ಬೆಂಗಳೂರು: ವಾಲ್ಮೀಕಿ ನಿಗಮ ಅಧೀಕ್ಷಕ (Valmiki development corporation) ಚಂದ್ರಶೇಖರ್ ಆತ್ಮಹತ್ಯೆ (Officer self harming) ಮಾಡಿಕೊಂಡಿರುವ (valmiki corporation scam) ಪ್ರಕರಣದಲ್ಲಿ, ನಿಗಮದಿಂದ ವರ್ಗಾವಣೆಯಾಗಿರುವ ಹಣದ ಅಕ್ರಮದಲ್ಲಿ (Illegal money transfer) ಸಚಿವರ ಹಾಗೂ ಅವರ ಆಪ್ತ ನಾಗರಾಜ್ ಎಂಬಾತನ ಕೈವಾಡವಿದೆ ಎಂದು ಬಿಜೆಪಿ ಫೋಟೋ ಸಹಿತ ಆರೋಪಿಸಿದೆ. ನಾಗರಾಜ್, ಸಚಿವ ನಾಗೇಂದ್ರ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಆಪ್ತವಾಗಿರುವ ಫೋಟೋಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ (BJP) ಬಿಡುಗಡೆ ಮಾಡಿದೆ.
ಬಿಜೆಪಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಆರ್. ಆಶೋಕ್, ಸಿಟಿ ರವಿ, ಗೋವಿಂದ ಕಾರಜೋಳ, ರಾಮಮೂರ್ತಿ, ಲೆಹರ್ ಸಿಂಗ್, ಪದ್ಮನಾಭ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.
“ಇದೊಂದು ದೊಡ್ಡ ಹಗರಣ. ನಾಗರಾಜ್ ಅನ್ನುವ ಅಧಿಕಾರಿಯ ಹೆಸರು ಡೆತ್ ನೋಟ್‌ನಲ್ಲಿ ಇದೆ. ಈತ ಬಾರಿ ಪ್ರಭಾವಿ ಅಧಿಕಾರಿ. ಸಚಿವ ನಾಗೇಂದ್ರ ಜತೆ ಬ್ಯುಸಿನೆಸ್ ಪಾರ್ಟನರ್ ಆಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಆಪ್ತರಾಗಿದ್ದಾರೆ. ಹಗರಣದಲ್ಲಿ ಈತನ ಕೈವಾಡವಿದೆ. ಈ ದುಡ್ಡು ಬೇರೆ ರಾಜ್ಯಗಳಿಗೆ ಹೋಗಿದೆ. ಎಲೆಕ್ಷನ್ ಫಂಡ್‌ಗೆ ಬಳಸಿರುವ ಸಾಧ್ಯತೆ ಇದೆ. ಸಚಿವ ನಾಗೇಂದ್ರ ಕೂಡಲೇ ರಾಜೀನಾಮೆ ನೀಡಬೇಕು. ಇದರಲ್ಲಿ ಸಚಿವರ ಪಾತ್ರ ಇರುವುದರಿಂದ ರಾಜ್ಯ ಸರ್ಕಾರದ ವ್ಯಾಪ್ತಿಯ ತನಿಖಾ ಸಂಸ್ಥೆಯಿಂದ ತನಿಖೆ ಆಗಬಾರದು. ಹೀಗಾಗಿ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಿಬಿಐಯಿಂದ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯ. ದೊಡ್ಡ ದೊಡ್ಡವರು ಸಹ ಇದರಲ್ಲಿ ಪಾತ್ರಧಾರಿಗಳು ಆಗಿರುವುದರಿಂದ ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರಬರುತ್ತೆ” ಎಂದು ಬಿಜೆಪಿ ಮುಖಂಡ ಸಿಟಿ ರವಿ ಹೇಳಿದ್ದಾರೆ.
ಕರ್ನಾಟಕದ ಕಾಂಗ್ರೆಸ್‌ನ ಬ್ರಹ್ಮಾಂಡ ಭ್ರಷ್ಟಾಚಾರದ ಹಗರಣ ಬಯಲಿಗೆ ಬಂದಿದೆ. ಕಾಂಗ್ರೆಸ್‌ನ ಒಂದು ವರ್ಷದ ಸಾಧನೆ ಎಂದರೆ ಎಸ್‌ಟಿ ನಿಗಮದ 180 ಕೋಟಿ ರೂ. ಹಣ ಗುಳುಂ ಮಾಡಿರುವುದು. ಚುನಾವಣೆಗೂ ಮೊದಲು ದಲಿತರ ರಕ್ಷಣೆ ನಮ್ಮ ಹಕ್ಕು ಅಂತ ಹೇಳಿದ್ರು. ಅಧಿಕಾರ ಸಿಕ್ಕ ತಕ್ಷಣ ವಾಲ್ಮೀಕಿ ನಿಗಮದ 187 ಕೋಟಿ ಹಣ ಗುಳುಂ ಮಾಡಿದ್ದಾರೆ. ಒಂದು ವರ್ಷದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದೇ ಸಾಧನೆ ಎಂದು ಅಶೋಕ್ ಆರೋಪಿಸಿದರು.
ರಾಜ್ಯದಲ್ಲಿ ಹೆಣ್ಣು ಮಕ್ಕಳು ಹೊರಗಡೆ ಹೋದ್ರೆ ಗ್ಯಾರಂಟಿ ಇಲ್ಲ. ಈಗ ಸರ್ಕಾರಿ ಅಧಿಕಾರಿಗಳಿಗೂ ಗ್ಯಾರಂಟಿ ಇಲ್ಲ. ಚಂದ್ರಶೇಖರ್ ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ 25 ವರ್ಷದ ರಾಜಕೀಯ ಜೀವನದಲ್ಲಿ ಡಿಟೈಲ್ ಆಗಿ ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿಲ್ಲ. ಕಾಂಗ್ರೆಸ್‌ನವರು ಲೂಟಿ ಮಾಡಿರುವುದು ಸ್ಪಷ್ಟವಾಗಿ ಕಾಣ್ತಿದೆ. 187 ಕೋಟಿ ರೂ. ಹಗರಣದಲ್ಲಿ ಇಡೀ ಸರ್ಕಾರ ಭಾಗಿಯಾಗಿದೆ ಎಂದು ಅವರು ಆರೋಪಿಸಿದರು.
ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ಟಕಾಟಕ್ ಹಣ ಹಾಕ್ತೀವಿ ಅಂತ ರಾಹುಲ್ ಹೇಳಿದ್ರು. 4, 6, 21, 25 ದಿನಾಂಕಗಳಂದು ಟಕಾಟಕ್ ಟ್ರಾನ್ಸ್‌ಫರ್ ಮಾಡಿದ್ದಾರೆ. ಕಾಂಗ್ರೆಸ್‌ನ ಲೂಟಿ ಅಕೌಂಟ್‌ಗೆ ಹಾಕಿದ್ದಾರೆ. ಇದು ಬ್ರಹ್ಮಾಂಡ ಭ್ರಷ್ಟಾಚಾರ. ದಲಿತರ ಹಣ ಮಾಯವಾಗಿದೆ. ಅಧಿಕಾರಿಗಳು ಸತ್ತು ಹೋಗ್ತಿದ್ದಾರೆ. ಕ್ರೈಮ್ ರೇಟ್, ಕೋಮುವಾದ ಮತ್ತು ಭಯೋತ್ಪಾದನೆ ಟಕಾಟಕ್ ಜಾಸ್ತಿ ಆಗಿದೆ ಎಂದು ಅವರು ಕಿಡಿ ಕಾರಿದರು.
ಸರ್ಕಾರಕ್ಕೆ ಆರ್ ಆಶೋಕ್ ಆರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ:
1) ಚಂದ್ರಶೇಖರ್ ಡೆತ್ ನೋಟ್‌ನಲ್ಲಿ ಮಂತ್ರಿ ಹೆಸರಿದೆ. ಆದರೆ ಎಫ್ಐಆರ್‌ನಲ್ಲಿ ಯಾಕೆ ಇಲ್ಲ?
2) ಎಫ್ಐಆರ್‌ನಲ್ಲಿ ಹೆಸರಿರುವ ಅಧಿಕಾರಿಗಳನ್ನು ಯಾಕೆ ಬಂಧಿಸಿಲ್ಲ?
3) ಬಂಧಿಸಿದ್ರೆ ನಿಮ್ಮ ಬಂಡವಾಳ ಬಯಲಾಗುತ್ತಾ?
4) ಸಿಐಡಿ ಕೊಟ್ಟು ಮುಚ್ಚಿ ಹಾಕುವ ಪ್ಲಾನ್ ಮಾಡಿದ್ರಾ?
5) ಕಮಿಷನ್ ಪಡೆದಿದ್ದರೆ ರಾಜೀನಾಮೆ ಕೊಡ್ತೀನಿ ಅಂದ್ರಿ. ರಾಜೀನಾಮೆ ಯಾವಾಗ ಕೊಡ್ತೀರಾ ಸಿದ್ದರಾಮಯ್ಯ ಅವರೇ?
6) ಲ್ಯಾಪ್ ಟಾಪ್ ಕದ್ದು ಮುಚ್ಚಿ ತೆಗೆದುಕೊಂಡು ಹೋಗಿದ್ದು ಯಾಕೆ?
“ಈಶ್ವರಪ್ಪ ಪ್ರಕರಣದಲ್ಲಿ ಮೌಖಿಕ ಆದೇಶ ಅಷ್ಟೇ ಮಾಡಿದ್ದರು. ಅವರು ನೈತಿಕ ಹೊಣೆಗಾರಿಕೆ ಮೇಲೆ ರಾಜೀನಾಮೆ ಕೊಟ್ಟರು. ಈಶ್ವರಪ್ಪ ಅವರನ್ನ ಕೂಡಲೇ ಬಂಧಿಸಿ ಅಂತ ಸಿದ್ದರಾಮಯ್ಯ ಒತ್ತಾಯ ಮಾಡಿದ್ರು. ಈಗ ನೀವ್ಯಾರನ್ನು ಬಂಧಿಸಿದ್ದೀರಿ? ಇದು ಹಾದಿ ಬೀದಿಯಲ್ಲಿ ಮಾತನಾಡಿದ್ದು ಅಲ್ಲ, ಸದನದಲ್ಲಿ ಸಿದ್ದರಾಮಯ್ಯ ಹೇಳಿದ್ದು” ಎಂದು ಅಶೋಕ್ ಪ್ರಶ್ನಿಸಿದ್ದಾರೆ. “ಏನೂ ಆಗಿಲ್ಲ ಅಂತ ಪರಮೇಶ್ವರ್ ಹೇಳಿದ್ದಾರೆ. 20 ಕೋಟಿ ವಾಪಸು ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಹಣ ವಾಪಸು ತಂದಿದ್ದೀರಿ. ಅವನ ಪ್ರಾಣ ಸಹ ವಾಪಸು ತನ್ನಿ” ಎಂದರು.
“ಈ ಹಣ ಆಂಧ್ರಪ್ರದೇಶ, ತೆಲಂಗಾಣಕ್ಕೆ ಹೋಗಿದೆ. ಇದನ್ನು ಸಿಬಿಐಗೆ ಒಪ್ಪಿಸಿದರೆ ಸತ್ಯಾಸತ್ಯತೆ ಹೊರಗಡೆಗೆ ಬರುತ್ತೆ. ಮುಖ್ಯಮಂತ್ರಿ ರಾಜೀನಾಮೆ ಕೇಳ್ತೀವಿ. ಮಂತ್ರಿ ರಾಜೀನಾಮೆ ಆಗಲೇಬೇಕು. ಆರನೇ ತಾರೀಖು ಡೆಡ್‌ಲೈನ್ ಕೊಡುತ್ತೇವೆ. ಅದರ ಒಳಗೆ ರಾಜೀನಾಮೆ ಪಡೆಯದಿದ್ರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ” ಎಂದು ಅಶೋಕ್ ಆಗ್ರಹಿಸಿದರು.
“ಡೆತ್ ನೋಟ್ ಬಗ್ಗೆ ಪರಮೇಶ್ವರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಪರಮೇಶ್ವರ್ ಹೇಳಿಕೆಯೇ ತನಿಖೆ ಯಾವ ರೀತಿಯಲ್ಲಿ ನಡೆಯುತ್ತಿದೆ ಅಂತ ತಿಳಿಸುತ್ತಿದೆ. ಸಿಐಡಿ ತನಿಖೆಗೆ ಯಾರು ಒತ್ತಾಯ ಮಾಡಿದರು? ಇವರು ಈ ಕೇಸ್ ಮುಚ್ಚಿ ಹಾಕಲು ಸಿಐಡಿಗೆ ನೀಡಿದ್ದಾರೆ” ಎಂದು ಅಶೋಕ್ ಹೇಳಿದರು.
ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ; ಎಂಡಿ, ಲೆಕ್ಕಾಧಿಕಾರಿ ಅಮಾನತು