Site icon Vistara News

Student Death: ಅಮೆರಿಕದಲ್ಲಿ ಡ್ರಗ್ಸ್‌ ಗ್ಯಾಂಗ್‌ನಿಂದ ಅಪಹೃತನಾದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

mohammad arphat indian student death

ಹೊಸದಿಲ್ಲಿ: ಕ್ಲೀವ್‌ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಗಾಗಿ 2023ರಲ್ಲಿ ಅಮೆರಿಕಕ್ಕೆ ತೆರಳಿದ್ದ ಹೈದರಾಬಾದ್‌ನ 25 ವರ್ಷದ ವಿದ್ಯಾರ್ಥಿಯೊಬ್ಬರು ಶವವಾಗಿ (Student Death) ಪತ್ತೆಯಾಗಿದ್ದಾರೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತಾವಾಸ ಇಂದು ತಿಳಿಸಿದೆ. ಇದು, ಅಮೆರಿಕದಲ್ಲಿ ನಡೆಯುತ್ತಿರುವ ಭಾರತೀಯ (Indian Students in US) ವಿದ್ಯಾರ್ಥಿಗಳ ಸರಣಿ ಅಸಹಜ ಸಾವು ಪ್ರಕರಣಗಳಿಗೆ ಇನ್ನೊಂದು ಸೇರ್ಪಡೆಯಾಗಿದೆ.

ಮೊಹಮ್ಮದ್ ಅಬ್ದುಲ್ ಅರ್ಫಾತ್ ಸುಮಾರು ಮೂರು ವಾರಗಳಿಂದ ನಾಪತ್ತೆಯಾಗಿದ್ದರು. ದೂತಾವಾಸ ಅಬ್ದುಲ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿತ್ತು. ಅವರನ್ನು ಪತ್ತೆಹಚ್ಚಲು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಈ ಹಿಂದೆ ತಿಳಿಸಿತ್ತು. ಇಂದು ಬೆಳಗ್ಗೆ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.

“ನಾಪತ್ತೆಯಾಗಿದ್ದ ಮೊಹಮ್ಮದ್ ಅಬ್ದುಲ್ ಅರ್ಫಾತ್ ಅವರು ಓಹಿಯೋದ ಕ್ಲೀವ್ಸ್‌ಲ್ಯಾಂಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ. ಮೊಹಮ್ಮದ್ ಅರ್ಫಾತ್ ಅವರ ಕುಟುಂಬಕ್ಕೆ ನಮ್ಮ ಗಾಢ ಸಂತಾಪಗಳು” ಎಂದು ದೂತಾವಾಸವು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.

“ಮೊಹಮ್ಮದ್ ಅಬ್ದುಲ್ ಅರ್ಫಾತ್ ಸಾವಿನ ಸಂಪೂರ್ಣ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಸಾಗಿಸಲು ನಾವು ದುಃಖಿತ ಕುಟುಂಬಕ್ಕೆ ಎಲ್ಲ ರೀತಿಯ ಸಹಾಯವನ್ನು ನೀಡುತ್ತಿದ್ದೇವೆ” ಎಂದು ಅದು ಸೇರಿಸಿದೆ.

ಅರ್ಫಾತ್‌ ಕುಟುಂಬದೊಂದಿಗೆ ಮಾರ್ಚ್ 7ರಂದು ಕೊನೆಯದಾಗಿ ಫೋನ್‌ನಲ್ಲಿ ಮಾತನಾಡಿದ್ದರು. ನಂತರ ಅವರ ಸೆಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಅರ್ಫಾತ್ ತಂದೆ ಮೊಹಮ್ಮದ್ ಸಲೀಂ ಹೇಳಿದ್ದಾರೆ. ಮಾರ್ಚ್ 19ರಂದು ಸಲೀಂ ಅಪರಿಚಿತ ವ್ಯಕ್ತಿಯಿಂದ ಕರೆ ಸ್ವೀಕರಿಸಿದ್ದರು. ಅರ್ಫಾತ್ ಅವರನ್ನು ಡ್ರಗ್ಸ್ ಮಾರಾಟ ಮಾಡುವ ಗ್ಯಾಂಗ್ ಅಪಹರಿಸಿದೆ ಮತ್ತು $1,200ಗೆ ಬೇಡಿಕೆಯಿಟ್ಟಿದೆ ಎಂದು ತಳಿದುಬಂದಿತ್ತು.

ಇದನ್ನೂ ಓದಿ: Indian Student: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು, ಈ ವರ್ಷದಲ್ಲಿ 6ನೇ ಪ್ರಕರಣ

Exit mobile version