Site icon Vistara News

Rahul Gandhi: ನಾಳೆ ಬೆಂಗಳೂರಿನಲ್ಲಿ ಕೋರ್ಟ್‌ ಕಟಕಟೆ ಏರಲಿರುವ ರಾಹುಲ್‌ ಗಾಂಧಿ

rahul gandhi

ಬೆಂಗಳೂರು: ಬಿಜೆಪಿಗೆ ಮಾನನಷ್ಟ (defamation case) ಮಾಡಿದ ಪ್ರಕರಣದಲ್ಲಿ ನಾಳೆ ಬೆಂಗಳೂರಿನಲ್ಲಿ ನ್ಯಾಯಾಧೀಶರ ಮುಂದೆ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ (Rahul Gandhi) ಹಾಜರಾಗಬೇಕಿದೆ. ಈ ಕುರಿತು ಕೋರ್ಟ್‌ ನಿರ್ದೇಶನ ನೀಡಿದ್ದು, ರಾಹುಲ್‌ ಬೆಂಗಳೂರಿಗೆ ಆಗಮಿಸಿ ಕೋರ್ಟ್ ಕಲಾಪದಲ್ಲಿ ಖುದ್ದು ಹಾಜರಾಗುವ ಸಾಧ್ಯತೆ ಇದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಾನನಷ್ಟ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕಳೆದ ಬಾರಿ ಇದರ ವಿಚಾರಣೆಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DCM DK Shivakumar) ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಇವರಿಬ್ಬರಿಗೂ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಆದರೆ ರಾಹುಲ್‌ ಗಾಂಧಿ ಆಗಮಿಸಿರಲಿಲ್ಲ. ಇದರಿಂದ ಗರಂ ಆಗಿದ್ದ ನ್ಯಾಯಾಧೀಶರು, ಮುಂದಿನ ಬಾರಿ ರಾಹುಲ್‌ ಖುದ್ದು ಹಾಜರಿರುವಂತೆ ನಿರ್ದೇಶನ ನೀಡಿತ್ತು.

ಈ ಪ್ರಕರಣದ ದಾಖಲಿಸಿರುವ ಬಿಜೆಪಿ ಕಾರ್ಯದರ್ಶಿ, ಎಂಎಲ್‌ಸಿ ಕೇಶವಪ್ರಸಾದ್, “ಸಾಮಾನ್ಯರಂತೆ ರಾಹುಲ್‌ ಅವರಿಗೂ ಕಾನೂನು ಒಂದೇ” ಎಂದು ಹೇಳಿದ್ದಾರೆ. “ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಸುಳ್ಳು ಜಾಹೀರಾತು ನೀಡಿದ್ದರು. ರಾಹುಲ್‌ ಗಾಂಧಿ ಅದನ್ನು ರಿಟ್ವೀಟ್ ಮಾಡಿಕೊಂಡರು. ಹಾಗಾಗಿ ಮೂವರ ವಿರುದ್ಧ ದೂರು ನೀಡಲಾಗಿತ್ತು. ಕೋರ್ಟ್ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.‌ ಸಿಎಂ, ಡಿಸಿಎಂ ಹಾಜರಾಗಿದ್ದರು. ರಾಹುಲ್‌ ಏಳನೇ ತಾರೀಕು ಹಾಜರಾಗುವುದಾಗಿ ಹೇಳಿದ್ದಾರೆ. ಮೊದಲ ದಿನವೇ ಅವರು ಹಾಜರಾಗಬೇಕಿತ್ತು. ಬರದಿದ್ದಾಗ ಕೋರ್ಟ್‌ ಅವರಿಗೆ ಒಂದು ಅವಕಾಶ ಕೊಟ್ಟಿದೆ. ಬರದಿದ್ದರೆ, ಜಾಮೀನುರಹಿತ ವಾರೆಂಟ್ ಇಶ್ಯೂ ಮಾಡಬೇಕು ಅಂತ ನಾವು ವಾದ ಮಂಡಿಸಿದ್ದೆವು” ಎಂದಿದ್ದಾರೆ.

“ರಾಷ್ಟ್ರೀಯ ನಾಯಕರಾಗಿ ಅವರು ಕೋರ್ಟ್ ಸಮನ್ಸ್‌ಗೆ ಎಷ್ಟು ಗೌರವ ಕೊಡ್ತಾರೆ ಅಂತ ಮೊದಲ ದಿನವೇ ತೋರಿಸಬಹುದಿತ್ತು. ನೆಲದ ಕಾನೂನಿಗೆ ಗೌರವ ಕೊಟ್ಟು, ನಾಳೆ ಬರಲೇಬೇಕು. ಇಲ್ಲದಿದ್ದರೆ ನಾನ್ ಬೇಲಬಲ್ ವಾರೆಂಟ್ ಇಶ್ಯೂ ಆಗಲಿದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತನಿಗೂ ಎಲ್ಲಾ ಹೋರಾಟ ಮಾಡುವ ಕ್ಷಮತೆ ಇದೆ. ನಮ್ಮ ವಿರುದ್ಧ ಹಾಕಿರುವ ಜಾಹೀರಾತು ಸುಳ್ಳು. ಅವರು ಅದಕ್ಕೆ ದಾಖಲೆ ಕೊಡಬೇಕು. ಜನರ ದಾರಿ ತಪ್ಪಿಸಬಹುದು, ಆದರೆ ಕೋರ್ಟ್ ದಾರಿ ತಪ್ಪಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

08-05-2023ರಂದು 42ನೇ ವಿಶೇಷ ನ್ಯಾಯಾಲಯದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.‌ ಕೇಶವ ಪ್ರಸಾದ್ ಖಾಸಗಿ ದೂರ ದಾಖಲು ಮಾಡಿದ್ದರು. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ A4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ.

“ಬಿಜೆಪಿ ಸರ್ಕಾರ 2019ರಿಂದ 2023ರವರೆಗೆ ಭ್ರಷ್ಟ ಆಡಳಿತ ನಡೆಸಿತ್ತು. ಆಗಿನ ಸಿಎಂ ಹುದ್ದೆ ರೂ. 2500 ಕೋಟಿಗೆ ಮಾರಾಟವಾಗಿತ್ತು. ಮಂತ್ರಿಗಳ ಹುದ್ದೆ ರೂ. 500 ಕೋಟಿ ಬಿಜೆಪಿ ಹೈಕಮಾಂಡ್‌ಗೆ ನೀಡಿ ಪಡೆದಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ. ಇದಲ್ಲದೆ ಕೋವಿಡ್ ಕಿಟ್ ಪೂರೈಕೆ ಟೆಂಡರ್‌ನಲ್ಲಿ 75% ಡೀಲ್ ನಡೆದಿದೆ. ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್‌ಗಳಲ್ಲಿ 40% ಡೀಲ್, ಮಠಕ್ಕೆ ನೀಡುವ ಅನುದಾನದಲ್ಲಿ 30% ಡೀಲ್, ಉಪಕರಣಗಳ ಪೂರೈಕೆಯಲ್ಲಿ 40% ಡೀಲ್, ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆಯ ಟೆಂಡರ್‌ನಲ್ಲಿ 30% ಡೀಲ್, ರಸ್ತೆ ಕಾಮಗಾರಿಗಳ ಟೆಂಡರ್‌ನಲ್ಲಿ 40% ಡೀಲ್ ನಡೆದಿದೆ” ಎಂದು ಆರೋಪಿಸಿದ್ದರು.

ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ಪಡೆದ ಆರೋಪ ಮಾಡಿ ಈ ಬಗ್ಗೆ ಅನೇಕ ಜಾಹೀರಾತುಗಳನ್ನೂ ಕಾಂಗ್ರೆಸ್‌ ನೀಡಿತ್ತು. ಇದರಿಂದ ಬಿಜೆಪಿ ಪಕ್ಷಕ್ಕೆ ಅಪಮಾನವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಐಪಿಸಿ 499, 500 ಅಡಿ ಖಾಸಗಿ ದೂರು ದಾಖಲು ಮಾಡಿದ್ದರು. ಈ ಬಗ್ಗೆ ವಾದ ಆಲಿಸಿ ಆರೋಪಿಗಳನ್ನು ಹಾಜರು ಪಡಿಸಲು ಕೋರ್ಟ್‌ ಸೂಚಿಸಿತ್ತು.

ಇದನ್ನೂ ಓದಿ: CM Siddaramaiah: ಸಿಎಂ, ಡಿಸಿಎಂ ಕೂಡ ಇಂದು ಕೋರ್ಟ್‌ ಕಟಕಟೆಯಲ್ಲಿ! ಏನಿದು ಕೇಸ್?‌

Exit mobile version