Site icon Vistara News

Neha Murder Case: ನೇಹಾ ಕೊಲೆಗಾರ ಫಯಾಜ್‌ಗೆ 14 ದಿನ ನ್ಯಾಯಾಂಗ ಬಂಧನ; ʼಲವ್‌ ಜಿಹಾದ್‌ ಕೊಲೆʼ ವಿರೋಧಿಸಿ ಮೂರು ದಿನ ಮುನವಳ್ಳಿ ಬಂದ್

Murder case Man stabbed to death 9 times for refusing to love

ಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಹಿರೇಮಠ (Neha Hirematt) ಎಂಬ ಕಾಲೇಜು ವಿದ್ಯಾರ್ಥಿನಿಯನ್ನು ಹತ್ಯೆ (Neha Murder Case) ಮಾಡಿದ ಆರೋಪಿ ಫಯಾಜ್‌ನನ್ನು ಪೊಲೀಸರು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಫಯಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ (Judicial Custody) ವಿಧಿಸಲಾಗಿದೆ. ನೇಹಾ ಕುಟುಂಬಸ್ಥರನ್ನು ಬಿಜೆಪಿ ಮುಖಂಡರಾದ ಪ್ರಹ್ಲಾದ್‌ ಜೋಶಿ, ಬಸವರಾಜ್‌ ಬೊಮ್ಮಾಯಿ ಮುಂತಾದವರು ಭೇಟಿಯಾಗಿದ್ದು, ʼʼಹಿಂದೂಗಳಿಗೆ ರಕ್ಷಣೆ ನೀಡದ ರಾಜ್ಯ ಸರ್ಕಾರʼʼದ ವಿರುದ್ಧ ಗುಡುಗಿದ್ದಾರೆ.

ಹುಬ್ಬಳ್ಳಿ ನಗರವನ್ನು ನಡುಗಿಸಿದ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್‌ನನ್ನು ಪೊಲೀಸರು ಇಂದು ಕೋರ್ಟ್ ಮುಂದೆ ಹಾಜರುಪಡಿಸಿದರು. ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಆರೋಪಿಯನ್ನು‌ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು.

ಮೂರು ದಿನ ಮುನವಳ್ಳಿ ಬಂದ್‌

ನೇಹಾ ಹಿರೇಮಠ ಅವರ ಮೂಲವಾದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ನಗರ ಕೂಡ ಉದ್ವಿಗ್ನಗೊಂಡಿದೆ. ಇಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಗರ ಬಂದ್‌ಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಕರೆ ನೀಡಿವೆ. ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ. ಈ ನಡುವೆ, ಇಂದು ʼಲವ್‌ ಜಿಹಾದ್‌ ಕೊಲೆʼ ಎಂದು ಹೇಳುವ ಪೋಸ್ಟರ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿವೆ. ‌

ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಶವವನ್ನು ಕಿಮ್ಸ್ ಶವಾಗಾರದಲ್ಲಿ ಇಡಲಾಗಿದೆ. ಬಿಜೆಪಿ ಮುಖಂಡರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ್‌ ಜೋಶಿ, ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಇಲ್ಲಿಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಿಡ್ನಾಳದ ಬಸವನಗರದಲ್ಲಿರುವ ಕಾರ್ಪೊರೇಟರ್ ನಿರಂಜನ್ ಮನೆ ಬಳಿ ಜನರು ಹಾಗೂ ಸಂಬಂಧಿಕರು ಜಮಾಯಿಸುತ್ತಿದ್ದಾರೆ. ನಿರಂಜನರಿಗೆ ಸಾಂತ್ವನ ಹೇಳಲು ಮಾಜಿ ಮೇಯರ್ ಇರೇಶ್ ಅಂಚಟಗೇರಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಸೇರಿದಂತೆ ಬಿಜೆಪಿ ಸ್ಥಳೀಯ ನಾಯಕರು ಆಗಮಿಸಿದ್ದಾರೆ.

ಏನಿದು ಪ್ರಕರಣ?

ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌, ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದಿದ್ದಾನೆ. ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲಿ ಕೊಲೆ ನಡೆದಿದೆ. ನೇಹಾ ಹಿರೇಮಠ ಕೊಲೆಯಾದ ಯುವತಿ. ನೇಹಾ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳಾಗಿದ್ದಾಳೆ.

ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೊಲೆ

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ವೇಳೆ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದಾನೆ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ, ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ. ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿಯು ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದಾನೆ. ಯುವತಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದು, ನೇಹಾಳಿಗೆ ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ಇದನ್ನೂ ಓದಿ: Murder Case: ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿ 4 ಮಂದಿ ಮಲಗಿದಲ್ಲೇ ಕೊಚ್ಚಿ ಕೊಲೆ

Exit mobile version