ಬೆಂಗಳೂರು/ರಾಯಚೂರು: ರಾಜಧಾನಿ ಹಾಗೂ ರಾಯಚೂರಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ (Valmiki Corporation Scam) ಜಾರಿ ನಿರ್ದೇಶನಾಲಯದ (Enforcement directorate) ದಾಳಿ (ED Raid) ಎರಡನೇ ದಿನವೂ ಮುಂದುವರಿದಿದ್ದು, ಮಾಜಿ ಸಚಿವ ನಾಗೇಂದ್ರ (Ex minister B Nagendra) ಹಾಗೂ ಶಾಸಕ ಬಸವನಗೌಡ ದದ್ದಲ್ (Basanagouda Daddal) ಅವರಿಬ್ಬರ ಆಪ್ತರು ಲಕ್ಷ ಲಕ್ಷ ಹಣದ ಡೀಲ್ ಮಾಡಿರುವುದನ್ನು ಇಡಿ ಅಧಿಕಾರಿಗಳು ಬಾಯಿ ಬಿಡಿಸಿದ್ದಾರೆ. ಈ ವಿಚಾರಣೆ ಇವರ ಬಾಸ್‌ಗಳ ಕೊರಳನ್ನೂ ಸುತ್ತಿಕೊಳ್ಳುವ ಸಂಭವವಿದ್ದು, ಯಾವುದೇ ಕ್ಷಣದಲ್ಲಿ ಶಾಸಕರಿಬ್ಬರನ್ನು ಇಡಿ ವಶಕ್ಕೆ ಪಡೆಯಬಹುದು ಎಂದು ನಂಬಲಾಗಿದೆ.
ಪಂಪಣ್ಣ ಮನೆ ಮೇಲೆ ದಾಳಿ
ಬಸವನಗೌಡ ದದ್ದಲ್ ಅವರ ಮಾಜಿ ಪಿಎ ಪಂಪಣ್ಣ ಮನೆ ಮೇಲೆ ಇಡಿ ದಾಳಿ ನಡೆಸಿದ್ದು, ದದ್ದಲ್ ಆಪ್ತನ ಇನ್‌ಸೈಡ್ ಸ್ಟೋರಿ ಬಗೆದಷ್ಟೂ ಬಯಲಾಗುತ್ತಿದೆ. ಬಿಚ್ಚಾಲಿ ಗ್ರಾ.ಪಂ ಪಿಡಿಓ ಆಗಿ ನಿಯೋಜನೆಗೊಂಡಿದ್ದ ಪಂಪಣ್ಣ, ಪಿಡಿಓ ಚಾರ್ಜ್ ತೆಗೆದುಕೊಳ್ಳದೆ ರಾಯಚೂರು ತಾ.ಪಂನಲ್ಲಿ ಕೇಸ್ ವರ್ಕರ್ ಆಗಿ ಮುಂದುವರಿದಿದ್ದ. ನೂತನ MLC ಒಬ್ಬರ ಪಿಎ ಆಗಲು, ಪಿಡಿಓ ಕೆಲಸಕ್ಕೆ ಹಾಜರಾಗಿರಲಿಲ್ಲ. ನಗರದ ಆಜಾದ್ ನಗರದಲ್ಲಿ ಐಷಾರಾಮಿ ಪ್ಲ್ಯಾಟ್ ಖರೀದಿಸಿ ವಾಸ ಮಾಡುತ್ತಿದ್ದ. ತಾಲೂಕು ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಬಸವನಗೌಡ ದದ್ದಲ್‌ನ ಖಾಸಗಿ ವ್ಯವಹಾರ ನೋಡಿಕೊಳ್ಳುತ್ತಿದ್ದ.
ಹಗರಣದಲ್ಲಿ ಪಂಪಣ್ಣ 50 ಲಕ್ಷ ರೂಪಾಯಿ ಕಮಿಷನ್ ಪಡೆದಿರುವ ಆರೋಪವಿದೆ. ಆರೋಪದ ಹಿನ್ನೆಲೆಯಲ್ಲಿ ಜುಲೈ 05ರಂದು ಈತ SIT ವಿಚಾರಣೆ ಒಳಗಾಗಿದ್ದ. ಪಂಪಣ್ಣನಿಂದ ಮಹತ್ವದ ದಾಖಲೆಗಳನ್ನು SIT ಪಡೆದಿದೆ. SIT ವಿಚಾರಣೆ ಬೆನ್ನಲ್ಲೇ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪಂಪಣ್ಣ ಮನೆಯಲ್ಲಿ ಸಿಕ್ಕ ದಾಖಲೆಗಳನ್ನು ಇಡಿ ಅಧಿಕಾರಿಗಳು ಸ್ಕ್ಯಾನ್ ಮಾಡಿ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ.
ಹರೀಶ್ ಬಾಯಿ ಬಿಡಿಸಿದ ಇಡಿ
ನಿನ್ನೆ ಮಾಜಿ ಸಚಿವ ನಾಗೇಂದ್ರ ಪಿಎ ಹರೀಶ್‌ನನ್ನು ಇಡಿ ವಿಚಾರಣೆ ನಡೆಸಿದ್ದು, ಮಲ್ಲೇಶ್ವರಂನ ಶ್ರೀ ಸಾಗರ ಹೋಟೆಲ್ ಬಳಿ ಡೀಲ್ ನಡೆದಿರುವುದು ಗೊತ್ತಾಗಿದೆ. ಹರೀಶ್ ಎರಡು ಬ್ಯಾಗ್‌ಗಳಲ್ಲಿ 25 ಲಕ್ಷ ರೂ. ಹಣ ಪಡೆದಿದ್ದ. ನಿಗಮದ ಎಂಡಿ ಪದ್ಮನಾಭ, ಅಕೌಂಟೆಂಟ್ ಪರಶುರಾಮ ಬಳಿ 25 ಲಕ್ಷ ರೂ. ಕಮಿಷನ್ ಪಡೆಯಲು ಈ ಹೋಟೆಲ್‌ಗೆ ಬಂದಿದ್ದ. ಪಿಎ ಹರೀಶ್ ಕೊಟ್ಟ ಮಾಹಿತಿ ಅಧಾರದ ಮೇಲೆ ನಾಗೇಂದ್ರ ಅವರನ್ನು ಪ್ರಶ್ನಿಸಲಾಗುತ್ತಿದ್ದು, ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ. ಈ 25 ಲಕ್ಷ ಹಣ ತರಿಸಿದವರು ಯಾರು, ಆ ಹಣ ಎಲ್ಲಿದೆ ಎಂಬ ಮಾಹಿತಿ ಇಡಿಗೆ ಬೇಕಾಗಿದೆ. ಸದ್ಯ ಐದು ಜನ ಇಡಿ ಅಧಿಕಾರಿಗಳ ತಂಡದಿಂದ ನಾಗೇಂದ್ರ ಮನೆಯಲ್ಲಿ ಶೋಧ ಮುಂದುವರಿದ್ದು, ಬ್ಯಾಂಕ್ ಅಧಿಕಾರಿಗಳ ಮೇಲಿನ ಇಡಿ ದಾಳಿಯಲ್ಲಿ ಸಿಕ್ಕ ದಾಖಲೆಗಳ ಅಧಾರದ ಮೇಲೆ ಮಾಜಿ ಸಚಿವರ ವಿಚಾರಣೆ ನಡೆಸಲಾಗುತ್ತಿದೆ.
ಬ್ಯಾಂಕ್ ಸಿಬ್ಬಂದಿಗಳಿಗೆ ಲಕ್ಷ ಲಕ್ಷ ಕಮಿಷನ್
ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಸಿಬ್ಬಂದಿಗೂ ಲಕ್ಷ ಲಕ್ಷ ರೂ. ಕಮಿಷನ್ ನೀಡಲಾಗಿತ್ತು. ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಸಚಿವರ ಹಾಗೂ ಅಧ್ಯಕ್ಷರ ಪಿಎಗಳು ಬ್ಯಾಂಕ್‌ಗೆ ಸತತವಾಗಿ ಭೇಟಿ ನೀಡಿದ್ದರು. ಈಗಾಗಲೇ ಬ್ಯಾಂಕಿನ ಸಿಸಿ ಕ್ಯಾಮರಾ ರೆಕಾರ್ಡ್‌ಗಳನ್ನು ಎಸ್‌ಐಟಿ ಪರಿಶೀಲನೆ ಮಾಡಿದ್ದು, ಅದನ್ನು ಇಡಿ ಕೂಡ ಸಂಗ್ರಹಿಸಿದೆ. ಸಚಿವರ ಹಾಗೂ ಶಾಸಕರ ಮೇಲೆ ದಾಳಿಗೂ ಮುನ್ನ ಬ್ಯಾಂಕ್‌ಗೆ ಭೇಟಿ ನೀಡಿ ಬ್ಯಾಂಕ್ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿದೆ.
ಮುಂಜಾನೆಯೇ ಬ್ಯಾಂಕ್ ಅಧಿಕಾರಿಗಳಿಗೆ ಬುಲಾವ್
ಮಾಜಿ ಸಚಿವ ನಾಗೇಂದ್ರ ಮನೆಗೆ ಇಡಿ ಅಧಿಕಾರಿಗಳು ಬೆಳಗಿನ ಜಾವ ಐದು ಗಂಟೆಗೇ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿಕೊಂಡು ನಾಗೇಂದ್ರ ಮನೆಯಲ್ಲಿ ಸಿಕ್ಕಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸತತ 24 ಗಂಟೆಗಳಿಂದ ಇಡಿ ಅಧಿಕಾರಿಗಳ ದಾಳಿ ಮುಂದುವರಿದಿದೆ.
ಇಡಿ ದಾಳಿ ನಡುವೆಯೇ ಎಸ್‌ಐಟಿ ನೋಟೀಸ್
ಇಡಿ ಅಧಿಕಾರಿಗಳ ದಾಳಿ ನಡುವೆಯೇ ಎಸ್ಐಟಿ ಅಧಿಕಾರಿಗಳಿಂದ ಮಾಜಿ ಸಚಿವ ನಾಗೇಂದ್ರ ಮತ್ತು ಶಾಸಕ ಬಸವನ ಗೌಡ ದದ್ದಲ್‌ಗೆ ಇಂದು ಎಸ್ಐಟಿ ಕಚೇರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿಯಾಗಿದೆ. ಎರಡು ದಿನಗಳ ಹಿಂದೆ ನಾಗೇಂದ್ರರನ್ನು ಎಂಟು ಗಂಟೆ, ದದ್ದಲ್‌ರನ್ನು ನಾಲ್ಕು ಗಂಟೆ ಕಾಲ ಎಸ್‌ಐಟಿ ವಿಚಾರಣೆ ನಡೆಸಿತ್ತು. ಮತ್ತೆ ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸೂಚಿಸಿದ್ದರು. ಆದರೆ ನಿನ್ನೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಪರಿಣಾಮ ಇಬ್ಬರೂ ವಿಚಾರಣೆ ಹಾಜರಾಗಿರಲಿಲ್ಲ. ಇವತ್ತೂ ಇಡಿ ದಾಳಿ ಮುಂದುವರಿದ ಪರಿಣಾಮ ಎಸ್ಐಟಿ ವಿಚಾರಣೆಗೆ ಹಾಜರಾಗುವುದು ಅನುಮಾನವಾಗಿದೆ.
ಇದನ್ನೂ ಓದಿ | ED Raid: ಇಡಿ- ಸಿಬಿಐ ಮೆಗಾ ದಾಳಿ; 80 ಅಧಿಕಾರಿಗಳಿಂದ ರೇಡ್, ಬ್ಯಾಂಕ್ ಸಿಬ್ಬಂದಿ ಮನೆ ಸೀಜ್! ಬೆಳಗ್ಗೆಯಿಂದ ಏನೇನಾಯ್ತು?