Site icon Vistara News

Kaveri Aarti: ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ; ದಸರಾ ಹೊತ್ತಿಗೆ ರೆಡಿ

kaveri aarti

ಬೆಂಗಳೂರು: ಹಿಮಾಲಯದ (Himalayas) ತಪ್ಪಲು ಪುಣ್ಯಕ್ಷೇತ್ರಗಳಾದ ಹರಿದ್ವಾರ, ಹೃಷಿಕೇಶ, ಕಾಶಿಯಲ್ಲಿ ನಡೆಯುವ ಮನಮೋಹಕ ಗಂಗಾರತಿ (Ganga Aarti) ಮಾದರಿಯಲ್ಲಿ ಕರ್ನಾಟಕದಲ್ಲಿಯೂ ʼಕಾವೇರಿ ಆರತಿʼ (Kaveri Aarti) ಏರ್ಪಡಿಸಲು ರಾಜ್ಯ ಸರಕಾರ (Karnataka Govt) ಸಜ್ಜಾಗಿದ್ದು, ಮುಂದಿನ ದಸರಾ (Dussehra) ಅವಧಿಯ ಹೊತ್ತಿಗೆ ಅದನ್ನು ಕಾರ್ಯಗತಗೊಳಿಸಲು ಚಿಂತಿಸಿದೆ.

ನಾಡಿನ ಪುಣ್ಯನದಿ ಕಾವೇರಮ್ಮನಿಗೆ ಕಾವೇರಿ ಆರತಿ ಮಾಡುವ ಯೋಜನೆ ಬಗ್ಗೆ ಸರ್ಕಾರದಿಂದ ಚಿಂತನೆ ನಡೆದಿದ್ದು, ಕಾವೇರಿ ಆರತಿಗಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದ ಸಮಿತಿ ರಚಿಸಿದೆ.

ಆಗಸ್ಟ್ ಮೊದಲ ವಾರ ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳಲಿರುವ ಸಮಿತಿ, ವಾರಾಣಸಿ, ಹೃಷಿಕೇಶ ಮತ್ತು ಗಯಾಕ್ಕೆ ತೆರಳಿ ಅಲ್ಲಿ ಮಾಡಲಾಗುವ ಆರತಿ ಸಂಪ್ರದಾಯಗಳನ್ನು ವೀಕ್ಷಿಸಿ‌ ವರದಿ‌ ನೀಡಲಿದೆ. ಸಮಿತಿಯಲ್ಲಿ ಶಾಸಕರಾದ ರವಿ ಗಾಣಿಗ, ದಿನೇಶ್ ಗೂಳಿಗೌಡ ಸೇರಿದಂತೆ 10ಕ್ಕೂ ಹೆಚ್ಚಿನ ಶಾಸಕರು ಇದ್ದಾರೆ.

ಮುಂದಿನ ದಸರಾ ಹಬ್ಬದ ಸಂದರ್ಭದಲ್ಲಿ ಕಾವೇರಿ ಆರತಿ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮಿತಿಯ ಅಧ್ಯಯನ ಪ್ರವಾಸದ ಅಂತಿಮ ಹಂತದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಸಮಿತಿಯೊಂದಿಗೆ ಸೇರುವ ಸಾಧ್ಯತೆ ಇದೆ.

ಕಾವೇರಿ ಆರತಿ ಆಯೋಜನೆಗೆ ಕೆಆರ್‌ಎಸ್ ಜಲಾಶಯ ಸೂಕ್ತ ಎನ್ನಲಾಗಿತ್ತು. ಆದರೆ ಅಲ್ಲಿ ಸ್ಥಳಾವಕಾಶದ ಕೊರತೆ ಎದುರಾಗುವ ಸಾಧ್ಯತೆ ಇರುವುದರಿಂದ ತಲಕಾಡು ಅಥವಾ ಸಂಗಮದಲ್ಲಿ ಕಾವೇರಿ ಆರತಿ ಆಯೋಜಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಇನ್ನೊಂದು ಕಡೆಯಿಂದ, ಕಾವೇರಿಯ ಉಗಮ ಸ್ಥಾನವಾದ ಭಾಗಮಂಡಲದಲ್ಲಿಯೇ ಆರತಿ ನಡೆಸಬೇಕು ಎಂಬ ಸಲಹೆಯೂ ಬಂದಿದೆ.

ಚಲುವರಾಯಸ್ವಾಮಿ ನೇತೃತ್ವದ ಸಮಿತಿ ವರದಿ ನೀಡಿದ ನಂತರ ಜಾಗ ಅಂತಿಮವಾಗಲಿದೆ. ಕಾವೇರಿ ಆರತಿ ಆಯೋಜನೆಗೂ ಮುನ್ನ ಕಾವೇರಿ ತಾಯಿಗೆ ದೇವಸ್ಥಾನ ನಿರ್ಮಾಣ ಮಾಡುವ ಚಿಂತನೆಯಿದೆ. ಕಾವೇರಿ ಆರತಿಯ ವರದಿ ಪಡೆಯುವುದು, ಕಾರ್ಯಕ್ರಮ ಆಯೋಜನೆ ಹೊಣೆ ಜಲಸಂಪನ್ಮೂಲ ಇಲಾಖೆಯದ್ದಾಗಿರಲಿದೆ. ಧಾರ್ಮಿಕ ದತ್ತಿ, ಲೋಕೋಪಯೋಗಿ ಇಲಾಖೆಗಳು ಸಹಕಾರ ನೀಡಲಿವೆ.

ಕಾವೇರಿ ಆರತಿಯನ್ನು ಪ್ರವಾಸಿಗರ ಕಣ್ಮನ ಸೆಳೆಯುವ ಬೃಹತ್ ಕಾರ್ಯಕ್ರಮವನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿದೆ. ಕನಿಷ್ಠ 5ರಿಂದ 6 ಸಾವಿರ ಜನರು ಸೇರುವಂತೆ ಮಾಡುವುದು ಉದ್ದೇಶ. ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಆಯೋಜಿಸಲು ಚಿಂತಿಸಲಾಗಿದೆ. ಆರಂಭದಲ್ಲಿ ವಾರಕ್ಕೆ ಒಂದು ಬಾರಿ, ನಂತರ ಎರಡು ಬಾರಿ, ಮೂರು ಬಾರಿ ಹೀಗೆ ಹೆಚ್ಚಿಸುತ್ತ ಹೋಗುವ ಬಗ್ಗೆ ಚಿಂತಿಸಲಾಗಿದೆ.

ಕೊಡಗಿನಲ್ಲಿ ನಡೆಯುತ್ತಿದೆ

ಕೊಡಗಿನಲ್ಲಿ 2011ರಿಂದಲೇ ಕಾವೇರಿ ಆರತಿ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ನಮಾಮಿ ಕಾವೇರಿ ಎಂಬ ಸಂಘಟನೆ ಪ್ರತಿ ತಿಂಗಳು ಹುಣ್ಣಿಮೆಯಂದು ಕಾವೇರಿಗೆ ಆರತಿ ಕಾರ್ಯಕ್ರಮ ಮಾಡುತ್ತ ಬಂದಿದ್ದು, ಇತ್ತೀಚೆಗೆ 161 ನೇ ಕಾವೇರಿ ಆರತಿ ಕಾರ್ಯಕ್ರಮ ಕೊಡಗಿನ 14 ಕಡೆಗಳಲ್ಲಿ ಏಕಕಾಲದಲ್ಲಿ ನಡೆದಿದೆ. ಕಲುಷಿತಗೊಳ್ಳುತ್ತಿರುವ ಕಾವೇರಿ ನದಿ ಮೇಲೆ ಧಾರ್ಮಿಕ ಭಾವನೆ ಬರಲಿ, ಅದರ ಪಾವಿತ್ರ್ಯತೆಯನ್ನು ಪ್ರತಿಯೊಬ್ಬರೂ ಕಾಪಾಡುವಂತಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಈವರೆಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಸ್ವಾಮೀಜಿಗಳು, ತಮಿಳುನಾಡಿನ ಸ್ವಾಮೀಜಿಗಳೂ ಪಾಲ್ಗೊಂಡಿದ್ದಾರೆ. ಹಿಂದೊಮ್ಮೆ ಸರಕಾರದಿಂದಲೂ ‘ಕಾವೇರಿ ಉತ್ಸವ” ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾವೇರಿ ನೀರಾವರಿ ನಿಗಮದ ಮೂಲಕ ಅದ್ದೂರಿ ಆರತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ.

ಇದನ್ನೂ ಓದಿ: Cauvery Dispute: ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನೀರು ಬಿಡಲು ಸೂಚನೆ; ಸರ್ವಪಕ್ಷ‌ ಸಭೆ ಕರೆದ ಸಿಎಂ ಸಿದ್ದರಾಮಯ್ಯ

Exit mobile version