Site icon Vistara News

ವಿಸ್ತಾರ Explainer: ರಾಹುಲ್‌ ಗಾಂಧಿಗೆ ಶಿಕ್ಷೆಯಾಗುವಂತೆ ಮಾಡಿದ ʼಮೋದಿʼ ಸರ್‌ನೇಮ್‌ನ ಹಿನ್ನೆಲೆ ಇದು!

modheshwari devi

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ ವಯನಾಡ್‌ ಸಂಸದ ಸ್ಥಾನದಿಂದ ಅನರ್ಹರಾಗಿದ್ದಾರೆ. ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಸೂರತ್‌ ಕೋರ್ಟ್‌ ಇವರಿಗೆ ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ ವಿಧಿಸಿದ್ದರಿಂದ ಉಂಟಾಗಿರುವ ಸ್ಥಾನಚ್ಯುತಿ ಇದು. ಇಷ್ಟಾಗಲು ಕಾರಣ ಅವರು ಹೇಳಿದ ಒಂದೇ ಒಂದು ವಾಕ್ಯ: ʼʼಕಳ್ಳರಿಗೆಲ್ಲ ʼಮೋದಿʼ ಎಂಬ ಸರ್‌ನೇಮೇ ಯಾಕಿದೆ?ʼʼ

ಈ ಒಂದು ವಾಕ್ಯವೇ ಇಂದು ಭಾರತದ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಮುಂದಿನ ಚುನಾವಣೆಯ ಭವಿಷ್ಯವೂ ಇದರ ಮೇಲೇ ನಿಂತಿರುವಂತಿದೆ. ರಾಹುಲ್‌ ಗಾಂಧಿ ಮೇಲ್ಮನವಿ ಹೋಗಿದ್ದಾರೆ, ಅವರಿಗೆ ಜಾಮೀನೂ ದೊರೆತಿದೆ. ಮೇಲಿನ ಕೋರ್ಟ್‌ಗಳಲ್ಲಿ ಗೆಲುವಾಗಲೂಬಹುದು; ಆದರೆ ಇದು ಸೃಷ್ಟಿಸಿರುವ ಕೋಲಾಹಲ ಮಾತ್ರ ಸುಳ್ಳಾಗುವುದಿಲ್ಲ.

ರಾಹುಲ್‌ ಅವರ ಈ ಮಾತಿನಿಂದ ನೊಂದುಕೊಂಡಿರುವ ಬಿಜೆಪಿ ನಾಯಕ ಪೂರ್ಣೇಶ್‌ ಮೋದಿ ಅವರು ಸೂರತ್‌ ಕೋರ್ಟ್‌ ಮೊರೆ ಹೋಗಿದ್ದರು. ಸದ್ಯಕ್ಕೆ ಅವರಿಗೆ ಗೆಲುವಾಗಿದೆ. ಮೋದಿ ಎಂಬ ಹೆಸರು ಇಂದು ಭಾರತದ ರಾಜಕೀಯದಲ್ಲಿ ಹೈ ಪ್ರೊಫೈಲ್‌ನಲ್ಲಿದೆ. ಹೀಗಾಗಿ ಅದರತ್ತ ಎಲ್ಲರ ಗಮನ.

ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರಂತೆಯೇ ಸುಶೀಲ್‌ ಮೋದಿ, ಪೂರ್ಣೇಶ್‌ ಮೋದಿ ಮುಂತಾದವರು ಇದ್ದಾರೆ. ರಾಹುಲ್‌ ಗಾಂಧಿ ಉಲ್ಲೇಖಿಸಿರುವಂತೆ ನೀರವ್‌ ಮೋದಿ, ಲಲಿತ್‌ ಮೋದಿ ಮುಂತಾದ ಆರ್ಥಿಕ ಅಪರಾಧಿಗಳೂ ಇದ್ದಾರೆ. ನಿಜಕ್ಕೂ ಈ ʼಮೋದಿʼ ಎಂಬ ಸರ್‌ನೇಮ್‌ ಯಾರದು? ಯಾರಿವರು ಮೋದಿ?

ತೈಲ ತೆಗೆಯುವ ವೃತ್ತಿ

ಪಶ್ಚಿಮ ಭಾರತದಲ್ಲಿ ಮೋದಿ ಎಂಬ ಸರ್‌ನೇಮ್‌ ವ್ಯಾಪಕವಾಗಿದೆ. ಇದು ಒಂದೇ ಜಾತಿಗೆ ಸೀಮಿತವಾಗಿಲ್ಲ. ಮೂಲತಃ ಇದು ʼಮೋಧ್‌ ಗಾಂಚಿʼ ಅಥವಾ ʼತೇಲ್‌ ಗಾಂಚಿʼ ಎಂಬ ಸಮುದಾಯಕ್ಕೆ ಸೇರಿದೆ. ಇವರು ಹಿಂದೆ ಸಾಮಾನ್ಯವಾಗಿ ಗಾಣದ ಮೂಲಕ ತೈಲ ತೆಗೆಯುವ (ಗಾಣಿಗರು) ವೃತ್ತಿ ನಡೆಸುತ್ತಿದ್ದರು. ಇದಕ್ಕೆ ಸಂಬಂಧಿಸಿದ ವ್ಯಾಪಾರವನ್ನೂ ಮಾಡುತ್ತಿದ್ದರು. ಇವರು ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ ಹಂಚಿಹೋಗಿದ್ದಾರೆ. ಇವರಲ್ಲಿ ಹಲವರು ಮೋದಿ ಎಂಬ ಸರ್‌ನೇಮ್‌ ಇಟ್ಟುಕೊಳ್ಳುತ್ತಾರೆ.

ಈ ಮೋಧ್‌ ಗಾಂಚಿ ಸಮುದಾಯ ಮಧ್ಯ ಹಾಗೂ ಉತ್ತರ ಭಾರತದಲ್ಲಿ ಹೆಚ್ಚಾಗಿ ಇರುವ ಬನಿಯಾ ಸಮುದಾಯದ ಜೊತೆ ಸಮಾನವಾಗಿದೆ. ಈ ಸಮುದಾಯದಲ್ಲೂ ಮೋದಿ ಸರ್‌ನೇಮ್‌ನವರಿದ್ದಾರೆ. ವಿಚಿತ್ರ ಎಂದರೆ ಇಂದು ಗುಜರಾತ್‌ನಲ್ಲಿ ಈ ʼಮೋದಿʼ ಎಂಬ ಸರ್‌ನೇಮ್‌ನ ಹಿಂದೂಗಳೂ ಇದ್ದಾರೆ; ಮುಸ್ಲಿಮರೂ ಇದ್ದಾರೆ. ಇವರಲ್ಲಿ ಹೆಚ್ಚಿನವರು ವ್ಯಾಪಾರವನ್ನು ಅವಲಂಬಿಸಿದ್ದಾರೆ. ದಿನಸಿ ಅಂಗಡಿ, ಟೀ ಶಾಪ್‌, ತೈಲದಂಗಡಿಗಳನ್ನು ನಡೆಸುತ್ತಾರೆ.

ಈ ಮೋಧ್‌ ಗಾಂಚಿ ಸಮುದಾಯ, ವೈಶ್ಯ ಸಮುದಾಯದ ಒಂದು ಉಪವಿಭಾಗವಾಗಿದೆ. ವೈಶ್ಯ ಸಮುದಾಯ ಜನರಲ್‌ ಕೆಟಗರಿಗೆ ಸೇರಿದೆ. ಗುಜರಾತ್‌ನಲ್ಲಿ ಮೋಧ್‌ ಗಾಂಚಿಗಳನ್ನು ಹಿಂದುಳಿದವರೆಂದು ಕಾಣುತ್ತಿರಲಿಲ್ಲ. 1994ರ ಜುಲೈಯಲ್ಲಿ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಇವರನ್ನು ಒಬಿಸಿ ಪಟ್ಟಿಗೆ ಸೇರಿಸಿತು. ಅಂದಿನಿಂದ ಇವರು ಹಿಂದುಳಿದ ಸಮುದಾಯದ ವರ್ಗದಲ್ಲಿದ್ದಾರೆ.

ಅಂಬಾನಿಗಳು, ಜಿಂದಾಲ್‌ಗಳು ಹಾಗೂ ಮಹಾತ್ಮ ಗಾಂಧಿ ಕೂಡ ಇದೇ ಬನಿಯಾ ಕೆಟಗರಿಗೆ ಸೇರುತ್ತಾರೆ.

ಮೋಧೇಶ್ವರಿ ದೇವಿ

ವರ ಜತೆಗೆ, ರಾಜ್ಯದ ಜನಪ್ರಿಯ ದೇವತೆ ʼಮೋಧೇಶ್ವರಿ ದೇವಿʼಯನ್ನು ಪೂಜಿಸುವ ಸಮುದಾಯಗಳು ಕೂಡ ʼಮೋಧ್ʼ ಎಂಬ ಸರ್‌ನೇಮ್‌ ಹೊಂದಿವೆ. ಗುಜರಾತ್‌ನ ಮೊಧೇರಾದಲ್ಲಿ ʼಮೋಧೇಶ್ವರಿʼ ದೇವಾಲಯವಿದೆ. ಈಕೆ ಪಾರ್ವತಿ ದೇವಿಯ ಅವತಾರವಾಗಿದ್ದು, ರಾಕ್ಷಸನನ್ನು ವಧಿಸಲು ತಾಳಿದ ಅವತಾರ ಎಂದು ಕ್ಷೇತ್ರಪುರಾಣವಿದೆ.

2014ರಲ್ಲೂ ಈ ಸಮುದಾಯ ಸುದ್ದಿಗೆ ಬಂದಿತ್ತು. ಅದೂ ಮೋದಿಯವರಿಂದಲೇ. ಆ ವರ್ಷ ನರೇಂದ್ರ ಮೋದಿ ಅವರು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಾವು ಒಬಿಸಿ ಸಮುದಾಯಕ್ಕೆ ಸೇರಿದವರು ಎಂದು ಮೋದಿ ಘೋಷಿಸಿಕೊಂಡಿದ್ದರು. ಇದು ನಿಜವೂ ಆಗಿತ್ತು. ಆದರೆ ಪ್ರತಿಪಕ್ಷಗಳು ‌ʼಮೋದಿ ಫೇಕ್ ಒಬಿಸಿʼ ಎಂದು ಟೀಕಿಸಿದ್ದವು. ʼʼಮೋದಿ ವೈಶ್ಯರ ಒಂದು ಶ್ರೀಮಂತ ಉಪಪಂಗಡಕ್ಕೆ ಸೇರಿದವರು. ಮೋಧ ಗಾಂಚಿ ಮುಸ್ಲಿಮರು ಬಡವರು, ಆದರೆ ಹಿಂದೂ ಮೋಧ್‌ ಗಾಂಚಿಗಳು ಅವರಷ್ಟು ಬಡವರಲ್ಲʼʼ ಎಂದು ಕಾಂಗ್ರೆಸ್‌ ನಾಯಕ ಶಕ್ತಿಸಿಂಹ ಗೋಹಿಲ್‌ ಎಂಬವರು ಟೀಕಿಸಿದ್ದರು.

1953-55ರ ಅವಧಿಯಲ್ಲಿ ಕಾರ್ಯಾಚರಿಸಿದ, ಮೊತ್ತಮೊದಲ ಹಿಂದುಳಿದ ಸಮುದಾಯಗಳ ಕೇಂದ್ರ ಆಯೋಗ (ಕಾಕಾ ಕಾಲೇಲ್ಕರ್)‌ ಈ ಸಮುದಾಯವನ್ನು ಹಿಂದುಳಿದ ಸಮುದಾಯಗಳ ಪಟ್ಟಿಯಲ್ಲಿ ಸೇರಿಸಿತ್ತು. ಆಗ ಗುಜರಾತ್‌ ರಾಜ್ಯ ಸೌರಾಷ್ಟ್ರ, ಕಛ್‌, ಬಾಂಬೇಗಳಲ್ಲಿ ಹಂಚಿಹೋಗಿತ್ತು. ಈ ಪಟ್ಟಿಯಲ್ಲಿ ಪಶ್ಚಿಮ ಭಾರತದಲ್ಲಿರುವ ಗಾಂಚಿ, ಗಾನಿಕ, ತೇಲಿ, ಘಾಂಚ ಮುಂತಾದ ಸಮುದಾಯಗಳಿದ್ದವು.

ಇದನ್ನೂ ಓದಿ: Rahul Gandhi: ‘ಮೋದಿ ಉಪನಾಮ’ ಒಂದೇ ಅಲ್ಲ, ಗೌರಿ ಲಂಕೇಶ್‌ ಕೇಸ್‌ ಸೇರಿ ರಾಹುಲ್‌ ವಿರುದ್ಧ ದಾಖಲಾದ ಪ್ರಕರಣ ಯಾವವು?

ಆದರೆ 1993ರಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ ಹಿಂದುಳಿದ ಸಮುದಾಯಗಳ 27% ಮೀಸಲು ಪಟ್ಟಿಯಲ್ಲಿ ಗಾಂಚಿ ಮುಸ್ಲಿಮರಿದ್ದರು; ಹಿಂದೂಗಳಾಗಲೀ ಮೋಧ್‌ ಗಾಂಚಿಗಳಾಗಲೀ ಇರಲಿಲ್ಲ. ಈ ನಿರ್ಣಯವನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿಯಿತು.

ಯಾರೀ ಪೂರ್ಣೇಶ್‌ ಮೋದಿ?

ರಾಹುಲ್‌ ಗಾಂಧಿ ಅವರ ಮಾತಿನ ವಿರುದ್ಧ ಕೋರ್ಟಿಗೆ ಹೋದವರು ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ. ಕರ್ನಾಟಕದಲ್ಲಿ 2019ರಲ್ಲಿ ರಾಹುಲ್‌ ಮಾಡಿದ ಭಾಷಣವನ್ನು ಇಟ್ಟುಕೊಂಡು ಅವರು ಸೂರತ್‌ ಕೋರ್ಟ್‌ನಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.

ಅವರು ಹೇಳುವಂತೆ, ಮೊದಲು ಪೂರ್ಣೇಶ್‌ ಸರ್‌ನೇಮ್‌ ʼಭೂತ್‌ವಾಲಾʼ ಎಂಬುದಾಗಿತ್ತು. ನಂತರ ಅದನ್ನವರು ʼಮೋದಿʼ ಎಂದು ಬದಲಾಯಿಸಿಕೊಂಡಿದ್ದಾರೆ. ಭಾರತದಾದ್ಯಂತ ತೇಲಿ ಸಮುದಾಯದ ಸುಮಾರು 13 ಕೋಟಿ ಜನ ಇದ್ದಾರೆ. ರಾಜಸ್ಥಾನದಲ್ಲಿ ಇವರನ್ನು ಗಾಂಚಿ ಎಂದು, ಗುಜರಾತಿನಲ್ಲಿ ಮೋದಿ ಎಂದು ಕರೆಯಲಾಗುತ್ತದೆ. ಅವರವರು ನಿರ್ವಹಿಸುವ ವೃತ್ತಿಗನುಗುಣವಾಗಿ ಅವರ ಸರ್‌ನೇಮ್‌ ಇದೆ. ಲಾಪ್ಸಿವಾಲಾ, ದಾಲ್‌ವಾಲಾ, ಚೋಂಕ್‌ವಾಲಾ, ಕಢಿವಾಲಾ ಇತ್ಯಾದಿಗಳಿವೆ. ಪೂರ್ಣೇಶ್‌ ಪೂರ್ವಿಕರು ಸೂರತ್‌ನ ʼಭೂತ್‌ ಸೆರಿʼ ಎಂಬ ಮೊಹಲ್ಲಾದಲ್ಲಿ ಇದ್ದ ಕಾರಣ ಇವರು ʼಭೂತ್‌ವಾಲಾʼಗಳಾದರು. 1998ರಲ್ಲಿ ಅವರು ತಮ್ಮ ಸರ್‌ನೇಮ್‌ ʼಮೋದಿʼ ಎಂದು ಬದಲಾಯಿಸಿಕೊಂಡರು.

ತೈಲ ತೆಗೆಯುವ ಹಾಗೂ ವ್ಯಾಪಾರಿ ವೃತ್ತಿಯನ್ನು ಅಳವಡಿಸಿಕೊಳ್ಳುವ ಮುನ್ನ ಈ ಸಮುದಾಯದವರು ಅಲೆಮಾರಿಗಳಾಗಿದ್ದರು, ಪಶುಸಾಕಣೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Rahul Gandhi: ಸರ್ಕಾರಿ ಬಂಗ್ಲೆ ತೆರವು ಮಾಡಲು ರಾಹುಲ್‌ ಗಾಂಧಿಗೆ ನೋಟಿಸ್

Exit mobile version