Site icon Vistara News

Prajwal Revanna Case: ಪ್ರಜ್ವಲ್‌ ರೇವಣ್ಣ ಮೇಲೆ ಮೈಸೂರಿನಲ್ಲೂ ಒಂದು ಕೇಸ್‌; ತಾಯಿ ಮೇಲೆ ಲೈಂಗಿಕ ಕಿರುಕುಳ, ಅಪಹರಣ ಎಂದು ದೂರು ನೀಡಿದ ಮಗ

Hassan Pen Drive case Prajwal Revanna case

ಮೈಸೂರು: ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ (Prajwal Revanna Case) ಅವರ ಲೈಂಗಿಕ ದೌರ್ಜನ್ಯ (Physical abuse) ಹಗರಣ ಇದೀಗ ಮೈಸೂರಿಗೂ (Mysore news) ವ್ಯಾಪಿಸಿದೆ. ಮೈಸೂರಿನಲ್ಲೂ ಒಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ (kidnap) ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದೆ.

ತಾಯಿಯನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಪುತ್ರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕೆ.ಆರ್.ನಗರ ತಾಲೂಕಿನಲ್ಲಿ ಘಟನೆ ನಡೆದಿದೆ. “ಪ್ರಜ್ವಲ್ ರೇವಣ್ಣ ಅವರಿಂದ ನನ್ನ ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು.‌ ಈ ಸಂಬಂಧ ಫೋಟೋಗಳು ಬಹಿರಂಗ ಆಗಿದ್ದವು. ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ (Bhavani Revanna) ಅಪಹರಣ ಮಾಡಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಬಗ್ಗೆ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿರುವ ದೂರಿನ ತನಿಖೆಗೆ ಎಸ್‌ಐಟಿ ರಚನೆ ಮಾಡಿರುವಂತೆ ಈ ದೂರು ಕೂಡ ಹೊರಬಂದಿದೆ.

ರೇವಣ್ಣ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು: ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಇನ್ನೊಬ್ಬ ಪ್ರಮುಖ ಆರೋಪಿ ಎಚ್.ಡಿ. ರೇವಣ್ಣ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಎಚ್.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌, ಎಫ್ಐಆರ್‌ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ಹೀಗಿದ್ದರೂ ನಿರೀಕ್ಷಣಾ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಿದ್ದೀರಿ? ಈ ಅರ್ಜಿ ಹೇಗೆ ಊರ್ಜಿತವಾಗುತ್ತದೆ? ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ ಎಂದು ರೇವಣ್ಣ ಪರ ಹಿರಿಯ ವಕೀಲರಿಗೆ ಕೋರ್ಟ್ ಪ್ರಶ್ನೆ ಮಾಡಿದೆ.

ಇದಕ್ಕೆ ವಾದ ಮಂಡಿಸಿದ ಎಚ್.ಡಿ. ರೇವಣ್ಣ ಪರ ವಕೀಲರು, ಎಸ್ಐಟಿ ಸಲ್ಲಿಸಿದ ಅರ್ಜಿಯ ವಿವರ ಇನ್ನೂ ಲಭ್ಯವಿಲ್ಲ. ಹೀಗಾಗಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎಫ್ಐಆರ್‌ನಲ್ಲಿ ಜಾಮೀನು ನೀಡಬೇಕಾದ ಆರೋಪಗಳಿವೆ. ಆದರೆ, ಮ್ಯಾಜಿಸ್ಟ್ರೇಟ್‌ಗೆ ಅತ್ಯಾಚಾರ ಆರೋಪ ಸೇರಿಸಲು ಅರ್ಜಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಎಚ್.ಡಿ. ರೇವಣ್ಣ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ವಕೀಲ ಮೂರ್ತಿ ಡಿ. ನಾಯ್ಕ್ ತಿಳಿಸಿದರು.

ಎಸ್‌ಐಟಿಗೆ ವಿಶೇಷ ಕೋರ್ಟ್‌ ನೋಟಿಸ್‌

ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ನ್ಯಾಯಾದೀಶರಾದ ಸಂತೋಷ್ ಗಜಾನನ ಭಟ್, ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ (ಮೇ 3) ಮುಂದೂಡಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಜ್ವಲ್‌ಗೆ ಎಸ್‌ಐಟಿ ಏನು ಕೇಳಲಿದೆ?

ಪ್ರಜ್ವಲ್‌ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾದಲ್ಲಿ ಇಲ್ಲವೇ ಅವರನ್ನು ಬಂಧಿಸಿ ಕರೆತಂದಲ್ಲಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈಗಾಗಲೇ ಹಲವು ಪ್ರಶ್ನೆಗಳನ್ನು ಎಸ್‌ಐಟಿ ಸಿದ್ಧಪಡಿಸಿಟ್ಟುಕೊಂಡಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಸಣ್ಣ ಸಣ್ಣ ಪ್ರಶ್ನೆಗಳನ್ನೂ ಕೇಳಿ ಪ್ರಜ್ವಲ್‌ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್‌ ಅವರ ವಯಸ್ಸಿನಿಂದ ಹಿಡಿದು ಹಲವು ಪ್ರಶ್ನೆಗಳನ್ನು ಕೇಳಲಿದ್ದಾರೆ. ಆರೋಪಗಳ ಬಗ್ಗೆ ಏನು ಹೇಳುತ್ತೀರಿ? ನೀವೇ ರೆಕಾರ್ಡ್‌ ಮಾಡಿಕೊಂಡಿದ್ದೀರಿ ಎಂಬ ಆರೋಪ ಇದೆ. ರೆಕಾರ್ಡ್‌ಗೆ ಯಾವ ಸಾಧನವನ್ನು ಬಳಸಿಕೊಂಡಿದ್ದೀರಿ. ಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ ಪ್ರಜ್ವಲ್‌ ರೇವಣ್ಣ ಅವರ ತಂದೆ ಎಚ್.ಡಿ. ರೇವಣ್ಣ ಅವರಿಗೂ ಹಲವು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ರೆಡಿಯಾಗಿದೆ. ನಿಮ್ಮ ಪುತ್ರನ ಮೇಲೆ ಆರೋಪವಿರುವುದು ಗಮನಕ್ಕೆ ಬಂದಿತ್ತಾ? ನಿಮ್ಮ ಗಮನಕ್ಕೆ ಬಂದಿದ್ರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ? ಒಂದು ವೇಳೆ ಚರ್ಚೆ ಮಾಡಿದರೆ ನಿಮ್ಮ ಪುತ್ರ ಏನು ಹೇಳಿದ್ದರು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Prajwal Revanna Case: ರೇವಣ್ಣಗೆ ಇಂದು ಸಿಗಲಿಲ್ಲ ನಿರೀಕ್ಷಣಾ ಜಾಮೀನು; ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿದ ಕೋರ್ಟ್!

Exit mobile version