Site icon Vistara News

Rameshwaram Cafe Blast: ಬೆಂಗಳೂರಿನ 4 ಕಡೆ ಸೇರಿ ದೇಶಾದ್ಯಂತ ಎನ್‌ಐಎ ದಾಳಿ

NIA raid rameshwaram cafe blast

ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನ (Whitefield) ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು (NIA Raid) ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ದೇಶಾದ್ಯಂತ 15 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಉಗ್ರರ ಜೊತೆ ಸಂಪರ್ಕ ಹೊಂದಿದ್ದವರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಕೆಲ ಮಹತ್ವದ ದಾಖಲೆಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್, ಬನಶಂಕರಿ ಸೇರಿದಂತೆ ನಾಲ್ಕು ಕಡೆ ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಬೆಂಗಳೂರು ಮಾತ್ರವಲ್ಲ ಕೊಯಮತ್ತೂರಿನಲ್ಲಿಯೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಯಮತ್ತೂರ್ ವೈದ್ಯ ಜಾಫರ್ ಇಕ್ಬಾಲ್ ಮತ್ತು ನಯನ್ ಸಾದಿಕ್ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಮತೀನ್‌, ಶಾಜಿಬ್‌ ಜೊತೆ ಶಾಮೀಲು

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ ಆರೋಪಿಗಳಾದ ಮತೀನ್ ಮತ್ತು ಶಾಜಿಬ್‌ಗೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಹಾಗೂ ಬನಶಂಕರಿಯಲ್ಲಿ ಒಟ್ಟು ನಾಲ್ಕು ಸ್ಥಳದಲ್ಲಿ ಎನ್ಐಎ ದಾಳಿ ಮಾಡಿ ದಾಖಲೆಗಳನ್ನು ಪಡೆದುಕೊಂಡಿದೆ. ಶಂಕಿತ ಉಗ್ರ ಮತೀನ್ ಬೆಂಗಳೂರಿಗೆ ಬಂದಾಗ ಸಹಾಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆತನೊಂದಿಗೆ ಸಂಪರ್ಕಕ್ಕೆ ಬಂದಿದ್ದವರ ಮನೆ ಹಾಗೂ ವಾಸಸ್ಥಳದ ಮೇಲೆ ದಾಳಿ ಮಾಡಲಾಗಿದೆ.

ರಾಮೇಶ್ವರಂ ಕೆಫೆ ಸ್ಫೋಟದ ಮಾಸ್ಟರ್‌ ಮೈಂಡ್‌ ಅಬ್ದುಲ್‌ ಮತೀನ್‌ ತಾಹ ಹಾಗೂ ಬಾಂಬ್‌ ಇರಿಸಿದ್ದ ಮುಸಾವಿರ್‌ ಹುಸೇನ್‌ ಶಾಜಿಬ್‌ರನ್ನು ಎನ್‌ಐಎ ಈಗಾಗಲೇ ಬಂಧಿಸಿದೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸಿ ಕೋಲ್ಕತ್ತಾದಲ್ಲಿ ಉಗ್ರರು ತಲೆಮರೆಸಿಕೊಂಡಿದ್ದರು. ಬಂಧನದಿಂದ ಬಚಾವ್‌ ಆಗಲು ಇಬ್ಬರೂ ಕೂಡ ಸಾಕಷ್ಟು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದರು ಎನ್ನುವ ವಿವರ ಕೂಡ ಪತ್ತೆಯಾಗಿದೆ. ಬೇರೆ ಹೆಸರಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ಶಂಕಿತರು ಅಡಗಿದ್ದರು. ಎನ್ಐಎ ತನಿಖೆ ವೇಳೆ ನಕಲಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅಬ್ದುಲ್‌ ಮತೀನ್‌ ತಾಹ, ಯಶ್‌ ಶಹನವಾಜ್‌ ಪಟೇಲ್‌ ಹೆಸರಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಂಡಿದ್ದರೆ, ಮುಸಾವಿರ್‌ ಹುಸೇನ್‌ ಶಾಜಿಬ್‌, ಅನ್ಮೋಲ್‌ ಕುಲಕರ್ಣಿ ಎನ್ನುವ ಹಿಂದು ಹೆಸರಲ್ಲಿ ಆಧಾರ್‌ ಕಾರ್ಡ್‌ ರಚಿಸಿಕೊಂಡಿದ್ದ.

ಇಬ್ಬರೂ ಕೂಡ ಕೋಲ್ಕತ್ತಾದ ಪ್ಯಾರಡೈಸ್ ಹೋಟೆಲ್‌ಗೆ ನಕಲಿ ದಾಖಲೆ ನೀಡಿ ವಾಸ್ತವ್ಯ ಮಾಡಿದ್ದರು. ದಾಳಿ ವೇಳೆ ನಕಲಿ ದಾಖಲೆಗಳನ್ನು ಎನ್‌ಐಎ ವಶಕ್ಕೆ ಪಡೆದಾಗ ಈ ಮಾಹಿತಿ ಪತ್ತೆಯಾಗಿದೆ. ನಕಲಿ ದಾಖಲೆಗಳನ್ನು ಎನ್‌ಐಎ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಉಗ್ರರು ತಲೆಮರೆಸಿಕೊಂಡಿದ್ದ ಸಂಪೂರ್ಣ ಮಾಹಿತಿ ಸಂಗ್ರಹವನ್ನೂ ಮಾಡಿದ್ದಾರೆ. 12 ದಿನ ಕೋಲ್ಕತ್ತದಲ್ಲಿದ್ದ ಇಬ್ಬರೂ ಉಗ್ರರು, ಮೂರು ನಾಲ್ಕು ದಿನಕ್ಕೊಮ್ಮೆ ಸ್ಥಳವನ್ನು ಬದಲಾವಣೆ ಮಾಡುತ್ತಿದ್ದರು.

ಏಪ್ರಿಲ್ 12ರಂದು ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಇಬ್ಬರು ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಆರೋಪಿಗಳ ಕಸ್ಟಡಿ ಅವಧಿ ಅಂತ್ಯವಾದ ಬಳಿಕ ಪುನಃ 7 ದಿನ ಕಸ್ಟಡಿಗೆ ಪಡೆಯಲಾಗಿತ್ತು. ನಂತರ ಮತ್ತೆ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾರ್ಚ್ 1ರಂದು ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್‌ನ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರಸಹಿತ 9 ಜನರು ಗಾಯಗೊಂಡಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸಲಾಗಿತ್ತು. ಪ್ರಕರಣ ಸಂಬಂಧ ಹಲವೆಡೆ ಶೋಧ ನಡೆಸಿದ್ದ ಎನ್​ಐಎ ಅಧಿಕಾರಿಗಳು ಸುಮಾರು 40 ದಿನಗಳ ಬಳಿಕ ಕೋಲ್ಕೊತಾದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು.

ಇದನ್ನೂ ಓದಿ: Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌; ಇಬ್ಬರು ಶಂಕಿತ ಉಗ್ರರಿಗೆ 14 ದಿನ ನ್ಯಾಯಾಂಗ ಬಂಧನ

Exit mobile version