ಥ್ಯ ಆತನಿಗಿತ್ತು. 7. ಲೋಕದಲ್ಲಿ ಶ್ರೇಷ್ಠವೆನಿಸಿದ ಯಾಗಗಳನ್ನೆಲ್ಲವನ್ನೂ ದಶರಥ ನೆರವೇರಿಸಿದ್ದನು. ರಾಜಸೂಯ ಯಾಗವನ್ನೂ ಮಾಡಿದ್ದ ಎನ್ನುವುದನ್ನು ಸೀತೆ ಚಿತ್ರಕೂಟದಲ್ಲಿ ದಶರಥನ ಗುಣಗಳನ್ನು ನೆನೆದು ದುಃಖಿಸುವಾಗ ಹೇಳುತ್ತಾಳೆ. 8. ಆತ ಧರ್ಮರಥ ಅಂದರೆ ಸದಾ ಕಾಲ ಧರ್ಮದಲ್ಲಿ ತನ್ನ ಬುದ್ಧಿಯನ್ನು ಸ್ಥಿರವಾಗಿ ಇಟ್ಟವನಾಗಿದ್ದನು, 9. ದಕ್ಷ ಆಡಳಿತದ ಮೂಲಕ ಪ್ರಜೆಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದನು. ಪ್ರಜೆಗಳಿಗೆ ಅನುಕೂಲವಾಗುವಂತೆ ಕೆರೆ, ಬಾವಿಗಳನ್ನು ತೋಡಿಸಿದ ಪ್ರಜಾನುರಾಗಿ ದೊರೆಯಾಗಿದ್ದನು. 10. ಕ್ಷತ್ರಿಯ ಧರ್ಮಗಳನ್ನು ನುರಿತವನಾದರೂ ಧರ್ಮದ ವಿಷಯದಲ್ಲಿ ಮಹರ್ಷಿಗಳಿಗೆ ಸಮನಾಗಿದ್ದನು. ಮಹರ್ಷಿಕಲ್ಪನೆನ್ನುವ ಗೌರವಕ್ಕೆ ಪಾತ್ರನಾಗಿದ್ದನು. 11. ಆತ್ಮಬಲ, ತೇಜೋ ಬಲ ಮತ್ತು ಜ್ಞಾನಬಲವುಳ್ಳವನಾಗಿದ್ದನು. ಈ ಕಾರಣಕ್ಕೆ ಮೂರು ಲೋಕದಲ್ಲಿಯೂ ಕೀರ್ತಿಯನ್ನು ಗಳಿಸಿಕೊಂಡಿದ್ದನು. ಶತ್ರುಗಳನ್ನು ನಿಗ್ರಹಮಾಡುವ ಆತನ ಸಾಮರ್ಥ್ಯದ ಕಾರಣದಿಂದ ಆತನನ್ನು ನಿಹತಾಮಿತ್ರನೆಂದು ಕರೆಯುತ್ತಾರೆ. ಸದ್ವಂಶದಲ್ಲಿ ಜನಿಸಿದವರನ್ನು ಮತ್ತು ಸುಗುಣ ಸಂಪನ್ನರನ್ನು ತನ್ನ ಸ್ನೇಹಿತರನಾಗಿಸಿಕೊಳ್ಳುವುದರಲ್ಲಿ ಹಿಂದೆ ಮುಂದೆ ನೋಡುತ್ತಿರಲಿಲ್ಲ. 12. ಮನುಷ್ಯರು ಪಾಲಿಸಬೇಕಾದ ದೇವಋಣ, ಪಿತೃ ಋಣ, ಋಷಿ ಋಣಗಳೆನ್ನುವ ಮೂರು ಋಣಗಳ ಜೊತೆಗೆ ಕ್ಷತ್ರಿಯರು ಪಾಲಿಸಬೇಕಾದ ವಿಪ್ರಋಣ ಮತ್ತು (ಬ್ರಾಹ್ಮಣರಿಗೆ ದಾನಧರ್ಮಮಾಡುವ ಮೂಲಕ) ಅತ್ಮಋಣ – ವಿಹತವಾದ ಸುಖಭೋಗಗಳನ್ನು ಅನುಭವಿಸುವುದು ಇವುಗಳನ್ನು ಆತ ಸದಾಕಾಲದಲ್ಲಿಯೂ ಪಾಲಿಸುತ್ತಿದ್ದನು. 13. ಧನ ಮತ್ತು ಅನರ್ಘ್ಯವಾದ ವಸ್ತುಗಳ ಸಂಗ್ರಹಣೆಯಲ್ಲಿ ಆತ ಕುಬೇರ ಮತ್ತು ಇಂದ್ರನಿಗೆ ಸಮನಾದ ದೊರೆಯೆನಿಸಿದ್ದನು. 14. ಹಿಂದೆ ವೈವಸ್ವತ ಮನುವು ಮಹಾ ತೇಜಸ್ಸಿನಿಂದ ಕೂಡಿದವನಾಗಿ ಲೋಕವನ್ನು ಹೇಗೆ ರಕ್ಷಣೆಯನ್ನು ಮಾಡುತ್ತಿದ್ದನೋ ಅದೇ ರೀತಿಯಲ್ಲಿ ಮಾನವಕುಲಾವತಂಸನಾದ ದಶರಥನೂ ಅಯೋಧ್ಯೆಯಲ್ಲಿ ಸತ್ಯವ್ರತನಾಗಿ ಧರ್ಮಾರ್ಥಕಾಮಗಳೆಂಬ ಪುರುಷಾರ್ಥವನ್ನು ಅನುಸರಿಸುತ್ತಾ ಅಮರಾವತಿಯನ್ನು ಪಾಲನೆ ಮಾಡುತ್ತಿದ್ದ ಇಂದ್ರನಂತೆಯೆ ಶೋಭಿಸುತ್ತಿದ್ದನು.

ಭಗವಂತ ತನ್ನ ಅವತಾರಕ್ಕಾಗಿ ಒಂದು ಕ್ಷೇತ್ರವನ್ನು ಆಯ್ದುಕೊಳ್ಳುವಾಗ ದುರ್ಬಲರಾದವರನ್ನು ಆಯ್ಕೆ ಮಾಡಿಕೊಂಡರೆ ಕಾವ್ಯ ವೈಕಲತೆಯಿಂದ ಸೊರಗುತ್ತದೆ. ವಾಲ್ಮೀಕಿಯಲ್ಲಿ ಈ ಪ್ರಜ್ಞೆ ಸದಾ ಜಾಗ್ರತವಾಗಿದೆ. ರಾಮಾಯಣ ಮಹಾ ಕಾವ್ಯವಾಗುವ ಜೊತೆಗೆ ಸನಾತನ ಪರಂಪರೆಯ ಇತಿಹಾಸವೂ ಆಗಿದೆ. ಶಾಸ್ತ್ರಗಳಲ್ಲಿ ಧರ್ಮವನ್ನು ಮಂತ್ರಗಳ ಮೂಲಕ ಹೇಳುತ್ತಾರೆ. ಈ ಮಂತ್ರಗಳ ಅರ್ಥವನ್ನು, ಸೃಷ್ಟಿ, ಸಂಹಾರ, ಅವುಗಳನ್ನು ವಿನಿಯೋಗಿಸುವ ವಿಧಾನವನ್ನು ವಿವರಿಸುವುದೇ ಬ್ರಾಹ್ಮಣಗಳು. ಇದು ಕಾವ್ಯಕ್ಕೆ ಬಂದಾಗ ಪ್ರಕ್ರಿಯಾ, ಉಪೋದ್ಘಾತ, ಅನುಸಂಗ ಮತ್ತು ಉಪಸಂಹಾರ ಹೀಗೆ ನಾಲ್ಕು ಬಗೆಗಳಿವೆ. ಈ ಎಲ್ಲ ಸಂಗತಿಗಳನ್ನು ಅರ್ಥ ಮಾಡಿಕೊಂಡಾಗ ದಶರಥನ ಶ್ರೇಷ್ಠತೆಯನ್ನು ಮನಗಾಣ ಬಹುದಾಗಿದೆ.

ದಶರಥನ ರಾಜ್ಯಭಾರ –

ಆಡಳಿತದ ವಿಷಯದಲ್ಲಿ ದಶರಥ ಸಮರ್ಥ ಆಡಳಿತಗಾರನಾಗಿದ್ದ. ಆತನ ಕಾಲದಲ್ಲಿ ಪ್ರಜೆಗಳು ನಿತ್ಯಸಂತುಷ್ಟರಾಗಿದ್ದರು. ಎಲ್ಲರೂ ಎಲ್ಲಾ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದರು. ತಮಗೆ ಸಿಕ್ಕಿದುದರಲ್ಲಿಯೇ ನಿತ್ಯತೃಪ್ತಿಯನ್ನು ಹೊಂದಿದ್ದರು. ಅಯೋಧ್ಯೆಯಲ್ಲಿ ವಿಶೇಷ ಕಾಮಾಸಕ್ತರಾಗಲಿ, ಕ್ರೂರಕರ್ಮಿಗಳಾಗಲಿ, ಅಜ್ಞರಾಗಲಿ, ನಾಸ್ತಿಕರಾಗಲಿ, ದರಿದ್ರರಾಗಲಿ ಇರಲಿಲ್ಲ. ಅಯೋಧ್ಯೆಯ ವರ್ಣನೆಯನ್ನು ಮಾಡುವಾಗ ದಶರಥನ ಸೇನೆ ಮತ್ತು ಅಯೋಧ್ಯೆಯ ಜನರ ಗುಣಸ್ವಭಾವವನ್ನು ವಿವರಿಸಿದ್ದೇನೆ. ಯಾವುದೇ ರಾಜನ ಆಡಳಿತ ಬಿಗಿಯಾಗಬೇಕಾದರೆ ಅದಕ್ಕೆ ಸಂಬಂಧಿಸಿದ ಅಧಿಕಾರ ವರ್ಗ ದಕ್ಷತೆಯಿಂದ ಕೂಡಿರಬೇಕು, ಯೋಗ್ಯರಾದ ಸಚಿವರು ಮತ್ತು ಧರ್ಮಮಾರ್ಗದಲ್ಲಿ ರಾಜ ಸದಾ ಇರುವಂತೆ ನೋಡಿಕೊಳ್ಳುವ ಪುರೋಹಿತರು ಬಹು ಮುಖ್ಯ. ರಾಜನಿಗೆ ಕೆಟ್ಟ ಹೆಸರಾಗಲಿ, ಒಳ್ಳೆಯ ಹೆಸರಾಗಲಿ ಬರುವುದರಲ್ಲಿ ಅಮಾತ್ಯ ಮತ್ತು ಪುರೋಹಿತರ ಪಾತ್ರ ದೊಡ್ಡದು. ದಶರಥನಿಗೆ ಸಹಾಯಮಾಡಲು ಮಂತ್ರಾಲೋಚನೆಯಲ್ಲಿ ಸಮರ್ಥರಾದ, ಸದಾ ಕಾರ್ಯತತ್ಪರರಾದ ಮತ್ತು ಪರರ ಮನಸ್ಸಿನಲ್ಲಿರುವ ವಿಷಯಗಳನ್ನು ಅವರ ಮುಖಭಾವದಿಂದಲೇ ತಿಳಿಯಬಲ್ಲ ಇಂಗಿತಜ್ಞರಾದ ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರ ಎನ್ನುವ ಎಂಟು ಮಂತ್ರಿಗಳು ಆತನ ಆಸ್ಥಾನದಲ್ಲಿ ಇದ್ದರು. ಅವರು ವಂಶಪರಂಪರೆಯಿಂದ ಬಂದವರು ಎನ್ನುವ ಕಾರಣಕ್ಕಾಗಿ ತಮ್ಮ ಹುದ್ದೆಯಲ್ಲಿ ಇದ್ದವರಲ್ಲ. ಹಾಗಂತ ರಾಜಕಾರಣಕ್ಕೆ ಹೊಸಬರೂ ಆಗಿರಲಿಲ್ಲ.

ಯಾರನ್ನಾದರೂ ಹುದ್ದೆಗೆ ನಿಯಕ್ತಿಗೊಳಿಸುವ ಮುನ್ನ ಅವರನ್ನು ಚನ್ನಾಗಿ ಪರೀಕ್ಷಿಸಲಾಗುತ್ತಿತ್ತು. ಅರ್ಥಶಾಸ್ತ್ರದಲ್ಲಿ ರಾಜನ ಆಸ್ಥಾನದಲ್ಲಿರುವವರನ್ನು ಪರೀಕ್ಷಿಸುವ ವಿಧಾನವನ್ನು ಹೇಳುವಾಗ ಧರ್ಮಾದಿ ಉಪಧಾ, ಅರ್ಥೋಪಧಾ, ಕಾಮೋಪಧಾ, ಭಯೋಪಧಾಗಳ ಮೂಲಕ ಪರೀಕ್ಷಿಸಬೇಕು ಎಂದು ಹೇಳುತ್ತದೆ. ಅಂದರೆ ರಾಜನಲ್ಲಿ ಅಧರ್ಮವನ್ನು ಕಲ್ಪಿಸಿ ಅವನನ್ನು ಪಟ್ಟದಿಂದ ಇಳಿಸೋಣವೇ ಎನ್ನುವ ಆಮಿಷಕ್ಕೆ ಒಡ್ಡಿದಾಗಲೂ ಅದನ್ನು ಯಾವಾತ ತಿರಸ್ಕರಿಸುತ್ತಾನೋ, ಹಣದ ಆಮಿಷದ ಮೂಲಕ ರಾಜನಿಂದ ಬೇರ್ಪಡಿಸಲು ಸಾಧ್ಯವೋ ಎನ್ನುವುದನ್ನು ಪರೀಕ್ಷಿಸುವುದು, ರಾಣಿ ನಿನ್ನನ್ನು ಬಯಸಿದ್ದಾಳೆ, ಅವಳನ್ನು ಸೇರಿದರೆ ನಿನಗೆ ಕೈತುಂಬಾ ಹಣ ಸಿಗುವುದು ಎನ್ನುವ ಆಮಿಷವನ್ನು ಒಡ್ಡಿದಾಗಲೂ ಅದನ್ನು ತಿರಸ್ಕರಿಸುವಂಥವರು, ರಾಜನಿಂದ ಅವಮಾನಿತರಾದ (ಹಾಗೇ ನಟಿಸಿ) ಅಮಾತ್ಯನಾದವ ಇತರರನ್ನು ನಾವೆಯಲ್ಲಿ ಕರೆದುಕೊಂಡು ಹೋಗಿ ರಾಜನ ವಿರುದ್ಧ ಅವರನ್ನು ಎತ್ತಿಕಟ್ಟಿದಾಗ ಯಾರು ತಿರಸ್ಕರಿಸಿ ರಾಜನಿಗೆ ನಿಷ್ಠೆಯುಳ್ಳವರಾಗಿರುತ್ತಾರೆಯೋ ಅಂಥವರು ಮಾತ್ರ ಅಮಾತ್ಯರಾಗಲು ಯೋಗ್ಯರು ಎನ್ನುತ್ತದೆ. ದಶರಥನ ಈ ಅಷ್ಟ ಮಂತ್ರಿಗಳು ರಾಜದ್ರೋಹ-ಪ್ರಜಾದ್ರೋಹ-ಸ್ವಾರ್ಥಗಳಿಂದ ಮುಕ್ತರಾಗಿದ್ದರು. ರಾಮನನ್ನು ಅರಣ್ಯಕ್ಕೆ ಕಳಿಸು ಎನ್ನುವ ಸಂದರ್ಭದಲ್ಲಿ ಸುಮಂತ್ರ ರಾಜನ ಎದುರಿಗೇ ಕೈಕೇಯನ್ನು ದೂಷಿಸುವಾಗ ಮತ್ತು ವಶಿಷ್ಠರು ಆಕೆಯನ್ನು ಕಟುವಾಗಿ ನಿಂದಿಸುವಾಗ ಅವರ ರಾಜನಿಷ್ಟೆ, ನಿಸ್ವಾರ್ಥಪರತೆ ಎದ್ದು ಕಾಣುತ್ತದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗಂಧವತಿಗೆ ಸಿರಿಗಂಧಲೇಪನನ ಆಗಮನ

ಅವರೆಲ್ಲ ವಿದ್ಯಾವಿನೀತಾ- ಎಲ್ಲ ವಿಷಯಗಳಲ್ಲಿಯೂ ಪಾರಂಗತರಾಗಿದ್ದರು. ಹಿಮನ್ತಃ-ಅಕಾರ್ಯವನ್ನು ಮಾಡಲು ಲಜ್ಜೆಪಡುತ್ತಿದ್ದರು, ಕುಶಲಾ-ನೀತಿಶಾಸ್ತ್ರ ಕೋವಿದರು, ನಿಯತೇಂದ್ರಿಯಾ-ಇಂದ್ರಿಯ ನಿಗ್ರಹವನ್ನು ಸ್ಥಾಪಿಸಿದವರು, ಶ್ರೀಮನ್ತಃ – ಭಾಗ್ಯಸಂಪನ್ನರು, ನೀತಿ ಶಾಸ್ತ್ರ ಬಲ್ಲವರು, ದೃಢವಿಕ್ರಮಿಗಳು, ಕೀರ್ತಿವಂತರು, ಪ್ರಣಿಹೀತಾ-ಕೊಟ್ಟಮಾತಿನಂತೆ ನಡೆಯುವವರು, ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆಯುಳ್ಳವರು, ಸದಾ ನಗುಮುಖದಿಂದಲೇ ಮಾತನಾಡುತ್ತಾ ಎದುರಿನಲ್ಲಿರುವವರ ಅಂತರಂಗವನ್ನು ಶೋಧಿಸುವಂತವರು, ಆಡಿದ ಮಾತಿನಂತೆ ನಡೆಯುವವರು-ಯಥಾವಚನಕಾರಿಣಃ ಹೀಗೆ ರಾಜಕಾರಣದ ಸಮಗ್ರವನ್ನು ಅರ್ಥಮಾಡಿಕೊಂಡವರಾಗಿದ್ದರು. ತಮ್ಮ ಮಕ್ಕಳೇ ತಪ್ಪು ಮಾಡಿದರೂ ಅವರನ್ನು ಶಿಕ್ಷಿಸುವಂತಹ ದಂಡಕೋವಿದರಾಗಿದ್ದರು.. ಹಾಗಂತ ಇವರನ್ನು ನೇಮಿಸಿಕೊಳ್ಳುವಾಗ ಸುಖಾಸುಮ್ಮನೆ ನೇಮಿಸಿಕೂಳ್ಳಲಿಲ್ಲ. ಅವರ ರಾಜನಿಷ್ಠೆಯನ್ನು ಚನ್ನಾಗಿ ಪರೀಕ್ಷಿಸಿದ–ಸೌಹ್ಯದೇಷು ಪರೀಕ್ಷಿತಾಃ, ನಂತರವೇ ಅವರನ್ನು ಆಯಾ ಹುದ್ಧೆಗಳಿಗೆ ನಿಯುಕ್ತಿಗೊಳಿಸಲಾಗುತ್ತಿತ್ತು. ದಶರಥ ನಿಧನನಾದಾಗ ಭರತನನ್ನು ಕರೆತರಲು ಹೋದವರಲ್ಲಿ ಅಶೋಕ ಮತ್ತು ವಿಜಯ ಪ್ರಮುಖರಾದವರು. ಆಗ ಅವರು ಭರತ ಎಷ್ಟೇ ಒತ್ತಾಯಿಸಿದರೂ ಅಯೋಧ್ಯೆಯಲ್ಲಿ ಏನಾಗಿದೆ ಎನ್ನುವುದನ್ನು ಹೇಳದೇ ಆತನನ್ನು ಅಯೋಧ್ಯೆಗೆ ಕರೆತರುವಲ್ಲಿ ನಡೆಸಿದ ಕಾರ್ಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಪ್ರಾಚೀನ ಕಾಲದಲ್ಲಿ ಧಾರ್ಮಿಕ ವಿಚಾರದಲ್ಲಿಯೂ ರಾಜನ ಆಸ್ಥಾನದಲ್ಲಿ ತುಂಬಾ ಮಹತ್ವವಿತ್ತು. ಈ ಪುರೋಹಿತ ವರ್ಗ ತಮಗಾಗಿ ಏನನ್ನೂ ಬಯಸುತ್ತಿರಲಿಲ್ಲ. ರಾಜ ತಪ್ಪಿ ನಡೆದಾಗ ಆತನನ್ನು ಎಚ್ಚರಿಸಿ ಅಗತ್ಯಬಿದ್ದರೆ ಆತನನ್ನು ಅಧಿಕಾರದಿಂದ ಇಳಿಸುವ “ಧರ್ಮದಂಡ್ಯೋಸಿ” ಧರ್ಮದಂಡವನ್ನು ಹೊಂದಿದ್ದರು. ವಶಿಷ್ಠ ಮತ್ತು ವಾಮದೇವರೆನ್ನುವ ಇಬ್ಬರು ಪುರೋಹಿತರಾಗಿ ಅಯೋಧ್ಯೆಯ ಹಿತವನ್ನು ಸದಾಕಾಲವೂ ಬಯಸಿದ್ದರು. ವಸಿಷ್ಠರೂ ಸಹ ನಿಷ್ಟುರವಾದಿಗಳು. ತ್ರಿಶಂಕು ತನಗಾಗಿ ಇಂದ್ರಪದವಿಯ ಯಜ್ಞವನ್ನು ಮಾಡಿ ಎಂದಾಗ ನಿಷ್ಟುರವಾಗಿ ತಿರಸ್ಕರಿಸಿದ್ದರು. ಶಶಾದನೆನ್ನುವವ ಇಕ್ಷ್ವಾಕುವಿನ ಮಗ. ಆತ ನಡತೆ ತಪ್ಪಿದಾಗ ಆತನಿಗೆ ಶಿಕ್ಷೆ ವಿಧಸಲೇಬೇಕು ಎಂದು ಇಕ್ಷ್ವಾಕುವಿಗೆ ಹೇಳಿದವರು. ಇಲ್ಲಿ ನೆನಪಿಡಬೇಕಾದದ್ದು ವಸಿಷ್ಠನೆನ್ನುವುದು ಒಂದು ಪರಂಪರೆ. ವಂಶವಾಹಿನಿ. ಶಂಕರಪೀಠವನ್ನೇರುವ ಎಲ್ಲರೂ ಶಂಕರಾಚಾರ್ಯರು ಎಂದು ಕರೆಯಿಸಿಕೊಳ್ಳುವ ಹಾಗೆ, ಆಗಿನ ಕಾಲದಲ್ಲಿ ಬ್ರಹ್ಮರ್ಷಿಗಳನ್ನು ಅದೇ ಹೆಸರಿನಿಂದ ಕರೆಯಲಾಗುತ್ತಿತ್ತು ಎನ್ನಬಹುದು. ನಂತರ ಇದೇ ಗೋತ್ರವಾಗಿ ಬದಲಾಗಿರಬೇಕು. ಹೀಗೆ ಒಂದು ಪ್ರಬಲ ರಾಜ್ಯವೊಂದರ ಅಧಿಕಾರಿಯಾಗಿ ದಶರಥ ಆಳುತ್ತಿದ್ದ. ರಾಮನಂತವ ಅವತರಿಸಬೇಕಾದ ಕ್ಷೇತ್ರಕ್ಕೆ ಆ ಕಾಲದಲ್ಲಿ ಭೂಮಂಡಲದಲ್ಲಿ ಇದಕ್ಕಿಂತ ಮತ್ತೊಂದು ಯುಕ್ತವಾದ ಮನೆತನವಿರಲಿಲ್ಲವೆನ್ನುವುದನ್ನು ವಾಲ್ಮೀಕಿ ಇಲ್ಲಿ ತಿಳಿಸುತ್ತಾನೆ.

ಮುಂದಿನ ಸಂಚಿಕೆಯಲ್ಲಿ ಆತನ ವ್ಯಕ್ತಿತ್ವದ ವಿಶೇಷಗಳ ಕುರಿತು ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾವತಾರಕ್ಕೊಂದು ಪೀಠಿಕಾ ಪ್ರಕರಣ

Exit mobile version