ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರ ಲೈಂಗಿಕ ದೌರ್ಜನ್ಯ (Physical abuse) ಹಗರಣದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಈ ದೂರಿನಲ್ಲಿ ಬಿಗಿಯಾದ ದಂಡ ಸಂಹಿತೆ ಸೆಕ್ಷನ್‌ಗಳನ್ನು (IPC) ದಾಖಲಿಸಲಾಗಿದ್ದು, ಇದರಡಿ ಪ್ರಜ್ವಲ್ ಅವರ ಬಂಧನ ಖಚಿತವಾಗಿದೆ. ಮೈಸೂರಿನಲ್ಲೂ (Mysore news) ಇನ್ನೊಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ (kidnap) ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದೆ. ಇಲ್ಲಿಗೆ ಒಟ್ಟು ಮೂರು ದೂರುಗಳಾಗಿವೆ.
ಪ್ರಜ್ವಲ್ ರೇವಣ್ಣ ಮೇಲೆ ದಾಖಲಾಗಿರುವ ಎರಡನೇ ಎಫ್ಐಆರ್ ಸಿಐಡಿ ಸೈಬರ್ ಠಾಣೆಯಲ್ಲಿ (CID cyber station) ದಾಖಲಾಗಿದೆ. ಎರಡನೇ ಎಫ್ಐಆರ್‌ನಲ್ಲಿ ದಾಖಲಿಸಿರುವ ಸೆಕ್ಷನ್‌ಗಳು ಹೆಚ್ಚು ಬಿಗಿಯಾಗಿದ್ದು, ತನಿಖೆಗೆ ಹಾಸನ ಸಂಸದರ ಬಂಧನವನ್ನು ಅನಿವಾರ್ಯವಾಗಿಸಿವೆ.
IPC 376(2)N, 506 ,354a1, 354b, 354c ಸೆಕ್ಷನ್‌ಗಳು ಹಾಗೂ ಐಟಿ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲಾಗಿವೆ. 376(2)n ಸೆಕ್ಷನ್ ಮಹಿಳೆ ಮೇಲೆ ಬೆದರಿಸಿ ನಿರಂತರ ಅತ್ಯಾಚಾರ ನಡೆಸುವುದನ್ನು ದಾಖಲಿಸುತ್ತಿದ್ದು, ಇದು ಸಾಬೀತಾದರೆ ಕನಿಷ್ಠ ಹತ್ತು ವರ್ಷ ಜೈಲು ಅಥವಾ ಗರಿಷ್ಠ ಜೀವಾವಧಿ ಶಿಕ್ಷೆಯಾಗಲಿದೆ.
ಸೆಕ್ಷನ್ 506 ಅಪರಾಧಿಕ ಉದ್ದೇಶದಿಂದ ಬೆದರಿಸುವುದು, 354a1 ಲೈಂಗಿಕ ಬೇಡಿಕೆಗೆ ಒತ್ತಾಯಿಸುವುದು- ಇದಕ್ಕೆ ಗರಿಷ್ಠ ಮೂರು ವರ್ಷಗಳ ಶಿಕ್ಷೆ, 354b ಅಪರಾಧಿಕ ಉದ್ದೇಶಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡುವುದು- ಗರಿಷ್ಠ ಮೂರು ವರ್ಷ ಶಿಕ್ಷೆ, 354c ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಖಾಸಗಿ ವಿಷಯವನ್ನು ರೆಕಾರ್ಡ್ ಮಾಡುವುದು ಮತ್ತು ನೋಡುವುದು- ಗರಿಷ್ಠ ಏಳು ವರ್ಷ ಶಿಕ್ಷೆ ಇವುಗಳಿವೆ.
ಎರಡನೇ ಎಫ್ಐಆರ್‌ನಲ್ಲಿ ಪ್ರಜ್ವಲ್ ರೇವಣ್ಣ ಮಾತ್ರ ಆರೋಪಿಯಾಗಿದ್ದಾರೆ. ಮೊದಲ ದೂರಿನಲ್ಲಿ ಎಚ್‌ಡಿ ರೇವಣ್ಣ ಕೂಡ ಆರೋಪಿಯಾಗಿದ್ದರು. ಎಚ್‌ಡಿ ರೇವಣ್ಣ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಭಾರತಕ್ಕೆ ಬಂದ ಕೂಡಲೇ ಬಂಧನ ಮಾಡಲು ಎಸ್‌ಐಟಿ ಸಜ್ಜಾಗಿದೆ. ಈಗಾಗಲೇ ಆರೋಪಿಗೆ ಲುಕ್‌ಔಟ್ ನೊಟೀಸ್ ಹೊರಡಿಸಲಾಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಬಂಧನ ಬಹುತೇಕ ಖಚಿತವಾಗಿದೆ.
ಮೈಸೂರಿನಲ್ಲೂ ದೂರು
ಪ್ರಜ್ವಲ್ ರೇವಣ್ಣ (Prajwal Revanna Case) ಮೇಲೆ ಮೈಸೂರಿನಲ್ಲೂ ಒಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ (kidnap) ಪ್ರಕರಣ ದಾಖಲಾಗಿದೆ. ತಾಯಿಯನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಪುತ್ರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕೆ.ಆರ್.ನಗರ ತಾಲೂಕಿನಲ್ಲಿ ಘಟನೆ ನಡೆದಿದೆ. “ಪ್ರಜ್ವಲ್ ರೇವಣ್ಣ ಅವರಿಂದ ನನ್ನ ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು. ಈ ಸಂಬಂಧ ಫೋಟೋಗಳು ಬಹಿರಂಗ ಆಗಿದ್ದವು. ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ (Bhavani Revanna) ಅಪಹರಣ ಮಾಡಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಬಗ್ಗೆ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿರುವ ದೂರಿನ ತನಿಖೆಗೆ ಎಸ್‌ಐಟಿ ರಚನೆ ಮಾಡಿರುವಂತೆ ಈ ದೂರು ಕೂಡ ಹೊರಬಂದಿದೆ.
ರೇವಣ್ಣ ಜಾಮೀನು ಅರ್ಜಿ ವಿಚಾರಣೆ
ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಇನ್ನೊಬ್ಬ ಪ್ರಮುಖ ಆರೋಪಿ ಎಚ್.ಡಿ. ರೇವಣ್ಣ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.
ಎಚ್.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಎಫ್ಐಆರ್‌ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ಹೀಗಿದ್ದರೂ ನಿರೀಕ್ಷಣಾ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಿದ್ದೀರಿ? ಈ ಅರ್ಜಿ ಹೇಗೆ ಊರ್ಜಿತವಾಗುತ್ತದೆ? ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ ಎಂದು ರೇವಣ್ಣ ಪರ ಹಿರಿಯ ವಕೀಲರಿಗೆ ಕೋರ್ಟ್ ಪ್ರಶ್ನೆ ಮಾಡಿದೆ.
ಇದಕ್ಕೆ ವಾದ ಮಂಡಿಸಿದ ಎಚ್.ಡಿ. ರೇವಣ್ಣ ಪರ ವಕೀಲರು, ಎಸ್ಐಟಿ ಸಲ್ಲಿಸಿದ ಅರ್ಜಿಯ ವಿವರ ಇನ್ನೂ ಲಭ್ಯವಿಲ್ಲ. ಹೀಗಾಗಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎಫ್ಐಆರ್‌ನಲ್ಲಿ ಜಾಮೀನು ನೀಡಬೇಕಾದ ಆರೋಪಗಳಿವೆ. ಆದರೆ, ಮ್ಯಾಜಿಸ್ಟ್ರೇಟ್‌ಗೆ ಅತ್ಯಾಚಾರ ಆರೋಪ ಸೇರಿಸಲು ಅರ್ಜಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಎಚ್.ಡಿ. ರೇವಣ್ಣ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ವಕೀಲ ಮೂರ್ತಿ ಡಿ. ನಾಯ್ಕ್ ತಿಳಿಸಿದರು.
ಇದನ್ನೂ ಓದಿ: Prajwal Revanna Case: ರೇವಣ್ಣಗೆ ಇಂದು ಸಿಗಲಿಲ್ಲ ನಿರೀಕ್ಷಣಾ ಜಾಮೀನು; ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿದ ಕೋರ್ಟ್!