Site icon Vistara News

Salman Khan: ಸಲ್ಮಾನ್‌ ಮನೆ ಮುಂದೆ ಗುಂಡಿನ ದಾಳಿ ನಡೆಸಿದ ಇಬ್ಬರು ಶೂಟರ್‌ಗಳ ಬಂಧನ

salman khan shooters2

ಮುಂಬಯಿ: ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Salman Khan) ಅವರ ಮುಂಬೈಯ ಬಾಂದ್ರಾದ ನಿವಾಸದೆದುರು ಏಪ್ರಿಲ್ 14ರಂದು ನಡೆದ ಗುಂಡಿನ ದಾಳಿಗೆ (Shooting) ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಇವರು ಗುಂಡಿನ ದಾಳಿಯ ಬಳಿಕ ಮುಂಬಯಿಯಿಂದ ಗುಜರಾತ್‌ನ ಭುಜ್‌ಗೆ ಪರಾರಿಯಾಗಿ ಅಲ್ಲಿ ಅಡಗಿಕೊಂಡಿದ್ದರು.

ಗುಂಡಿನ ದಾಳಿಗೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ ಬಳಿಕ ಆರೋಪಿಗಳ ಬೆನ್ನು ಹತ್ತಿದ ಪೊಲೀಸರು ಹಲವು ಶಂಕಿತರನ್ನು ಪ್ರಶ್ನಿಸಿದ್ದರು. ದೊರೆತ ಮಾಹಿತಿಯ ಆಧಾರದಲ್ಲಿ ಇಬ್ಬರೂ ಶೂಟರ್‌ಗಳನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬನನ್ನು ಹರಿಯಾಣದ ಗುರುಗ್ರಾಮದ ನಿವಾಸಿ ವಿಶಾಲ್‌ ಅಲಿಯಾಸ್‌ ಕಾಳು ಎಂದು ಗುರುತಿಸಲಾಗಿದೆ. ವಿಶಾಲ್‌ ಒಂದೂವರೆ ವರ್ಷದಿಂದ ಭೂಗತ ಜಗತ್ತಿನಲ್ಲಿ ಸಕ್ರಿಯನಾಗಿದ್ದಾನೆ. ರದ್ದಿ ವ್ಯಾಪಾರಿ ಸಚಿನ್‌ ಅಲಿಯಾಸ್‌ ಗೋಡಾ ಕೊಲೆ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. ಗ್ಯಾಂಗ್‌ಸ್ಟರ್‌ ರೋಹಿತ್‌ ಗೋದಾರ ಎಂಬಾತನ ಮೇಲೂ ಈತ ಗುಂಡು ಹಾರಿಸಿದ್ದಾನೆ.

ಸಲ್ಮಾನ್ ಖಾನ್ ಮುಂಬೈ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಹೊಣೆ ತಮ್ಮದೇ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಹೇಳಿಕೊಂಡಿದ್ದ. ಅನ್ಮೋಲ್ ಈಗ ಅಮೆರಿಕದಲ್ಲಿದ್ದು, ಸಲ್ಮಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಹೊಣೆ ಹೊತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ಇಬ್ಬರೂ ಶಂಕಿತರನ್ನು ಬಂಧಿಸಿ ತನಿಖೆ ಚುರುಕುಗೊಳಿಸಲಾಗಿದೆ. ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿಕೊಂಡ 2 ಶೂಟರ್‌ಗಳನ್ನು ಪೊಲೀಸರು ಗುರುತಿಸಿ ಬಂಧಿಸಿದ್ದಾರೆ.

ಅನ್ಮೋಲ್‌ನ ಫೇಸ್‌ಬುಕ್ ಪೇಜ್‌ನಲ್ಲಿ, “ಈ ಘಟನೆ ಟ್ರೈಲರ್ ಮಾತ್ರ. ಇದಕ್ಕಿಂತಲೂ ಭೀಕರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ” ಎಂದು ಸಲ್ಮಾನ್ ಖಾನ್‌ಗೆ ಎಚ್ಚರಿಕೆ ನೀಡಿದ್ದ. “ಸಲ್ಮಾನ್ ಖಾನ್, ಇದು ನಾವು ನಿಮಗೆ ತೋರಿಸಿದ್ದು, ಟ್ರೈಲರ್ ಮಾತ್ರ. ನಮ್ಮ ಸಾಮರ್ಥ್ಯ, ಶಕ್ತಿ ಏನು ಎಂಬುದರ ಪರಿಚಯ ಮಾಡಲು ಈ ಕ್ರಮ ಕೈಗೊಂಡಿದ್ದೇವೆ. ಇದು ನಾವು ನೀಡುವ ಮೊದಲ ಮತ್ತು ಕೊನೆಯ ವಾರ್ನಿಂಗ್” ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾನೆ.

ಏ.14ರಂದು ಮುಂಜಾನೆ 5 ಗಂಟೆ ಸುಮಾರಿಗೆ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದ್ದರು. ನಂತರ ಪರಾರಿಯಾಗಿದ್ದರು. ಮುಂಬೈ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿ ಗುಂಡು ಹಾರಿಸಿದ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದರು. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ ಈ ಹಿಂದೆ ಹೇಳಿದ್ದ. ತಾನು ಟಾರ್ಗೆಟ್ ಮಾಡಿರುವ 10 ಮಂದಿ ಹೆಸರಿನ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮೊದಲಿಗರಾಗಿದ್ದಾರೆ ಎಂದಿದ್ದ. 1998ರ ಕೃಷ್ಣಮೃಗ ಬೇಟೆ ಆರೋಪ ಹೊತ್ತಿರುವ ಬಾಲಿವುಡ್ ನಟನ ಮೇಲೆ ಬಿಷ್ಣೋಯ್ ಹಗೆ ಸಾಧಿಸುತ್ತಿದ್ದಾನೆ.

ಬಿಷ್ಣೋಯ್ ತನ್ನ ಸಹಾಯಕ ಸಂಪತ್ ನೆಹ್ರಾನ ಬಳಸಿಕೊಂಡು ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಮೇಲೆ ಕಣ್ಣಿಟ್ಟಿದ್ದ. ವಿಚಾರ ತಿಳಿಯುತ್ತಿದ್ದಂತೆ ನೆಹ್ರಾನನ್ನು ಹರಿಯಾಣ ಪೊಲೀಸರ ವಿಶೇಷ ಕಾರ್ಯಪಡೆ ವಶಪಡಿಸಿಕೊಂಡಿದೆ. ಕಳೆದ ವರ್ಷ ಏಪ್ರಿಲ್ 11ರಂದು ಬಂದ ಮತ್ತೊಂದು ಬೆದರಿಕೆ ಕರೆಯನ್ನು ಅನುಸರಿಸಿ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಅವರ ಭದ್ರತೆಯನ್ನು Y+ಗೆ ಹೆಚ್ಚಿಸಿದ್ದರು. ಖಾನ್‌ಗೆ ಬೆದರಿಕೆ ಇಮೇಲ್ ಕಳುಹಿಸಿದ್ದಕ್ಕಾಗಿ ಯುನೈಟೆಡ್ ಕಿಂಗ್‌ಡಂನಲ್ಲಿರುವ ಭಾರತೀಯ ವಿದ್ಯಾರ್ಥಿಯ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ.

ಇದನ್ನೂ ಓದಿ: Salman Khan: ಗುಂಡಿನ ದಾಳಿಗೆ ʻಐ ಡೋಂಟ್‌ ಕೇರ್‌ʼ ಎಂದ ಸಲ್ಮಾನ್‌ ಖಾನ್‌!

Exit mobile version