ಹಾಸನ: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ (Physical Abuse) ಹಾಗೂ ಅಶ್ಲೀಲ ವೀಡಿಯೋ (Prajwal Revanna Case) ಪ್ರಕರಣದ ವಿಡಿಯೋ ಕಿಂಗ್‌ಪಿನ್ ಕಾರ್ತಿಕ್, ಕಾಂಗ್ರೆಸ್ ಅಭ್ಯರ್ಥಿ ಜೊತೆಗೆ ಆತ್ಮೀಯ ಒಡನಾಟ ಹೊಂದಿರುವ ಫೋಟೋಗಳು ವೈರಲ್ ಆಗಿವೆ. ಈ ಮೂಲಕ, ಪ್ರಕರಣ ವೈರಲ್ ಆಗಿರುವುದರ ಹಿಂದಿನ ʼಕೈʼವಾಡ ಖಚಿತವಾಗಿದೆ.
ವೀಡಿಯೋ ಕಿಂಗ್‌ಪಿನ್ ಕಾರ್ತಿಕ್ ಜೊತೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas patel) ಇರುವ ಫೋಟೋಗಳು ವೈರಲ್ (photos viral) ಆಗುತ್ತಿದ್ದು, ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇದನ್ನು ವೈರಲ್ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ದಿನವೇ ಕಾರ್ತಿಕ್ ಜೊತೆ ಪುಟ್ಟಿ (ಪುಟ್ಟರಾಜ್) ಮನೆಯಲ್ಲಿ ಶ್ರೇಯಸ್ ಊಟ ಮಾಡಿದ್ದಾರೆ ಎನ್ನಲಾದ ಫೋಟೊಗಳು ಇವಾಗಿವೆ.
“ನನಗೆ ಕಾರ್ತಿಕ್ ಪರಿಚಯವೇ ಇಲ್ಲ, ಒಮ್ಮೆ ಮಾತ್ರ ಭೇಟಿಯಾಗಿದ್ದೆ” ಎಂದು ಶ್ರೇಯಸ್ ಹೇಳಿದ್ದರು. ಇದೀಗ ಶ್ರೇಯಸ್ ಜೊತೆಗೆ ಊಟ ಮಾಡುತ್ತಿರುವ ಕಾರ್ತಿಕ್ ಫೋಟೋ ವೈರಲ್ ಆಗಿದೆ. ಇದೇ ಸಂದರ್ಭದಲ್ಲಿ ಕಾರ್ತಿಕ್, ಶ್ರೇಯಸ್, ಪುಟ್ಟಿ ಕೈಕೈ ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ಪೆನ್‌ಡ್ರೈವ್ ತಲುಪಿಸಿದ್ದು ಇದೇ ಪುಟ್ಟಿ ಎಂದು ವಕೀಲ ದೇವರಾಜೇಗೌಡ ಆರೋಪಿಸಿದ್ದರು.
ಕಾರ್ತಿಕ್ ಮುಟ್ಟದ ಎಸ್‌ಐಟಿಯಿಂದ ತಾರತಮ್ಯ!
ಇದರೊಂದಿಗೆ, ಎಸ್‌ಐಟಿ ಈ ಪ್ರಕರಣದ ತನಿಖೆಯಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಎಚ್.ಡಿ ಕುಮಾರಸ್ವಾಮಿ ಅವರು ಮಾಡಿರುವ ಆರೋಪ ನಿಜ ಎಂದು ಜನರಿಗೆ ಅನಿಸುವಂತಿದೆ. ವಕೀಲ ದೇವರಾಜೇಗೌಡಗೆ ವಿಚಾರಣೆಗೆ ಹಾಜರಾಗಲು ಮೇಲಿಂದ ಮೇಲೆ ನೋಟಿಸ್ ನೀಡಲಾಗುತ್ತಿದೆ. ಆದರೆ ಪ್ರಜ್ವಲ್ ರೇವಣ್ಣ ಮಾಜಿ ಕಾರ್ ಡ್ರೈವರ್ ಕಾರ್ತಿಕ್ ಎಲ್ಲಿ? ಪ್ರಜ್ವಲ್ ರೇವಣ್ಣ ಅವರಿಗೆ ನಡೆಯುತ್ತಿರುವ ತಲಾಶ್ ಕಾರ್ತಿಕ್‌ಗೆ ಯಾಕಿಲ್ಲ? ನಿಷ್ಪಕ್ಷಪಾತ ತನಿಖೆ, ದಕ್ಷ ಅಧಿಕಾರಿಗಳ ತಂಡದಿಂದ ಈ ಜಾಣ ಮೌನವೇಕೆ? ಎಂದು ಎಚ್‌ಡಿಕೆ ಪ್ರಶ್ನಿಸಿದ್ದರು.
ಕಾರ್ತಿಕ್ ದೇಶವನ್ನೇ ಬಿಟ್ಟುಹೋಗಿದ್ದು, ಅಧಿಕಾರದಲ್ಲಿರುವ ಪ್ರಭಾವಿಗಳು ಆತ ಹೊರಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದೂ ತಿಳಿಯಲಾಗಿದೆ. ಹೀಗಾಗಿ, ಕುಮಾರಸ್ವಾಮಿಯವರ ಮಾತಿನಂತೆ, ಪ್ರಾಮಾಣಿಕ ತನಿಖೆ ನಡೆಯುತ್ತಿಲ್ಲವೇ ಎಂದು ಭಾವಿಸಲು ಆಸ್ಪದವಾಗಿದೆ. ದೇವರಾಜೇಗೌಡರಿಗೆ ಮೇಲಿಂದ ಮೇಲೆ ನೋಟಿಸ್ ನೀಡಿ, ಕಾರ್ತಿಕ್ ಬಗ್ಗೆ ಚಕಾರ ಎತ್ತದಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.
“ಎಸ್ಐಟಿಯಲ್ಲಿರುವ ದಕ್ಷರು ಎನ್ನುವ ಅಧಿಕಾರಿಗಳೇ ಕಾರ್ತಿಕ್ ಎಲ್ಲಿ? ಒಂದು ವಿಡಿಯೋ ಮಾಡಿ ಬಿಟ್ಟು ನಾಪತ್ತೆಯಾಗಿರುವ ಕಾರ್ತಿಕ್‌ಗೆ ಶೋಧ ನಡೆಯುತ್ತಿದೆಯಾ? ಕಾರ್ತಿಕ್ ಎಲ್ಲಿ, ಅತನ ವಿಚಾರಣೆ ಯಾವಾಗ, ಆತನ ಬಗ್ಗೆ ಯಾಕೆ ಚರ್ಚೆ ಇಲ್ಲ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.
ಸಂತ್ರಸ್ತೆಯರ ವಿಡಿಯೋ ಮೊದಲು ಇದ್ದಿದ್ದು ಕಾರ್ತಿಕ್ ಬಳಿ ಮಾತ್ರ. ಅದು ವೈರಲ್ ಆಗಲು ಕಾರಣ ಏನು ಅನ್ನುವುದನ್ನು ಪತ್ತೆ ಹಚ್ಚೋದು ಯಾವಾಗ? ವಿಡಿಯೋ ವೈರಲ್ ವಿಚಾರವಾಗಿ ನವೀನ್ ಮೇಲೆ ದಾಖಲಾಗಿದ್ದ ಪ್ರಕರಣದ ತನಿಖೆ ಎಲ್ಲಿಗೆ ಬಂತು? ಮೊದಲು ಸಂತ್ರಸ್ತೆಯರ ಮುಖ ಕೂಡ ಬ್ಲರ್ ಮಾಡದೇ ವಿಡಿಯೋ ವೈರಲ್ ಮಾಡಿದವರ ಕಡೆ ಯಾಕೆ ಗಮನ ನೀಡಿಲ್ಲ? ತಮ್ಮ ಪಾಡಿಗೆ ತಾವು ಇರುವ ಸಂತ್ರಸ್ತೆಯರನ್ನೂ ಪೀಡಿಸಿ ತನಿಖೆಗೆ ಕರೆಸಿಕೊಳ್ಳಲು ಮುಂದಾಗಿರುವ ಎಸ್‌ಐಟಿ, ಕಾರ್ತಿಕ್ ಹಾಗೂ ನವೀನ್ ವಿಚಾರದಲ್ಲಿ ಯಾವುದೇ ಹೆಜ್ಜೆ ಇಟ್ಟಿಲ್ಲ ಯಾಕೆ? ಇತ್ಯಾದಿ ಪ್ರಶ್ನೆಗಳು ಮೂಡಿವೆ.
ಪ್ರಜ್ವಲ್ ರೇವಣ್ಣ ವಿರುದ್ಧ 196 ದೇಶಗಳಿಗೆ ಇಂಟರ್‌ಪೋಲ್ ಮೆಸೇಜ್
ಬೆಂಗಳೂರು: ಲೈಂಗಿಕ ಹಗರಣದ (Pen Drive Case) ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna case) ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್ (Blue Corner Notice) ಜಾರಿ ಮಾಡಲು ಎಸ್ಐಟಿ (SIT) ಅಧಿಕಾರಿಗಳು ಮಾಡಿದ್ದ ಮನವಿಗೆ ಸ್ಪಂದಿಸಿರುವ ಸಿಬಿಐ (CBI), ಈ ಕುರಿತು ಇಂಟರ್‌ಪೋಲ್‌ನಿಂದ (Interpol) ಮೂಲಕ 196 ದೇಶಗಳಿಗೆ ಮೆಸೇಜ್ ರವಾನೆ ಮಾಡಲಾಗಿದೆ. ಹೀಗಾಗಿ ಪ್ರಜ್ವಲ್ ಎಲ್ಲಿಯೇ ಕಂಡರೂ, ಯಾವ ದೇಶದಿಂದ ಯಾವ ದೇಶಕ್ಕೆ ಹೋದರೂ ಎಸ್‌ಐಟಿಗೆ ಮಾಹಿತಿ ಸಿಗಲಿದೆ.
ಈ ಸಂಬಂಧ ಎಸ್‌ಐಟಿ ಅಧಿಕಾರಿಗಳಿಗೆ ಇಂಟರ್‌ಪೋಲ್‌ನಿಂದ ಮಾಹಿತಿ ಬಂದಿದೆ. ಹೀಗಾಗಿ ಇನ್ನು ಮುಂದೆ ಎಸ್‌ಐಟಿ ಸಹ ಪ್ರಜ್ವಲ್ ವಿರುದ್ಧ ಕಾನೂನು ಸಮರ ಸಾರಲು ಹೆಚ್ಚಿನ ಅನುಕೂಲವಾದಂತೆ ಆಗಲಿದೆ. ಅಲ್ಲದೆ, ಅವರ ಪ್ರತಿ ಚಲನವಲನಗಳು, ಸಂಚಾರದ ಮಾಹಿತಿಗಳು ಲಭ್ಯವಾಗಲಿವೆ.
ಇದನ್ನೂ ಓದಿ: Prajwal Revanna Case: ಇಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಜೈಲಾ? ಬೇಲಾ?