Site icon Vistara News

Terror Attack: ಕಂದಮ್ಮನನ್ನೂ ಕೊಂದ ಉಗ್ರರು; ಎದೆಗೆ ಗುಂಡು ಬಿದ್ದರೂ ಪ್ರಯಾಣಿಕರನ್ನು ಉಳಿಸಲು ಯತ್ನಿಸಿದ್ದ ಚಾಲಕ

reasi terror attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu & Kashmir) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ನಡೆದ ಭಯೋತ್ಪಾದಕರ ಗುಂಡಿನ ದಾಳಿಯ (Reasi terror Attack) ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಸತ್ತಿದ್ದಾರೆ. ಕ್ರೂರಿ ಭಯೋತ್ಪಾದಕರು (Terrorists) ಪುಟ್ಟ ಮಗುವೆಂದೂ ನೋಡದೆ ಗುಂಡು ಹಾರಿಸಿ ಕೊಂದಿದ್ದಾರೆ. ಈ ನಡುವೆ, ಉಗ್ರರು ಮೈಕೈ ತುಂಬೆಲ್ಲಾ ಗುಂಡು (bullets) ಜಡಿದರೂ ಪ್ರಯಾಣಿಕರನ್ನು (tourists) ಉಳಿಸಲು ಚಾಲಕ (Bus driver) ಯತ್ನಿಸಿದ್ದಾನೆ ಎಂದು ಗೊತ್ತಾಗಿದೆ.

ಪೋನಿ ಪ್ರದೇಶದ ತೇರ್ಯತ್ ಗ್ರಾಮದ ಮೂಲಕ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ ಚಾಲಕ ದಾಸನೂ ರಾಜ್‌ಬಾಗ್, ಭಯೋತ್ಪಾದಕರು ತನ್ನ ಮೇಲೆ ಬುಲೆಟ್‌ಗಳನ್ನು ಹಾರಿಸಿದಾಗ ಅಪಾರ ಧೈರ್ಯ ತಂದುಕೊಂಡು ಬಸ್ಸನ್ನು ವೇಗವಾಗಿ ಚಲಾಯಿಸಿ ಅಲ್ಲಿಂದ ಪಾರಾಗಲು ಯತ್ನಿಸಿದ. ಆದರೆ ಮೈಗೆ ಗುಂಡು ಬಿದ್ದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಆಳವಾದ ಕಮರಿಗೆ ಬಿತ್ತು. ಘಟನೆಯಲ್ಲಿ ಚಾಲಕನೂ ಮೃತಪಟ್ಟಿದ್ದಾನೆ.

ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ಹತ್ತು ಮಂದಿ ಈ ದಾಳಿಯಲ್ಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಸ್ಥಳಕ್ಕೆ ತಲುಪಿ ಪೊಲೀಸರಿಗೆ ಸಹಾಯ ಮಾಡುತ್ತಿದೆ. ಭಾನುವಾರದ ದಾಳಿಯ ನಂತರ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಯೋತ್ಪಾದಕರನ್ನು ಹುಡುಕಲು ಭದ್ರತಾ ಪಡೆಗಳು ಡ್ರೋನ್‌ಗಳನ್ನು ಬಳಸುತ್ತಿವೆ.

ರಿಯಾಸಿ ದಾಳಿಯ ನಂತರ, ಭಾರತೀಯ ಸೇನೆಯ ಹತ್ತಿರದ ನೆಲೆಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಯಿತು. ಭದ್ರತಾ ಕ್ರಮಗಳನ್ನು ಬಲಪಡಿಸಲು ವಿವಿಧ ಸ್ಥಳಗಳಿಂದ ಪಡೆಗಳನ್ನು ಕಳುಹಿಸಲಾಗಿದೆ. ಸದ್ಯ ಉಗ್ರರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಭಾನುವಾರವೇ ತ್ವರಿತ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಸೌಲಭ್ಯಗಳಿಗೆ ತ್ವರಿತವಾಗಿ ಸಾಗಿಸಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಸೇರಿದಂತೆ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು. ಪ್ರದೇಶವನ್ನು ಸುತ್ತುವರೆದು ತನಿಖೆ ಪ್ರಾರಂಭಿಸಿದರು.

“ಶಿವ್ ಖೋರಿಯಿಂದ ಕತ್ರಾಗೆ ಹೋಗುತ್ತಿದ್ದ ಪ್ರಯಾಣಿಕರ ಬಸ್‌ನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಿಂದಾಗಿ ಬಸ್ ಚಾಲಕನ ಸಮತೋಲನ ತಪ್ಪಿ ಬಸ್ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ 33 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಪ್ರಯಾಣಿಕರ ಗುರುತು ಇನ್ನೂ ದೃಢಪಟ್ಟಿಲ್ಲ. ಅವರು ಸ್ಥಳೀಯರಲ್ಲ. ಶಿವ ಖೋರಿ ದೇವಾಲಯವನ್ನು ಭದ್ರಪಡಿಸಲಾಗಿದೆ” ಎಂದು ರಿಯಾಸಿಯ ಎಸ್‌ಎಸ್‌ಪಿ ಮೋಹಿತಾ ಶರ್ಮಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಕೇಳಿಕೊಂಡಿದ್ದಾರೆ. “ರಿಯಾಸಿಯಲ್ಲಿ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಯ ಘಟನೆಯಿಂದ ಆಳವಾದ ನೋವಾಗಿದೆ. ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮತ್ತು ಡಿಜಿಪಿ ಜೊತೆ ಘಟನೆಯ ಬಗ್ಗೆ ವಿಚಾರಿಸಿದ್ದೇನೆ. ಈ ಭೀಕರ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ದಾಳಿಕೋರರು ಕಾನೂನಿನ ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಹೇಳಿದ್ದಾರೆ.

“ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿ ಅತ್ಯಂತ ಖಂಡನೀಯ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಲ್ಲಾ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಘಟನೆಯನ್ನು ‘ಹೇಡಿತನ’ ಎಂದು ಕರೆದಿರುವ ಅವರು, ಜಮ್ಮು ಮತ್ತು ಕಾಶ್ಮೀರದ ಆತಂಕಕಾರಿ ಭದ್ರತಾ ಪರಿಸ್ಥಿತಿಯ ನೈಜ ಚಿತ್ರಣವನ್ನು ಈ ಘಟನೆ ತೆರೆದಿಡುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: Terror Attack: ಕಾಶ್ಮೀರದಲ್ಲಿ ಹಿಂದೂ ಯಾತ್ರಿಗಳಿದ್ದ ಬಸ್‌ ಮೇಲೆ ಉಗ್ರರ ದಾಳಿ; 10 ಸಾವು

Exit mobile version