ಬೆಂಗಳೂರು: ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna Jailed) ಅವರು ಇಂದು ಜಾಮೀನಿನಲ್ಲಿ ಬಿಡುಗಡೆ ಆಗುತ್ತಿದ್ದು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ (Prajwal Revanna Case) ಕುಟುಂಬಕ್ಕೆ ಆಗಿರುವ ಅವಮಾನದ ಸೇಡು ತೀರಿಸಿಕೊಳ್ಳಲು ರಾಜಕೀಯ ಭೀಷ್ಮ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು (HD Deve Gowda) ಸಜ್ಜಾಗಿದ್ದಾರೆ. ಸದಾ ನೀಟ್ ಶೇವ್ ಮಾಡಿಕೊಳ್ಳುವ ದೇವೇಗೌಡರು ಮಗ ಜೈಲುಪಾಲಾದ ಬಳಿಕ ಮೊದಲ ಬಾರಿಗೆ ಗಡ್ಡ ಬಿಟ್ಟಿದ್ದು, ಇದೀಗ ಎದುರಾಳಿಗಳನ್ನು ಎದುರಿಸಲು ಎದ್ದು ಕೂತಿದ್ದಾರೆ.
ಇಂದು ರೇವಣ್ಣ ಮನೆಗೆ
ಹನ್ನೊಂದು ದಿನಗಳ ಹಿಂದೆ ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲೇ ಆರೆಸ್ಟ್ ಆಗಿದ್ದ ಎಚ್.ಡಿ ರೇವಣ್ಣ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಜೈಲರ್‌ಗೆ ಬಿಡುಗಡೆ ಆದೇಶ ಪ್ರತಿ ಸಿಗುವವರೆಗೂ ಬಿಡುಗಡೆ ದೊರೆಯುವುದಿಲ್ಲ. ಬೆಳಿಗ್ಗೆ ಹತ್ತುವರೆಗೆ ಕೋರ್ಟ್ ಕಲಾಪ ಆರಂಭವಾಗಲಿದ್ದು, ಹತ್ತುವರೆಗೆ ಪರಪ್ಪನ ಅಗ್ರಹಾರ ಜೈಲಿಗೆ ಜೈಲರ್ ಬರಲಿದ್ದಾರೆ. ರೇವಣ್ಣ ಪರ ವಕೀಲರಿಂದ ಜೈಲರ್‌ಗೆ ಬಿಡುಗಡೆ ಆದೇಶ ಪ್ರತಿ ನೀಡಿ ಹನ್ನೊಂದು ಗಂಟೆ ಬಳಿಕ ಬಿಡುಗಡೆ ಸಾಧ್ಯತೆ ಇದೆ. ಬಹುತೇಕ ಅಭಿಜಿನ್ ಮುಹೂರ್ತ 11.40ರ ಸಮಯದಲ್ಲಿ ಬಿಡುಗಡೆ ಸಾಧ್ಯತೆ ಇದೆ.
ರೇವಣ್ಣ ಬಿಡುಗಡೆ ಬಳಿಕ ನೇರವಾಗಿ ಪದ್ಮನಾಭ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ. ರೇವಣ್ಣ ಬಿಡುಗಡೆಯಿಂದ ಗೌಡರ ಕುಟುಂಬದಲ್ಲಿ ಸಂತೋಷ ಮೂಡಿದ್ದು, ಬಿಡುಗಡೆ ಬಳಿಕ ತಂದೆ ದೇವೇಗೌಡರು, ಹೆಚ್‌ಡಿಕೆ ಸೇರಿ ಕುಟುಂಬ ಸದಸ್ಯರ ಜೊತೆಗೆ ರೇವಣ್ಣ ಚರ್ಚೆ ನಡೆಸುವ ಸಾಧ್ಯತೆ ಇದೆ. ಮಾಜಿ ಪಿಎಂ ಎಚ್.ಡಿ ದೇವೇಗೌಡರ ಆಶೀರ್ವಾದ ಪಡೆದು ಬಳಿಕ ಮುಂದಿನ ಕೆಲಸಗಳಿಗಾಗಿ ಹಾಸನ ಕಡೆ ಹೊರಡಲಿದ್ದಾರೆ.
ಹನ್ನೊಂದು ದಿನಗಳ ಸಂಕಷ್ಟದ ಮೂಡ್‌ನಿಂದ ಇಂದು ಹೊರಬಂದಿರುವ ದೇವೇಗೌಡರು, ನಿನ್ನೆ ರಾತ್ರಿ ಒಂದು ಗಂಟೆವರೆಗೂ ತಮ್ಮ ಮಕ್ಕಳೊಂದಿಗೆ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಮಾಜಿ ಸಿಎಂ ಎಚ್‌ಡಿಕೆ ಸೇರಿದಂತೆ ದೇವೇಗೌಡರ ಪುತ್ರಿಯರು ಸಹ ಇದರಲ್ಲಿ ಭಾಗಿಯಾಗಿದ್ದರು. ಇಂದು ಮನೆಯಲ್ಲಿ ಹಬ್ಬದ ವಾತಾವರಣವಿದ್ದು, ನಿನ್ನೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
“ಪೆನ್ ಡ್ರೈವ್ ಪ್ರಕರಣದಿಂದ ಈಗಾಗಲೇ ನಮ್ಮ ಕುಟುಂಬದ ಮಾನ ಬೀದಿಗೆ ಬಂದಿದೆ. ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಇಕ್ಕಟ್ಟಿಗೆ ಸಿಲುಕಿದ್ದೇವೆ. ಈ ಹೊತ್ತಲ್ಲಿ ರಾಜಕೀಯ ಹೇಳಿಕೆ ಸೇರಿದಂತೆ ಯಾವುದಕ್ಕೂ ಹೇಳಿಕೆ ನೀಡಬೇಡಿ. ಹೆಚ್ಚು ಮಾತನಾಡಬೇಡಿ” ಎಂದು ದೇವೇಗೌಡರು ಮಕ್ಕಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಎಚ್ಚರಿಸಿದ್ದಾರೆ.
ಸರ್ಕಾರದ ವಿರುದ್ಧ ಯಾವ ಅಸ್ತ್ರ?
ದೇವೇಗೌಡರ ಐವತ್ತು ವರ್ಷಗಳ ಕಾಲದ ಘನತೆಯ ರಾಜಕೀಯ ಜೀವನಕ್ಕೆ ಪೆನ್ ಡ್ರೈವ್ ಪ್ರಕರಣದಿಂದ ಭಾರಿ ಪೆಟ್ಟು ಬಿದ್ದಿದೆ. ಕುಟುಂಬಕ್ಕೆ ಮುಜುಗರ ಸೃಷ್ಟಿಯಾಗಿದೆ. ಅವಮಾನಿತರಾದ ದೇವೇಗೌಡರು ರೇವಣ್ಣ ಜೈಲಿಗೆ ಹೋದ ಬಳಿಕ, ಎಂದೂ ಗಡ್ಡ ಬಿಡದವರು ಮೊದಲ ಬಾರಿಗೆ ದಾಡಿ ಬಿಟ್ಟಿದ್ದರು. ಡಿಕೆಶಿ ಹಾಗೂ ಸಿದ್ದರಾಮಯ್ಯ ತಮಗೆ ಸೃಷ್ಟಿಸಿರುವ ಅವಮಾನಕ್ಕೆ ಪ್ರತೀಕಾರ ಮಾಡಲು ಎಚ್‌ಡಿಡಿ ಕುಟುಂಬ ಕುದಿಯುತ್ತಿದೆ.
ಈ ನಿಟ್ಟಿನಲ್ಲಿ ತಂತ್ರ ರೆಡಿಯಾಗುತ್ತಿದ್ದು, ರಾಜಕೀಯ, ಸಾಮಾಜಿಕ ಎಲ್ಲ ನೆಲೆಗಳಲ್ಲೂ ಎದುರಾಳಿಗಳಿಗೆ ಕೌಂಟರ್ ಕೊಡಲು ಸಜ್ಜಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೂರು ಅಸ್ತ್ರಗಳು ತಯಾರಾಗುತ್ತಿವೆ ಎನ್ನಲಾಗಿದೆ.
ಅಸ್ತ್ರ – 1: ಡಿಕೆಶಿ ಸಿದ್ದರಾಮಯ್ಯ ವಿರುದ್ಧ ಪ್ರಯೋಗ
ಒಕ್ಕಲಿಗ ಸಮುದಾಯದ ಮುಂದೆ ಡಿಕೆಶಿಯನ್ನು ವಿಲನ್ ಮಾಡುವುದು, ದೇವೇಗೌಡರ ಫ್ಯಾಮಿಲಿಯನ್ನು ಜೈಲಿಗೆ ಕಳುಹಿಸಿದ್ದೇ ಡಿಕೆಶಿ ಹಾಗೂ ಸಿದ್ದರಾಮಯ್ಯ ಅಂತ ಬಿಂಬಿಸುವುದು ಈ ಅಸ್ತ್ರ. ಡಿಕೆಶಿಗೆ ದೇವೇಗೌಡರ ಕುಟುಂಬ ನೋಡಿದರೆ ಆಗಲ್ಲ. ಹೀಗಾಗಿ ಪೆನ್ ಡ್ರೈವ್ ಕೇಸ್‌ನಲ್ಲಿ ನಮ್ಮನ್ನು ಸಿಕ್ಕಿ ಹಾಕಿಸಿದ್ದಾರೆ. ಸಿದ್ದರಾಮಯ್ಯಗೆ ಒಕ್ಕಲಿಗ ಸಮುದಾಯ ಕಂಡರೆ ಆಗಲ್ಲ ಅಂತ ಬಿಂಬಿಸುವುದು, ರಾಜ್ಯಾದ್ಯಂತ ಸರ್ಕಾರದ ನಡೆ ವಿರುದ್ಧ ಮೈತ್ರಿ ಪಕ್ಷದ ಜತೆ ಜನಾಭಿಪ್ರಾಯ ಸಂಗ್ರಹಿಸುವುದು, ಇವರ ತಪ್ಪು ಮರೆ ಮಾಚಲು ಪೆನ್ ಡ್ರೈವ್ ಪ್ರಕರಣ ತಂದರು ಅಂತ ಪ್ರಚಾರ ಮಾಡುವುದು ಇತ್ಯಾದಿಗಳ ಮೂಲಕ ಮುಗಿಬೀಳುವುದು.
ಅಸ್ತ್ರ – 2: ಭ್ರಷ್ಟಾಚಾರದ ಪ್ರಸ್ತಾಪ
ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರಗಳನ್ನು ಪ್ರಸ್ತಾಪ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಈ ಹಿಂದೆ ಸರ್ಕಾರದ ಸಚಿವರ ವರ್ಗಾವಣೆ ದಂಧೆ ಸಂಬಂಧ ಇದೆ ಎನ್ನಲಾದ ಪೆನ್ ಡ್ರೈವ್ ಅಸ್ತ್ರ ಪ್ರಯೋಗ ಮಾಡುವುದು ಪ್ಲಾನ್‌ನಲ್ಲಿದೆ.
ಅಸ್ತ್ರ – 3: ಕಾನೂನು ಅಸ್ತ್ರಗಳು
ಡಿಕೆಶಿ ವಿರುದ್ಧ ಇರುವ, ಕೇಂದ್ರ ತನಿಖಾ ಏಜೆನ್ಸಿಗಳ ಮುಂದೆ ದಾಖಲಾಗಿರುವ ಪ್ರಕರಣಗಳಿಗೆ ಮರುಜೀವ ಕೊಡಿಸುವುದು, ಡಿಕೆಶಿಗೆ ಐಟಿ, ಇಡಿ, ಸಿಬಿಐ ಸಂಕಷ್ಟ ಎದುರಾಗುವಂತೆ ನೋಡಿಕೊಳ್ಳುವುದು, ಈ ಬಗ್ಗೆ ಕೇಂದ್ರದ ಮುಂದೆ ಇನ್ನಷ್ಟು ದಾಖಲೆ ನೀಡಿ ಮೈತ್ರಿ ಪಕ್ಷದ ಬೆಂಬಲ ಪಡೆಯುವುದು ಈ ಪ್ಲಾನ್‌ನಲ್ಲಿದೆ.
ಇದನ್ನೂ ಓದಿ: HD Revanna Bail: ನಿನ್ನೆ ಜಾಮೀನು ಸಿಕ್ಕರೂ ಇಂದು ಸಂಜೆಯವರೆಗೆ ರೇವಣ್ಣ ಜೈಲಿನಲ್ಲಿರಬೇಕು!