Site icon Vistara News

DK Shivakumar: ದೇವಸ್ಥಾನಕ್ಕೆ ಬಂದು ಚನ್ನಪಟ್ಟಣ ಕಾಂಗ್ರೆಸ್‌ ಅಭ್ಯರ್ಥಿ ಯಾರೆಂದು ಘೋಷಿಸಿದ ಡಿಕೆ ಶಿವಕುಮಾರ್

dcm dk shivakumar

ನೆಲಮಂಗಲ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DCM DK Shivakumar) ಅವರು ನಿನ್ನೆ ನೆಲಮಂಗಲದ ವೀರಭದ್ರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಚನ್ನಪಟ್ಟಣ ಉಪ ಚುನಾವಣೆಯ (Channapatna By Election) ಕಾಂಗ್ರೆಸ್‌ ಅಭ್ಯರ್ಥಿ ಯಾರೆಂದು ತಿಳಿಸಿ ಅಚ್ಚರಿಯಲ್ಲಿ ಕೆಡವಿದರು.

ಚನ್ನಪಟ್ಟಣ ಉಪ ಚುನಾವಣೆಗೆ ಅಭ್ಯರ್ಥಿ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ʼಚನ್ನಪಟ್ಟಣ ಉಪ ಚುನಾವಣೆಗೆ ನಾನೇ ಅಭ್ಯರ್ಥಿʼ ಎಂದು ಡಿಕೆಶಿ ಹೇಳಿದ್ದಾರೆ. ಸಿಪಿ ಯೋಗೇಶ್ವರ (CP Yogeshwara) ಅವರು ಕ್ಷೇತ್ರದಲ್ಲಿ ದೋಸ್ತಿ ಪಕ್ಷಗಳ ಅಭ್ಯರ್ಥಿಯಾಗಿ ನಿಲ್ಲುವ ಆಸಕ್ತಿ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ಹಾಗೂ ಜೆಡಿಎಸ್‌ನಿಂದ (BJP – JDS) ಸೂಕ್ತ ಪ್ರತಿಕ್ರಿಯೆ ಬಾರದ ಕಾರಣ, ಅವರು ಕಾಂಗ್ರೆಸ್‌ನಿಂದ (Congress) ನಿಲ್ಲಲಿದ್ದಾರೆ ಎಂದು ಸುದ್ದಿಯಾಗಿತ್ತು. ಇನ್ನೊಂದೆಡೆ, ಕಾಂಗ್ರೆಸ್‌ನಿಂದ ಡಿಕೆ ಸುರೇಶ್‌ (DK Suresh) ಅವರು ಕಣಕ್ಕಿಳಿಯಲಿದ್ದಾರೆ ಎಂದು ಸುದ್ದಿಗಳು ಹಬ್ಬಿದ್ದವು. ಆದರೆ ಇದೀಗ ಚನ್ನಪಟ್ಟಣದ ಅಭ್ಯರ್ಥಿ ನಾನೇ ಎನ್ನುವ ಮೂಲಕ ಡಿಕೆಶಿ ಅಚ್ಚರಿ ಮೂಡಿಸಿದ್ದಾರೆ.

ʼಪ್ರಯತ್ನಕ್ಕಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನನಗೆ ನಂಬಿಕೆ ಇದೆ. ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯ ಮಳೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಇತಿಹಾಸವಿರುವ ವೀರಭದ್ರ ಹಾಗೂ ರುದ್ರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದೇನೆ. ಈ ದೇವಸ್ಥಾನಕ್ಕೆ ಬರಬೇಕೆಂದು ಬಹಳಷ್ಟು ದಿನದಿಂದ ಅಂದುಕೊಂಡಿದ್ದೆ. ಇತಿಹಾಸ ಇರುವ ಜಾಗ, ಹಾಗಾಗಿ ಬಂದು ಪೂಜೆ ಸಲ್ಲಿಸಿದ್ದೇನೆ ಸೌಭಾಗ್ಯ ಸಿಕ್ಕಿದೆʼ ಎಂದು ಡಿಕೆಶಿ ನುಡಿದರು.

ಗ್ಯಾರೆಂಟಿ ಯೋಜನೆಗಳ ಪರಿಷ್ಕರಣೆ ವಿಚಾರದ ಚರ್ಚೆ ಹಿನ್ನೆಲೆಯಲ್ಲಿ, ʼಯಾವ ಸಚಿವರೂ ಏನೂ ಮಾತನಾಡಲ್ಲ, ಏನೂ ಇಲ್ಲ. ಅನುಕೂಲ ಇರುವರಿಗೂ ಕೊಡ್ತಾ ಇದಾರೆ, ಅವರು ಬೇಡ ಎಂದು ಹೇಳ್ತಿದ್ದಾರೆ. ಅದರ ಬಗ್ಗೆ ಮುಂದೆ ಯೋಚನೆ ಮಾಡ್ತೇವೆ, ಈಗ ಯಾವುದೇ ಬದಲಾವಣೆ ಇಲ್ಲʼ ಎಂದು ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚನ್ನಪಟ್ಟಣದಲ್ಲಿ ಗುರುವಾರ ನಡೆದ ಧ್ವಜಾರೋಹಣ ವಿಚಾರವಾಗಿ ಮಾತನಾಡಿದ ಡಿ. ಕೆ. ಶಿವಕುಮಾರ್, “ನಾನು ರಾಮನಗರದಲ್ಲೂ 5 ವರ್ಷ ಧ್ವಜಾರೋಹಣ ಮಾಡಿದ್ದೇನೆ. ಅಧಿಕಾರಿಗಳನ್ನು ಕೇಳಿದ್ದೆ, ಅವರು ಬಂದಿಲ್ಲ ಅಂದರು. ನಮ್ಮ ಡ್ಯೂಟಿ ನಾವು ಮಾಡಿದ್ದೇವೆ” ಎಂದರು.

ಮಂಡ್ಯದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಉಪ ಚುನಾವಣೆ ಎದುರಾಗಿದ್ದು, ಸಿ. ಪಿ. ಯೋಗೇಶ್ವರ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ ಎಂದು ಅವರು ಘೋಷಣೆ ಮಾಡಿದ್ದಾರೆ.ಉಪ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಇತ್ತ ಡಿಕೆಶಿ ಚನ್ನಪಟ್ಟಣಕ್ಕೆ ಪದೇ ಪದೆ ಭೇಟಿ ನೀಡುತ್ತಿದ್ದು, ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿ, ಕ್ಷೇತ್ರದ ಜನರ ಸಮಸ್ಯೆಯನ್ನು ಆಲಿಸುತ್ತಿದ್ದಾರೆ.

ಚನ್ನಪಟ್ಟಣ ಕೇಂದ್ರ ಸಚಿವ, ಮಂಡ್ಯ ಸಂಸದ ಎಚ್. ಡಿ. ಕುಮಾರಸ್ವಾಮಿ ತವರು ಕ್ಷೇತ್ರ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತವರು ಜಿಲ್ಲೆ ರಾಮನಗರ ಜಿಲ್ಲೆಯಲ್ಲಿರುವ ಕ್ಷೇತ್ರವಾದ ಕಾರಣ ಉಪ ಚುನಾವಣೆ ಗೆಲುವಿನಲ್ಲಿ ಕುಮಾರಸ್ವಾಮಿ, ಡಿ. ಕೆ. ಶಿವಕುಮಾರ್‌ ಪ್ರತಿಷ್ಠೆ ಅಡಗಿದೆ. ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಸೋತ ಡಿ. ಕೆ. ಸುರೇಶ್ ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಎಂಬ ಸುದ್ದಿಗಳು ಹಬ್ಬಿದ್ದವು. ಬಳಿಕ ಡಿ. ಕೆ. ಶಿವಕುಮಾರ್ ಅವರೇ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿ ಎಚ್. ಡಿ. ಕುಮಾರಸ್ವಾಮಿಗೆ ಹಿನ್ನಡೆ ಉಂಟು ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಈಗ ಡಿ. ಕೆ. ಶಿವಕುಮಾರ್ “ನಾನೇ ಅಭ್ಯರ್ಥಿ” ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Channaptna By Election: ಚನ್ನಪಟ್ಟಣ ಉಪಚುನಾವಣೆ: ಮೈತ್ರಿ ಪಕ್ಷದ ಅಭ್ಯರ್ಥಿ ಆಗದಿದ್ದರೆ ಸ್ವತಂತ್ರ ಸ್ಪರ್ಧೆ ಎಂದ ಯೋಗೇಶ್ವರ್

Exit mobile version