Site icon Vistara News

ರಾಜಮಾರ್ಗ ಅಂಕಣ: ಭಾರತೀಯ ಸೋದರತೆಯ ಮಹಾ ಪರ್ವ – ರಕ್ಷಾ ಬಂಧನ

raksha bandhan 2024 ರಾಜಮಾರ್ಗ ಅಂಕಣ

ಅದರ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಆಯಾಮ

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ನಾಡಿನ ಸಮಸ್ತ ಸೋದರ, ಸೋದರಿಯವರಿಗೆ ರಕ್ಷಾಬಂಧನ (Raksha bandhan) ಹಬ್ಬದ ಶುಭಾಶಯಗಳು. ಶ್ರಾವಣ ಪೌರ್ಣಮಿಯ ಈ ದಿನ ಪ್ರತಿಯೊಬ್ಬ ಸೋದರಿಯೂ ತನ್ನ ಸೋದರನಿಗೆ ರಕ್ಷೆ ಕಟ್ಟಿ ತನ್ನ ಮಾನ, ಪ್ರಾಣ ಮತ್ತು ಸ್ವಾಭಿಮಾನದ ರಕ್ಷಣೆ ಮಾಡು ಅಣ್ಣಾ ಎಂದು ವಿನಂತಿಸುವ ಹಬ್ಬವೇ ರಕ್ಷಾಬಂಧನ (Rakhi Festival 2024). ಅದನ್ನು ನಿಭಾಯಿಸಬೇಕಾದದ್ದು ಪ್ರತಿಯೊಬ್ಬ ಅಣ್ಣನ ಕರ್ತವ್ಯ.

ನಾವು ಆಚರಿಸುವ ಫಾದರ್ಸ್ ಡೇ, ಮದರ್ಸ್ ಡೇ, ಲವರ್ಸ್ ಡೇ ಇವೆಲ್ಲವೂ ಪಾಶ್ಚಾತ್ಯ ಅನುಕರಣೆಯಿಂದ ಬಂದ ಹಬ್ಬಗಳು. ಆದರೆ ರಕ್ಷಾಬಂಧನ (ಅಥವಾ ರಾಖೀ ಹಬ್ಬ) ಅಪ್ಪಟ ಭಾರತೀಯ ಸಂಸ್ಕೃತಿಯ ಹಬ್ಬ ಎಂಬ ಕಾರಣಕ್ಕೆ ಅದು ನಮಗೆ ಹೆಚ್ಚು ಆಪ್ತವಾಗಬೇಕು. ಇಲ್ಲಿ ಸೋದರತೆಯು ರಕ್ತ ಸಂಬಂಧವನ್ನು ಮೀರಿದ್ದು, ಜಾತಿ, ಮತ, ಭಾಷೆ, ರಾಷ್ಟ್ರಗಳ ಸೀಮೆಗಳನ್ನು ಮೀರಿದ್ದು ಎನ್ನುವುದು ನೂರಾರು ಬಾರಿ ಸಾಬೀತಾಗಿದೆ.

ಪುರಾಣಗಳ ಹಿನ್ನೆಲೆ

ಮಹಾಭಾರತದಲ್ಲಿ ಯಾವುದೋ ಸನ್ನಿವೇಶದಲ್ಲಿ ಯುದ್ಧ ಮಾಡುತ್ತಿರುವಾಗ ಕೃಷ್ಣ ದೇವರ ಬೆರಳಿಗೆ ಗಾಯವಾಗಿ ರಕ್ತ ಹರಿಯುತ್ತದೆ. ಆಗ ಸಮೀಪದಲ್ಲಿ ಇದ್ದ ದ್ರೌಪದಿ ಆತಂಕಗೊಂಡು ತನ್ನ ಕೇಸರಿ ಬಣ್ಣದ ಸೀರೆಯ ಸೆರಗನ್ನು ಹರಿದು ಅದನ್ನು ಕೃಷ್ಣ ದೇವರ ಬೆರಳಿಗೆ ಕಟ್ಟಿದ್ದೇ ರಕ್ಷೆ ಆಯಿತು. ಕೃಷ್ಣ ದ್ರೌಪದಿಯನ್ನು ಆ ಕ್ಷಣಕ್ಕೆ ಸೋದರಿಯಾಗಿ ತೆಗೆದುಕೊಳ್ಳುತ್ತಾನೆ. ಮುಂದೆ ಕೌರವನ ಆಸ್ಥಾನದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಪ್ರಸಂಗ ಬಂದಾಗ ಅದೇ ಕೃಷ್ಣನು ದ್ರೌಪದಿಗೆ ಅಕ್ಷಯಾಂಬರವನ್ನು ನೀಡಿ ತನ್ನ
ಸೋದರತ್ವದ ಋಣವನ್ನು ತೀರಿಸಿದನು ಅನ್ನುವುದು ಮಹಾಭಾರತದ ಕಥೆ. ಹಾಗೆಯೇ ಮುಂದೆ ದ್ರೌಪದಿಯು ಆಸೆ ಪಟ್ಟಂತೆ ಕೃಷ್ಣನು ಕುರುಕ್ಷೇತ್ರದ ಯುದ್ಧವನ್ನು ಪೂರ್ತಿ ಮಾಡಿಕೊಟ್ಟದ್ದೂ ತನ್ನ ಸೋದರಿಯ ಮೇಲಿನ ಪ್ರೀತಿಯಿಂದ.

ಬಲಿ ಚಕ್ರವರ್ತಿಗೆ ಲಕ್ಷ್ಮಿದೇವಿಯು ರಕ್ಷೆ ಕಟ್ಟಿದ್ದು ಯಾಕೆ?

ಮಹಾಪರಾಕ್ರಮಿಯಾದ ದಾನವ ಬಲಿ ಚಕ್ರವರ್ತಿಗೆ ಲಕ್ಷ್ಮಿಯು ಕೇಸರಿ ಬಣ್ಣದ ನೂಲಿನ ದಾರವನ್ನು ಕಟ್ಟಿ ಕೈಮುಗಿದು ನಿಲ್ಲುತ್ತಾಳೆ. ಆಗ ಬಲಿಯು ಕರಗಿ ಏನಾಗಬೇಕು ತಂಗಿ? ಎಂದು ಕೇಳುತ್ತಾನೆ. ಆಗ ಲಕ್ಷ್ಮಿಯು ನನ್ನ ಗಂಡ ಮಹಾವಿಷ್ಣುವು ಶಾಪಗ್ರಸ್ತನಾಗಿ ನಿನ್ನ ದ್ವಾರಪಾಲಕ ಆಗಿದ್ದಾನೆ. ಆತನನ್ನು ಬಿಡುಗಡೆ ಮಾಡಿ ಅಣ್ಣ ಎನ್ನುತ್ತಾಳೆ. ಒಂದು ಕ್ಷಣವೂ ವಿಳಂಬ ಮಾಡದೆ ವಿಷ್ಣುವನ್ನು ಬಿಡುಗಡೆ ಮಾಡಿ ಲಕ್ಷ್ಮಿಯ ಜೊತೆಗೆ ವೈಕುಂಠಕ್ಕೆ ಕಳುಹಿಸಿಕೊಟ್ಟನು ಅನ್ನುವುದು ಇನ್ನೊಂದು ಉಲ್ಲೇಖ. ಇಂತಹ ನೂರಾರು ಉಲ್ಲೇಖಗಳು ನಮ್ಮ ಪುರಾಣಗಳಲ್ಲಿ ದೊರೆಯುತ್ತವೆ.

ರಕ್ಷೆಯ ಐತಿಹಾಸಿಕ ಹಿನ್ನೆಲೆ

ಭಾರತದ ಮೇಲೆ ಅಲೆಕ್ಸಾಂಡರ್ ದಂಡೆತ್ತಿ ಬಂದಾಗ ಅಳುಕಿದ್ದು ವಾಯುವ್ಯದ ದೊರೆ ಪುರೂರವನ ಬಲಿಷ್ಠ ಸೇನೆಯನ್ನು ನೋಡಿ. ಆಗ ಅಲೆಕ್ಸಾಂಡರನ ಪತ್ನಿ ರೋಕ್ಸಾನಾ ಪುರೂರವನ ಬಳಿಗೆ ಬಂದು ರಕ್ಷೆಯನ್ನು ಕಟ್ಟಿ ಪತಿಯ ಪ್ರಾಣ ಭಿಕ್ಷೆಯನ್ನು ಬೇಡಿದ್ದಳು. ಮುಂದೆ ಯುದ್ಧ ನಡೆದು ಅಲೆಕ್ಸಾಂಡರ್ ಸೋತು ಧರಾಶಾಯಿಯಾದಾಗ ಅದೇ ಪುರೂರವ ಆತನ ಪ್ರಾಣರಕ್ಷೆ ಮಾಡಿ ತನ್ನ ಸೋದರನ ಕರ್ತವ್ಯವನ್ನು ನಿಭಾಯಿಸಿದ್ದನು!

ಅದೇ ರೀತಿ ರಜಪೂತ ರಾಣಿ ಕರ್ಣಾವತಿಯು ತನ್ನ ಗಂಡನನ್ನು ಕಳೆದುಕೊಂಡರೂ ಧೃತಿಗೆಡದೆ ಮೇವಾಡವನ್ನು ಅಳುತ್ತಿದ್ದಳು. ಆಗ ಗುಜರಾತ್ ದೊರೆ ಬಹಾದ್ದೂರ್ ಶಾ ದುರಾಸೆಯಿಂದ ಮೇವಾಡದ ಮೇಲೆ ದಂಡೆತ್ತಿಕೊಂಡು ಬರುತ್ತಾನೆ. ಆಗ ಅಭಯವನ್ನು ಕೇಳಿ ರಾಣಿಯು ಪತ್ರವನ್ನು ಬರೆದು ರಕ್ಷೆ ಕಳುಹಿಸಿದ್ದು ಮೊಘಲ್ ದೊರೆ ಹುಮಾಯೂನನಿಗೆ. ಅದಕ್ಕೆ ಗೌರವ ಕೊಟ್ಟು ಹುಮಾಯೂನ್ ಆಕೆಯ ರಕ್ಷಣೆಗೆ ಓಡೋಡಿ ಬಂದ ಘಟನೆಯು ಇತಿಹಾಸದಲ್ಲಿ ಇದೆ.

Raksha Bandhan 2024

ಬಂಗಾಳವನ್ನು ಒಗ್ಗೂಡಿಸಿದ ರಕ್ಷೆ!

1905ರಲ್ಲಿ ಬ್ರಿಟಿಷರು ಬಲಿಷ್ಠ ಬಂಗಾಳ ಪ್ರಾಂತ್ಯವನ್ನು ಒಡೆದು ಭಾರತೀಯರ ಐಕ್ಯತೆಯನ್ನು ಒಡೆದರು. ಆಗ ಹಿಂದೂ ಮುಸಲ್ಮಾನರು ಬೀದಿಗೆ ಇಳಿದು ಪರಸ್ಪರ ರಕ್ತ ಚೆಲ್ಲುವ ಕೆಲಸ ಆರಂಭ ಆಯಿತು. ಆಗ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರರು ಶ್ರಾವಣ ಹುಣ್ಣಿಮೆಯಂದು ಹಿಂದೂ ಮುಸಲ್ಮಾನರು ಪರಸ್ಪರ ರಕ್ಷೆಯನ್ನು ಕಟ್ಟಿ ಸೋದರತೆಯ ಸಂದೇಶವನ್ನು ಸಾರಬೇಕು ಎಂದು ಕರೆನೀಡಿದರು. ಬ್ರಿಟಿಷ್ ಸರಕಾರ ಈ ಆಚರಣೆಯನ್ನು ತಡೆಯಲು ಶತಪ್ರಯತ್ನ ಮಾಡಿದರೂ ಇಡೀ ಬಂಗಾಳ ರಕ್ಷಾಬಂಧನದ ಹಬ್ಬ ಆಚರಣೆ ಮಾಡಿ ಐಕ್ಯತೆಯ ಸಂದೇಶವನ್ನು ಸಾರಿತು!

ಕೇಸರಿ ಬಣ್ಣವು ತ್ಯಾಗದ ಸಂಕೇತ, ರಕ್ಷೆಯು ಐಕ್ಯತೆಯ ಸಂಕೇತ

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಕೇಸರಿ ಬಣ್ಣವು ತ್ಯಾಗ ಮತ್ತು ಬಲಿದಾನದ ಸಂಕೇತ. ಹಿಂದೆ ಋಷಿಮುನಿಗಳು ಧರಿಸುತ್ತಿದದ್ದು ಕಾವಿ ( ಕೇಸರಿ) ಬಣ್ಣದ ದಿರಿಸು. ಅವರು ಮಾಡುತ್ತಿದ್ದ ಯಜ್ಞದ ಅಗ್ನಿಯ ಬಣ್ಣ ಕೇಸರಿ. ಸೂರ್ಯ ಬೆಳಿಗ್ಗೆ ಉದಯಿಸುವಾಗ, ಸಂಜೆ ಮುಳುಗುವಾಗ ಅದೇ ಕೇಸರಿ ಬಣ್ಣವನ್ನು ಪಡೆಯುತ್ತಾನೆ. ಇಲ್ಲಿನ ಮಣ್ಣಿನ ಬಣ್ಣವೂ ಕೇಸರಿ.

ಹಾಗೆಯೇ ಹಲವು ನೂಲಿನ ದಾರಗಳನ್ನು ಒಂದೇ ಗಟ್ಟಿ ದಾರದ ಮೂಲಕ ಬಂಧಿಸುವುದೇ ರಕ್ಷೆ. ಅಂದರೆ ಜಾತಿ, ವರ್ಣಬೇಧಗಳನ್ನು ಮೆಟ್ಟಿ ನಿಂತು ಇಡೀ ಹಿಂದೂಸಮಾಜವು ಒಗ್ಗಟ್ಟಾಗಿ ನಿಲ್ಲಬೇಕು ಎನ್ನುವುದು ಈ ರಕ್ಷಾಬಂಧನ ಹಬ್ಬದ ಅಲ್ಟಿಮೇಟ್ ಸಂದೇಶ.

ಬದಲಾದ ಸಾಮಾಜಿಕ ಘಟ್ಟದಲ್ಲಿ ರಕ್ಷೆ

ಸ್ತ್ರೀಯು ದುರ್ಬಲಳು ಅಥವಾ ಪರಾಧೀನಳು ಎಂದು ಭಾವಿಸಿದ ಕಾಲ ಒಂದಿತ್ತು. ಈಗ ಕಾಲವು ಸಂಪೂರ್ಣ ಬದಲಾವಣೆ ಆಗಿದೆ. ಈಗ ಸ್ತ್ರೀ ಸ್ವಯಂಭೂ ಶಕ್ತಿಸಂಪನ್ನೆಯಾಗಿ ಇರುವ ಈ ಆಧುನಿಕ ಕಾಲದಲ್ಲಿಯೂ ಆಕೆ ತನ್ನ ಮಾನ, ಪ್ರಾಣ, ಸ್ವಾಭಿಮಾನಗಳ ರಕ್ಷಣೆಗಾಗಿ ರಕ್ಷೆಯನ್ನು ಕಟ್ಟುತ್ತಾಳೆ ಎನ್ನುವುದಕ್ಕಿಂತ ಆ ರಕ್ಷೆಯು ಸೋದರರ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸಗಳ ಪ್ರತೀಕವಾಗಿ ಬದಲಾಗಿದೆ. ಪ್ರತೀ ವರ್ಷವೂ ಈ ಹಬ್ಬ ಬಂದಾಗ ತನ್ನ ಅಣ್ಣನನ್ನು (ಇಲ್ಲಿ ಮತ್ತೆ ರಕ್ತಸಂಬಂಧ ಮೀರಿದ್ದು ಕೂಡ ಹೌದು) ಹುಡುಕಿಕೊಂಡು ಬಂದು ರಕ್ಷೆ ಕಟ್ಟಿ ,ಆರತಿ ಎತ್ತಿ, ಸಿಹಿ ತಿನ್ನಿಸಿ ಇಡೀ ವರ್ಷ ಅಣ್ಣಾ ಎಂದು ಬಾಯ್ತುಂಬ ಕರೆಯುವ ತಂಗಿಯರ ಸಂಭ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗೆಯೇ ಅಂಚೆಯ ಮೂಲಕ ರಕ್ಷೆ ಕಳುಹಿಸಿಕೊಟ್ಟು ಕೂಡ ಅಣ್ಣನ ನೆನಪು ಮಾಡುವ ಸೋದರಿಯರು ಇದ್ದಾರೆ.

ಹಾಗೆಯೇ ಅವಳು ನನ್ನ ತಂಗಿ, ಇವಳು ನನ್ನ ತಂಗಿ ಕಣೋ ಎಂದು ಜಂಬದಲ್ಲಿ ಹೇಳಿಕೊಂಡು ಅಂಗೈ ತುಂಬಾ ಕೇಸರಿಯ ರಕ್ಷೆಗಳನ್ನು ಕಟ್ಟಿಕೊಂಡು ಸಂಭ್ರಮಿಸುವ ಅಣ್ಣಂದಿರಿಗೇನೂ ಕಡಿಮೆ ಇಲ್ಲ!

ಬದಲಾದ ಕಾಲಘಟ್ಟದಲ್ಲಿ ಕೂಡ ಈ ರಕ್ಷಾಬಂಧನದ ಹಬ್ಬವು ಹಿಂದೂ ಸಂಸ್ಕೃತಿಯನ್ನು ಜಾಗೃತಿ ಮಾಡುತ್ತದೆ ಎಂಬ ಕಾರಣಕ್ಕೆ ಪ್ರಾಮುಖ್ಯತೆ ಪಡೆಯುತ್ತದೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕನ್ನಡ ಚಿತ್ರರಂಗದ ಬಂಗಾರದ ಹುಡುಗ ರಿಶಬ್ ಶೆಟ್ಟಿ

Exit mobile version